More

    ಕೇರಳ ಮಾದರಿ ಸೌಲಭ್ಯ ಏಕಿಲ್ಲ?, ಕೆಎಸ್‌ಟಿಎ ಸಂಸ್ಥಾಪನಾ ದಿನಾಚರಣೆಯಲ್ಲಿ ಟೈಲರ್‌ಗಳ ಪ್ರಶ್ನೆ

    ಮಂಗಳೂರು: ಕೇರಳದಲ್ಲಿ ಟೈಲರ್‌ಗಳಿಗೆ ಸರ್ಕಾರವೇ ತಿಂಗಳಿಗೆ 1600 ರೂ. ಪಿಂಚಣಿ ನೀಡುತ್ತದೆ. ನಿವೃತ್ತಿ ಸಂದರ್ಭ 60 ಸಾವಿರ ರೂಪಾಯಿವರೆಗೆ ಹಣ ಸಿಗುತ್ತದೆ. ಅಲ್ಲಿನ ಟೈಲರ್‌ಗಳು ಅಕಾಲಿಕವಾಗಿ ಮರಣಹೊಂದಿದರೆ, ಅವಲಂಬಿತರಿಗೆ ಪಿಂಚಣಿ ಬರುತ್ತದೆ. ಇಂತಹ ಸೌಲಭ್ಯ ನಮ್ಮ ರಾಜ್ಯದ ದರ್ಜಿಗಳಿಗೆ ಒದಗಿಸುವುದು ಏಕೆ ಅಸಾಧ್ಯ?

    ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಜರುಗಿದ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ಕೆಎಸ್‌ಟಿಎ) 24 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಈ ಪ್ರಶ್ನೆ ಮುಂದಿಟ್ಟವರು ಅಸೋಸಿಯೇಶನ್ ರಾಜ್ಯ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕೆ.ಎಸ್.ಆನಂದ್.

    ಟೈಲರ್‌ಗಳ ಜೀವನಕ್ಕೆ ಭದ್ರತೆ ಒದಗಿಸಲು ಕಳೆದ 25 ವರ್ಷಗಳಿಂದ ಹೋರಾಡುತ್ತಲೇ ಇದ್ದೇವೆ. ಎಲ್ಲ ಸರ್ಕಾರಗಳನ್ನೂ ನೋಡಿ ಆಗಿದೆ. ಇಲ್ಲಿಯ ತನಕ ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ಯಾರ ಕಡೆಯಿಂದಲೂ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಟೈಲರ್‌ಗಳ ಕಷ್ಟದ ಅರಿವು ನಮಗೂ ಇದೆ. ಪ್ರಯತ್ನ ನಿಲ್ಲಿಸಬಾರದು. ಸರ್ಕಾರವು ಅಸಂಘಟಿತ ಕಾರ್ಮಿಕರಿಗಾಗಿ ಅನೇಕ ಸವಲತ್ತು ನೀಡುತ್ತಿದೆ. ಅದರ ಪ್ರಯೋಜನವನ್ನು ಟೈಲರ್‌ಗಳೂ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

    ಸಿದ್ಧ ಉಡುಪುಗಳಿಂದಾಗಿ ಟೈಲರ್‌ಗಳಿಗೂ ಹೊಡೆತ ಬೀಳುತ್ತಿದೆ. ಇನ್ನು ಮುಂದೆ ಸಿದ್ಧ ಉಡುಪುಗಳನ್ನು ಧರಿಸುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಎಲ್ಲರೂ ಈ ನಿರ್ಧಾರ ಕೈಗೊಂಡರೆ ಟೈಲರ್‌ಗಳ ಬದುಕು ಹಸನಾಗಲಿದೆ ಎಂದರು.

    ಶಾಸಕ ಡಾ.ವೈ.ಭರತ್ ಶೆಟ್ಟಿ, ಟೈಲರಿಂಗ್ ಒಂದು ಕಲೆಗಾರಿಕೆ. ಈ ವೃತ್ತಿಗೆ ತಕ್ಕ ಮನ್ನಣೆ ಸಿಗಬೇಕು. ಕೆಲವು ವಸ್ತ್ರವಿನ್ಯಾಸಗಾರರು ಉತ್ತಮ ಆದಾಯ ಪಡೆಯುತ್ತಿದ್ದಾರೆ. ಆದರೆ ಹಳ್ಳಿಗಳಲ್ಲಿ ನೆಲೆಸಿರುವ ಟೈಲರ್‌ಗಳು ಜೀವನ ಭದ್ರತೆ ಇಲ್ಲದೇ ಕಷ್ಟಪಡುತ್ತಿದ್ದಾರೆ. ಟೈಲರ್‌ಗಳ ಬೇಡಿಕೆ ಈಡೇರಿಕೆಗೆ ನಡೆಸುವ ಪ್ರಯತ್ನದಲ್ಲಿ ಜತೆಯಾಗುವುದಾಗಿ ಭರವಸೆ ನೀಡಿದರು.

    ಉಪಮೇಯರ್ ಪೂರ್ಣಿಮಾ, ಪಾಲಿಕೆ ಸದಸ್ಯ ಪ್ರವೀಣ್‌ಚಂದ್ರ ಆಳ್ವ, ಕೆಎಸ್‌ಟಿಎ ರಾಜ್ಯ ಸಮಿತಿ ಅಧ್ಯಕ್ಷ ನಾರಾಯಣ ಬಿ.., ಜಿಲ್ಲಾ ಸಮಿತಿ ಅಧ್ಯಕ್ಷ ಜಯಂತ್ ಉರ್ಲಾಂಡಿ, ಉಪಾಧ್ಯಕ್ಷ ಸುರೇಶ್ ಸಾಲ್ಯಾನ್, ಚಕ್ರೇಶ್ ಅಮೀನ್, ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಖಜಾಂಚಿ ರಾಮಚಂದ್ರ ಉಡುಪಿ, ಜಿಲ್ಲಾ ಸಮಿತಿ ಉಪಾಧ್ಯಕ್ಷೆ ಕೇಶವ ಕದ್ರಿ, ಸುಜಾತಾ ಭಂಡಾರಿ, ಮಂಗಳೂರು ಕ್ಷೇತ್ರ ಸಮಿತಿ ಅಧ್ಯಕ್ಷೆ ವಿದ್ಯಾ ಶೆಟ್ಟಿ, ಕಾರ್ಮಿಕ ಅಧಿಕಾರಿಗಳಾದ ವಿಲ್ಮಾ ತಾವ್ರೊ, ಕಾವೇರಿ ಟಿ, ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್, ಪಾಲಿಕೆ ಮಾಜಿ ಸದಸ್ಯೆ ರೂಪಾ ಡಿ.ಬಂಗೇರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts