More

    ಕೆಎಲ್‌ಇ ಆಸ್ಪತ್ರೆಯಲ್ಲಿ ಬೈ ಪ್ಲೇನ್ ಕ್ಯಾಥಲ್ಯಾಬ್

    ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವು ನರ ಮತ್ತು ರಕ್ತನಾಳ ರೋಗ ಸಂಬಂಧಿತ ಕಾಯಿಲೆಗಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಬದಲಾಗಿ ಅತ್ಯಾಧುನಿಕ ಚಿಕಿತ್ಸೆ ನೀಡಲು ‘ಬೈ ಪ್ಲೇನ್ ಕ್ಯಾಥಲ್ಯಾಬ್’ ಸ್ಥಾಪಿಸಿದೆ. ಈ ಕೇಂದ್ರವನ್ನು ಏ. 10ರಂದು ಬೆಳಗ್ಗೆ 10 ಗಂಟೆಗೆ ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಲೋಕಾರ್ಪಣೆ ಮಾಡಲಿದ್ದಾರೆ. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಉಪಸ್ಥಿತರಿರುವರು.

    ಇಂಟರ್‌ವೆನ್ಶನಲ್ ರೆಡಿಯಾಲಜಿ ಕಾರ್ಯವಿಧಾನ ಅತ್ಯಂತ ಸರಳವಾಗಿದ್ದು, ತೆರೆದ ಶಸ್ತ್ರಕ್ರಿಯೆ ಬದಲಾಗಿ ಚಿಕ್ಕ ರಂಧ್ರದ ಮೂಲಕ ಸ್ಟೆಂಟ್ ಅಳವಡಿಸಿ ರೋಗಿಯನ್ನು ಶೀಘ್ರ ಗುಣಮುಖಗೊಳಿಸಬಹುದಾಗಿದೆ. ಇದು ಡಿಎಸ್‌ಎ ಸಿಟಿ ಎಂಆರ್‌ಐ ಒಳಗೊಂಡಿದ್ದು, ಮಿದುಳಿನಲ್ಲಿ ಉಂಟಾಗುವ ಸ್ಟ್ರೋಕ್ (ಪಾರ್ಶ್ವವಾಯು), ರಕ್ತನಾಳಗಳ ಮುದುಡುವಿಕೆ ಸೇರಿ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ. ಈ ವ್ಯವಸ್ಥೆಯು ಭಾರತದ ಕೆಲವೇ ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ಇದೀಗ ಕೆಎಲ್‌ಇ ಆಸ್ಪತ್ರೆಯೂ ಕೂಡ ಒಂದಾಗಿದೆ. ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಈ ಘಟಕ ನಿರ್ಮಿಸಲಾಗಿದೆ. ಅತ್ಯಂತ ಕಡಿಮೆ ವಿಕಿರಣ ಹೊಂದಿರುವ ಲೇಸರ್ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇದು ಆಸ್ಪತ್ರೆಯಲ್ಲಿ ದೀರ್ಘಕಾಲ ವಾಸ್ತವ್ಯ ತಪ್ಪಿಸಿ, ಶೀಘ್ರ ಗುಣಮುಖವಾಗುವಲ್ಲಿ ಸಹಾಯ ಮಾಡುತ್ತದೆ. ಆಸ್ಪತ್ರೆಯಲ್ಲಿ ಅಳವಡಿಸಲಾದ ಅತ್ಯಾಧುನಿಕ 3ಡಿ ಸ್ಪಷ್ಟ ಚಿತ್ರಣ ನೀಡಲಿರುವ ಎಫ್‌ಡಿ 20/20 ಬೈ ಪ್ಲೇನ್ ಕ್ಯಾಥಲ್ಯಾಬ್, ಪಾರ್ಶ್ವವಾಯು ರೋಗಿಗಳ ಚಿಕಿತ್ಸೆಯಲ್ಲಿ ವೈದ್ಯರ ಕಾರ್ಯವನ್ನು ಸರಳಗೊಳಿಸಲಿದೆ.

    ಪಾರ್ಶ್ವವಾಯು ರೋಗಕ್ಕೆ ತುತ್ತಾಗಿರುವ ರೋಗಿಗಳನ್ನು ಆರು ತಾಸಿ ನೊಳಗೆ ಆಸ್ಪತ್ರೆಗೆ ಕರೆದುಕೊಂಡು ಬಂದರೆ, ಈ ಬೈ ಪ್ಲೇನ್ ಕ್ಯಾಥಲ್ಯಾಬ್ ಮಷಿನ್ ಸಹಾಯದಿಂದ ಚಿಕಿತ್ಸೆ ನೀಡಲು ಸಾಧ್ಯವಿದೆ. ಜತೆಗೆ ಮಿದುಳಿನಲ್ಲಿ ರಕ್ತಸ್ರಾವ ಅಥವಾ ನರ-ರಕ್ತನಾಳ ಕಾಯಿಲೆಗಳಿಗೆ ಚಿಕಿತ್ಸೆ ಕೊಡಲು ಸಾಧ್ಯವಿದೆ.
    | ಡಾ.ಪ್ರಭಾಕರ ಕೋರೆ ಕಾರ್ಯಾಧ್ಯಕ್ಷರು, ಕೆಎಲ್‌ಇ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts