More

    ಜಿಪಂ ಅನುದಾನ ದುರ್ಬಳಕೆ ; ಲೋಪವೆಸಗಿರುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ತೀರ್ಮಾನ

    ಕೋಲಾರ : ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಪೀಠೋಪಕರಣ ಖರೀದಿಗೆ ಹಣ ಬಿಡುಗಡೆ ಮಾಡಿದರೂ ಪೀಠೋಪಕರಣ ಒದಗಿಸದಿರುವ ಸಂಬಂಧ ಲೋಪವೆಸಗಿರುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ತೀರ್ಮಾನಿಸಲಾಗಿದೆ.

    ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಪ್ರಸಾದ್ ವಿಷಯ ಪ್ರಸ್ತಾಪಿಸಿದಾಗ ಪೀಠೋಪಕರಣ ಖರೀದಿಗೆ ಜಿಪಂನಿಂದ ನೀಡಿದ ಅನುದಾನ ದುರ್ಬಳಕೆಯಾಗಿರುವ ಸಂಬಂಧ ಮಾಹಿತಿ ಪಡೆದು ಲೋಪವೆಸಗಿರುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಸೂಚಿಸಿದರು.

    ಹಿಂದಿನ ವರ್ಷಗಳಲ್ಲಿ ಶಾಲೆಗಳಿಗೆ ಪೀಠೋಪಕರಣ ಖರೀದಿಗೆ ಬಿಡುಗಡೆಯಾದ 30 ಲಕ್ಷ ರೂ.ಗಳನ್ನು 6 ಶೈಕ್ಷಣಿಕ ವಲಯಗಳ ಬಿಇಒಗಳಿಗೆ ತಲಾ 5 ಲಕ್ಷ ರೂ.ಗಳಂತೆ ನೀಡಲಾಗಿತ್ತು. ಈ ಹಣವನ್ನು ಬಿಇಒಗಳು ಗುತ್ತಿಗೆದಾರರಿಗೆ ಪಾವತಿಸಿರುವ ಮಾಹಿತಿ ಇದೆ, ಮಾಲೂರು ಹೊರತುಪಡಿಸಿ ಉಳಿದೆಡೆ ಪೀಠೋಪಕರಣ ಸರಬರಾಜಾಗಿಲ್ಲ. ಈ ಸಂಬಂಧ ಸಭೆ ನಡೆಸಿ ಬಿಇಒಗಳಿಗೆ ನೋಟಿಸ್ ನೀಡಲಾಗಿದೆ ಎಂದು ಡಿಡಿಪಿಐ ಕೃಷ್ಣಮೂರ್ತಿ ನುಡಿದರು.

    ಪೀಠೋಪಕರಣ ಸರಬರಾಜು ಆಗದೆಯೇ ಬಿಲ್ ಪಾವತಿಸಿರುವುದು ಕಾನೂನು ಬಾಹಿರ ಎಂದ ಸಿಇಒ ಎನ್.ಎಂ. ನಾಗರಾಜ್ ಸಂಬಂಧಿಸಿದವರ ವಿರುದ್ಧ ಕ್ರಿಮಿನಲ್ ಕೇಸ ಹೂಡಲು ಸೂಚಿಸಿದರು. ಕೋಲಾರದ ಬೆಟ್ಟ ಬೆಣಜೇನಹಳ್ಳಿ ಸರ್ಕಾರಿ ಶಾಲೆ ಕಟ್ಟಡ ಶಿಥಿಲಗೊಂಡು ವರ್ಷ ಕಳೆದಿದೆ. ಸ್ಥಳಕ್ಕೆ ಬಿಇಒ ಭೇಟಿ ನೀಡಿದ್ದರೂ ಕೆಡವಲು ಕ್ರಮ ವಹಿಸಿಲ್ಲ. ಮಕ್ಕಳಿಗೆ ತೊಂದರೆಯಾದರೆ ಇಲಾಖೆಯೇ ಹೊಣೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಪ್ರಸಾದ್ ದೂರಿದಾಗ ಕ್ರಮಕ್ಕೆ ಡಿಡಿಪಿಐಗೆ ಸಿಇಒ ನಾಗರಾಜ್ ಸೂಚಿಸಿದರು.

    ಭವನ ಜಟಾಪಟಿ: ತಾಲೂಕಿನಲ್ಲಿ 79 ಅಂಬೇಡ್ಕರ್ ಭವನ ನಿರ್ಮಾಣದ ಹೊಣೆಯನ್ನು ನಿರ್ಮಿತಿ ಕೇಂದ್ರದಿಂದ ಪಿಆರ್‌ಇಡಿಗೆ ವಹಿಸುವ ಬಗ್ಗೆ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ತೀರ್ಮಾನ ಪಾಲಿಸಿಲ್ಲ, ಸ್ಥಾಯಿ ಸಮಿತಿಯಿಂದ ನಿರ್ಮಿತಿ ಕೇಂದ್ರಕ್ಕೆ ಶೋಕಾಸ್ ನೋಟಿಸ್ ನೀಡಿದ್ದರೂ ಅಧಿಕಾರಿ ನಾರಾಯಣಗೌಡ ಉತ್ತರಿಸಿಲ್ಲ, ವ್ಯವಹಾರ ಮಾಡಿಕೊಂಡು ಮನಸೋ ಇಚ್ಛೆ ಕಾಮಗಾರಿ ವಹಿಸಿದ್ದಾರೆ ಎಂದು ಅರುಣ್‌ಪ್ರಸಾದ್ ಆರೋಪಿಸಿದರು.

    ಸೀತಿಯಲ್ಲಿ ಭವನ ನಿರ್ಮಾಣದ ಭೂಮಿಪೂಜೆಗೆ ತಮಗೂ ಆಹ್ವಾನಿಸಿಲ್ಲ, ಜನಪ್ರತಿನಿಧಿಯ ಹಿಂಬಾಲಕರಿಗೆ ಕೆಲಸ ವಹಿಸುತ್ತಿದ್ದೀರಿ, ಯಾವ ಪಕ್ಷದ ಪರ ಕೆಲಸ ಮಾಡುತ್ತೀರೆಂದು ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಪ್ರಶ್ನಿಸಿದಾಗ ಉತ್ತರಿಸಿದ ನಾರಾಯಣಗೌಡ, ನಮ್ಮದು ಗುತ್ತಿಗೆ ಏಜೆನ್ಸಿ. ಯಾವುದೇ ಭೂಮಿಪೂಜೆ ನೆರವೇರಿಸಿಲ್ಲ, ಕಟ್ಟಡ ನಿರ್ಮಾಣಕ್ಕೆ ಸಾಮಗ್ರಿ ಪೂರೈಸಿ ಸ್ಥಳೀಯ ಮೇಸ್ತ್ರಿಗಳಿಂದ ಕೆಲಸ ಮಾಡಿಸುತ್ತೇವೆ ಎಂದರು.

    ಯೋಜನೆ ಸಮಾಜ ಕಲ್ಯಾಣ ಇಲಾಖೆಯದ್ದು, ಕಾಮಗಾರಿ ನಿರ್ಮಿಸುವುದಷ್ಟೇ ನಿರ್ಮಿತಿ ಕೇಂದ್ರದ ಕೆಲಸ. ಸಂಪನ್ಮೂಲ ಬಳಕೆ ಮಾಡುವಾಗ ಸಾಮಾಜಿಕ ನ್ಯಾಯದ ಬಗ್ಗೆ ಗಮನ ಇಟ್ಟುಕೊಂಡು ಕೆಲಸ ಮಾಡಿ ಎಂದು ಸಿಇಒ ನಾಗರಾಜ್ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿಗೆ ಸಲಹೆ ನೀಡಿದರು.
    ಜಿಪಂ ಉಪಾಧ್ಯಕ್ಷೆ ಯಶೋದಾ ಕೃಷ್ಣಮೂರ್ತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿಗೌಡ, ಜಿಪಂ ಉಪಕಾರ್ಯದರ್ಶಿ ಕೆ.ಪಿ.ಸಂಜೀವಪ್ಪ, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

    ಅಧಿಕಾರಿ ಗೈರಿಗೆ ಗರಂ: ಪಿಡಬ್ಲ್ಯುಡಿ ಕಾರ್ಯಪಾಲಕ ಇಂಜಿನಿಯರ್ ಚಂದ್ರಶೇಖರ್ ಮಾಹಿತಿ ನೀಡದೇ ಗೈರಾಗಿ ಸಹಾಯಕರನ್ನು ಕಳುಹಿಸಿದರೆ ಹೇಗೆಂದು ಶಾಸಕ ಕೆ.ಶ್ರೀನಿವಾಸಗೌಡ ಅತೃಪ್ತಿ ವ್ಯಕ್ತಪಡಿಸಿದರು. ಸಭೆಗೆ ಬರಲಾಗದ ಬಗ್ಗೆ ಗಮನಕ್ಕೆ ತಂದಿಲ್ಲ, ಕೆಲ ಅಧಿಕಾರಿಗಳು ಜಿಪಂ ಸಭೆಗಳನ್ನು ಹಗುರವಾಗಿ ಪರಿಗಣಿಸಿದ್ದಾರೆ ಎಂದು ಸಿಇಒ ನಾಗರಾಜ್ ಗರಂ ಆದರು.

    ತಪ್ಪಿದ ತಾಳ : ಕಟ್ಟಡ ನಿರ್ಮಾಣ, ದುರಸ್ತಿ ಸಂಬಂಧ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಮತ್ತು ಕಾಮಗಾರಿ ಹೊಣೆ ಹೊತ್ತಿದ್ದ ಪಿಆರ್‌ಇಡಿ ಅಧಿಕಾರಿಗಳಲ್ಲಿನ ಅಂಕಿ-ಅಂಶಗಳಲ್ಲಿನ ವ್ಯತ್ಯಾಸ ಮನಗಂಡ ಸಿಇಒ, ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ, ಪಿಆರ್‌ಇಡಿಗೆ ಕೆಲಸ ಒಪ್ಪಿಸಿದರೆ ಇಲಾಖೆ ಜವಾಬ್ದಾರಿ ಮುಗಿದಂತಲ್ಲ, ಕೆಲಸ ನಿಮ್ಮ ಇಲಾಖೆಯದ್ದು. ಕಣ್ಣಾಮುಚ್ಚಾಲೆ ಆಟ ಯಾಕೆ? ಜನರನ್ನು ಕತ್ತಲಲ್ಲಿಟ್ಟು ಏನೂ ಸಾಧಿಸಲಾಗದು, ಸಭೆಗೆ ವಿವರ ಮಾಹಿತಿ ನೀಡಬೇಕೆಂದು ತಾಕೀತು ಮಾಡಿದರು.

    ಜಿಪಂ ಸಿಇಒ ಕಚೇರಿ ಜಪ್ತಿ? : ಮಾಲೂರು ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಗೂಲಿ ನೌಕರರಿಗೆ ಕನಿಷ್ಠ ವೇತನ ನೀಡದೆ ಕಡಿಮೆ ಹಣ ನೀಡುತ್ತಿರುವ ಕುರಿತು ಕಾರ್ಮಿಕರು ಪ್ರಕರಣ ದಾಖಲಿಸಿರುವ ಸಂಬಂಧ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿಗಳು, ಜಿಪಂ ಸಿಇಒಗೆ ನೋಟಿಸ್ ಜಾರಿಯಾಗಿದೆ. ಈ ಸಂಬಂಧ ಸಿಇಒ ಕಚೇರಿಯನ್ನು ಜಪ್ತಿ ಏಕೆ ಮಾಡಬಾರರದು ಎಂದು ಪ್ರಶ್ನಿಸಿದ್ದಾರೆಂಬ ಅಂಶವನ್ನು ಸಿಇಒ ನಾಗರಾಜ್ ಕೆಡಿಪಿ ಸಭೆಯಲ್ಲಿ ಬಹಿರಂಗಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts