More

    ಸೆಲ್ಫ್​ ಐಸೋಲೇಟ್​ ಒಕೆ..ಆದ್ರೆ ಜತೆಗೆ 20 ಮಹಿಳೆಯರು ಯಾಕೆ?; ಕರೊನಾ ಭಯಕ್ಕೆ ದೇಶವನ್ನೇ ತೊರೆದ ಥೈಲ್ಯಾಂಡ್​ ರಾಜ ಹೋಟೆಲ್​​ನಲ್ಲಿ ಸ್ತ್ರೀಯರೊಂದಿಗೆ ಏನು ಮಾಡ್ತಾರೆ?

    ಬರ್ಲಿನ್​: ಜಗತ್ತಿನಾದ್ಯಂತ ಕರೊನಾ ವೈರಸ್​ ಭಯ. ರಾಷ್ಟ್ರನಾಯಕರೂ ಸಹ ಆದಷ್ಟು ಜನಸಂಪರ್ಕದಿಂದ ದೂರವೇ ಉಳಿಯಲು ಪ್ರಯತ್ನಿಸುತ್ತಿದ್ದಾರೆ. ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿಲ್ಲ.

    ಈ ಮಧ್ಯೆ ಥೈಲ್ಯಾಂಡ್​ ರಾಜ ತಾನು ಐಸೋಲೇಟ್​ ಆಗಬೇಕು, ಕರೊನಾ ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರಿಂದ ಅಂತರ ಕಾಯ್ದುಕೊಳ್ಳಬೇಕು ಎಂಬ ಕಾರಣಕ್ಕೆ ದೇಶವನ್ನೇ ಬಿಟ್ಟು ಹೋಗಿದ್ದಾರೆ..ಅದೂ 20 ಮಹಿಳೆಯರೊಂದಿಗೆ !

    ಥೈಲ್ಯಾಂಡ್​ ರಾಜ ಮಹಾ ವಾಜಿರಲಾಂಗ್‌ಕಾರ್ನ್ ಜರ್ಮನಿಗೆ ಹೋಗಿದ್ದಲ್ಲದೆ, ಒಂದಿಡೀ ಐಷಾರಾಮಿ ಹೋಟೆಲ್​​ನ್ನು ತಮಗೋಸ್ಕರ ಬುಕ್​ ಮಾಡಿಕೊಂಡಿದ್ದಾರೆ. ಆ ಹೋಟೆಲ್​ನಲ್ಲಿ 20 ಮಹಿಳೆಯರೊಂದಿಗೆ ಐಸೋಲೇಟ್​ ಆಗಿದ್ದಾರೆ.

    ಜರ್ಮನಿಯಲ್ಲಿ ಲಾಕ್​ಡೌನ್​ ಇದ್ದರೂ ಥೈಲ್ಯಾಂಡ್​ ರಾಜನಿಗೆ ಜರ್ಮನಿಯ ಬವೇರಿಯಾದಲ್ಲಿರುವ ಸೊನ್ನೆನ್‌ಬಿಚ್ಲ್ ಗ್ರ್ಯಾಂಡ್ ಹೋಟೆಲ್​​ನಲ್ಲಿ ಮಹಿಳೆಯರೊಂದಿಗೆ ಇರಲು ವಿಶೇಷ ಅನುಮತಿ ನೀಡಲಾಗಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.
    ಜರ್ಮನಿಯ ಟ್ಯಾಬ್ಲಯ್ಡ್​ ಪತ್ರಿಕೆಯೊಂದು ವರದಿ ಮಾಡಿರುವ ಪ್ರಕಾರ ಥೈಲ್ಯಾಂಡ್​ನ ರಾಜ 20 ಮಹಿಳೆಯರು ಹಾಗೂ ಕೆಲವು ಸೇವಕರೊಂದಿಗೆ ಜರ್ಮನಿಗೆ ಆಗಮಿಸಿದ್ದಾರೆ.

    ಥೈಲ್ಯಾಂಡ್​​ನ ಈ​ ರಾಜ ಮಹಾ ವಾಜಿರಲಾಂಗ್‌ಕಾರ್ನ್ ಅವರು ತಮ್ಮೊಂದಿಗೆ ಹೆಚ್ಚಿನ ಕೆಲಸಗಾರರನ್ನು ಕರೆತರಲು ಯೋಜನೆ ಹಾಕಿಕೊಂಡಿದ್ದರಂತೆ. ಆದರೆ 119 ಜನರಲ್ಲಿ ಕರೊನಾ ಲಕ್ಷಣಗಳು ಕಂಡುಬಂದಿದ್ದರಿಂದ ಅವರನ್ನೆಲ್ಲ ಮನೆಗೆ ಕಳಿಸಿ, ಉಳಿದವರೊಂದಿಗೆ ಜರ್ಮನಿಗೆ ಆಗಮಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ರಾಜ ಜರ್ಮನಿಯಲ್ಲಿ ಸೆಲ್ಫ್​ ಐಸೋಲೇಟ್​ ಆದ ಸುದ್ದಿ ಹೊರಬರುತ್ತಿದ್ದಂತೆ ಥೈಲ್ಯಾಂಡ್​ನ ಜನರು ಟ್ವಿಟರ್​ನಲ್ಲಿ ಸಿಕ್ಕಾಪಟೆ ಟೀಕೆ ಮಾಡುತ್ತಿದ್ದಾರೆ. ಕೋಪವನ್ನು ಹೊರಹಾಕುತ್ತಿದ್ದಾರೆ.  #whydoweneedaking (ಇಂತಹ ರಾಜ ನಮಗೇಕೆ ಬೇಕು?) ಎಂಬ ಹ್ಯಾಷ್​​ಟ್ಯಾಗ್​ನಡಿ ರಾಜನನ್ನು ದೂಷಿಸುತ್ತಿದ್ದಾರೆ. #whydoweneedaking ಹ್ಯಾಷ್​ಟ್ಯಾಗ್​ ಟ್ವಿಟರ್​​ನಲ್ಲಿ ಟ್ರೆಂಡ್​ ಆಗಿದೆ.

    ಥೈಲ್ಯಾಂಡ್​ನಲ್ಲಿ ರಾಜಮನೆತನದ ವಿರುದ್ಧ ಮಾತನಾಡುವುದು ಗಂಭೀರ ಅಪರಾಧ. ಕಟ್ಟುನಿಟ್ಟಿನ ಕಾನೂನು ಹೊಂದಿರುವ ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ಥೈಲ್ಯಾಂಡ್​ ಕೂಡ ಒಂದು. ಈ ಕಾನೂನಿನ ಅನ್ವಯ ಅಲ್ಲಿನ ರಾಜ ಅಥವಾ ರಾಣಿಯ ವಿರುದ್ಧ ನಿಂದನೆ, ಅಪವಾದ, ಕೆಟ್ಟ ಮಾತುಗಳನ್ನು ಆಡುವಂತಿಲ್ಲ. ಆದರೆ ಸದ್ಯ ಥೈಲ್ಯಾಂಡ್​ ದೇಶಿಗರು ರಾಜನ ವಿರುದ್ಧ ತಿರುಗಿಬಿದ್ದಿದ್ದಾರೆ.

    ರಾಜ ಮಹಾ ವಾಜಿರಲಾಂಗ್‌ಕಾರ್ನ್ ಜರ್ಮನಿಗೆ ಪದೇಪದೆ ಹೋಗುತ್ತಾರೆ. ಹಾಗೇ ಇದೇ ಹೋಟೆಲ್​​ನಲ್ಲಿಯೇ ಇರುತ್ತಾರೆ. ಅಲ್ಲಿನ ಲೇಕ್ ಸ್ಟಾರ್ನ್‌ಬರ್ಗ್ ಬಳಿ ಅವರಿಗೆ ಆಸ್ತಿಯೂ ಇದೆ.

    ಆದರೆ ಥೈಲ್ಯಾಂಡ್​ನಲ್ಲೂ ಕರೊನಾ ಹರಡುತ್ತಿದೆ. 1524 ಜನ ಸೋಂಕಿತರು ಇದ್ದು, 9 ಜನ ಸಾವನ್ನಪ್ಪಿದ್ದಾರೆ. ಹೀಗಿರುವಾಗ ರಾಜ ದೇಶವನ್ನೇ ಬಿಟ್ಟು ಹೋಗಿದ್ದು ಅಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. (ಏಜೆನ್ಸೀಸ್​)

    ಸೆಲ್ಫ್​ ಐಸೋಲೇಟ್​ ಒಕೆ..ಆದ್ರೆ ಜತೆಗೆ 20 ಮಹಿಳೆಯರು ಯಾಕೆ?; ಕರೊನಾ ಭಯಕ್ಕೆ ದೇಶವನ್ನೇ ತೊರೆದ ಥೈಲ್ಯಾಂಡ್​ ರಾಜ ಹೋಟೆಲ್​​ನಲ್ಲಿ ಸ್ತ್ರೀಯರೊಂದಿಗೆ ಏನು ಮಾಡ್ತಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts