More

    ಕುಂಬಳಕಾಯಿ ಬೆಳೆಗಾರನ ಕೈಹಿಡಿದ ಕೇರಳ ಸರ್ಕಾರ, ಆಸರೆಯಾದ ಕೃಷಿ ಸಚಿವ

    ಬದಿಯಡ್ಕ: ಭಾರಿ ಪ್ರಮಾಣದಲ್ಲಿ ಕುಂಬಳಕಾಯಿ ಬೆಳೆದ ಬೆಳೆಗಾರನಿಗೆ ಕರೊನಾ ಲಾಕ್‌ಡೌನ್ ಇನ್ನಿಲ್ಲದ ಸಮಸ್ಯೆ ತಂದಿಟ್ಟಿತ್ತು. ಕುಂಬಳಕಾಯಿ ಮಾರಾಟ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನು ವಾಟ್ಸಪ್ ಗ್ರೂಪ್ ಮೂಲಕ ಗಮನಿಸಿದ ಕೃಷಿ ಸಚಿವರು, ಅಷ್ಟೂ ಬೆಳೆಯನ್ನು ಖರೀದಿಸಲು ಸರ್ಕಾರದ ಕಡೆಯಿಂದಲೇ ವ್ಯವಸ್ಥೆ ಮಾಡಿದ್ದಾರೆ.

    ಕೇರಳ ಕೃಷಿ ಸಚಿವ ವಕೀಲ ವಿ.ಎಸ್.ಸುನೀಲ್ ಕುಮಾರ್ ಸ್ಪಂದಿಸಿದವರು. ಕಾಸರಗೋಡು ಜಿಲ್ಲೆಯ ಪಳ್ಳತ್ತಡ್ಕ ಸಮೀಪದ ಬೈಕುಂಜಯ ಕೃಷಿಕ ಬೈಕುಂಜ ಶಂಕರನಾರಾಯಣ ಭಟ್ ಕುಂಬಳಕಾಯಿ ಬೆಳೆದವರು.
    ಬೈಕುಂಜ ಶಂಕರನಾರಾಯಣ ಭಟ್ ಪ್ರಸಕ್ತ ವರ್ಷ ಒಂದು ಬೆಳೆ ಭತ್ತ ಬೆಳೆದ ನಂತರ ಒಂದು ಎಕರೆಯಷ್ಟು ಗದ್ದೆಯಲ್ಲಿ ನಾಂದಾರಿ ತಳಿಯ ಕುಂಬಳಕಾಯಿ ಕೃಷಿ ಮಾಡಿದ್ದಾರೆ. ನಿರೀಕ್ಷೆಗೂ ಮೀರಿ 14ರಿಂದ 15 ಟನ್‌ಗಳಷ್ಟು ಕುಂಬಳಕಾಯಿ ಫಸಲು ಲಭ್ಯವಾಗಿದೆ.

    ಸಾವಯವ ಪದ್ಧತಿಯಲ್ಲಿ ಬೆಳೆಸಲಾದ ಒಂದೊಂದು ಕುಂಬಳಕಾಯಿ 4ರಿಂದ 6 ಕಿಲೋಗಳಷ್ಟು ಹುಲುಸಾಗಿ ಬೆಳೆದಿದ್ದು, ಇತ್ತೀಚೆಗಷ್ಟೇ ಕೊಯ್ಲು ನಿರ್ವಹಿಸಲಾಗಿದೆ. ಕೊಯ್ಲು ಮುಗಿಸುತ್ತಿದ್ದಂತೆ ಕೊವಿಡ್-19ನಿಂದ ರಾಷ್ಟ್ರ ವ್ಯಾಪಿ ಲಾಕ್‌ಡೌನ್ ಹೇರಲ್ಪಟ್ಟ ಕಾರಣ ಬೆಳೆ ಪೂರ್ತಿ ಮನೆಯಲ್ಲೇ ಬಾಕಿಯಾಗಿತ್ತು.

    ವಾಟ್ಸಪ್‌ನಿಂದ ಗಮನಕ್ಕೆ: ಕುಂಬಳಕಾಯಿ ಉತ್ತಮ ಇಳುವರಿಯಾದರೂ ಮಾರಾಟ ಮಾಡಲಾಗದೆ ಸಮಸ್ಯೆಗೆ ಸಿಲುಕಿರುವ ಬಗ್ಗೆ ಸ್ವತಃ ಶಂಕರನಾರಾಯಣ ಭಟ್ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಪ್ ಮೂಲಕ ತೋಡಿಕೊಂಡಿದ್ದರು. ವಿಷಯ ತಿಳಿದ ಜಲತಜ್ಞ ಶ್ರೀಪಡ್ರೆಯವರು ‘ಕೃಷಿಕ ರಂಗ’ ವಾಟ್ಸಪ್ ಗ್ರೂಪ್‌ನಲ್ಲಿ ಪೋಸ್ಟ್ ಹಾಕಿದ್ದರು. ಈ ಗ್ರೂಪ್‌ನಲ್ಲಿ ಕೃಷಿ ಸಚಿವ ಸುನೀಲ್ ಅವರೂ ಇದ್ದು, ತಕ್ಷಣ ಭಟ್‌ರನ್ನು ಫೋನ್ ಮೂಲಕ ಸಂಪರ್ಕಿಸಿದ್ದಾರೆ.

    ರಾಜ್ಯ ಹಾರ್ಟಿಕಲ್ಚರ್ ಮಿಷನ್ ಮೂಲಕ ಎಲ್ಲ ಕುಂಬಳಕಾಯಿಯನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ ಸಚಿವರು, ಭಟ್‌ರ ಕೃಷಿ ಚಟುವಟಿಕೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
    ಬಳಿಕ ಸಚಿವರ ಸೂಚನೆಯಂತೆ ಕೃಷಿ ಇಲಾಖೆ, ಹಾರ್ಟಿಕಲ್ಚರ್ ಮಿಷನ್ ಅಧಿಕಾರಿಗಳು ಬೆಳೆಗಾರನ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
    60ರ ಹರೆಯದ ಶಂಕರನಾರಾಯಣ ಭಟ್ ಮೂಲತಃ ಅಡಕೆ ಬೆಳೆಗಾರ. ಸುವರ್ಣಗಡ್ಡೆ ಕೂಡ ಅಧಿಕ ಪ್ರಮಾಣದಲ್ಲಿ ಬೆಳೆದಿದ್ದಾರೆ. ಆದರೆ ಗಡ್ಡೆ ಮಣ್ಣಿನ ಅಡಿಯಲ್ಲಿ ಇರುವುದರಿಂದ ಸದ್ಯಕ್ಕೆ ಸಮಸ್ಯೆ ಇಲ್ಲ.

    ಕುಂಬಳಕಾಯಿ ಪ್ರತಿ ಕೆ.ಜಿ.ಗೆ 17 ರೂ. ನೀಡಿ ಖರೀದಿಸುವ ಭರವಸೆ ಕೇರಳ ಕೃಷಿ ಸಚಿವರಿಂದ ಲಭಿಸಿದೆ. ಕೃಷಿ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸುವ ಬಗ್ಗೆ ಮನವಿ ಮಾಡಿದ್ದಾರೆ.
    – ಬೈಕುಂಜ ಶಂಕರನಾರಾಯಣ ಭಟ್, ಕೃಷಿಕ

    ಆಡಳಿತ ವ್ಯವಸ್ಥೆ ಕೃಷಿಕರ ಕುರಿತು ನಿಜವಾದ ಕಳಕಳಿ ಹೇಗೆ ತೋರಿಸಬಹುದು? ಕಷ್ಟ ಕಾಲಕ್ಕೆ ಹೇಗೆ ಸ್ಪಂದಿಸಬಹುದು ಎನ್ನುವುದಕ್ಕೆ ಇದೊಂದು ಅದ್ಭುತ ಉದಾಹರಣೆ. ಕೇರಳದ ವಿಶೇಷತೆ ಅಂದರೆ ಇಲ್ಲಿ ಓರ್ವ ಜನಸಾಮಾನ್ಯ ಕೂಡ ಯಾವುದೇ ಮಂತ್ರಿ, ಅಧಿಕಾರಿಗಳನ್ನು ಮಾತನಾಡಿಸಲು ಸಾಧ್ಯವಾಗುತ್ತದೆ. ಕರ್ನಾಟಕದಲ್ಲೂ ಅನೇಕ ರೈತಪರ ಕಾರ್ಯಕ್ರಮಗಳು ಜಾರಿಯಲ್ಲಿವೆ. ಆದರೆ ಆ ಕಾರ್ಯಕ್ರಮಗಳು ಎಷ್ಟು ಅನುಷ್ಠಾನಗೊಂಡಿವೆ ಎನ್ನುವ ಅವಲೋಕನ, ರೈತಪರ ಹೆಚ್ಚಿನ ಸ್ಪಂದನೆ ಬೇಕು.
    – ಶ್ರೀಪಡ್ರೆ, ಪ್ರಗತಿಪರ ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts