More

    ಎಸ್‌ಪಿ ವರ್ಗಾವಣೆಗೆ ಜನಾಕ್ರೋಶ

    ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಪ್ರಶ್ನೆಗಳ ಸರಮಾಲೆ, ಹಾಡಿ ಹೊಗಳಿರುವ ಸಾರ್ವಜನಿಕರು

    ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್ ವರ್ಗಾವಣೆಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಪ್ರಕೃತಿ ವಿಕೋಪ, ಕರೊನಾ ಪರಿಸ್ಥಿತಿ ಎದುರಿಸಲು ಅವರನ್ನು ಕೊಡಗಿನಲ್ಲೇ ಮುಂದುವರಿಸಬೇಕೆಂಬ ಬೇಡಿಕೆ ಜನರಿಂದ ವ್ಯಕ್ತವಾಗಿದೆ.
    ಕಳೆದೆರಡು ವರ್ಷದಿಂದ ಅವರ ಸಮರ್ಥ ಸೇವೆ, ಜಿಲ್ಲೆಯ ಜನರು ಸಂದರ್ಭ ಸಿಕ್ಕಾಗಲೆಲ್ಲ ಹಾಡಿ ಹೊಗಳಿದ್ದಾರೆ. ಆದರೆ, ಈಗ ಸರ್ಕಾರ ಅವರ ವರ್ಗಾವಣೆ ಆದೇಶ ಹೊರಡಿಸಿದೆ. ಪ್ರತಿಕೂಲ ಕಾಲಘಟ್ಟದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವ ಎಸ್ಪಿ ವರ್ಗಾವಣೆ ಆದೇಶ ರದ್ದುಪಡಿಸಬೇಕೆಂಬ ಕೂಗು ಪ್ರಬಲವಾಗಿ ವ್ಯಕ್ತವಾಗಿದೆ.
    ಮಳೆಗಾಲದಲ್ಲಿ ಜಿಲ್ಲಾಡಳಿತದ ಚುಕ್ಕಾಣಿ ಹಿಡಿದ ಮೂವರು ಮಹಿಳೆಯರ ತಂಡ ಜಿಲ್ಲಾದ್ಯಂತ ಸಂಚರಿಸಿ, ಸೂಕ್ಷ್ಮ ಪ್ರದೇಶ ಹಾಗೂ ಅನಿವಾರ್ಯ ಪರಿಸ್ಥಿತಿ ಮನನ ಮಾಡಿಕೊಂಡಿದ್ದಾರೆ. ಜನರನ್ನು ತಲುಪುವಲ್ಲಿ ವಿಳಂಬವಾಗುವ ಸರ್ಕಾರಿ ಕಾರ್ಯಕ್ರಮ ಹಾಗೂ ಪ್ರಕೃತಿ ವಿಕೋಪದಂತ ಅನಿವಾರ್ಯ ಪರಿಸ್ಥಿತಿ ಅರ್ಥೈಸಿಕೊಂಡಿದ್ದಾರೆ. ಕೇವಲ ವರದಿಯಲ್ಲಷ್ಟೇ ಅಲ್ಲದೇ ಗ್ರೌಂಡ್ ರಿಯಾಲಿಟಿ ಬಗ್ಗೆ ಅರಿವು ಇರುವ ಅಧಿಕಾರಿಗಳು ಇಂತಹ ಸಂದರ್ಭ ಇರಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.
    ಅಧಿಕೃತ ಲಾಕ್ ಡೌನ್ ಅಲ್ಲದಿದ್ದರೂ, ಕೋವಿಡ್-19 ಸೋಂಕಿನ ಏರುಗತಿ ನಿಯಂತ್ರಿಸಲು ಚೇಂಬರ್ ಆಫ್ ಕಾಮರ್ಸ್ ಜುಲೈ 4 ರವರೆಗೆ ಲಾಕ್‌ಡೌನ್ ವಿನಂತಿಸಿಕೊಂಡಿದೆ. ಈ ಸಂದರ್ಭ ಎಸ್ಪಿ ವರ್ಗಾವಣೆ ವಿಷಯ ನಗಣ್ಯ ಆಗುವುದು ಬೇಡ. ಇದಕ್ಕಾಗಿ ಆನ್‌ಲೈನ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರು, ಜಿಲ್ಲೆಯ ಪ್ರಜ್ಞಾವಂತರು ರಾಜ್ಯ ಸರ್ಕಾರದ ಗಮನ ಸೆಳೆಯಬೇಕೆಂಬ ಮನವಿ ಹರಿದಾಡುತ್ತಿವೆ.
    ಪ್ರಶ್ನೆಗಳ ಸರಮಾಲೆ: ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆ ಆದೇಶದ ಬಗ್ಗೆ ನೆಟ್ಟಿಗರು ಪ್ರಶ್ನಿಸಿದ್ದಾರೆ. ವರ್ಗಾವಣೆಗೆ ತಮ್ಮ ಮನದಲ್ಲಿರುವ ಅನುಮಾನವನ್ನು ಬಹಿರಂಗಪಡಿಸಿದ್ದಾರೆ. ಸತತ ಎರಡು ವರ್ಷಗಳಿಂದ ಕೊಡಗು ಅತಿವೃಷ್ಟಿಯ ಅಬ್ಬರಕ್ಕೆ ಸಿಲುಕಿದೆ. ಇದೀಗ ಕರೊನಾ ದಂತಹ ಮಹಾಮಾರಿ. ದಕ್ಷ ಅಧಿಕಾರಿ ಮೇಲೆ ಸವಾರಿ ಏಕೆ ಎಂದು ಪ್ರಶ್ನಿಸಲಾಗಿದೆ.
    ಕೊಡಗಿಗೆ ವರವಾಗಿ ಬಂದ ಸುಮನ್ ಮೇಡಂ ತೆರವಾಗೋದು ಬೇಡ… ಮುಳ್ಳಾಯಿತೇ ಮರಳು ಮಾಫಿಯಾಕ್ಕೆ ಕಡಿವಾಣ ಹಾಕಿದ್ದು… ಕುತ್ತಾಯಿತೇ ಟಿಂಬರ್ ಮಾಫಿಯಾಗೆ ಉರುಳಾಗಿದ್ದು… ತೊಡಕಾಯಿತೇ ಗಾಂಜಾ ದಂಧೆ ಹುಡುಕಿ ಹುಡುಕಿ ಕೆಡವಿದ್ದು… ದೇವನೆಲಕ್ಕೆ ವರವಾಗಿ ಬಂದವಳು ಇಂದು ತೆರವಾಗಿ ಹೋಗುತ್ತಿರುವುದು ನ್ಯಾಯವೇ ಎಂದು ಪ್ರಶ್ನಿಸಲಾಗಿದೆ. ಮೇಡಂ, ಕೊಡಗು ಬಿಟ್ಟು ಹೋಗ್ಬೇಡಿ ಪ್ಲೀಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts