More

    ಆಧುನಿಕ ತಂತ್ರಜ್ಞಾನ ಕೆಲಸ ಕಸಿಯದು: ವಾಣಿಜ್ಯ ತೆರಿಗೆಗಳ ಇಲಾಖೆ ಆಯುಕ್ತರಾದ ಸಿ.ಶಿಖಾ

    ಮೈಸೂರು: ಆಧುನಿಕ ತಂತ್ರಜ್ಞಾನ ಎಷ್ಟೇ ಅಭಿವೃದ್ಧಿಯಾದರೂ ಅದರಿಂದ ಯಾರೊಬ್ಬರು ಕೂಡ ಕೆಲಸ ಕಳೆದುಕೊಳ್ಳುವುದಿಲ್ಲ ಎಂದು ವಾಣಿಜ್ಯ ತೆರಿಗೆಗಳ ಇಲಾಖೆ ಆಯುಕ್ತರಾದ ಸಿ.ಶಿಖಾ ಹೇಳಿದರು.
    ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾಲೇಜಿನ 16ನೇ ಪದವೀಧರರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
    ನಮ್ಮ ಸಂಸ್ಕೃತಿ ಎರಡು ಸಾವಿರ ವರ್ಷಗಳಿಗೂ ಹೆಚ್ಚು ಕಾಲದಿಂದ ಇದೆ. ಆದರೆ ತಂತ್ರಜ್ಞಾನ ಇತೀಚಿನ ವರ್ಷದಲ್ಲಿ ಅಭಿವೃದ್ಧಿ ಹೊಂದುತ್ತಿದೆ. 17 ವರ್ಷಗಳ ಹಿಂದೆ ಮೊಬೈಲ್ ಎಲ್ಲರ ಕೈಯಲ್ಲೂ ಇರಲಿಲ್ಲ. ಈಗ ಎಲ್ಲರ ಬಳಿಯೂ ಮೊಬೈಲ್ ಇದೆ ಎಂದರು.
    ಯಾವುದೇ ತಂತ್ರಜ್ಞಾನ ಬಂದರೂ ಅದನ್ನು ನಿರ್ವಹಿಸಲು ಮಾನವನ ಅಗತ್ಯತೆ ಇದ್ದೇ ಇರಲಿದೆ. ಹೀಗಾಗಿ ಯಾವುದೇ ಆಧುನಿಕ ತಂತ್ರಜ್ಞಾನ ಬಂದರೂ ಯಾರೂ ಕೆಲಸ ಕಳೆದುಕೊಳ್ಳುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ನಿಮ್ಮ ಕೌಶಲವನ್ನು ಅಪ್‌ಡೇಟ್ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದರು.
    ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರುವ ಗುರಿ ಇಟ್ಟುಕೊಂಡು ಅದನ್ನು ತಲುಪುವ ನಿಟ್ಟಿನಲ್ಲಿ ಕಠಿಣ ಪರಿಶ್ರಮ ಹಾಕಬೇಕು. ಸಮಾಜದಲ್ಲಿ ಯಾವುದೇ ಕೆಲಸ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ, ಎಲ್ಲ ಕೆಲಸಗಳು ಶ್ರೇಷ್ಠವಾಗಿವೆ ಎಂದರು.
    ವಿದ್ಯಾರ್ಥಿಗಳು ತಮ್ಮ ಕೌಶಲವನ್ನು ಉನ್ನತೀಕರಿಸಿಕೊಳ್ಳುವ ಜತೆಗೆ ಉನ್ನತ ಗುರಿ ಇಟ್ಟುಕೊಂಡು ಅದನ್ನು ಸಾಕಾರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಮುನ್ನಡೆಯಬೇಕು. ನೀವೊಬ್ಬರು ಉದ್ಯೋಗ ಪಡೆದುಕೊಂಡರೆ ಇದರಿಂದ ಸಿಗುವ ಸಂಬಳದಿಂದ ನಿಮ್ಮ ಕುಟುಂಬವನ್ನು ನಿರ್ವಹಿಸಬಹುದು. ಆದರೆ ನೀವು ನವೋದ್ಯಮ ಆರಂಭಿಸಿ ಉದ್ಯಮಿಗಳಾದರೆ ಒಂದಷ್ಟು ಜನರಿಗೆ ಕೆಲಸ ದೊರೆತು ಅವರ ಕುಟುಂಬಗಳು ಸಹ ಜೀವನ ನಡೆಸಲು ಅನುಕೂಲವಾಗಲಿದೆ ಎಂದರು.
    ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಪ್ರತಿಜ್ಞಾ ವಿಧಿ ಬೋಧಿಸಿದರು. ಪದವೀಧರರಾದ ಎಸ್.ಯು. ಛಂಧೋಶ್ರೀ, ಆರ್. ಶಾಂಭವಿ, ಸೌಜನ್ಯಾ ಎಸ್. ಗಂಗಾವತಿ, ಪೋಷಕರಾದ ಡಾ.ಎಲ್. ನಂಜುಂಡಸ್ವಾಮಿ, ಎನ್.ಸಿ. ನಾಗರಾಜು ಅವರು ತಮ್ಮ ಅನಿಸಿಕೆ ಹಂಚಿಕೊಂಡರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಯುಎಸ್‌ಎ ಉದ್ಯಮಿ ಶಾಲಿನಿ ಗುಪ್ತಾ, ಅನುಪಮ ವಸಿಷ್ಠ, ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಪೂರ್ಣಿಮಾ, ಡೀನ್‌ಗಳಾದ ಡಾ. ರೇಚಣ್ಣ, ಜೆ. ಪುಷ್ಪಲತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts