More

  ಸೈನ್ಯಕ್ಕೆ ಹೊರಟ ನಂದಿನಿ ಗುಡ್​ಲೈಫ್ ಹಾಲು: ವಾರ್ಷಿಕ 1 ಕೋಟಿ ಲೀಟರ್ ಹಾಲು ಪೂರೈಕೆಗೆ ಬೇಡಿಕೆ

  ಬೆಂಗಳೂರು: ಕೆಎಂಎಫ್​ನ ಗುಡ್​ಲೈಫ್ ಹಾಲು ಸೈನ್ಯಕ್ಕೆ ಹೊರಟಿದೆ. ವಾರ್ಷಿಕ 1 ಕೋಟಿ ಲೀಟರ್ ಹಾಲನ್ನು ರಕ್ಷಣಾ ಇಲಾಖೆಗೆ ಪೂರೈಸಲು ಬೇಡಿಕೆ ಬಂದಿದೆ. ನಂದಿನಿ ಬ್ರಾ್ಯಂಡ್ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೆಲೆ ಬಂದಿರುವುದರಿಂದ ಹೊರರಾಜ್ಯಗಳಲ್ಲೂ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಕೆಎಂಎಫ್ ಯೋಜನೆ ರೂಪಿಸಿದೆ. ನಾಡಿನ ಏಕೈಕ ಸಹಕಾರಿ ಹಾಲು ಉತ್ಪನ್ನ ಸಂಸ್ಥೆಯಾಗಿ ರೂಪುಗೊಂಡಿರುವ ಕೆಎಂಎಫ್​ಗೆ ಪ್ರತಿನಿತ್ಯ ಸರಾಸರಿ 75 ಲಕ್ಷ ಲೀಟರ್ ಹಾಲು ಬರುತ್ತಿದೆ. ಮಳೆಗಾಲದಲ್ಲಿ ಈ ಸಂಗ್ರಹ ಪ್ರಮಾಣ 85 ಲಕ್ಷ ದಾಟಲಿದೆ. ರೈತರಿಂದ ಬರುವ ಹಾಲನ್ನು ಸಂಗ್ರಹಿಸಿ, ನಾನಾ ಉತ್ಪನ್ನಗಳನ್ನು ಮಾಡಿ ಗ್ರಾಹಕರಿಗೆ ತಲುಪಿಸುತ್ತಿರುವ ಸಂಸ್ಥೆಗೆ ಬೆಲೆ ಸಮರದಲ್ಲಿ ಶುಕ್ರದೆಸೆ ತಿರುಗಿದೆ.

  75 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದರೂ ಮಾರುಕಟ್ಟೆ ಇರುವುದು 40 ಲಕ್ಷ ಲೀಟರ್​ಗೆ ಮಾತ್ರ. ಇನ್ನುಳಿದ 35 ಲಕ್ಷ ಲೀಟರ್ ಹಾಲನ್ನು ನಾನಾ ಉತ್ಪನ್ನಗಳನ್ನಾಗಿಸಿ ಮಾರುಕಟ್ಟೆಗೆ ಕಳುಹಿಸುತ್ತಿರುವ ಕೆಎಂಎಫ್, ಗುಣಮಟ್ಟದಲ್ಲಿ ಅಮೂಲ್ ಬ್ರಾ್ಯಂಡ್​ಗೆ ಸರಿಸಮನಾಗಿ ನಿಂತಿದೆ. ಮಾರುಕಟ್ಟೆಯಲ್ಲಿ ಹಾಲಿನ ಪುಡಿ ಬೆಲೆ ಕುಸಿದ ಪರಿಣಾಮ, ಎರಡು ವರ್ಷಗಳಿಂದ ಕೇವಲ 120 ರೂ.ಗೆ ಮಾರಾಟ ಮಾಡಲಾಗಿತ್ತು. ಕೇಳುವವರೇ ಇಲ್ಲದಂತಾಗಿ ಗೋದಾಮುಗಳಲ್ಲಿ 20 ಸಾವಿರ ಟನ್​ನಷ್ಟು ಸಂಗ್ರಹವಾಗಿತ್ತು. ಈಗ ಕೆಜಿಗೆ 300ರಿಂದ 330 ರೂ.ಗೆ ಏರಿಕೆ ಆಗಿದ್ದು, ಹಾಲಿನ ಪುಡಿಗೆ ಭರ್ಜರಿ ಬೇಡಿಕೆ ಬಂದಿದ್ದು ಕೆಎಂಎಫ್​ಗೆ ಲಾಭದ ಹೊಳೆಯನ್ನೇ ಹರಿಸಿದೆ. ಬಹಳ ದಿನಗಳ ಕಾಲ ಕೆಡದಂತಿರುವ ಗುಡ್​ಲೈಫ್ ಹಾಲಿಗೂ ಬೇಡಿಕೆ ಹೆಚ್ಚಿದೆ. ವಿಶೇಷವಾಗಿ ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಈ ಹಾಲು ಸರಬರಾಜಾಗುತ್ತದೆ. ಸೇನೆಗೆ ಪರಿಚಯಿಸಿದ ಗುಡ್​ಲೈಫ್ ಹಾಲಿಗೆ ಸೈನಿಕರು ಮಾರು ಹೋಗಿದ್ದಾರೆ. ಪ್ರತಿ ವರ್ಷ 1 ಕೋಟಿ ಲೀಟರ್ ಸರಬರಾಜಾಗುತ್ತಿದೆ.

  ಸಿರಿಧಾನ್ಯ ಸಿಹಿ: ನಂದಿನಿ ಉತ್ಪನ್ನಗಳನ್ನು ಇನ್ನು ಹೆಚ್ಚು ಸವಿಯುವಂತೆ ಮಾಡಲು ಶೇ.10 ರಿಯಾಯಿತಿ ನೀಡುವ ಮೂಲಕ ನಂದಿನಿ ಸಿಹಿ ಉತ್ಸವಕ್ಕೂ ಕೆಎಂಎಫ್ ಮುನ್ನುಡಿ ಬರೆದಿದೆ. ನಂದಿನಿ ಪಾರ್ಲರ್​ಗಳು, ಮಳಿಗೆಗಳು, ಕ್ಷೀರ ಕೇಂದ್ರಗಳು, ಸೂಪರ್ ಮಾರ್ಕೆಟ್​ಗಳಲ್ಲಿ ಮೈಸೂರ್ ಪಾಕ್, ಪೇಡಾ, ಧಾರವಾಡ ಪೇಡಾ, ಕೇಸರಿ ಪೇಡಾ, ಏಲಕ್ಕಿ ಪೇಡಾ, ಬಾದಾಮ್ ಬರ್ಫಿಯಿಂದ ಹಿಡಿದು ಕ್ಯಾಶ್ಯೂ, ಡ್ರೈ ಫ್ರೂರ್ಟ್ಸ್, ಕೋಕೋನಟ್, ಚಾಕೋಲೆಟ್ ಬರ್ಫಿ, ಕುಂದಾ, ಜಾಮೂನ್, ರಸಗುಲ್ಲಾ ತನಕ ಎಲ್ಲವೂ ಸಿಗಲಿದೆ. ಸಿರಿಧಾನ್ಯ ಲಡ್ಡು, ಸಿರಿಧಾನ್ಯ ಹಾಲಿನ ಪುಡಿ, ಚಕ್ಕಿ ಲಾಡುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

  ಬೆಣ್ಣೆ, ಐಸ್ಕ್ರೀಂಗೂ ಡಿಮಾಂಡ್: ನಂದಿನಿ ಬೆಣ್ಣೆ ಮತ್ತು ತುಪ್ಪಕ್ಕೆ ಮಾರುಕಟ್ಟೆಯಲ್ಲಿ ತನ್ನದೇ ಆದ ಆಕರ್ಷಣೆ ಇದೆ. ಕೆಜಿ ಬೆಣ್ಣೆ ದರ 200 ರೂ.ಗೆ ಇಳಿಕೆ ಆಗಿತ್ತು. ಈಗ 300 ರೂ ದಾಟಿದೆ. ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಬೇಡಿಕೆ ಹೆಚ್ಚಳ ಹಿನ್ನೆಲೆಯಲ್ಲಿ ಹೊಸದಾಗಿ 20ಕ್ಕೂ ಹೆಚ್ಚು ಬಗೆಯ ಐಸ್ಕ್ರೀಂ ಉತ್ಪನ್ನಗಳನ್ನು ಸೇರ್ಪಡೆ ಮಾಡಿದ್ದು, ಈಗ ಮಾರುಕಟ್ಟೆಯಲ್ಲಿ 105 ಬಗೆಯ ಐಸ್ಕ್ರೀಂ ಲಭ್ಯವಿವೆ.

  17 ಸಾವಿರ ಏಜೆಂಟರು: ನಂದಿನಿ ಉತ್ಪನ್ನಗಳನ್ನು ಜನಪ್ರಿಯಗೊಳಿಸಿ ಮಾರುಕಟ್ಟೆ ವಿಸ್ತರಿಸಲು ಈಗಿರುವ 1600 ನಂದಿನಿ ಬೂತ್​ಗಳ ಜತೆಗೆ ಹೆಚ್ಚುವರಿಯಾಗಿ 1 ಸಾವಿರ ಅಂಗಡಿಗಳನ್ನು ತೆರೆಯಲು ಕೆಎಂಎಫ್ ಉದ್ದೇಶಿಸಿದೆ. ಇದೆಲ್ಲವೂ ಪೂರ್ಣಗೊಂಡರೆ, ರಾಜ್ಯದಲ್ಲಿ ಏಜೆಂಟರ ಸಂಖ್ಯೆ 17 ಸಾವಿರ ದಾಟಲಿದೆ.

  ತಿರುಪತಿಗೂ ನಂದಿನಿ ತುಪ್ಪ: ನಾನಾ ಕಾರಣಕ್ಕೆ ತಿರುಪತಿಗೆ ನಂದಿನಿ ತುಪ್ಪದ ಟೆಂಡರ್ ರದ್ದಾಗಿತ್ತು. ತಿರುಪತಿ ಲಡ್ಡಿಗೆ ಮುಖ್ಯ ಆಕರ್ಷಣೆಯೇ ನಂದಿನಿ ತುಪ್ಪ ಎನ್ನುವುದನ್ನು ಮನಗಂಡಿರುವ ಟಿಟಿಡಿ ಮಂಡಳಿ, 14 ಲಕ್ಷ ಕೆಜಿ ನಂದಿನಿ ತುಪ್ಪ ತರಿಸಿಕೊಳ್ಳುತ್ತಿದೆ.

  ಗುಡ್​ಲೈಫ್ ಹಾಲಿಗೆ ಬೇಡಿಕೆ ಇದೆ. ಹಾಲಿನ ಮಾರುಕಟ್ಟೆಯನ್ನು ನೆರೆ ರಾಜ್ಯಗಳಿಗೆ ಇನ್ನಷ್ಟು ವಿಸ್ತರಣೆ ಮಾಡಲು ಯೋಜನೆ ರೂಪಿಸಲಾಗಿದೆ.

  | ಸತೀಶ್ ಕೆಎಂಎಫ್ ಎಂಡಿ

  ಶಿವಾನಂದ ತಗಡೂರು

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts