More

    ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸಲು ಪಟ್ಟು: ನಂಗಲಿಯಲ್ಲಿ ರೈತ ಸಂಘ ಪ್ರತಿಭಟನೆ , ತಹಸೀಲ್ದಾರ್ ರಾಜಶೇಖರ್‌ಗೆ ಮನವಿ ಪತ್ರ

    ಮುಳಬಾಗಿಲು : ಕೆ.ಸಿ.ವ್ಯಾಲಿ ನೀರನ್ನು ತಾಲೂಕಿನ ಕೆರೆಗಳಿಗೆ 30 ದಿನದಲ್ಲಿ ಹರಿಸಬೇಕು. ಉಚ್ಚ ನ್ಯಾಯಾಲಯದ ಆದೇಶದಂತೆ ಕೆರೆ, ರಾಜಕಾಲುವೆಗಳ ಒತ್ತುವರಿ ತೆರವು ಮಾಡಲು ವಿಶೇಷ ತಂಡ ರಚನೆ ಮಾಡಬೇಕು ಎಂದು ಒತ್ತಾಯಿಸಿ ರೈತ ಸಂದ ಮುಖಂಡರು ಒತ್ತಾಯಿಸಿದರು.

    ನಂಗಲಿಯಿಂದ ನಗರದ ತಹಸೀಲ್ದಾರ್ ಕಚೇರಿವರೆಗೂ ಶನಿವಾರ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ತಾಲೂಕು ಆಡಳಿತ ಮತ್ತು ಪೊಲೀಸರು ಅನುಮತಿ ನೀಡದ ಹಿನ್ನೆಲೆಯಲ್ಲಿ ನಂಗಲಿ ಠಾಣೆಯ ಮುಂಭಾಗದ ರಾ.ಹೆ.75ರ ಸರ್ವೀಸ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

    ರಾಜಕಾರಣಿಗಳು, ಶ್ರೀಮಂತರು ಸಾವಿರಾರು ಸಂಖ್ಯೆಯಲ್ಲಿ ಸೇರಿ ರ‌್ಯಾಲಿ, ಮದುವೆ ಕಾರ್ಯಕ್ರಮಗಳನ್ನು ವಾಡಿದರೆ ಅದಕ್ಕೆ ಕರೊನಾ ನಿಯಮ ಅಡ್ಡಿಯಾಗುವುದಿಲ್ಲ. ತಾಲೂಕಿನ ನೀರಾವರಿ ಹಾಗೂ ಜಲಮೂಲಗಳ ಒತ್ತುವರಿ ತೆರವುಗೊಳಿಸುವಂತೆ ನಡೆಸುವ ಹೋರಾಟಕ್ಕೆ ಮಾತ್ರ ಇಲ್ಲಸಲ್ಲದ ನೆಪ ಒಡ್ಡುತ್ತಾರೆ ಎಂದು ಪೊಲೀಸ್ ಇಲಾಖೆ ವಿರುದ್ಧ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.

    ದಿವಂಗತ ಡಿ.ಕೆ.ರವಿ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಜಿಲ್ಲೆಯ ರೈತರಿಗೆ ಶಾಶ್ವತ ನೀರು ಒದಗಿಸಲು ದೂರದೃಷ್ಟಿಯಿಂದ ಕೆ.ಸಿ.ವ್ಯಾಲಿ ಯೋಜನೆ ಅನುಷ್ಠಾನ ವಾಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು. ಆಗಿನ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ಬೆಂಗಳೂರಿನ ಕೊಳಚೆನೀರು ವ್ಯರ್ಥವಾಗಿ ಹರಿಯುತ್ತಿದ್ದನ್ನು ಸಂಸ್ಕರಿಸಿ ಕೋಲಾರದ ಜಿಲ್ಲೆಯ ಕೆರೆಗಳಿಗೆ ತುಂಬುವ ಯೋಜನೆ ರೂಪಿಸಿದ್ದಾರೆ. ಆದರೆ ಮುಳಬಾಗಿಲು ತಾಲೂಕಿಗೆ ಇದುವರೆಗೂ ನೀರು ತುಂಬಿಸದೆ ನಿರ್ಲಕ್ಷ್ಯ ವಹಿಸಲಾಗಿದೆ. ಶಾಸಕ ಎಚ್.ನಾಗೇಶ್, ತಾಲೂಕಿನ ನೀರಾವರಿ ಯೋಜನೆಗಳ ಬಗ್ಗೆ ಅವರು ಗಮನಹರಿಸುತ್ತಿಲ್ಲ ಎಂದು ಮುಖಂಡ ನಂಗಲಿ ಕಿಶೋರ್ ಆರೋಪಿಸಿದರು.

    ಇದಕ್ಕೂ ಮುನ್ನ ಸಿಪಿಐ ಎನ್.ಗೋಪಾಲ್‌ನಾಯಕ್, ನಂಗಲಿ ಪಿಎಸ್‌ಐ ವಿ.ವರಲಕ್ಷ್ಮಮ್ಮ ಮತ್ತು ಸಿಬ್ಬಂದಿ, ರೈತರ ಪಾದಯಾತ್ರೆಯನ್ನು ನಂಗಲಿಯಲ್ಲಿಯೇ ತಡೆದು ಸರ್ಕಾರಕ್ಕೆ ಇಲ್ಲಿಯೇ ಮನವಿ ಸಲ್ಲಿಸುವಂತೆ ಮನವೊಲಿಸಿದ ಸಂದರ್ಭದಲ್ಲಿ ಪೊಲೀಸರು ಮತ್ತು ಮುಖಂಡರ ನಡುವೆ ವಾತಿನ ಚಕಮಕಿ ನಡೆಯಿತು.

    ಪ್ರತಿಭಟನೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಕೆ.ಎನ್.ರಾಜಶೇಖರ್ ಹೋರಾಟಗಾರರಿಂದ ಮನವಿ ಪತ್ರ ಪಡೆದು, ರೈತರ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

    ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್‌ಪಾಲ್, ತಾಲೂಕು ಅಧ್ಯಕ್ಷ ಫಾರೂಖ್ಪಾಷ, ಹಸಿರುಸೇನೆ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಮುಖಂಡರಾದ ನಂಗಲಿ ನಾಗೇಶ್, ಪದ್ಮಟ್ಟ ಧರ್ಮ, ಶಿವಾರೆಡ್ಡಿ, ಹೆಬ್ಬಣಿ ಅನಂದ್‌ರೆಡ್ಡಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts