More

    ಪ್ರಚಾರದಿಂದ ದೂರ ಉಳಿದ ಕೆಎಚ್‌ಎಂ

    ಕಿರುವಾರ ಎಸ್.ಸುದರ್ಶನ್ ಕೋಲಾರ
    ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ದಿನೇದಿನೆ ಹೆಚ್ಚಾಗುತ್ತಿದೆ. ಅಭ್ಯರ್ಥಿಗಳು ಅಬ್ಬರದ ಪ್ರಚಾರದ ಜತೆಗೆ ಗೆಲುವಿಗೆ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಆದರೆ ಪಕ್ಷಗಳ ಮುಖಂಡರು ನಡೆಸುವ ಸಭೆಗಳಲ್ಲಿ ಹಿರಿಯರು ಗೈರಾಗುತ್ತಿರುವುದು ಹಲವು ಅನುಮಾನ ಹುಟ್ಟುಹಾಕಿದೆ.

    ಸ್ಥಳೀಯ ಕಾಂಗ್ರೆಸ್ ನಾಯಕರ ಬಣ ರಾಜಕೀಯದಿಂದಾಗಿ ಅಭ್ಯರ್ಥಿ ಘೋಷಣೆ ತಡವಾಗಿ ಆಯಿತು. ಎರಡೂ ಗುಂಪುಗಳ ಆಟಗಳಿಗೆ ಹೈಕಮಾಂಡ್ ಅಂತ್ಯ ಕಾಣಿಸಿ, ಬೆಂಗಳೂರಿನ ಕೆ.ವಿ.ಗೌತಮ್ ಅವರಿಗೆ ಟಿಕೆಟ್ ನೀಡಿದೆ.
    ಕೆ.ವಿ.ಗೌತಮ್ ಕೋಲಾರಕ್ಕೆ ಹೊಸಬರಾದರೂ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಚಿವ ಡಾ.ಎಂ.ಸಿ.ಸುಧಾಕರ್, ಎಂಎಲ್ಸಿ ಅನಿಲ್‌ಕುಮಾರ್, ಶಾಸಕರಾದ ಕೊತ್ತೂರು ಜಿ.ಮಂಜುನಾಥ್, ಕೆ.ವೈ.ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ಮಾಜಿ ಸಚಿವ ಕೆ.ಆರ್.ರಮೇಶ್‌ಕುಮಾರ್ ಸಾಥ್ ನೀಡುತ್ತಿದ್ದಾರೆ. ಆದರೆ, ಕೋಲಾರ ಕ್ಷೇತ್ರದಿಂದ 7 ಬಾರಿ ಸಂಸದರಾಗಿದ್ದ ಸಚಿವ ಕೆ.ಎಚ್.ಮುನಿಯಪ್ಪ ಪ್ರಚಾರದಿಂದ ದೂರ ಉಳಿದಿರುವುದು ಬೆಂಬಲಿಗರ, ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
    ಕೆಜಿಎಫ್ ಶಾಸಕಿ ರೂಪಕಲಾ, ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಬೆಂಬಲಿಗರು ಅಭ್ಯರ್ಥಿ ಗೌತಮ್ ನಾಮಪತ್ರ ಸಲ್ಲಿಸಿದ ದಿನ ಕಾಣಿಸಿಕೊಂಡಿದ್ದು ಬಿಟ್ಟರೆ ಬೇರೆ ಎಲ್ಲೂ ಕಾಣಿಸಿಕೊಂಡಿಲ್ಲ, ಅಭ್ಯರ್ಥಿಯ ಜತೆ ವೇದಿಕೆ ಹಂಚಿಕೊಂಡಿಲ್ಲ. ಮುಳಬಾಗಿಲಿಗೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದಾಗಲೂ ಗೈರಾಗಿದ್ದರು. ಜತೆಗೆ ಸಭೆ, ಸಮಾರಂಭಗಳಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಲವು ಪದಾಧಿಕಾರಿಗಳಿಗೂ ಆಹ್ವಾನ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

    ಪಾಠ ಕಲಿಸುವುದಾಗಿ ಎಚ್ಚರಿಕೆ
    ಕೆಎಚ್‌ಎಂ ಕುಟುಂಬಕ್ಕೆ ಟಿಕೆಟ್ ತಪ್ಪಿಸಲು ಪ್ರಮುಖ ಪಾತ್ರವಹಿಸಿದ್ದ ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಇತ್ತೀಚೆಗೆ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಭಾನುವಾರ ಅಡ್ಡಗಲ್ ಗ್ರಾಮದಲ್ಲಿ ಮುಖಂಡರ ಸಭೆ ನಡೆಸಿ ಪಕ್ಷ ವಿರೋಧಿಗಳ ಬಗ್ಗೆ ಆಕ್ರೋಶ ಹೊರ ಹಾಕಿ, ಭಾಷಣದಲ್ಲಿ ಸ್ವ-ಪಕ್ಷದ ಮುಖಂಡರಿಗೇ ಚಾಟಿ ಬಿಸಿ, ವಿಧಾನಸಭೆ ಚುನಾವಣೆಯಲ್ಲಿ ನನ್ನ ವಿರುದ್ಧ ಕೆಲಸ ಮಾಡಿರುವವರಿಗೆ ಮುಂದಿನ ದಿನಗಳಲ್ಲಿ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
    ಘಟಬಂಧನ್ ತಂಡ ಒತ್ತಾಯ
    ಸಚಿವ ಕೆ.ಎಚ್.ಮುನಿಯಪ್ಪ ಅವರು ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ ಘಟಬಂಧನ್ ತಂಡ ಒತ್ತಡ ಹೇರಿದೆ, ಈ ವಿಚಾರ ಮುನಿಯಪ್ಪ ಅವರಿಗೆ ಗೊತ್ತಾಗಿದ್ದು, ಕ್ಷೇತ್ರದಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.

    • ಗೆಲುವಿನ ಮೇಲೆ ಪರಿಣಾಮ…?
      ಕೆ.ಎಚ್.ಮುನಿಯಪ್ಪ ಅವರು 7 ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಕ್ಷೇತ್ರ ವ್ಯಾಪ್ತಿಯ ರಾಜಕೀಯದ ಬಗ್ಗೆ ಸಾಕಷ್ಟು ಅರಿವು ಹೊಂದಿದ್ದಾರೆ. ಆದರೆ ಉದ್ದೇಶ ಪೂರ್ವಕವಾಗಿಯೇ ಕಡೆಗಣಿಸುತ್ತಿರುವುದು ಪಕ್ಷದ ಅಭ್ಯರ್ಥಿಯ ಗೆಲುವಿನ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕ ನಿಷ್ಠಾವಂತ ಕಾರ್ಯಕರ್ತರಲ್ಲಿ ಎದುರಾಗಿದೆ. ಚುನಾವಣೆಗೆ 15 ದಿನಗಳು ಮಾತ್ರ ಬಾಕಿ ಇದ್ದು, ಮುನಿಯಪ್ಪ ಪ್ರಚಾರಕ್ಕೆ ಆಗಮಿಸಿದರೆ ಅಭ್ಯರ್ಥಿಯ ಗೆಲುವು ಸುಲಭವಾಗಲಿದೆ ಎಂಬುದು ಕಾರ್ಯಕರ್ತರ ಅಭಿಪ್ರಾಯ.
    • ಬಿಜೆಪಿ ಪರ ಕೆಲಸ ಮಾಡಿದ್ದವರಿಗೂ ಜವಾಬ್ದಾರಿ
      ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಿರುವ ವ್ಯಕ್ತಿಗಳಿಗೆ ಈ ಬಾರಿ ಚುನಾವಣೆ ಉಸ್ತುವಾರಿ ನೀಡಲಾಗಿದೆ. ಕಳೆದ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಅವರ ಸೋಲಿಗೆ ಕಾರಣವಾಗಿರುವ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಹೈಕಮಾಂಡ್‌ಗೆ ದೂರು ನೀಡಲಾಗಿತ್ತಾದರೂ ಯಾವುದೇ ಶಿಸ್ತು ಕ್ರಮ ಜರುಗಿಸಿಲ್ಲ. ಮುನಿಯಪ್ಪ ಅವರು ಎಲ್ಲ ಸಮುದಾಯದವರನ್ನು ಒಂದೇ ವೇದಿಕೆಯಡಿ ಕರೆದೊಯ್ಯುತ್ತಿದ್ದರು. ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈಗ ಅವರನ್ನೇ ಕಡೆಗಣಿಸಿರುವುದು ಸರಿಯಲ್ಲ. ವ್ಯತ್ಯಾಸ ಸರಿಪಡಿಸಿಕೊಂಡು ಎಲ್ಲರೂ ಒಮ್ಮತದಿಂದ ಸಾಗಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.

    ಬ್ಯಾನರ್‌ನಲ್ಲಿ ಮುನಿಯಪ್ಪ ಫೋಟೋ ಮಾಯ
    ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಚುನಾವಣೆ ಸಂಬಂಧ ಬ್ಯಾನರ್ ತಯಾರಿಸಿ, ಫೇಸ್‌ಬುಕ್, ವ್ಯಾಟ್ಸ್ಆ್ಯಪ್ ಸೇರಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಬ್ಯಾನರ್‌ನಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಫೋಟೋ ಹಾಕಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಶಾಸಕರಾದ ಕೆ.ವೈ.ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ರೂಪಕಲಾ ಶಶಿಧರ್, ಎಂಎಲ್ಸಿಗಳಾದ ನಜೀರ್ ಅಹ್ಮದ್, ಎಂ.ಎಲ್.ಅನಿಲ್‌ಕುಮಾರ್, ಮಾಜಿ ಸಚಿವ ಕೆ.ಆರ್.ರಮೇಶ್‌ ಕುಮಾರ್ ಫೋಟೋ ಹಾಕಲಾಗಿದೆ. ಇದು ಮುನಿಯಪ್ಪ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.

    ಏನೇ ಭಿನ್ನಾಭಿಪ್ರಾಯ ಇದ್ದರೂ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಅದು ಬಿಟ್ಟು ಹಿರಿಯ ರಾಜಕಾರಣಿಗಳನ್ನು ಕಡೆಗಣಿಸಿ ಚುನಾವಣೆ ನಡೆಸುವುದು ಕಷ್ಟ. ಪಕ್ಷದ ಪದಾಽಕಾರಿಗಳಿಗೂ ಆಹ್ವಾನ ನೀಡದೆ ಇರುವುದು ವಿಷಾದಕರ ಸಂಗತಿ.
    | ಊರುಬಾಗಿಲು ಶ್ರೀನಿವಾಸ್, ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts