More

    ಕಲ್ಯಾಣಿಯಾಗಿದೆ ಡಸ್ಟ್‌ಬಿನ್, ಸೂಲಿಬೆಲೆ ಪಂಚಾಯಿತಿ ನಿರ್ಲಕ್ಷ್ಯ, ಗಬ್ಬುವಾಸನೆಗೆ ಜನ ಹೈರಾಣ

    ಮಂಜುನಾಥ ಸೂಲಿಬೆಲೆ
    ಸೂಲಿಬೆಲೆಯ ಓವರ್ ಟ್ಯಾಂಕ್ ಬಳಿ ಇರುವ ಕಲ್ಯಾಣಿ ನಿರ್ವಹಣೆ ಕೊರತೆಯಿಂದಾಗಿ ಪಾಳು ಬಿದ್ದಿದ್ದು ಚರಂಡಿಯ ಮಲಿನ ನೀರು ಸೇರುತ್ತಿರುವುದರಿಂದ ಗಬ್ಬೆದ್ದು ನಾರುತ್ತಿದೆ.


    ಕಲ್ಯಾಣಿ ನಿರ್ವಹಣೆ ಕಡೆಗಣಿಸಿದ ಸ್ಥಳೀಯ ಗ್ರಾಮ ಪಂಚಾಯಿತಿ ಕ್ರಮಕ್ಕೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿದೆ. ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ 2017-18ನೇ ಸಾಲಿನಲ್ಲಿ ಈ ಕಲ್ಯಾಣಿ ಕಾಮಗಾರಿ ನಡೆಸಲಾಗಿದ್ದು 10 ಲಕ್ಷ ರೂ. ವೆಚ್ಚ ಖರ್ಚು ಮಾಡಲಾಗಿದೆ. ಆದರೆ ಕಲ್ಯಾಣಿಯನ್ನು ಗ್ರಾಪಂ ವತಿಯಿಂದ ನಿರ್ವಹಣೆ ಮಾಡುವ ಗೋಜಿಗೆ ಹೋಗಿಲ್ಲ, ಈ ಬಗ್ಗೆ ಅನೇಕ ಬಾರಿ ಪಂಚಾಯಿತಿ ಗಮನಕ್ಕೆ ತಂದರೂ ಇಲ್ಲಿನ ಸಿಬ್ಬಂದಿ ಗಮನ ನೀಡದೆ ನಿರ್ಲಕ್ಷ್ಯ ಅನುಸರಿಸುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಚರಂಡಿ ನೀರು ಸಂಪರ್ಕ;ಕಲ್ಯಾಣಿಗೆ 5ನೇ ವಾರ್ಡ್‌ನ ಮಾರುತಿನಗದ ಚರಂಡಿ ನೀರಿನ ಸಂಪರ್ಕ ಕಲ್ಪಿಸಲಾಗಿದ್ದು ಇದರಲ್ಲಿ ಶೌಚ ನೀರು ಸೇರುತ್ತಿರುವುದು ಪರಿಸರ ಪ್ರೇಮಿಗಳ ಕಣ್ಣು ಕೆಂಪಾಗಿಸಿದೆ. ಕಲ್ಯಾಣಿ ಬಳಿ ನಿಲ್ಲುವುದಕ್ಕೆ ಸಾಧ್ಯವಿಲ್ಲದಷ್ಟು ದುರ್ನಾತ ಬೀರುತ್ತಿದ್ದರೂ ಸಂಬಂಧಪಟ್ಟ ಯಾರೊಬ್ಬರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಪರಿಸರ ಪ್ರೇಮಿಗಳು ಬೇಸರ ತೋಡಿಕೊಂಡಿದ್ದಾರೆ.

    ಕುಡುಕರ ತಾಣ: ಸಂಜೆಯಾಗುತ್ತಿದ್ದಂತೆ ಈ ಜಾಗ ಕುಡುಕರ ತಾಣವಾಗುತ್ತದೆ, ಪ್ಲಾಸ್ಟಿಕ್ ನೀರಿನ ಬಾಟಲಿ, ಮದ್ಯದ ಬಾಟಲಿಗಳನ್ನು ಕಲ್ಯಾಣಿಯಲ್ಲಿ ಎಸೆಯುತ್ತಿದ್ದು, ಇದರಿಂದ ಕಲ್ಯಾಣಿ ಸುತ್ತಮುತ್ತಲಿನ ಪರಿಸರವೂ ಹಾಳಾಗಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಲವತ್ತುಗೊಂಡಿದ್ದಾರೆ.

    ಕಲ್ಯಾಣಿ ಸಂರಕ್ಷಣೆಗೆ ಒತ್ತಾಯ: ಕಲ್ಯಾಣಿ ಸರ್ಕಾರಿ ಜಾಗದಲ್ಲಿದ್ದು ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಕಲ್ಯಾಣಿ ಜಾಗ ಸರ್ವೇ ಮಾಡಿಸಿ ಕಾಂಪೌಂಡ್ ನಿರ್ಮಾಣ ಮಾಡಿ ಸಂರಕ್ಷಣೆ ಮಾಡಬೇಕಾಗಿದೆ, ಚರಂಡಿ ನೀರಿನ ಸಂಪರ್ಕ ತಡೆದು ಗಿಡ-ಗಂಟಿಗಳನ್ನು ತೆರವುಗೊಳಿಸಿ ತ್ಯಾಜ್ಯ ತೆಗೆದು ಸಸಿಗಳನ್ನು ನೆಟ್ಟು ಉದ್ಯಾನದ ಮಾದರಿಯಲ್ಲಿ ಈ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

    ಗ್ರಾಪಂ ವ್ಯಾಪ್ತಿ ಬೆಳೆಯುತ್ತಿದೆ, ಸ್ವಚ್ಛತೆ ವಿಚಾರದಲ್ಲಿ ಪಂಚಾಯಿತಿಯೊಂದಿಗೆ ಸಾರ್ವಜನಿಕರು ಸಹಕರಿಸದ ಕಾರಣ ಸ್ವಚ್ಛತೆ ಕಾಪಾಡಲು ಹರಸಾಹಸಪಡುವಂತಾಗಿದೆ, ಗ್ರಾಪಂ ಸ್ವಚ್ಛತಾವಾಹಿನಿ ಸಿಬ್ಬಂದಿ ಹಾಗೂ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಇನ್ನೊಂದು ವಾರದಲ್ಲಿ ಕಲ್ಯಾಣಿ ಸ್ವಚ್ಛತೆ ಹಮ್ಮಿಕೊಂಡಿದ್ದು, ಇದನ್ನು ಸಂರಕ್ಷಿಸುವ ಕೆಲಸ ಮಾಡಲಾಗುವುದು.

    ಸುಂದರಪ್ಪ, ಪಿಡಿಒ, ಸೂಲಿಬೆಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts