More

    ಅವಸಾನದತ್ತ ಕೆಲಗೇರಿ ಕೆರೆ

    ಧಾರವಾಡ: ಒಂದು ಕಾಲದಲ್ಲಿ ಧಾರವಾಡವು ಕೆರೆಗಳ ಬೀಡಾಗಿತ್ತು. ಆಧುನಿಕತೆ ಭರಾಟೆಯಲ್ಲಿ ಬಹುತೇಕ ಕೆರೆಗಳು ಲೇಔಟ್ ಆಗಿ ಪರಿವರ್ತನೆಯಾಗಿದ್ದು, ಅಲ್ಲೊಂದು ಇಲ್ಲೊಂದು ಕೆರೆ ಉಳಿದಿವೆ. ಅವುಗಳ ನಿರ್ವಹಣೆಯೂ ಸಮರ್ಪಕವಾಗಿಲ್ಲದ ಕಾರಣ ಅಳಿವಿನಂಚಿಗೆ ತಲುಪಿವೆ. ಇದರಲ್ಲಿ ಐತಿಹಾಸಿಕ ಕೆಲಗೇರಿ ಕೆರೆಯೂ ಒಂದು.


    ಸರ್.ಎಂ. ವಿಶ್ವೇಶ್ವರಯ್ಯ ನಿರ್ಮಿಸಿದ ಕೆರೆ ಸುಮಾರು 170 ಎಕರೆ ಜಾಗದಲ್ಲಿ ಹರಡಿಕೊಂಡಿದೆ. ಕೆಲ ವರ್ಷ ಹಿಂದಷ್ಟೇ ಮಹಾನಗರ ಪಾಲಿಕೆ ಕೆರೆ ದಂಡೆ ಸುತ್ತ ಒಂದಿಷ್ಟು ಅಭಿವೃದ್ಧಿ ಕಾರ್ಯ ನಡೆಸಿ ಬಾಹ್ಯ ಸೌಂದರ್ಯ ಹೆಚ್ಚಿಸಿದೆ. ಆದರೆ ಕೆರೆಗೆ ಮಲೀನ ನೀರು ಸೇರುವುದನ್ನು ತಡೆಯುವಲ್ಲಿ ನಿರ್ಲಕ್ಷೃ ವಹಿಸಿರುವುದು ವಿಪರ್ಯಾಸವೇ ಸರಿ.


    ಬಹಳ ವರ್ಷಗಳಿಂದ ಕೆರೆಗೆ ಗಟಾರು ನೀರು ಸೇರುತ್ತಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಂಬಂಧಿಸಿದವರಿಗೆ ಸಾಧ್ಯವಾಗಿಲ್ಲ. ಇದರಿಂದ ನಿತ್ಯ ಮೀನುಗಳು ಸಾವನ್ನಪ್ಪಿ ದಡ ಸೇರುತ್ತಿವೆ.

    ಸುಮಾರು 10 ದಿನಗಳಿಂದ ಬೃಹತ್ ಪ್ರಮಾಣದಲ್ಲಿ ಗಟಾರು ನೀರು ಸೇರಿ ನೂರಾರು ಮೀನುಗಳು ಮೃತಪಟ್ಟಿವೆ. ಆದಾಗ್ಯೂ ಕೆರೆ ನಿರ್ವಹಣೆ ಜವಾಬ್ದಾರಿ ಹೊತ್ತ ಕೃಷಿ ವಿಶ್ವ ವಿದ್ಯಾಲಯ ಮಾತ್ರ ಈ ವಿಚಾರದಲ್ಲಿ ನಿರಾಸಕ್ತಿ ವಹಿಸಿದ್ದಲ್ಲದೆ, ಗಟಾರು ನೀರು ಸೇರುವುದನ್ನು ತಡೆಯುವ ಕೆಲಸ ನಮ್ಮದಲ್ಲ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಿದೆ.


    ಹೊಲಸು ನೀರಿನಿಂದ ಮೀನುಗಳ ಸಾವು ಮಾತ್ರವಲ್ಲ, ಕೆರೆ ಸಂಪೂರ್ಣ ಜಲಕಳೆಯಿಂದ ತುಂಬುವಂತಾಗಿದೆ. ಕೆಲ ತಿಂಗಳ ಹಿಂದೆ ಇದೇ ಸ್ಥಿತಿ ನಿರ್ಮಾಣವಾದಾಗ ಕೆಲ ಸಂಘಟನೆಗಳೊಂದಿಗೆ ಸ್ಥಳೀಯರು ಸೇರಿ ಜಲಕಳೆ ತೆಗೆದಿದ್ದರು.
    ಇಷ್ಟೆಲ್ಲ ಸಮಸ್ಯೆ ಇದ್ದರೂ, ಸಂಬಂಧಿಸಿದವರು ಮಾತ್ರ ಇದು ನನಗೆ ಸಂಬಂಧವಿಲ್ಲ ಎಂದು ಒಬ್ಬರ ಮೇಲೊಬ್ಬರು ಬೊಟ್ಟು ಮಾಡುತ್ತಲೇ ಕಾಲಹರಣ ಮಾಡುತ್ತಿರುವುದು ಅವರ ಪರಿಸರ ಕಾಳಜಿಗೆ ಸಾಕ್ಷಿ. ಇದನ್ನೆಲ್ಲ ಬಿಟ್ಟು ಕೂಡಲೇ ಶಾಶ್ವತ ಪರಿಹಾರಕ್ಕೆ ಮುಂದಾಗಲಿ ಎಂಬುದು ಜನರ ಆಗ್ರಹ.


    ಕೆರೆಗೆ ಹೊಲಸು ನೀರು ಸೇರಿ ಮೀನುಗಳು ಸಾಯುತ್ತಿರುವುದು ಗಮನಕ್ಕೆ ಬಂದಿದೆ. ಹೊಲಸು ನೀರು ಸೇರದಂತೆ ತಡೆಯುವುದು ಪಾಲಿಕೆ ಕೆಲಸ. ಈ ಕುರಿತು ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಗಮನಕ್ಕೆ ತರಲಾಗಿದೆ. ಮತ್ತೊಮ್ಮೆ ಈ ವಿಚಾರವಾಗಿ ಮಾತನಾಡಿ ಹೊಲಸು ನೀರು ಸೇರದಂತೆ ಮಾಡಲಾಗುವುದು.

    ಡಾ. ಪಿ.ಎಲ್. ಪಾಟೀಲ, ಕುಲಪತಿ, ಕೃವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts