More

    ಗ್ರಾಮಸ್ಥರಿಗೆ ಕಾಡುತ್ತಿರುವ ರೋಗದ ಭೀತಿ

    ಕೊಡೇಕಲ್: ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿರುವ ಗೆದ್ದಲಮರಿಯ ವಿವಿಧ ಓಣಿಗಳಲ್ಲಿ ಸ್ವಚ್ಛತೆ ಎನ್ನುವುದು ಸಂಪೂರ್ಣ ಮರಿಚಿಕೆಯಾಗಿದೆ. ಸಿಸಿ ರಸ್ತೆ ಮೇಲೆಯೇ ಕೊಳಚೆ ನೀರು ಹರಿಯುತ್ತಿರುವುದರಿಂದ ಹಲವು ರೋಗ ರುಜಿನೆಗಳಿಗೆ ರಹದಾರಿಯಾಗಿದ್ದರಿಂದ ಗ್ರಾಮಸ್ಥರು ಆತಂಕದಲ್ಲಿ ನಿತ್ಯ ಕಾಲ ಕಳೆಯುವಂತಾಗಿದೆ.

    ಈ ಗ್ರಾಮದಿಂದ ೬ ಜನ ಗ್ರಾಪಂ ಸದಸ್ಯರಿದ್ದರೂ ಕೂಡ ಸ್ವಚ್ಛತೆಯೆನ್ನುವುದು ಮರಿಚಿಕೆಯಾಗಿದೆ. ಬಹುತೇಕ ಓಣಿಗಳ ಸಿಸಿ ರಸ್ತೆಗಳು ಕೊಳಚೆ ನೀರಿನಿಂದ ತುಂಬಿ ಜನರು ಸಂಚಾರಕ್ಕೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಚರಂಡಿ ವ್ಯವಸ್ಥೆ ಇಲ್ಲದೆ ಮನೆಗಳಿಂದ ಹೊರಬರುವ ಬಟ್ಟೆ , ಪಾತ್ರೆ ತೊಳೆದ ನೀರು ನೇರವಾಗಿ ಸಿಸಿ ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದಾಗಿ ಈಶ್ವರ ಗುಡಿ, ದ್ಯಾಮಮ್ಮ, ಕುಂಬಾರ, ಕಂಬಾರ ಮತ್ತು ಅಗಸಿ ಓಣಿಗಳ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

    ರಸ್ತೆಯಲ್ಲಿ ಚಿಕ್ಕ ಮಕ್ಕಳು, ವೃದ್ಧರು ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡಬೇಕಾಗಿದೆ. ಒಂದು ವೇಳೆ ಮಕ್ಕಳನ್ನು ಎತ್ತಿಕೊಂಡು ಹೋಗದಿದ್ದರೆ ಕೊಳಚೆ ನೀರಿನಲ್ಲಿ ಬೀಳುವ ಸ್ಥಿತಿ ಬಂದೊದಗಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಗ್ರಾಪಂನವರು ಇದಕ್ಕೂ ನಮಗೂ ಸಂಬಂಧ ಇಲ್ಲ ಎನ್ನುವಂತೆ ಕಣ್ಮುಚ್ಚಿ ಕುಳಿತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

    ಈ ಬಗ್ಗೆ ಸ್ಥಳೀಯ ಗ್ರಾಪಂ ಪಿಡಿಒ ಅವರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನೆವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಒಟ್ಟಿನಲ್ಲಿ ಗ್ರಾಪಂನವರು ರಸ್ತೆಯಲ್ಲಿ ಕೊಳಚೆ ನೀರು ಹರಿಯದಂತೆ ಮಾಡಿ ಗ್ರಾಮಸ್ಥರ ಓಡಾಟಕ್ಕೆ ಅನುವು ಮಾಡಿಕೊಡಬೇಕಾಗಿದೆ.

    ಚರಂಡಿ ಇಲ್ಲದ ಕಾರಣ ರಸ್ತೆಯಲ್ಲಿ ಕೊಳಚೆ ನೀರು ಸಂಗ್ರಹವಾಗಿ ದುರ್ವಾಸನೆ ಬೀರುತ್ತಾ ಸಾಂಕ್ರಾಮಿಕ ರೋಗದ ಭೀತಿ ಉಂಟಾಗಿದೆ. ಹಲವು ಬಾರಿ ಗ್ರಾಪಂನ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲ. ಕೂಡಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದಲ್ಲಿ ಗ್ರಾಪಂಗೆ ಬೀಗ ಹಾಕಿ ಧರಣಿ ಮಾಡಲಾಗುವುದು.
    | ಅಮೀನ್ ನದಾಫ್ ಗೆದ್ದಲಮರಿ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts