More

    ಮಹನೀಯರ ಆದರ್ಶಗಳನ್ನು ಅರಿಯಿರಿ

    ಮಡಿಕೇರಿ: ಸಮಾಜಕ್ಕೆ ಸೇವೆ ಸಲ್ಲಿಸಿದ ಮಹನೀಯರ ಆದರ್ಶಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದರ ಜತೆಗೆ ಇತರರಿಗೂ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ನಗರದ ಡಿ.ದೇವರಾಜ ಅರಸು ಭವನದಲ್ಲಿ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಮತ್ತು ಸಂತ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

    ನೂರಾರು ವರ್ಷಗಳ ಹಿಂದೆ ಸಮಾಜಕ್ಕೆ ಸೇವೆ ಸಲ್ಲಿಸಿದ ಮಹನೀಯರ ವಿಚಾರಗಳನ್ನು ಸ್ಮರಿಸಲು ಸರ್ಕಾರ ಜಯಂತಿಯನ್ನು ಆಚರಿಸುತ್ತಾ ಬಂದಿದೆ. ವೇಮನ ಮತ್ತು ಅಂಬಿಗರ ಚೌಡಯ್ಯನವರು ಸಮಾನತೆಗಾಗಿ, ಸ್ತ್ರೀ ಶೋಷಣೆ ವಿರುದ್ಧ ಧ್ವನಿ ಎತ್ತಿದವರು. ಅವರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ಹೆಬ್ಬಾಲೆ ಪ್ರೌಢಶಾಲೆ ಶಿಕ್ಷಕ ಮೆ.ನಾ.ವೆಂಕಟನಾಯಕ ಮಾತನಾಡಿ, ಅಂಬಿಗರ ಚೌಡಯ್ಯ ಒಬ್ಬ ಅದ್ಭುತ ಚಿಂತಕ. ಸಮಾನತೆಯ ಸಾರವನ್ನು ಕಠಿಣ ಪದಗಳ ಮೂಲಕ ಜನರಿಗೆ ತಿಳಿಸಿದ ಶ್ರೇಷ್ಠ ವಚನಕಾರ. ಶರಣರಲ್ಲಿಯೇ ಇದ್ದ ಅಸಮಾನತೆ ವಿರುದ್ಧ ಸಾತ್ವಿಕ ಹೋರಾಟ ಮಾಡಿದವನು ಎಂದು ಸ್ಮರಿಸಿದರು.

    ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ವಚನಕಾರರು ಮತ್ತು ಸಾಹಿತಿಗಳು ಆಲದ ಮರವಿದ್ದಂತೆ. ಆ ಮರದಡಿಯಲ್ಲಿ ಯಾವುದೇ ಜಾತಿ-ಧರ್ಮದ ವಿಚಾರಗಳಿಲ್ಲದೆ ಸಾಹಿತ್ಯದ ನೆರಳನ್ನು ಎಲ್ಲರಿಗೂ ನೀಡುತ್ತಾರೆ ಎಂದರು.
    ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆಯ ರಾಜು ಮತ್ತು ತಂಡದವರು ನಾಡಗೀತೆ ಹಾಡಿದರು. ಮಡಿಕೇರಿ ಶಾಸಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ, ಮಣಜೂರು ಮಂಜುನಾಥ್, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts