More

    ಸಿಎಎ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಮೊದಲ ರಾಜ್ಯ ಎಂಬ ಹೆಸರು ಪಡೆದ ಕೇರಳ

    ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ಕಾಯ್ದೆಯನ್ನು ಪ್ರಶ್ನಿಸಿ ಕೇರಳ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ದಾಖಲಿಸಿದ್ದು, ಕಾಯ್ದೆ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಮೊದಲನೇ ರಾಜ್ಯ ಎನಿಸಿಕೊಂಡಿದೆ.


    ಸಿಎಎ ಧರ್ಮದ ಆಧಾರದ ಮೇಲೆ ರಚನೆ ಆಗಿದ್ದು, ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಈಗಾಗಲೇ ಸುಪ್ರೀಂಕೋರ್ಟ್​ನಲ್ಲಿ 60ಕ್ಕೂ ಹೆಚ್ಚು ಅರ್ಜಿಗಳು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

    ಇದರ ನಡುವೆ ಕೇರಳದ ಎಡಪಂಥೀಯ ನೇತೃತ್ವದ ಸರ್ಕಾರವು ಅರ್ಜಿ ದಾಖಲಿಸಿದ್ದು, ಸಮಾನತೆಯ ಹಕ್ಕು ಸೇರಿ ಸಂವಿಧಾನದ ಹಲವು ವಿಧಿಗಳನ್ನು ಸಿಎಎ ಉಲ್ಲಂಘಿಸಿದೆ ಎಂದು ಆರೋಪಿಸಿದೆ. ಸಿಎಎ ಪ್ರಮುಖವಾಗಿ ಸಂವಿಧಾನದ ಜಾತ್ಯಾತೀತ ಮೂಲತತ್ತ್ವಗಳಿಗೆ ವಿರುದ್ಧವಾಗಿದೆ ಎಂದು ಕೇರಳ ಸರ್ಕಾರ ಅರ್ಜಿಯಲ್ಲಿ ಉಲ್ಲೇಖಿಸಿದೆ.

    ಇಷ್ಟೇ ಅಲ್ಲದೆ 2015ರಲ್ಲಿ ಪಾಸ್​ಪೋರ್ಟ್​ ಕಾನೂನು ಮತ್ತು ವಿದೇಶಿ ತಿದ್ದುಪಡಿ ನಿಯಮ ಬದಲಾವಣೆಯ ಸಿಂಧುತ್ವವನ್ನು ಕೇರಳ ಸರ್ಕಾರ ಪ್ರಶ್ನಿಸಿದೆ. 2015ರಲ್ಲಿ ಆದ ತಿದ್ದುಪಡಿಯ ಪ್ರಕಾರ 2015ಕ್ಕೂ ಮುಂಚೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಪ್ರವೇಶ ನೀಡಿದ ಮುಸ್ಲೀಮೇತರ ವಲಸಿಗರ ಉಳಿಯುವಿಕೆಯನ್ನು ಕ್ರಮಬದ್ಧಗೊಳಿಸುವುದಾಗಿದೆ.

    ಪೌರತ್ವ ತಿದ್ದುಪಡಿ ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬರುವ ಮುಸ್ಲೀಮೇತರಿಗೆ ಭಾರತ ಪೌರತ್ವ ದೊರೆಯುವ ಸುಲಭ ದಾರಿಯಾಗಿದೆ. ಆದರೆ, ಇದೀಗ ಉದ್ಭವವಾಗಿರುವ ಭಯವೆಂದರೆ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್​ಆರ್​ಸಿ) ಜತೆಗೆ ಸಿಎಎ ಮುಸ್ಲೀಮರ ವಿರುದ್ಧ ತಾರತಮ್ಯ ಧೋರಣೆ ತೆಳೆದಿದೆ. ಹೀಗಾಗಿ ಸಂವಿಧಾನ 14, 21 ಮತ್ತು 25ನೇ ವಿಧಿಗಳನ್ನು ಸಿಎಎ ಉಲ್ಲಂಘಿಸುತ್ತದೆ ಎಂದು ಕೇರಳ ಅರ್ಜಿಯಲ್ಲಿ ವಾದಿಸಿದೆ.

    ಆರ್ಟಿಕಲ್​ 14 ಎಲ್ಲರಿಗೂ ಸಮಾನತೆ ಹಕ್ಕು ನೀಡಿದ್ದರೆ, ಕಾನೂನಿನಲ್ಲಿ ಸ್ಥಾಪಿತವಾಗಿರುವ ವ್ಯಕ್ತಿಗತ ಸ್ವಾತಂತ್ರ್ಯ ಅಥವಾ ವೈಯಕ್ತಿಕ ಜೀವನವನ್ನು ಯಾರೊಬ್ಬರೂ ಕಿತ್ತುಕೊಳ್ಳುವಂತಿಲ್ಲ ಎಂದು ಆರ್ಟಿಕಲ್​ 21 ಸೂಚಿಸುತ್ತದೆ. ಆತ್ಮಸಾಕ್ಷಿ ಸ್ವಾತಂತ್ರ್ಯಕ್ಕೆ ಎಲ್ಲ ವ್ಯಕ್ತಿಗಳು ಸಮಾನರು ಎಂದು ಆರ್ಟಿಕಲ್​ 25 ಹೇಳಿದೆ.

    ಅಂದಹಾಗೆ ಅನೇಕ ಬಿಜೆಪಿಯೇತರ ಸರ್ಕಾರಗಳು ಸಿಎಎ ಮತ್ತು ಎನ್​ಆರ್​ಸಿಯನ್ನು ವಿರೋಧಿಸುತ್ತಾ ಬಂದಿದ್ದು, ಅದರಲ್ಲಿ ಮೊದಲ ಹೆಜ್ಜೆ ಇಟ್ಟಿರುವ ಕೇರಳ ಸರ್ಕಾರ ಕಾಯ್ದೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts