More

    ಫಲಾನುಭವಿಗಳ ಪಟ್ಟಿ ನೀಡಿ ; ಅಡುಗೆ ಅನಿಲ ಸಂಪರ್ಕ ತನಿಖೆ ನಡೆಸಲು ಶಾಸಕ ಶ್ರೀನಿವಾಸಗೌಡ ಸೂಚನೆ

    ಕೋಲಾರ : ವಲಯ ಅರಣ್ಯ ಇಲಾಖೆಯಿಂದ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಅಡುಗೆ ಅನಿಲ ಸಂಪರ್ಕಕ್ಕೆ ಕೇದಾರ್ ಗ್ಯಾಸ್‌ಗೆ ಹಣ ಪಾವತಿಸಿರುವ ಸಂಬಂಧ ತನಿಖೆ ನಡೆಸಿ ಮುಂದಿನ ಸಭೆಯೊಳಗೆ ಮಂಡಿಸುವಂತೆ ಶಾಸಕ ಕೆ. ಶ್ರೀನಿವಾಸಗೌಡ ತಾಪಂ ಇಒ ಎನ್.ವಿ.ಬಾಬುಗೆ ಸೂಚಿಸಿದರು.

    ತಾಪಂ ಸಭಾಂಗಣದಲ್ಲಿ ಶುಕ್ರವಾರ ಕೆಡಿಪಿ ಸಭೆಯಲ್ಲಿ ತಾಪಂ ಅಧ್ಯಕ್ಷರು ಪ್ರಸ್ತಾಪಿಸಿದ ವಿಷಯದ ಸಂಬಂಧ ಫಲಾನುಭವಿಗಳ ಪಟ್ಟಿಯನ್ನು ಎರಡ್ಮೂರು ದಿನಗೊಳಗೆ ನನಗೆ ಒದಗಿಸಿ, ಉಳಿದಂತೆ ಈ ಬಗ್ಗೆ ತನಿಖೆ ನಡೆಸಿ ಮುಂದಿನ ಸಭೆಗೆ ಮಾಹಿತಿ ನೀಡಬೇಕು ಎಂದರು. ನಚಿಕೇತನ ನಿಲಯ ದುರಸ್ತಿ ಕಾರ್ಯವನ್ನು ಏ. 14ರೊಳಗೆ ಮುಗಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚೌಡಪ್ಪ ಅವರಿಗೆ ಸೂಚಿಸಿದರು.

    9ನೇ ತರಗತಿಯಲ್ಲಿದ್ದ 95 ವಿದ್ಯಾರ್ಥಿಗಳಲ್ಲಿ 10ನೇ ತರಗತಿಗೆ ಹೋಳೂರಿನಲ್ಲಿ 3 ವಿದ್ಯಾರ್ಥಿಗಳು ಹೊರತುಪಡಿಸಿ ಯಾರೂ ಹಾಸ್ಟೆಲ್‌ಗೆ ಬರುತ್ತಿಲ್ಲ, ಪಾಲಕರು ಕಳುಹಿಸಿಕೊಡುತ್ತಿಲ್ಲವೆಂದು ಬಿಸಿಎಂ ಅಧಿಕಾರಿ ಪ್ರಕಾಶ್ ತಿಳಿಸಿದಾಗ ಪಾಲಕರ ಮನವೊಲಿಸಲು ಶಾಸಕರು ತಿಳಿಸಿದರು. 2018-19ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ 74 ಬೋರ್‌ವೆಲ್ ಕೊರೆಸುವ ಗುರಿಗೆ 47 ಕೊರೆಸಲಾಗಿ 27 ಬಾಕಿ ಇದೆ. ಸಫಲ ಬೋರ್‌ವೆಲ್ ಫಲಾನುಭವಿಗಳಿಗೆ ಮೋಟಾರ್ ವಿತರಣೆ ಸಂಬಂಧ ಬಿಡ್‌ದಾರರು ಹೈಕೋರ್ಟ್ ಮೆಟ್ಟಿಲೇರಿರುವ ಬಗ್ಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿ ನಾರಾಯಣಸ್ವಾಮಿ ಮಾಹಿತಿ ಒದಗಿಸಿದಾಗ ತೆರವಿಗೆ ಕ್ರಮ ವಹಿಸಿ ಎಂದರು.

    ನನಗೇ ಗೊತ್ತಿಲ್ಲ: ನಾನೂ ರಾಗಿ ಬೆಳೆದಿದ್ದೇನೆ, ಉತ್ತಮ ಫಸಲು ಬಂದಿದೆ. ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುತ್ತಿರುವುದು ನನಗೆ ಮಾಹಿತಿ ಇಲ್ಲ. ಗೊತ್ತಿದ್ರೆ ನಾನೂ ಕೊಡ್ತಿದ್ದೆ ಎಂದ ಶಾಸಕ ಶ್ರೀನಿವಾಸಗೌಡ ಈ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡಲು ಅಧಿಕಾರಿಗಳಿಗೆ ಸಲಹೆ ನೀಡಿದರು. ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ ಮಾತನಾಡಿ, ಎಸ್‌ಟಿಸಿ, ಟಿಎಸ್‌ಪಿ ಯೋಜನೆಯಡಿ ಅಡುಗೆ ಅನಿಲ ಸಂಪರ್ಕಕ್ಕೆಂದು ಕೇದಾರ್ ಗ್ಯಾಸ್ ಏಜೆನ್ಸಿಗೆ ಅರಣ್ಯ ಇಲಾಖೆಯಿಂದ 20 ಲಕ್ಷ ರೂ. ನೀಡಲಾಗಿದೆ. ಆದರೆ ಅಗತ್ಯ ಫಲಾನುಭವಿಗಳು ಸಿಗದೆ ಹಣ ಏಜೆನ್ಸಿ ಬಳಿ ಉಳಿದಿದೆ. ಈ ಬಗ್ಗೆ 4 ವರ್ಷಗಳಿಂದ ವಿಷಯ ಪ್ರಸ್ತಾಪಿಸುತ್ತಿದ್ದರೂ ತಾರ್ಕಿತ ಅಂತ್ಯ ಕಂಡಿಲ್ಲ, ತನಿಖೆ ನಡೆಸಿ ಕ್ರಮ ವಹಿಸುವಂತೆ ಕೋರಿದರು.

    ಮುದುವಾಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಸಿದ್ಧಗೊಂಡಿದ್ದರೂ ಉದ್ಘಾಟಿಸಿಲ್ಲ, ಅಂಗನವಾಡಿ ಕಟ್ಟಡದಲ್ಲಿ ಆಸ್ಪತ್ರೆ ನಡೆಯುತ್ತಿದೆ, ಮಕ್ಕಳು ಬೀದಿಯಲ್ಲಿದ್ದಾರೆಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ದೂರಿದಾಗ ಶೀಘ್ರ ದಿನ ನಿಗದಿಪಡಿಸುವಂತೆ ಶಾಸಕರು ತಾಲೂಕು ಆರೋಗ್ಯಾಧಿಕಾರಿ ಡಾ. ರಮ್ಯದೀಪಿಕಾಗೆ ಸೂಚಿಸಿದರು. ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ಕನಕ ಮಂಜುನಾಥ್, ಮುದುವಾಡಿ ಶ್ರೀನಿವಾಸ್, ಸೈಯದ್ ಷಫೀವುಲ್ಲಾ, ಮಾಲಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

    ಶ್ರೀಗಂಧ ಕಳ್ಳರ ಕಾಟ : ರೈತರಿಗೆ ವಿತರಿಸಲು ಶ್ರೀಗಂಧ ಇನ್ನಿತರ 1 ಲಕ್ಷ ಸಸಿ ಬೆಳೆಸುತ್ತಿರುವ ಬಗ್ಗೆ ಸಾಮಾಜಿಕ ಅರಣ್ಯ ಇಲಾಖೆ ಸಹಾಯಕ ನಿರ್ದೇಶಕಿ ಬಿಂದು ಮಾಹಿತಿ ನೀಡಿದಾಗ ತಮ್ಮ ಜಮೀನಿನ ಶ್ರೀಗಂಧ ಮರ ಸ್ವಲ್ಪ ದಪ್ಪನೆ ಗಾತ್ರಕ್ಕೆ ಬರುತ್ತಿದ್ದಂತೆಯೇ ಕಳ್ಳರು ಕತ್ತರಿಸಿಕೊಂಡು ಹೋಗಿದ್ದಾರೆ, ಇದಕ್ಕೆ ಪರಿಹಾರ ತಿಳಿಸಿ ಎಂದು ಶಾಸಕರು ನುಡಿದರು.

    ಅಧಿಕಾರಿಗಳ ವಿರುದ್ದ ಗರಂ : ವಿವಿಧ ಇಲಾಖೆಗಳಲ್ಲಿ ಫಲಾನುಭವಿಗಳ ಆಯ್ಕೆ ಸಮಿತಿಗಳಿಗೆ ಸ್ಥಳೀಯ ಶಾಸಕರೇ ಅಧ್ಯಕ್ಷರಾಗಿರುವ ಕುರಿತು ಅಧಿಕಾರಿಗಳು ಗಮನಕ್ಕೆ ತರದೆ ಮಾಹಿತಿ ನೀಡುವಲ್ಲಿ ನಿರ್ಲಕ್ಷಿಸಿರುವ ಕುರಿತು ಶಾಸಕ ಕೆ. ಶ್ರೀನಿವಾಸಗೌಡ ಅಸಮಾಧಾನ ವ್ಯಕ್ತ ಪಡಿಸಿದರು. ಆಯ್ಕೆ ಸಮಿತಿಗಳಿಗೆ ನಾನೇ ಅಧ್ಯಕ್ಷರನ್ನಾಗಿದ್ದರೂ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂಬಂಧ ನನ್ನ ಬಳಿ ಚರ್ಚಿಸದೆ ಸುಮ್ಮನೆ ಇದ್ದುಬಿಟ್ಟರೆ ನನ್ನ ಗಮನಕ್ಕೆ ಬರುವುದಾದರೂ ಹೇಗೆ, ಸಮಿತಿ ಸಭೆ ನಡೆಸದೆ, ಸಭೆ ಕರೆದಾಗಷ್ಟೆ ವಿಷಯ ತಿಳಿಸಿದರೆ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುವುದುದು ಯಾವಾಗ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts