More

    ಬಾಗಲವಾಡ ಶಾಲೆ ಜಾಗ ಸರ್ವೇ, ಎರಡು ಎಕರೆ ಪೈಕಿ ಉಳಿದಿರುವುದು 1.11 ಗುಂಟೆ

    ಕವಿತಾಳ: ಸಮೀಪದ ಬಾಗಲವಾಡ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಾಗವನ್ನು ತಾಲೂಕು ಸರ್ವೇ ಅಧಿಕಾರಿ ವಿಶ್ವನಾಥ ನೇತೃತ್ವದಲ್ಲಿ ಬುಧವಾರ ಸರ್ವೇ ನಡೆಸಲಾಯಿತು.

    ಶಾಲೆಗೆ ಸೇರಿದ ಜಾಗವನ್ನು ಕೆಲ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆಂದು ಆರೋಪಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಬಾಗಲವಾಡ ಘಟಕ ಸೆ.26ರಂದು ಬೆಂಗಳೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ದೂರು ನೀಡಿತ್ತು. ಈ ದೂರನ್ನು ಆಧರಿಸಿ, ಸರ್ವೇ ಮಾಡಿಸುವಂತೆ ಮಾನ್ವಿ ಬಿಇಒ ಕಚೇರಿಗೆ ಸರ್ಕಾರ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಗ್ರಾಮಕ್ಕೆ ಆಗಮಿಸಿದ ಸರ್ವೇ ಇಲಾಖೆ ಅಧಿಕಾರಿಗಳ ತಂಡ ಸರ್ವೇ ನಡೆಸಿತು.

    ಅಧಿಕಾರಿ ವಿಶ್ವನಾಥ ಮಾತನಾಡಿ, ಶಾಲೆಗೆ ಸೇರಿದ ಒಟ್ಟು ಎರಡು ಎಕರೆಯಲ್ಲಿ 1 ಎಕರೆ 11 ಗುಂಟೆ ಮಾತ್ರ ಉಳಿದಿದೆ. ಇದರ ಬಗ್ಗೆ ತಹಸೀಲ್ದಾರ್‌ಗೆ ವರದಿ ಸಲ್ಲಿಸಲಾಗುವುದು ಎಂದರು.

    ಕಂದಾಯ ನಿರೀಕ್ಷಕ ಉಮಾಪತಿ, ಗ್ರಾಮ ಆಡಳಿತಾಧಿಕಾರಿ ಯೂಸೂಫ್, ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ, ಎಸ್ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಪ್ರಮುಖರಾದ ಗಂಗಾಧರ, ಮೌನೇಶ ಕೋರಿ, ನಾಗರಾಜ ಹಿಂದಿಮನೆ, ಜಗದೀಶ ಸಾಸಲಮರಿ ಇದ್ದರು.

    ಬಾಗಲವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಾಗಿ ವ್ಯಕ್ತಿಯೊಬ್ಬರು 2 ಎಕರೆ ಜಾಗವನ್ನು 25 ವರ್ಷಗಳ ಹಿಂದೆ ದಾನವಾಗಿ ನೀಡಿದ್ದರು. ಇವರ ಸಂಬಂಧಿಗಳು 30 ಗುಂಟೆಯಷ್ಟು ಜಾಗ ಕಬಳಿಸಿದ್ದಾರೆ. ಈಗ ನೂತನ ಶಾಲಾ ಕಟ್ಟಡಕ್ಕೆ ಜಾಗದ ಸಮಸ್ಯೆಯಾಗಿದೆ. ಒತ್ತುವರಿ ತೆರವಿಗೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರದ ಆದೇಶದಂತೆ ಸರ್ವೇ ಆಗಿದೆ.
    | ನಾಗರಾಜ ಹಿಂದಿನಮನೆ, ದಲಿತ ಸಂಘಟನೆಯ ಸದಸ್ಯ, ಬಾಗಲವಾಡ.

    ಸರ್ಕಾರದ ಆದೇಶದಂತೆ ಬಾಗಲವಾಡ ಸರ್ಕಾರಿ ಶಾಲೆಯ ಜಾಗವನ್ನು ಸರ್ವೇ ಮಾಡಲಾಗಿದೆ. ಶಾಲೆಯ ಜಾಗ ಒಟ್ಟು ಎರಡು ಎಕರೆ ಎಂದು ದಾಖಲಾತಿಯಲ್ಲಿದೆ. ಆದರೆ ಸರ್ವೇ ಮಾಡಿದಾಗ ಒಂದು ಎಕರೆ 11 ಗುಂಟೆಯಿದ್ದು, ಇದರ ಬಗ್ಗೆ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.
    | ವಿಶ್ವನಾಥ, ಸರ್ವೇ ಅಧಿಕಾರಿ, ಮಾನ್ವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts