More

    ಉಸಿರು ನಿಂತವರ ಹೆಸರಿನಲ್ಲಿ ಹಸಿರು ; ವಿನೂತನ ಯೋಜನೆ ರಾಜ್ಯಕ್ಕೆ ಮಾದರಿ ; ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ಹೇಳಿಕೆ

    ಮಧುಗಿರಿ ; ಉಸಿರು ನಿಂತವರ ಹೆಸರಿನಲ್ಲಿ ಹಸಿರು ಬೆಳೆಸುವ ಕಾರ್ಯಕ್ರಮ ವಿನೂತನ ಯೋಜನೆಯಾಗಿದ್ದು, ರಾಜ್ಯಕ್ಕೆ ಮಾದರಿಯಾಗಿದೆ ಎಂದು ಕೊರಟಗೆರೆ ತಾಲೂಕು ಸಿದ್ದರಬೆಟ್ಟದಲ್ಲಿರುವ ಕ್ಷೇತ್ರದ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

    ಜಡೇಗೊಂಡನಹಳ್ಳಿಯಲ್ಲಿ ಶನಿವಾರ ತಾಲೂಕು ಕಾಂಗ್ರೆಸ್ ಹಮ್ಮಿಕೊಂಡಿದ್ದ ಕರೊನಾದಿಂದ ಮೃತಪಟ್ಟವರ ಹೆಸರಿನಲ್ಲಿ ಸಸಿ ನೆಡುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಆರ್ಥಿಕವಾಗಿ ಸಬಲನಾದ ವ್ಯಕ್ತಿ ಉತ್ತಮ ನಾಗರಿಕನಾಗುತ್ತಾನೆ. ಬರಪಿಡಿತ ರೈತರ ಬದುಕು ಹಸನಾಗಬೇಕೆಂದರೆ ಪರ್ಯಾಯ ಬೆಳೆಗಳತ್ತ ರೈತರು ಚಿತ್ತ ಹರಿಸಬೇಕು. ಒಂದು ಎಕರೆ ಪ್ರದೇಶದಲ್ಲಿ ಮಹಾಘನಿ ಮರಗಳನ್ನು ಬೆಳೆಸಿದಲ್ಲಿ 12 ವರ್ಷಕ್ಕೆ 1 ಕೋಟಿ ರೂಪಾಯಿ, ಶ್ರೀಗಂಧ ಬೆಳೆಸಿದಲ್ಲಿ 10 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಬಹುದಾಗಿದೆ. ಈ ಮರಗಳನ್ನು ಬೆಳೆಸಿದಲ್ಲಿ 4 ವರ್ಷದ ನಂತರ ವಿಶ್ವಸಂಸ್ಥೆ 50 ಸಾವಿರ ಮತ್ತು ಮಹಾಘನಿ ಸಸಿಗಳನ್ನು ನೀಡುವ ಕಂಪನಿಯೇ 50 ಸಾವಿರ ಪ್ರೋತ್ಸಾಹ ಧನ ನೀಡುತ್ತಿದ್ದು, ಮಧುಗಿರಿ ತಾಲೂಕಿನಲ್ಲಿ ರಾಜಣ್ಣ ಅವರ ಸಹಕಾರದೊಂದಿಗೆ ರೈತರ ಹೊಲಗಳಲ್ಲಿ ಸಸಿಗಳನ್ನು ನೆಟ್ಟು ಆರ್ಥಿಕವಾಗಿ ಸದೃಢರನ್ನಾಗಿಸುವ ಚಿಂತನೆಯಿದೆ ಎಂದರು.

    ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, 20 ವರ್ಷಗಳ ನಂತರ ಸಮುದ್ರದ ಅಂಚಿನ ನಗರಗಳು ಮುಳುಗಡೆಯಾಗುತ್ತವೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದ್ದು, ಇದನ್ನು ತಪ್ಪಿಸಲು ನಾವೆಲ್ಲರೂ ಪರಿಸರ ರಕ್ಷಣೆಯ ಬಗ್ಗೆ ಕಾಳಜಿ ವಹಿಸಬೇಕು. ಇದನ್ನು ಮನಗಂಡು ತಾಲೂಕಿನಲ್ಲಿ ಕರೊನಾದಿಂದ ಮೃತಪಟ್ಟವರ ಹೆಸರಿನಲ್ಲಿ 248 ಬೂತ್‌ಗಳಲ್ಲಿ ಏಕಕಾಲಕ್ಕೆ 6 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪರಿಸರ ಸಮೃದ್ಧಿಯಾದಾಗ ಕಾಲಕಾಲಕ್ಕೆ ಮಳೆಯಾಗಿ ಕೆರೆ-ಕಟ್ಟೆಗಳಿಗೆ ನೀರು ಹರಿದು ಜನರ ಉಳಿವು ಸಾಧ್ಯ. ಮೃತರ ಹೆಸರಿನಲ್ಲಿ ಸಸಿ ನೆಟ್ಟರೆ ಅವರ ಹೆಸರು ಚಿರಸ್ಥಾಯಿಯಾಗಲಿದೆ. ಪ್ರತೀ ಮನೆಯಲ್ಲಿ ಒಂದು ಮಗು ಹುಟ್ಟಿದಾಗ, ಮಗುವಿನ ಹೆಸರಿನಲ್ಲಿ ಒಂದು ಗಿಡ ನೆಡಬೇಕು ಎಂಬ ಕಾನೂನು ಜಾರಿಯಾದರೆ ಪರಿಸರ ಬಗ್ಗೆ ಜಾಗೃತಿ ಮೂಡಲು ಸಾಧ್ಯ ಎಂದರು.

    ತಾಪಂ ಮಾಜಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ, ಸ್ವಾತಂತ್ರ್ಯ ಹೋರಾಟಗಾರ ಶಂಕರಪ್ಪ, ರಾಜ್ಯ ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ ಎನ್. ಗಂಗಣ್ಣ, ಜಿಪಂ ಮಾಜಿ ಸದಸ್ಯ ಎಸ್.ಡಿ.ಕೃಷ್ಣಪ್ಪ, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ. ನಂಜುಂಡಯ್ಯ, ಅಯೂಬ್, ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ಎ.ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್.ರಾಜ್‌ಗೋಪಾಲ್, ಎಂ.ಎಸ್.ಮಲ್ಲಿಕಾಜುನಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಪಿ.ಟಿ.ಗೋವಿಂದಯ್ಯಇತರರಿದ್ದರು.

    ಜಿಲ್ಲೆಯಲ್ಲಿ ಯಾರೂ ಮಾಡದ ಅಭಿವೃದ್ಧಿ ಕಾರ್ಯಗಳನ್ನು ಮಧುಗಿರಿ ತಾಲೂಕಿನಲ್ಲಿ ಕೆ.ಎನ್.ರಾಜಣ್ಣ ಮಾಡಿದ್ದು, ಸ್ವಂತ ಕೆಲಸವನ್ನು ಬದಿಗೊತ್ತಿ ಕ್ಷೇತ್ರದ ಕೆಲಸ ಮಾಡಿದ್ದಾರೆ. ಅಭಿವೃದ್ಧಿ, ಕ್ಷೇತ್ರದ ಬಗ್ಗೆ ಚಿಂತನೆ ನಡೆಸುವವರು ಉತ್ತಮ ಶಾಸಕರಾಗಲು ಸಾಧ್ಯ. ಅಂತಹ ಕೆಲಸವನ್ನು ರಾಜಣ್ಣ ತಮ್ಮ ಅವಧಿಯಲ್ಲಿ ಮಾಡಿದ್ದಾರೆ.
    ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ, ಶ್ರೀಕ್ಷೇತ್ರ ಸಿದ್ದರಬೆಟ್ಟ

    ನನಗೆ ಅಧಿಕಾರ ಇಲ್ಲದಿದ್ದರೂ ಚಿಂತೆಯಿಲ್ಲ. ನಾನು ಎಂದಿಗೂ ಸುಳ್ಳು ಹೇಳಿ ರಾಜಕಾರಣ ಮಾಡುವುದಿಲ್ಲ. ನಾನು ಶಾಸಕನಾಗಿದ್ದರೆ ಇಷ್ಟೊತ್ತಿಗೆ ಎತ್ತಿನಹೊಳೆ ಯೋಜನೆ ಮೂಲಕ ತಾಲೂಕಿನ ಕೆರೆಗಳಿಗೆ ನೀರು ಹರಿಸುತ್ತಿದ್ದೆ. ಈಗ ಕಾಮಗಾರಿ ಕುಂಠಿತಗೊಂಡಿದ್ದು, ತ್ವರಿತಗತಿಯಲ್ಲಿ ಪೂರ್ಣಗೊಂಡು ತಾಲೂಕಿನ ಕೆರೆಗಳಿಗೆ ನೀರು, ಮಧುಗಿರಿ ಜಿಲ್ಲೆಯಾಗಲು ಮತ್ತು ಅಭಿವೃದ್ಧಿಗೆ ನಮ್ಮದೇ ಸರ್ಕಾರ ಬರಬೇಕು ಮತ್ತು ನಾನು ಶಾಸಕನಾಗಿ ಆಯ್ಕೆಯಾಗಬೇಕು.
    ಕೆ.ಎನ್. ರಾಜಣ್ಣ, ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts