More

    ಮೈಕ್ ಖರೀದಿಯಲ್ಲಿ ಕಿಕ್‌ಬ್ಯಾಕ್ ; ಬೆಂಗಳೂರು ಕಂಪನಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ಶಿಫಾರಸು

    ತುಮಕೂರು: ಜಿಲ್ಲೆಯ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ‘ವೈರ್‌ಲೆಸ್ ಮೈಕ್’ಗಳ ಖರೀದಿಯಲ್ಲಿ ದೊಡ್ಡ ಅವ್ಯವಹಾರದ ಸದ್ದು ಕೇಳಿ ಬರುತ್ತಿದೆ. ಲಕ್ಷಾಂತರ ರೂಪಾಯಿ ವ್ಯವಹಾರದಲ್ಲಿ ವಿಶೇಷ ಆಸಕ್ತಿ ತೋರಿರುವುದರ ಹಿಂದೆ ಜಿಪಂಗೆ ದೊಡ್ಡ ಮಟ್ಟದ ಕಿಕ್‌ಬ್ಯಾಕ್ ಸಂದಾಯವಾಗಿದೆ ಎನ್ನಲಾಗಿದೆ.

    ಬಿಜೆಪಿ ಹೊರತಾಗಿ ಜೆಡಿಎಸ್, ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳನ್ನೇ ಗುರಿಯಾಗಿಸಿಕೊಂಡು ಈ ಅವ್ಯವಹಾರ ನಡೆದಿದೆ. ಮಾರುಕಟ್ಟೆಯಲ್ಲಿ ಅಂದಾಜು 10 ಸಾವಿರ ರೂ., ಮೌಲ್ಯದ ‘ವೈರ್‌ಲೆಸ್ ರಿಚಾರ್ಜಬಲ್ ಪೋರ್ಟಬಲ್ ಮೈಕ್ರೋಪೋನ್‌ಗಳನ್ನು 40 ರಿಂದ 50 ಸಾವಿರ ರೂ., ಬಿಲ್ ನೀಡಿ ಕೆಲ ಪಿಡಿಒಗಳೇ ವಿಶೇಷ ಆಸಕ್ತಿವಹಿಸಿ ಖರೀದಿಸಿರುವುದು ಅನುಮಾನಕ್ಕೆ ದಾರಿಮಾಡಿಕೊಟ್ಟಿದೆ. ಇದರ ಕಪ್ಪಕಾಣಿಕೆ ಜಿಪಂ ಉನ್ನತಾಧಿಕಾರಿಗಳಿಗೂ ತಲುಪಿರುವುದರಲ್ಲಿ ಅನುಮಾನಗಳೇ ಇಲ್ಲ ಎನ್ನಲಾಗುತ್ತಿದೆ.

    ಬೆಂಗಳೂರು ಮೂಲದ ‘ಗುಡ್‌ವಿಲ್ ಎಂಟರ್ ಪ್ರೈಸಸ್’ ಸಂಸ್ಥೆಯಿಂದಲೇ ಮೈಕ್‌ಗಳನ್ನು ಖರೀದಿಸಲು ಗ್ರಾಪಂಗಳಿಗೆ ಸೂಚಿಸುವಂತೆ ತಾಪಂ ಇಒಗಳಿಗೆ ಶಿಫಾರಸು ಮಾಡಿ ಜಿಪಂ ಅಧ್ಯಕ್ಷೆ ಎಂ.ಲತಾ ಲಿಖಿತವಾಗಿಯೇ ಸೂಚನೆ ನೀಡಿರುವುದು ‘ಕಿಕ್‌ಬ್ಯಾಕ್’ ಪಡೆದಿರುವ ವಾಸನೆ ಬಡಿಯುವಂತೆ ಮಾಡಿದೆ. ಈ ಶಿಫಾರಸು ಆಧರಿಸಿ ಇಒಗಳ ಸೂಚನೆ ಮೇರೆಗೆ ಪಿಡಿಒಗಳು ಕಾನೂನು ಗಾಳಿಗೆ ತೂರಿ ಮೈಕ್ ಖರೀದಿಸಿ ಭ್ರಷ್ಟಾಚಾರಕ್ಕೆ ಕಾರಣರಾಗಿದ್ದಾರೆ.

    ಗ್ರಾಪಂಗಳಲ್ಲಿ ನಡೆಯುವ ಸಾಮಾನ್ಯಸಭೆ, ಗ್ರಾಮಸಭೆ, ರಾಷ್ಟ್ರೀಯ ದಿನಾಚರಣೆಗಳಲ್ಲಿ ಅಪರೂಪಕ್ಕೆ ಮೈಕ್‌ಗಳನ್ನು ಬಳಸುತ್ತಾರೆ. ಇದಕ್ಕಾಗಿ ಅವರಿಗೆ ಅನುಕೂಲವಾದಾಗ ಮೈಕ್‌ಗಳನ್ನು ಶಕ್ತಿ ಅನುಸಾರವಾಗಿ ಕೊಂಡುಕೊಳ್ಳಲು ಅವಕಾಶವಿತ್ತು. ಆದರೆ, ಜಿಪಂ ಅಧ್ಯಕ್ಷೆ ಎಂ.ಲತಾ ವಿಶೇಷ ಆಸಕ್ತಿವಹಿಸಿ ನಿರ್ದಿಷ್ಟ ಸಂಸ್ಥೆಯಿಂದ ಖರೀದಿಸುವಂತೆ ಶಿಫಾರಸು ಪತ್ರ ಬರೆದಿರುವ ಬಗ್ಗೆ ಉನ್ನತ ಮಟ್ಟದ ತನಿಖೆಯ ಅಗತ್ಯವಿದೆ.

    ಗ್ರಾಪಂ ಅಧಿಕಾರದಲ್ಲಿ ಜಿಪಂ ಹಸ್ತಕ್ಷೇಪ!: ಅಗತ್ಯ ವಸ್ತುಗಳನ್ನು ಖರೀದಿಸುವ ಸಂಪೂರ್ಣ ಅಧಿಕಾರ ಗ್ರಾಪಂಗಳಿಗೆ ಇದೆ. ಆದರೆ, ಜಿಪಂ ಅಧ್ಯಕ್ಷರು ವ್ಯಾಪ್ತಿ ಮೀರಿ ಗ್ರಾಪಂಗಳಿಗೆ ಮೈಕ್ ಕೊಡಿಸಲು ತಾಪಂ ಇಒಗಳ ಮೇಲೆ ಒತ್ತಡ ತಂದು ಸ್ವಜನಪಕ್ಷಪಾತಿಯಂತೆ ಒಂದು ನಿರ್ದಿಷ್ಟ ಸಂಸ್ಥೆಗೆ ಶಿಫಾರಸು ಮಾಡಿದ್ದಾರೆ. ಜನಪ್ರತಿನಿಧಿಯ ಶಿಫಾರಸು ಆಧಾರದ ಮೇಲೆ ತಾಪಂ ಇಒಗಳು ಸರ್ಕಾರಿ ಆದೇಶ ಹೊರಡಿಸಿರುವುದು ಕಾನೂನಿನ ಉಲ್ಲಂಘನೆಯಾಗಿದೆ. ಜನಪ್ರತಿನಿಧಿಯ ಶಿಫಾರಸುಗಳನ್ನು ಆದೇಶ ಮಾಡಲು ಯಾವ ಅಧಿಕಾರಿಗೂ ಅಧಿಕಾರವಿಲ್ಲ.

    ಕರೆ ಸ್ವೀಕರಿಸದ ಸಿಇಒ!: ಜಿಪಂಗೆ ಸಂಬಂಧಿಸಿದ ಯಾವುದೇ ವಿಷಯಗಳಿಗೂ ಪ್ರತಿಕ್ರಿಯಿಸಲು ಸಿಇಒ ಶುಭಾಕಲ್ಯಾಣ್ ಕರೆ ಸ್ವೀಕರಿಸುವುದಿಲ್ಲ. ಮೈಕ್ ಖರೀದಿ ಅವ್ಯವಹಾರದಲ್ಲಿ ಸದಸ್ಯರು ಹಾಗೂ ಉನ್ನತಾಧಿಕಾರಿಗಳಿಗೆ ಕಿಕ್‌ಬ್ಯಾಕ್ ಸಂದಾಯವಾಗಿದೆ ಎಂಬ ಬಗ್ಗೆ ಸ್ಪಷ್ಟನೆ ಕೇಳಲು ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ. ಈ ಭ್ರಷ್ಟಾಚಾರದ ಕುಣಿಕೆ ಸಿಇಒಗೆ ಬಿಗಿದುಕೊಳ್ಳುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

    ಯಾವುದೇ ಸಂಸ್ಥೆಯಿಂದ ಮೈಕ್ ಖರೀದಿಸಿ ಎಂದು ಜಿಪಂ ನಮಗೆ ಆದೇಶ ನೀಡಿಲ್ಲ. ಗ್ರಾಪಂಗಳಿಗೆ ತಾಪಂ ಇಒಗಳು ಇಂತಹ ಸೂಚನೆ ನೀಡಿದ್ದರೆ ದಾಖಲೆಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು.
    ರಮೇಶ್ ಉಪಕಾರ್ಯದರ್ಶಿ, ಜಿಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts