More

    ಶಿಕ್ಷಕನನ್ನು ಕೆಲಸದಿಂದ ವಜಾ ಮಾಡಿ: ಕೆಡಿಪಿ ಸಭೆಯಲ್ಲಿ ಒಕ್ಕೊರಲ ನಿರ್ಣಯ

    ಮಂಡ್ಯ: ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದ ಹೆಣ್ಣು ಮಕ್ಕಳ ಸರ್ಕಾರಿ ವಸತಿ ಶಾಲೆಯ ಮುಖ್ಯ ಶಿಕ್ಷಕ ಹಾಗೂ ವಾರ್ಡನ್ ಚಿನ್ಮಯ ಸ್ಮಾಮಿ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ವಿದ್ಯಾರ್ಥಿನಿಯರೇ ಆತನಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಆದರೂ ಆತನ ವಿರುದ್ಧ ಕಠಿಣ ಕಾನೂನು ಕ್ರಮದ ಜತೆಗೆ ಮುಖ್ಯವಾಗಿ ಕೆಲಸದಿಂದಲೇ ವಜಾಗೊಳಿಸಲು ಕೆಡಿಪಿ ಸಭೆಯಲ್ಲಿ ನಿರ್ಣಯ ಮಾಡಲಾಯಿತು.
    ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪ್ರಕರಣ ಸಂಬಂಧ ಗಂಭೀರ ಚರ್ಚೆ ನಡೆಯಿತು. ಮುಖ್ಯಶಿಕ್ಷಕನ ಕೃತ್ಯದಿಂದ ರಾಜ್ಯವೇ ಜಿಲ್ಲೆಯ ಕಡೆ ನೋಡುವಂತಾಗಿದೆ. ಅಸಭ್ಯವಾಗಿ ವರ್ತಿಸಿದ್ದರಿಂದ ವಿದ್ಯಾರ್ಥಿನಿಯರೇ ದೊಣ್ಣೆಯಿಂದ ಥಳಿಸಿ ಸರಿಯಾಗಿ ಬುದ್ಧಿ ಕಲಿಸಿ ಪೊಲೀಸರ ವಶಕ್ಕೆ ನೀಡಿರುವುದು ಶ್ಲಾಘನೀಯ. ಹೆಣ್ಣು ಮಕ್ಕಳ ಧೈರ್ಯ ಮೆಚ್ಚುವಂಥದ್ದು. ಆದರೂ ಪೊಲೀಸರು ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ಸಂಪೂರ್ಣ ವರದಿ ನೀಡಬೇಕು. ಪ್ರಕರಣದಲ್ಲಿ ಪೊಲೀಸರು ಯಾರ ಒತ್ತಡಕ್ಕೂ ಮಣಿಯಬಾರದು. ವಿದ್ಯಾರ್ಥಿನಿಯರಿಂದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಣ್ಣ ಸಾಕ್ಷೃವೂ ನಾಶವಾಗಬಾರದು. ಆತನಿಗೆ ಜಾಮೀನು ಕೂಡ ಸಿಗಬಾರದು. ಈ ಪ್ರಕರಣದಲ್ಲಿ ಪೊಲೀಸರು ತೆಗೆದುಕೊಳ್ಳುವ ಕ್ರಮ ಇಡೀ ರಾಜ್ಯಕ್ಕೇ ಮಾದರಿಯಾಗಬೇಕೆಂದು ಕೆ.ಗೋಪಾಲಯ್ಯ ಸೂಚನೆ ನೀಡಿದರು.
    ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಮುಖ್ಯಶಿಕ್ಷಕ ಹೆಣ್ಣುಮಕ್ಕಳಿಗೆ ಸಾಕಷ್ಟು ತೊಂದರೆ ಕೊಟ್ಟಿದ್ದಾನೆ. ಪ್ರಕರಣ ಹೊರಬಂದರೆ ಎಲ್ಲರಿಗೂ ಗೊತ್ತಾಗಿ ಮರ್ಯಾದೆ ಹೋಗಲಿದೆ ಎನ್ನುವ ಕಾರಣಕ್ಕೆ ಮಕ್ಕಳು ಸುಮ್ಮನಾಗಿದ್ದಾರೆ. ಆದರೆ ಬುಧವಾರ ವಿದ್ಯಾರ್ಥಿಗಳೇ ಸರಿಯಾದ ಬುದ್ಧಿ ಕಲಿಸಿದ್ದಾರೆ. ಗುರುವಾರ ಬೆಳಗ್ಗೆ ಹೋಗಿ ವಿದ್ಯಾರ್ಥಿನಿಯರಿಗೆ ಸಮಾಧಾನಪಡಿಸಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚನೆ ನೀಡಿದ್ದೇನೆ. ಆದರೆ ಈ ಘಟನೆ ಜಿಲ್ಲೆಗೆ ಅವಮಾನ. ಈ ಬಗ್ಗೆ ಅಧಿವೇಶನದಲ್ಲಿಯೂ ಚರ್ಚೆ ಮಾಡುತ್ತೇನೆ ಎಂದರು.
    ಅನಧಿಕೃತ ಕಟ್ಟಡ ತೆರವುಗೊಳಿಸಿ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ ಮಾತನಾಡಿ, ಮಿಮ್ಸ್‌ಗೆ ಇನ್ನೂ ಕಟ್ಟಡಗಳು, ವೈದ್ಯರು ಮತ್ತು ಶುಶ್ರೂಷಕಿಯರ ಅವಶ್ಯಕತೆ ಇದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ಗೋಪಾಲಯ್ಯ, ಮಿಮ್ಸ್ ಪಕ್ಕದಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಸ್ಲಂ ಅನ್ನು ಕೂಡಲೇ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದರು.
    ಕಟ್ಟಡ ಕಟ್ಟಲು ಬಂದವರು ಅನಧಿಕೃತವಾಗಿ ಜಾಗವನ್ನು ಆಕ್ರಮಿಸಿಕೊಂಡು ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಸ್ಲಂ ಜನತೆಗೆ ಈಗಾಗಲೇ ಕೆರೆಯಂಗಳದಲ್ಲಿ ಕಟ್ಟಡಗಳನ್ನು ಕಟ್ಟಲಾಗಿದ್ದು, ಅವರನ್ನು ಕಳುಹಿಸಿದರೆ ಮಿಮ್ಸ್‌ಗೆ ಅವಶ್ಯಕತೆ ಇರುವ ಕಟ್ಟಡಗಳನ್ನು ಕಟ್ಟಿಕೊಳ್ಳ ಬಹುದು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ತೆರಳಿ ಅಲ್ಲಿ ವಾಸಿಸುತ್ತಿರುವ ಜನತೆಯ ಮನವೊಲಿಸಿ ಅವರಿಗೆ ನೀಡಿರುವ ಮನೆಗಳಿಗೆ ಕಳುಹಿಸಬೇಕೆಂದು ಸೂಚಿಸಿದರು.
    ಪಿಡಬ್ಲುೃಡಿ ಅಧಿಕಾರಿಗೆ ಕ್ಲಾಸ್: ಮಳೆಯಿಂದ ಸರ್ಕಾರಿ ಶಾಲೆಗಳಿಗೆ ಹಾನಿಯಾಗಿದ್ದು, ಈ ಸಂಬಂಧ ಪಿಡಬ್ಲುೃಡಿಗೆ ದುರಸ್ತಿ ಮಾಡಲು ಸೂಚನೆ ನೀಡಲಾಗಿದೆ. ಆದರೆ ಈವರೆಗೂ ದುರಸ್ತಿ ಮಾಡಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿ ಸಭೆಗೆ ತಿಳಿಸಿದರು. ಇದರಿಂದ ಆಕ್ರೋಶಗೊಂಡ ಕೆ.ಗೋಪಾಲಯ್ಯ ಹಾಗೂ ಕೆ.ಸಿ.ನಾರಾಯಣಗೌಡ, ದುರಸ್ತಿ ಮಾಡಲು ಏಕೆ ಮೀನಮೇಷ ಎಣಿಸುತ್ತಿದ್ದೀರಿ? ಕೂಡಲೇ ಕೆಲಸ ಮುಗಿಸಿ, ಇಲ್ಲವೇ ಜಾಗ ಖಾಲಿ ಮಾಡಿ ಎಂದು ಆದೇಶಿಸಿದರು. ಇದಕ್ಕೆ ಉತ್ತರಿಸಿದ ಪಿಡಬ್ಲುೃಡಿ ಅಧಿಕಾರಿ ಸರ್ಕಾರದಿಂದ 14 ಕೋಟಿ ರೂ. ಬಿಡುಗಡೆಯಾಗಿದ್ದು, 7 ತಾಲೂಕಿಗೆ ತಲಾ 2 ಕೋಟಿ ರೂ. ಹಂಚಲಾಗಿದ್ದು, ಶೀಘ್ರ ಕೆಲಸ ಪ್ರಾರಂಭಿಸಿ 15 ದಿನಗಳಲ್ಲಿ ಮುಗಿಸುತ್ತೇವೆ ಎಂದು ಉತ್ತರಿಸಿದರು.
    ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್ ಮಾತನಾಡಿ, ನೆರೆ ಹಾವಳಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಶೇ. 99ರಷ್ಟು ಪರಿಹಾರ ನೀಡಲಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಭತ್ತಕ್ಕೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ಸಭೆಗೆ ವಿವರಿಸಿದರು. ಕೆ.ಸಿ.ನಾರಾಯಣಗೌಡ ಪ್ರತಿಕ್ರಿಯಿಸಿ, ಎಲ್ಲೆಲ್ಲಿ ಹುರುಳಿ ಬಿತ್ತನೆಯಾಗಿದೆ ಎಂಬ ಸಂಪೂರ್ಣ ಮಾಹಿತಿ ನೀಡುವಂತೆ ಸೂಚನೆ ನೀಡಿದರು.
    ಸಭೆಯಲ್ಲಿ ಎಂಎಲ್‌ಸಿಗಳಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ, ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ, ಎಎಸ್ಪಿ ವೇಣುಗೋಪಾಲ್, ಡಿಎಫ್‌ಒ ರುಥ್ರೇನ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts