More

    ಉನ್ನತ ಶಿಕ್ಷಣ, ಮಹಿಳಾ ಸಬಲೀಕರಣದಲ್ಲಿ ಸಾಧನೆ: ಕಾಸರಗೋಡು ಕೇಂದ್ರ ವಿವಿ ಘಟಿಕೋತ್ಸವದಲ್ಲಿ ಕೇರಳವನ್ನು ಶ್ಲಾಘಿಸಿದ ರಾಷ್ಟ್ರಪತಿ

    ವಿಜಯವಾಣಿ ಸುದ್ದಿಜಾಲ ಕಾಸರಗೋಡು

    ಉನ್ನತ ಶಿಕ್ಷಣ, ಸಾಕ್ಷರತೆ ಹಾಗೂ ಮಹಿಳಾ ಸಬಲೀಕರಣದಲ್ಲಿ ಕೇರಳದ ಸಾಧನೆ ಮಹತ್ತರ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ ಶ್ಲಾಘಿಸಿದರು.

    ಮಂಗಳವಾರ ಜಿಲ್ಲೆಯ ಪೆರಿಯ ಎಂಬಲ್ಲಿರುವ ಕೇರಳ ಕೇಂದ್ರ ವಿವಿ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

    ಸಾಮಾಜಿಕ ಪರಿವರ್ತನೆ, ಸಬಲೀಕರಣಕ್ಕೆ ಶಿಕ್ಷಣ ಸಂಸ್ಥೆಗಳು ಪಣ ತೊಡಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳ ಮಾತಿನಂತೆ ಶಿಕ್ಷಣ ವಿದ್ಯಾರ್ಥಿಯ ಜೀವನ ಮಟ್ಟದ ಜತೆಗೆ ಸಮಾಜವನ್ನೂ ಉನ್ನತಿಗೇರಿಸುತ್ತದೆ. ವಿದ್ಯೆಯಿಂದಷ್ಟೇ ಪ್ರಬುದ್ಧರಾಗಲು ಸಾಧ್ಯ. 2020ನೇ ರಾಷ್ಟ್ರೀಯ ಶಿಕ್ಷಣ ನೀತಿ ಕ್ರಮಬದ್ಧ ಯೋಜನೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿ ಎಂದರು.

    ಕೇರಳ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್, ಸ್ಥಳೀಯಾಡಳಿತ ಸಚಿವ ಎಂ.ವಿ.ಗೋವಿಂದನ್, ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ಡಾ.ಎಂ.ಸಂತೋಷ್‌ಕುಮಾರ್, ವಿವಿ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಎಂ.ಮುರಳೀಧರನ್ ನಂಬ್ಯಾರ್ ಮೊದಲಾದವರು ಉಪಸ್ಥಿತರಿದ್ದರು.

    2018-2020ನೇ ಸಾಲಿನ ಪದವಿಪ್ರದಾನ ಮಾಡಲಾಯಿತು. 29 ಮಂದಿಗೆ ಪದವಿ, 652 ಮಂದಿಗೆ ಸ್ನಾತಕೋತ್ತರ ಪದವಿ, 52 ಮಂದಿಗೆ ಪಿಎಚ್.ಡಿ ಹಾಗೂ ಒಂಬತ್ತು ಮಂದಿಗೆ ಪಿ.ಜಿ ಡಿಪ್ಲೊಮಾ ಪದವಿ ಪ್ರದಾನ ಮಾಡಲಾಯಿತು. ಪ್ರಭಾರ ಉಪ ಕುಲಪತಿ ಪ್ರೊ.ಕೆ.ಸಿ ಬೈಜು ಸ್ವಾಗತಿಸಿದರು.

    ಕೋವಿಡ್ ನಿರ್ಬಂಧ ಕಟ್ಟುನಿಟ್ಟು: ಕೋವಿಡ್ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿತ್ತು. ಪ್ರತ್ಯೇಕವಾಗಿ ಸಜ್ಜುಗೊಳಿಸಲಾದ ವೇದಿಕೆಯಲ್ಲಿ ಘಟಿಕೋತ್ಸವ, ಪದವಿಪ್ರದಾನ ಸಮಾರಂಭ ನಡೆಸಲಾಯಿತು. ಸರ್ಕಾರದ ವಿಶೇಷಾನುಮತಿಯೊಂದಿಗೆ 700ಮಂದಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಎರಡು ಡೋಸ್ ವ್ಯಾಕ್ಸಿನೇಶನ್ ಪಡೆದವರು, 72 ತಾಸುಗಳೊಳಗಿನ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು. ವೇದಿಕೆಯಲ್ಲಿ ಭಾಗವಹಿಸುವವರನ್ನು ಬೆಳಗ್ಗೆ ರ‌್ಯಾಂಡಮ್ ಆ್ಯಂಟಿಜೆನ್ ತಪಾಸಣೆಗೆ ಒಳಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts