More

    ವಸತಿ ಸಮುಚ್ಛಯ ಯೋಜನೆ ಕನಸಿಗೆ ಕೊಳ್ಳಿ ; ಭೂಮಿ ರದ್ದು ಪಡಿಸುವಂತೆ ಜಿಲ್ಲಾಡಳಿತಕ್ಕೆ ಕೆಸ್ತೂರು ಗ್ರಾಪಂ ಪಟ್ಟು

    | ಜಗನ್ನಾಥ್ ಕಾಳೇನಹಳ್ಳಿ ತುಮಕೂರು

    ಸೂರಿಲ್ಲದ ಕಡುಬಡವರಿಗೆ 1800 ಆಶ್ರಯ ಮನೆ ನಿರ್ಮಿಸಿ ಕೊಡುವ ಮಹಾನಗರ ಪಾಲಿಕೆಯ ಮಹಾತ್ವಾಕಾಂಕ್ಷೆ ಯೋಜನೆಗೆ ತಾತ್ಕಾಲಿಕ ಹಿನ್ನೆಡೆಯಾಗಿದೆ. ಸರ್ಕಾರಿ ಗೋಮಾಳ ಜಾಗದಲ್ಲಿ ವಸತಿ ಸಮುಚ್ಛಯ ನಿರ್ಮಿಸುವ ಪಾಲಿಕೆ ಕನಸಿಗೆ ಕೆಸ್ತೂರು ಗ್ರಾಮ ಪಂಚಾಯಿತಿ ಕೊಳ್ಳಿ ಇಟ್ಟಿದೆ.

    ಜಿಲ್ಲಾಕೇಂದ್ರದಿಂದ 21 ಕಿ.ಮೀ., ದೂರದ ಕೋರಾ ಹೋಬಳಿ ಕೆಸ್ತೂರು ಗ್ರಾಪಂ ವ್ಯಾಪ್ತಿಯ ಶಂಭೋನಹಳ್ಳಿಯ 10 ಎಕರೆ ಜಾಗವನ್ನು ತುಮಕೂರು ನಗರದಲ್ಲಿನ ವಸತಿರಹಿತರಿಗೆ ವಸತಿ ಸಮುಚ್ಛಯ ನಿರ್ಮಿಸಲು ಜಿಲ್ಲಾಡಳಿತವು ಕಳೆದ ಮಾರ್ಚ್‌ನಲ್ಲಿ ಮಂಜೂರು ಮಾಡಿದೆ. ಆದರೆ, ಜಿಲ್ಲಾಡಳಿತದ ಈ ಏಕಾಏಕಿ ನಿರ್ಧಾರಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ವಸತಿ ಸಮುಚ್ಛಯ ಯೋಜನೆ ನನೆಗುದಿಗೆ ಬೀಳಲಿದೆ.

    ಸರ್ಕಾರಿ ಗೋಮಾಳ: ಶಂಭೋನಹಳ್ಳಿಯ ಸರ್ವೇ ನಂ. 39 ಹಾಗೂ 40 ರಲ್ಲಿ ಒಟ್ಟು 10 ಎಕರೆ ಜಾಗವನ್ನು ಮಹಾನಗರ ಪಾಲಿಕೆಯ ವಸತಿರಹಿತರಿಗೆ ಆಶ್ರಯ ಯೋಜನೆ ಅಡಿ ವಸತಿ ಸಮುಚ್ಛಯ ನಿರ್ಮಿಸಲು ಜಿಲ್ಲಾಡಳಿತ ಮಂಜೂರು ಮಾಡಿದೆ. ಈ ಜಾಗದಲ್ಲಿ ಜಿ+3 (ನೆಲಮಹಡಿ ಹಾಗೂ 3 ಅಂತಸ್ತಿನ) ವಸತಿ ಸಮುಚ್ಛಯ ನಿರ್ಮಿಸುವ ಯೋಜನೆಯನ್ನು ರಾಜೀವ್ ಆವಾಜ್ ಯೋಜನೆ (ಆರ್‌ಎವೈ) ಅಡಿ ಕೈಗೆತ್ತಿಕೊಳ್ಳಲಾಗಿದೆ.

    ಜಿ+3 ವಸತಿ ಸಮುಚ್ಛಯ ಯೋಜನೆಗೆ ವಿಸ್ತೃತ ವರದಿ ಕೂಡ ಸಿದ್ಧಪಡಿಸಿರುವ ಮಹಾನಗರ ಪಾಲಿಕೆಯು ವಸತಿರಹಿತ ಕಡುಬಡವರಿಗೆ 1800 ಆಶ್ರಯ ಮನೆಗಳನ್ನು ನಿರ್ಮಿಸಲು ಕೊಡಲು ಈ ಬೃಹತ್ ಯೋಜನೆ ಕೈಗೆತ್ತಿಕೊಂಡಿದೆ. ಬಡವರ ಅಪಾರ್ಟ್‌ಮೆಂಟ್‌ಗೆ 150 ಕೋಟಿ ರೂ. ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ. ವಿವಾದಕ್ಕೆ ಕಾರಣವಾಗಿರುವ ಈ ಪ್ರದೇಶದಲ್ಲಿ ನಗರ ಪಾಲಿಕೆ ವ್ಯಾಪ್ತಿಯ ಬಡವರ ಸೂರಿನ ಕನಸು ನನಸಾಗುವುದೇ ಕಾದು ನೋಡಬೇಕಿದೆ.

    ಖಾತೆಗೆ ಗ್ರಾಪಂ ಕ್ಯಾತೆ:ತುಮಕೂರು ತಾಲೂಕು ವ್ಯಾಪ್ತಿಗೆ ಒಳಪಡುವ ಕೆಸ್ತೂರು ಗ್ರಾಪಂ ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಈ ಗ್ರಾಪಂ ವ್ಯಾಪ್ತಿಯಲ್ಲಿ 8 ಹಳ್ಳಿಗಳು ಬರಲಿದ್ದು 7 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ವಸತಿರಹಿತ ಕಡುಬಡವರು ನಮ್ಮ ಹಳ್ಳಿಗಳಲ್ಲೇ ಇದ್ದು ಸ್ಥಳೀಯರಿಗೆ ವಸತಿ ಕೊಡಲು ಜಾಗ ಕೊಡುವಂತೆ ಕೆಸ್ತೂರು ಗ್ರಾಮ ಪಂಚಾಯಿತಿ ಪಟ್ಟು ಹಿಡಿದಿದೆ. ಹಾಗಾಗಿ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಮಂಜೂರು ಮಾಡಿರುವ 10 ಎಕರೆ ಜಾಗವನ್ನು ಪಾಲಿಕೆಗೆ ‘ಖಾತೆ’ ಮಾಡಿಕೊಡಲು ಗ್ರಾಪಂ ಕ್ಯಾತೆ ತೆಗೆದಿದೆ. ಸ್ಥಳೀಯ ಗ್ರಾಮಸ್ಥರ ಒತ್ತಾಯದ ಹಿನ್ನೆಲೆಯಲ್ಲಿ ಮಂಜೂರು ಮಾಡಿರುವ ಭೂಮಿಯನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳನ್ನು ಗ್ರಾಪಂ ಆಗ್ರಹಿಸಿದೆ.

    ಶಾಸಕ ಜಿ.ಪರಮೇಶ್ವರ್ ಆಕ್ಷೇಪ: ನಗರ ಪ್ರದೇಶದ ವಸತಿರಹಿತರಿಗೆ ವಸತಿ ಸಮುಚ್ಛಯ ನಿರ್ಮಿಸುವ ಮಹಾನಗರ ಪಾಲಿಕೆಯ ಯೋಜನೆಗೆ ಕೊರಟಗೆರೆ ಕ್ಷೇತ್ರದ ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಂಭೋನಹಳ್ಳಿಯಲ್ಲಿ ವಸತಿ ಸಮುಚ್ಛಯ ನಿರ್ಮಿಸಲು ಜಾಗ ಕೊಟ್ಟಿರುವುದು ಸಮಂಜಸವಲ್ಲ. ಇದನ್ನು ತಡೆಹಿಡಿದು ಕೊರಟಗೆರೆ ಕ್ಷೇತ್ರದ ವಸತಿ ರಹಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಜಾಗ ನೀಡುವಂತೆ ಜಿಲ್ಲಾಧಿಕಾರಿಗೆ ಪರಮೇಶ್ವರ ಮನವಿ ಮಾಡಿರುವುದು ಬೆಳಕಿಗೆ ಬಂದಿದೆ.

    ಶಂಭೋನಹಳ್ಳಿಯಲ್ಲಿ ವಸತಿ ಸಮುಚ್ಛಯ ನಿರ್ಮಿಸಲು ಸ್ಥಳೀಯರ ತೀವ್ರ ವಿರೋಧ ಇದೆ. ನಮ್ಮ ಪಂಚಾಯಿತಿ ವ್ಯಾಪ್ತಿಯ 8-10 ಹಳ್ಳಿಗಳಲ್ಲೇ ವಸತಿ ರಹಿತರಿದ್ದು, ಅವರಿಗೆ ಮೊದಲು ನಿವೇಶನ ಕೊಡಲಿ. ಪಾಲಿಕೆಗೆ ಜಾಗ ಖಾತೆ ಮಾಡಲು ನಿರಾಕರಿಸಿ ಪಂಚಾಯಿತಿ ತೀರ್ಮಾನ ಕೈಗೊಂಡಿದೆ. ಜನರ ತಕರಾರು ಇದ್ದು ಭೂಮಿ ಮಂಜೂರು ಮಾಡಿರುವುದನ್ನು ರದ್ದು ಪಡಿಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ.
    ಪಿ.ರೇವತಿ ಅಧ್ಯಕ್ಷೆ, ಕೆಸ್ತೂರು ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts