More

    ಲೋಕ ಸಮರ ಎರಡನೇ ಹಂತ: ಬಿಜೆಪಿ ಸಂಪರ್ಕ ಅಭಿಯಾನ

    ಬೆಂಗಳೂರು: ಲೋಕಸಭೆ ಎರಡನೇ ಹಂತದ ಚುನಾವಣೆಗೆ ಬಿಜೆಪಿ ರಾಷ್ಟ್ರ-ರಾಜ್ಯ ನಾಯಕರ ಬಿರುಸಿನ ಸಂಚಾರ, ಪ್ರಚಾರದ ಅಬ್ಬರ ಏರುಗತಿಯಲ್ಲಿದೆ. ಈ ನಡುವೆ ಮತದಾರರ ಜತೆಗೆ ಮತ್ತೊಂದು ಸುತ್ತಿನ ನಿಕಟತೆ ಸಾಧಿಸಲು ಎರಡು ಹಂತದ ‘ಸಂಪರ್ಕ ಅಭಿಯಾನ’ಕ್ಕೆ ಪಕ್ಷ ಸಿದ್ಧತೆ ಮಾಡಿಕೊಂಡಿದೆ.

    ಪೇಜ್ ಪ್ರಮುಖ, ಬೂತ್ ಸಮಿತಿ, ಶಕ್ತಿ, ಮಹಾಶಕ್ತಿ, ಮಂಡಲ ಸಮಿತಿ ಕಾರ್ಯಕರ್ತರನ್ನು ಕ್ಷೇತ್ರ ಕಾರ್ಯ ಮತ್ತು ಮೇಲುಸ್ತುವಾರಿಗೆ ಕೆಲಸಕ್ಕೆ ಜೋಡಿಸಲಾಗಿದೆ.

    ಮೇ 2 ರಿಂದ 4ರವರೆಗೆ ಮೂರು ದಿನಗಳ ಪ್ರತಿ ಬೆಳಗ್ಗೆ ಮತ್ತು ಸಂಜೆ ಅವಧಿಯಲ್ಲಿ ಕಾರ್ಯಕರ್ತರ ತಂಡ ಪ್ರತಿ ಮನೆಗೆ ಭೇಟಿ ನೀಡಿ ಕೇಂದ್ರದ ಸಾಧನೆ, ಕೊಡುಗೆಗಳ ಕುರಿತು ಕರಪತ್ರ ಹಂಚಲಿದೆ.

    ಕೇಂದ್ರ ಸರ್ಕಾರದ ಒಂದಿಲ್ಲೊಂದು ಜನಪರ ಯೋಜನೆಗಳು ಪ್ರತಿ ಕುಟುಂಬಕ್ಕೆ ತಲುಪಿದ್ದು, ಇದೇ ಸಂದರ್ಭದಲ್ಲಿ ಯೋಜನೆ ಲಾನುಭವಿ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.

    ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಯೋಜನೆಯಡಿ ಅರ್ಹ ಕುಟುಂಬಗಳ ನೋಂದಣಿಯನ್ನು ಖಚಿತಪಡಿಸಿಕೊಳ್ಳಲಿದೆ. ಇಲ್ಲವಾದರೆ ನೋಂದಣಿ ಬಗ್ಗೆ ಮಾಹಿತಿ ತಿಳಿಸಿ ಅರ್ಜಿಯನ್ನು ನೀಡಲಿದೆ.

    ಜವಾಬ್ದಾರಿ ನಿರ್ವಹಣೆಗೆ ಸೂಚನೆ

    ಮತದಾರರ ಮನೆ-ಮನ ತಟ್ಟುವ ಈ ಅಭಿಯಾನ ಯಶಸ್ವಿಯಾಗಿಸುವಲ್ಲಿ ತಳಮಟ್ಟದ ಸಂಘಟನಾ ಬಲ ನಿರ್ಣಾಯಕವಾಗಿದೆ. ಇದೇ ಕಾರಣಕ್ಕೆ ಪೇಜ್ ಪ್ರಮುಖರು, ಬೂತ್‌ಮಟ್ಟದ ಸಮಿತಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಮೂರು ದಿನಗಳ ಕಾಲ ಹೋಬಳಿಮಟ್ಟದಲ್ಲೂ ಪಾದಯಾತ್ರೆ ನಡೆಸಲಾಗುವುದು. ಮೋದಿ ಪರವಾದ ಅಲೆಗೆ ಇನ್ನಷ್ಟು ವೇಗ, ಪಕ್ಷದ ಪರ ಒಲವು ಹೆಚ್ಚಿಸುವುದು ಅಭಿಯಾನದ ಕಾರ್ಯತಂತ್ರವಾಗಿದೆ.

    ಪಾದಯಾತ್ರೆಗೆ ಮಂಡಲ, ಜಿಲ್ಲಾಮಟ್ಟದ ಮುಖಂಡರು, ಹಿರಿಯರನ್ನು ಜೋಡಿಸಿ ಕಾರ್ಯಕರ್ತರಲ್ಲಿ ಹುರುಪು ತುಂಬಿ, ಮುಂದಿನ ಮೂರು ಮಹತ್ವದ ದಿನಗಳಿಗೆ ಅಣಿಗೊಳಿಸಲಾಗುತ್ತದೆ.

    ಮೇ 5ರ ಸಂಜೆ 4 ರಿಂದ 6ರವರೆಗೆ 14 ಲೋಕಸಭೆ ಕ್ಷೇತ್ರಗಳ ವ್ಯಾಪ್ತಿಯ 29 ಸಾವಿರ ಬೂತ್‌ಗಳಲ್ಲಿ ಏಕ ಕಾಲಕ್ಕೆ ಮಹಾ ಸಂಪರ್ಕ ಅಭಿಯಾನ ಕೈಗೆತ್ತಿಕೊಂಡು, ಜನರ ಗಮನಸೆಳೆಯುವ ರೂಪರೇಷೆ ಸಿದ್ಧಪಡಿಸಲಾಗಿದೆ ಎಂದು ಪಕ್ಷ ಮಾಹಿತಿ ನೀಡಿದೆ.

    ಕೇಂದ್ರ ನಾಯಕತ್ವ ಅಸಮಾಧಾನ

    ಮೊದಲ ಹಂತದ ಚುನಾವಣೆಯಲ್ಲಿ ಹೆಣೆದ ಕಾರ್ಯತಂತ್ರ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ, ಎಲ್ಲರೂ ಕ್ರಿಯಾಶೀಲವಾಗಿ ಕೆಲಸ ಮಾಡಿಲ್ಲವೆಂಬ ಬಗ್ಗೆ ಕೇಂದ್ರ ನಾಯಕತ್ವ ಅಸಮಾಧಾನಗೊಂಡಿದೆ.

    ಕೆಲವು ಕ್ಷೇತ್ರಗಳಲ್ಲಿ ನಿರೀಕ್ಷಿಗಿಂತ ಕಡಿಮೆ ಮತದಾನವಾಗಿರುವುದು, ಮತದಾರರಲ್ಲಿ ಜಾಗೃತಿ, ಮತಗಟ್ಟೆಗೆ ಕರೆತರುವಲ್ಲಿ ಮುಖಂಡರು ಮತ್ತು ಕಾರ್ಯಕರ್ತರ ನಿರುತ್ಸಾಹವೂ ಅಸಮಾಧಾನಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

    ಎರಡನೇ ಹಂತದ 14 ಕ್ಷೇತ್ರಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ವಿಧಾನಸಭೆ ಚುನಾವಣೆ ಸೋಲಿನ ನಿರಾಸೆಯಿಂದ ಮುಖಂಡರು ಹೊರಬಂದಿಲ್ಲ.

    ಮತ್ತೊಂದೆಡೆ ಅಧಿಕಾರದ ಬಲದಿಂದ ಕಾಂಗ್ರೆಸ್ ಮುಖಂಡರು ಒಮ್ಮತದ ಬಲ, ಕಾರ್ಯಕರ್ತರು ಅತ್ಯುತ್ಸಾಹದಿಂದ ಮುನ್ನುಗ್ಗುತ್ತಿದ್ದಾರೆ ಎಂಬ ವರದಿಯು ದೆಹಲಿ ನಾಯಕರ ಕೈಸೇರಿದೆ.

    ಬೆಳಗಾವಿ, ಚಿಕ್ಕೋಡಿ ಜತೆಗೆ ಕಲ್ಯಾಣ ಕರ್ನಾಟಕದ ಐದು ಲೋಕಸಭೆ ಕ್ಷೇತ್ರಗಳಿಗೆ ತುರ್ತು ಚಿಕಿತ್ಸೆ ಅಗತ್ಯವಿದೆ. ಇದರಿಂದಾಗಿ ಅಮಿತ್ ಷಾ ಬುಧವಾರದ ಭೇಟಿ ವೇಳೆ ಈ ಬಗ್ಗೆ ನಾಯಕರನ್ನು ಕೇಳುವ ಮೂಲಕ ವಾಸ್ತವಾಂಶ ಗೊತ್ತಿದೆ ಎಂಬ ಸೂಕ್ಷ್ಮ ಸಂದೇಶ ರವಾನಿಸುವ ಸಾಧ್ಯತೆಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts