More

    ಪ್ಲೈವುಡ್ ವ್ಯಾಪಾರಿ ಅಪಹರಣ; ರೌಡಿ ಸೇರಿ ನಾಲ್ವರು ಸಿಸಿಬಿ ಬಲೆಗೆ

    ಬೆಂಗಳೂರು: ಸಾಲದ ಹಣ ದೋಚಲು ವ್ಯಾಪಾರಿಯನ್ನು ಅಪಹರಣ ಮಾಡಿ, ಸುಲಿಗೆ ಮಾಡಿದ್ದ ರೌಡಿಶೀಟರ್ ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ರೌಡಿಶೀಟರ್ ರವಿತೇಜ ಮತ್ತು ಸಂತೋಷ್, ಇವರ ಸಹಚರರಾದ ಹಜಿವಾಲ ಮತ್ತು ರಾಜಶೇಖರ್ ಬಂಧಿತರು. ಹನುಮಂತನಗರದ ವ್ಯಾಪಾರಿ ಎಸ್. ರಂಜಿತ್ ಎಂಬಾತನನ್ನು ಆರೋಪಿಗಳು ಅಪಹರಣ ಮಾಡಿ 50 ಲಕ್ಷ ರೂ.ಗೆ ಬೇಡಿಕೆಯೊಡ್ಡಿ, 10 ಲಕ್ಷ ರೂ. ಸುಲಿಗೆ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬ್ಯಾಟರಾಯನಪುರದಲ್ಲಿ ಶ್ರೀ ಬಾಲಾಜಿ ಪ್ಲೈವುಡ್ ಏಜೆನ್ಸಿ ಅಂಗಡಿ ಇಟ್ಟುಕೊಂಡಿರುವ ರಂಜಿತ್‌ಗೆ ಆರೋಪಿ ಸಂತೋಷ್ 4 ವರ್ಷಗಳಿಂದ ಪರಿಚಯ. ವ್ಯಾಪಾರಕ್ಕೆ ಹಣದ ಅಗತ್ಯ ಇದ್ದಾಗ ಸಂತೋಷ್ ಬಳಿ ಸಾಲ ಪಡೆದು ಬಡ್ಡಿಸಮೇತ ರಂಜಿತ್ ವಾಪಸ್ ಕೊಡುತ್ತಿದ್ದ. ಇತ್ತೀಚೆಗೆ 14 ಲಕ್ಷ ರೂ. ಪಡೆದು, ಬಡ್ಡಿ ಮಾತ್ರ ಕೊಟ್ಟಿದ್ದ. ಇದನ್ನೇ ನೆಪ ಮಾಡಿಕೊಂಡ ಸಂತೋಷ್, ವ್ಯಾಪಾರಿಯ ಮನೆ ದಾಖಲೆ ಪತ್ರಗಳನ್ನು ಪಡೆದು ೈನಾನ್ಸ್ ಕಂಪನಿಯಲ್ಲಿ 1 ಕೋಟಿ ರೂ. ಸಾಲ ಪಡೆದಿದ್ದ.

    ಈ ನಡುವೆ, 14 ಲಕ್ಷ ರೂ. ಅಸಲು ಮತ್ತು 9 ಲಕ್ಷ ರೂ. ಬಡ್ಡಿ ಸೇರಿ 23 ಲಕ್ಷ ರೂ. ಚೆಕ್ ಅನ್ನು ರಂಜಿತ್‌ನಿಂದ ಪಡೆದಿದ್ದ ಸಂತೋಷ್, ತನ್ನ ಬ್ಯಾಂಕ್‌ಗೆ ವರ್ಗಾವಣೆ ಮಾಡಿಕೊಂಡಿದ್ದ. ಜತೆಗೆ ಸ್ಟ್ಯಾಂಪ್ ಪೇಪರ್ ಮೇಲೆ ರಂಜಿತ್ ಕಡೆಯಿಂದ ಸಹಿ ಹಾಕಿಸಿ 10 ಲಕ್ಷ ರೂ. ಮೊತ್ತದ 2 ಚೆಕ್‌ಗೆ ಸಹಿ ಪಡೆದು ಡ್ರಾ ಮಾಡಿಕೊಂಡಿದ್ದ. ಇಷ್ಟಕ್ಕೆ ಸುಮ್ಮನಾಗದೆ ಸೆ.23ರ ಬೆಳಗ್ಗೆ 10.30ರಲ್ಲಿ ಸಂತೋಷ್, ತನ್ನ ಸಹಚರರ ಜತೆಗೆ ಮೈಸೂರು ರಸ್ತೆ ಟಿಂಬರ್ ಲೇಔಟ್‌ಗೆ ರಂಜಿತ್‌ನನ್ನು ಕರೆಸಿಕೊಂಡಿದ್ದ.

    ಬಳಿಕ ರಂಜಿತ್‌ನನ್ನು ಕಾರಿನಲ್ಲಿ ಹತ್ತಿಸಿಕೊಂಡು ಗಿರಿನಗರ, ದೇವೇಗೌಡ ಪೆಟ್ರೋಲ್ ಬಂಕ್, ಜಯನಗರ ಇನ್ನಿತರೆಡೆ ಸುತ್ತಾಡಿಸಿ, ‘ನಿನ್ನ ಹತ್ಯೆಗೆ ನಿನ್ನ ಭಾವ ಸುಪಾರಿ ಕೊಟ್ಟಿದ್ದಾರೆ. 50 ಲಕ್ಷ ರೂ. ಕೊಟ್ಟರೆ ಬಿಟ್ಟು ಕಳುಹಿಸುವುದಾಗಿ’ ಬೆದರಿಕೆ ಹಾಕಲಾಗಿತ್ತು. ಅಷ್ಟೊಂದು ಹಣ ಇಲ್ಲವೆಂದು ಹೇಳಿದಾಗ, ಹಲ್ಲೆ ನಡೆಸಿ 10 ಲಕ್ಷ ರೂ. ಕೊಡಬೇಕು. ಉಳಿಕೆ ಹಣವನ್ನು 15 ದಿನಗಳ ಒಳಗಾಗಿ ಕೊಡುವಂತೆ ಜೀವ ಬೆದರಿಕೆವೊಡ್ಡಿ ಮೈಸೂರು ರಸ್ತೆ ಸೆಟಲೈಟ್ ಬಸ್ ನಿಲ್ದಾಣದ ಬಳಿ ಬಿಟ್ಟುಹೋಗಿದ್ದರು.
    ಈ ಸಂಬಂಧ ರಂಜಿತ್ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹೆಚ್ಚಿನ ತನಿಖೆ ಸಲುವಾಗಿ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts