More

    ಸನ್‌ರೈಸರ್ಸ್‌ ಹೈದರಾಬಾದ್ ಮಣಿಸಿದ ಕೆಕೆಆರ್ ಪ್ಲೇಆಫ್ ಆಸೆ ಜೀವಂತ

    ದುಬೈ: ಬೌಲರ್‌ಗಳ ಶಿಸ್ತುಬದ್ಧ ದಾಳಿ ಹಾಗೂ ಆರಂಭಿಕ ಶುಭಮಾನ್ ಗಿಲ್ (57 ರನ್, 51 ಎಸೆತ, 10 ಬೌಂಡರಿ) ಜವಾಬ್ದಾರಿಯುತ ಬ್ಯಾಟಿಂಗ್ ನಿರ್ವಹಣೆ ಫಲವಾಗಿ ಐಪಿಎಲ್-14ರಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ಪ್ಲೇಆಫ್ ಆಸೆ ಹೆಚ್ಚಿಸಿಕೊಂಡಿದೆ. ಭಾನುವಾರ ನಡೆದ ತನ್ನ 13ನೇ ಪಂದ್ಯದಲ್ಲಿ ಕೆಕೆಆರ್ ತಂಡ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿತು. ಲೀಗ್‌ನಲ್ಲಿ 6ನೇ ಜಯ ದಾಖಲಿಸಿದ ಕೆಕೆಆರ್, 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿತು. ಮತ್ತೊಂದೆಡೆ, ಲೀಗ್‌ನಲ್ಲಿ 10ನೇ ಸೋಲು ಕಂಡ ಸನ್‌ರೈಸರ್ಸ್‌ ತಂಡಕ್ಕೆ ಅಂಕಪಟ್ಟಿಯಲ್ಲಿ ಕಡೇ ಸ್ಥಾನ ಖಚಿತಗೊಂಡಿತು.

    ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್‌, ಟಿಮ್ ಸೌಥಿ (26ಕ್ಕೆ 2), ವರುಣ್ ಚಕ್ರವರ್ತಿ (26ಕ್ಕೆ 2) ಹಾಗೂ ಶಿವಂ ಮಾವಿ (29ಕ್ಕೆ 2) ಮಾರಕ ದಾಳಿಗೆ ನಲುಗಿ 8 ವಿಕೆಟ್‌ಗೆ 115 ರನ್ ಪೇರಿಸಲಷ್ಟೇ ಶಕ್ತವಾಯಿತು. ಈ ಸಾಧಾರಣ ಮೊತ್ತ ಬೆನ್ನಟ್ಟಿದ ಕೆಕೆಆರ್ ತಂಡ, ಆರಂಭಿಕ ವೈಫಲ್ಯದ ನಡುವೆಯೂ ಗಿಲ್ ಹಾಗೂ ನಿತೀಶ್ ರಾಣಾ (25ರನ್, 33 ಎಸೆತ, 3 ಬೌಂಡರಿ) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 19.4 ಓವರ್‌ಗಳಲ್ಲಿ 4 ವಿಕೆಟ್‌ಗೆ 119 ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಪ್ರಸಕ್ತ ಲೀಗ್‌ನಲ್ಲಿ ಸ್ಫೋಟಿಸುವ ಮೂಲಕ ಕೆಕೆಆರ್‌ಗೆ ಆಧಾರವಾಗಿರುವ ವೆಂಕಟೇಶ್ ಅಯ್ಯರ್ (8) ಹಾಗೂ ರಾಹುಲ್ ತ್ರಿಪಾಠಿ (7) ನಿರಾಸೆ ಅನುಭವಿಸಿದರು. ಬಳಿಕ ಜತೆಯಾದ ಗಿಲ್ ಹಾಗೂ ನಿತೀಶ್ ರಾಣಾ 3ನೇ ವಿಕೆಟ್‌ಗೆ 55 ರನ್ ಜತೆಯಾಟವಾಡಿ ತಂಡದ ಗೆಲುವನ್ನು ಸುಲಭವಾಗಿಸಿದರು. ದಿನೇಶ್ ಕಾರ್ತಿಕ್ (18*ರನ್, 12 ಎಸೆತ, 3 ಬೌಂಡರಿ) ಕಡೇ ಹಂತದಲ್ಲಿ ಆಸರೆಯಾದರು.

    ಸನ್‌ರೈಸರ್ಸ್‌ ಹೈದರಾಬಾದ್: 8 ವಿಕೆಟ್‌ಗೆ 115 (ಜೇಸನ್ ರಾಯ್ 10, ಕೇನ್ ವಿಲಿಯಮ್ಸನ್ 26, ಪ್ರಿಯಂ ಗಾರ್ಗ್ 21, ಅಬ್ದುಲ್ ಸಮದ್ 25, ಟಿಮ್ ಸೌಥಿ 26ಕ್ಕೆ 2, ಶಿವಂ ಮಾವಿ 29ಕ್ಕೆ 2, ವರುಣ್ ಚಕ್ರವರ್ತಿ 26ಕ್ಕೆ 2), ಕೋಲ್ಕತ ನೈಟ್ ರೈಡರ್ಸ್‌: 19.4 ಓವರ್‌ಗಳಲ್ಲಿ 4 ವಿಕೆಟ್‌ಗೆ 119 (ಶುಭಮಾನ್ ಗಿಲ್ 57, ನಿತೀಶ್ ರಾಣಾ 25, ದಿನೇಶ್ ಕಾರ್ತಿಕ್ 18*, ಜೇಸನ್ ಹೋಲ್ಡರ್ 32ಕ್ಕೆ 2, ರಶೀದ್ ಖಾನ್ 23ಕ್ಕೆ 1, ಸಿದ್ದಾರ್ಥ್ 17ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts