More

    ಜ್ಞಾನಾಲಯ ಇ-ಗ್ರಂಥಾಲಯ

    ಬೆಳಗಾವಿ: ಪುಸ್ತಕ ಪ್ರೇಮಿಗಳು ಮನೆಯಲ್ಲೇ ಪುಸ್ತಕ ಓದಲೆಂಬ ಸದುದ್ದೇಶದಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಬಿಡುಗಡೆ ಮಾಡಿರುವ ‘ಸಾರ್ವಜನಿಕ ಇ-ಗ್ರಂಥಾಲಯ’ ಆ್ಯಪ್‌ಗೆ ಬಲು ಬೇಡಿಕೆ ಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 11 ಸಾವಿರ ಜನರು ಈ ಆ್ಯಪ್ ಡೋನ್‌ಲೌಡ್ ಮಾಡಿಕೊಂಡು ಆನ್‌ಲೈನ್‌ನಲ್ಲೇ ಪುಸ್ತಕ ಓದುತ್ತಿದ್ದಾರೆ.

    ಕಳೆದ ಫೆಬ್ರವರಿಯಲ್ಲಿ ಆ್ಯಪ್ ಬಿಡುಗಡೆ ಮಾಡಿದ್ದ ಗ್ರಂಥಾಲಯ ಇಲಾಖೆ, ಮಾರ್ಚ್‌ನಲ್ಲಿ ಆ್ಯಪ್ ಬಳಕೆಗೆ ಮುಕ್ತಗೊಳಿಸಿತ್ತು. ಆರಂಭದಲ್ಲಿ ಇ-ಗ್ರಂಥಾಲಯದ ಬಳಕೆ ಇರಲಿಲ್ಲ. ಲಾಕ್‌ಡೌನ್ ಹಾಗೂ ಲಾಕ್‌ಡೌನ್ ನಂತರ ಆ್ಯಪ್ ಬಳಕೆ ಹೆಚ್ಚಾಗಿದೆ. ಸಾರ್ವಜನಿಕರಿಗೆ ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಈ ವ್ಯವಸ್ಥೆ ವರದಾನವಾಗಿದೆ.

    ಜಿಲ್ಲೆ 6ನೇ ಸ್ಥಾನ: ಲಾಕ್‌ಡೌನ್‌ನಲ್ಲಿ ಬಂದ್ ಆಗಿದ್ದ ಜಿಲ್ಲೆಯ ಗ್ರಂಥಾಲಯಗಳು ಇನ್ನೂ ಸರಿಯಾಗಿ ಕಾರ್ಯಾರಂಭ ಮಾಡಿಲ್ಲ. ಹೀಗಾಗಿ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ತೊಂದರೆಯಾಗಿದೆ. ಇವರೆಲ್ಲರೂ ಈಗ ಸಾರ್ವಜನಿಕ ಇ-ಗ್ರಂಥಾಲಯದ ಮೊರೆ ಹೋಗಿದ್ದಾರೆ. ಆ್ಯಪ್ ಡೌನ್‌ಲೌಡ್ ಮಾಡಿಕೊಳ್ಳುವ ವಿಚಾರದಲ್ಲಿ ಬೆಳಗಾವಿ ಜಿಲ್ಲೆ ಕರ್ನಾಟಕದಲ್ಲಿ 6ನೇ ಸ್ಥಾನದಲ್ಲಿದೆ.

    ಮಾಹಿತಿ ಕಣಜ: ಸಾರ್ವಜನಿಕ ಇ-ಗ್ರಂಥಾಲಯದಲ್ಲಿ 50 ಸಾವಿರ ಪುಸ್ತಕಗಳಿವೆ. 5 ಸಾವಿರ ವಿಡಿಯೋ, 60 ಸಾವಿರ ಜರ್ನಲ್ಸ್‌ಗಳು ಲಭ್ಯವಿವೆ. ಪುಸ್ತಕಗಳಲ್ಲಿ ಕಾದಂಬರಿ, ನಿಯತಕಾಲಿಕೆಗಳು, ಮಕ್ಕಳ ಪುಸ್ತಕ, ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕ, ಐಐಟಿ, ನೀಟ್, ಕೆಎಎಸ್, ಐಎಎಸ್ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ಲಭ್ಯವಿವೆ. ಎಲ್‌ಕೆಜಿಯಿಂದ ಪಿಯು ವರೆಗಿನ ಪುಸ್ತಕ, ಪ್ರಾದೇಶಿಕ ಭಾಷಾ ಪುಸ್ತಕಗಳು ಇವೆ. ದಿನದಿಂದ ದಿನಕ್ಕೆ ಓದುಗರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಇ-ಗ್ರಂಥಾಲಯದಲ್ಲಿ ಮತ್ತಷ್ಟು ಪುಸ್ತಕಗಳನ್ನು ಮುಂದಿನ ದಿನಗಳಲ್ಲಿ ಅಪ್‌ಲೋಡ್ ಮಾಡುತ್ತೇವೆ ಎಂದು ಗ್ರಂಥಾಲಯ ಅಧಿಕಾರಿಗಳು ತಿಳಿಸಿದ್ದಾರೆ.

    ಓದುಗರಿಗೆ ವ್ಯವಸ್ಥೆ: ಸಾರ್ವಜನಿಕ ಇ-ಗ್ರಂಥಾಲಯ ಆ್ಯಪ್ ಅಷ್ಟೇ ಅಲ್ಲದೆ, ಸಾರ್ವಜನಿಕರಿಗೆ ಗ್ರಂಥಾಲಯಗಳಲ್ಲಿ ಇ-ಗ್ರಂಥಾಲಯ ಬಳಕೆಗೆ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ ನಗರ ಕೇಂದ್ರ ಗ್ರಂಥಾಲಯ, ಮಾರುತಿ ಗಲ್ಲಿಯ ಶಾಖಾ ಗ್ರಂಥಾಲಯ ಹಾಗೂ ಅಥಣಿ, ರಾಮದುರ್ಗ, ರಾಯಬಾಗ, ಕಿತ್ತೂರು, ಬೈಲಹೊಂಗಲ, ಹುಕ್ಕೇರಿ, ಚಿಕ್ಕೋಡಿ, ಗೋಕಾಕ, ಖಾನಾಪುರ ಗ್ರಂಥಾಲಯಕ್ಕೆ ಎರಡು ಕಂಪ್ಯೂಟರ್, 4 ಟ್ಯಾಬ್ ಸೇರಿ ಡಿಜಿಟಲ್ ಪರಿಕರ ಕಳುಹಿಸಿಕೊಡಲಾಗಿದೆ. ಲಾಕ್‌ಡೌನ್‌ನಲ್ಲಿ ಬಂದ್ ಆಗಿರುವ ಗ್ರಂಥಾಲಯಗಳು ಸಂಪೂರ್ಣವಾಗಿ ತೆರೆದ ಬಳಿಕ ಇವುಗಳ ಬಳಕೆ ಆರಂಭವಾಗಲಿದೆ.

    ಸಂಚಾರಿ ವಾಹನದ ವ್ಯವಸ್ಥೆ: ವಡಗಾವಿ, ತಿಳಕವಾಡಿ, ಹಿಂದವಾಡಿ, ಮಹಾಂತೇಶನಗರ, ಮಾರುತಿ ಗಲ್ಲಿಯಲ್ಲಿ ಶಾಖಾ ಗ್ರಂಥಾಲಯ ಕಚೇರಿಗಳಿವೆ. ಪ್ರತಿ ತಾಲೂಕಿಗೆ ಒಂದೊಂದು ತಾಲೂಕು ಗ್ರಂಥಾಲಯಗಳು ಹಾಗೂ ಜಿಲ್ಲೆಯ 460 ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯಗಳಿದ್ದು, ಇಲ್ಲಿರುವ ಸಿಬ್ಬಂದಿ ಸಾರ್ವಜನಿಕ ಇ-ಗ್ರಂಥಾಲಯದ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದ್ದಾರೆ. ನಗರದ ಹೊಸ ಬಡಾವಣೆಗಳಿಗೆ ‘ಸಂಚಾರಿ ಗ್ರಂಥಾಲಯ ವಾಹನ’ ಸಂಚರಿಸುತ್ತಿದೆ. ಪ್ರತಿ ಬಡಾವಣೆಗೆ ವಾರಕ್ಕೆ ಒಂದು ಸಾರಿ ಈ ವಾಹನ ಸುತ್ತು ಹೊಡೆಯುತ್ತದೆ. ಸಾರ್ವಜನಿಕರು ಸ್ಥಳದಲ್ಲೇ ಓದಬಹುದು ಅಥವಾ ವಾರದವರೆಗೆ ಉಚಿತವಾಗಿ ಪುಸ್ತಕ ಪಡೆಯಬಹುದು.

    ಸಾರ್ವಜನಿಕರು ಜಿಲ್ಲೆಯಲ್ಲಿ ಇ-ಗ್ರಂಥಾಲಯ ಹೆಚ್ಚು ಬಳಸುತ್ತಿರುವುದು ಸಂತೋಷದ ಸಂಗತಿ. ಮುಂದಿನ ದಿನಗಳಲ್ಲಿ ಹೆಚ್ಚು ಪುಸ್ತಕಗಳನ್ನು ಇ-ಗ್ರಂಥಾಲಯಕ್ಕೆ ಸೇರಿಸುತ್ತೇವೆ.
    | ಜಿ.ರಾಮಯ್ಯ ಉಪನಿರ್ದೇಶಕ, ಬೆಳಗಾವಿ ಕೇಂದ್ರ ಗ್ರಂಥಾಲಯ

    ಸಾರ್ವಜನಿಕ ಇ-ಗ್ರಂಥಾಲಯದಲ್ಲಿ ಉಪಯುಕ್ತ ಪುಸ್ತಕಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಒಳ್ಳೆಯ ಪುಸ್ತಕಗಳು ಇವೆ. ಲಾಕ್‌ಡೌನ್ ವೇಳೆ ಇ-ಗ್ರಂಥಾಲಯ ಬಹಳ ಉಪಯೋಗವಾಗಿದೆ. ವಿದ್ಯಾರ್ಥಿಗಳು, ಜನರು ಇ-ಗ್ರಂಥಾಲಯದ ಸದುಪಯೋಗಪಡೆಯಬೇಕು.
    | ಮಲ್ಲಿಕಾರ್ಜುನ ಯಳವತ್ತಿ ಸ್ಪರ್ಧಾತ್ಮಕ ಪರೀಕ್ಷಾರ್ಥಿ

    | ಜಗದೀಶ ಹೊಂಬಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts