More

  ಒಂದು ಪೊಂಗಲ್ ತಿನ್ನುವ ಸಮಯದಲ್ಲಿ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಬಹುದಿತ್ತು: ಬಿಜೆಪಿ ಹೀಗಂದಿದ್ದೇಕೆ?

  ಬೆಂಗಳೂರು: ಕರ್ನಾಟಕ-ತಮಿಳುನಾಡು ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ಕಾವೇರಿ ನದಿ ನೀರಿನ ಸಮಸ್ಯೆಯನ್ನು ಒಂದು ಪೊಂಗಲ್ ತಿನ್ನುವ ಸಮಯದಲ್ಲಿ ಬಗೆಹರಿಸಬಹುದಿತ್ತು ಎಂದು ಹೇಳುವ ಮೂಲಕ ಕಾಂಗ್ರೆಸ್​ ನಾಯಕರ ನಡೆಯನ್ನು ಬಿಜೆಪಿ ಟೀಕಿಸಿದೆ.

  ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನಲ್ಲಿ ನಡೆದ I.N.D.I.A. ಮೈತ್ರಿಕೂಟದ ಸಭೆಯಲ್ಲಿ ಒಂದೇ ಟೇಬಲ್‌ನಲ್ಲಿ ಪೊಂಗಲ್ ತಿನ್ನುವ ಸಮಯದಲ್ಲಿಯೇ, ಮನಸ್ಸು ಮಾಡಿದಿದ್ದರೆ ಕಾವೇರಿ ವಿವಾದವನ್ನು ಬಗೆಹರಿಸಿಕೊಂಡು ರಾಜ್ಯದ ಹಿತ ಕಾಪಾಡಬಹುದಿತ್ತು ಎಂದು ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಕಾಲೆಳೆದಿದೆ.

  ಆದರೆ ಪೊಂಗಲ್ ಮೀಟಿಂಗ್‌ನಲ್ಲಿ ರಾಜ್ಯದ ಹಿತ ಕಾಯುವ ಬದಲು, ರಾಜ್ಯದ ಹಿತಕ್ಕೆ ಧಕ್ಕೆ ತರುವ ನಿರ್ಧಾರಗಳನ್ನೇ ಮಾಡಿದ್ದಾರೆ. ಹೀಗಾಗಿ ತಮ್ಮ ಚಿನ್ನತಂಬಿ ಸ್ಟಾಲಿನ್ ಅವರಿಗೆ ಉಡುಗೊರೆಯಾಗಿ ರಾಜ್ಯದ ಕಾವೇರಿಯನ್ನು ಬರಿದು ಮಾಡುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ನ್ಯಾಯಾಲಯದ ಆದೇಶಕ್ಕೂ ಮೊದಲೇ ಸ್ಟಾಲಿನ್ ನಾಡಿನ ಕಡೆಗೆ ನೀರು ಹರಿಸಿದ್ದು ಯಾಕೆ ಅನ್ನುವ ಸತ್ಯ ಕನ್ನಡಿಗರೆಲ್ಲರಿಗೂ ತಿಳಿದಿದೆ ಎಂದು ಬಿಜೆಪಿ ಹೇಳಿದೆ.

  ಜಲಸಂಪನ್ಮೂಲ ಸಚಿವ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್​ ಚುನಾವಣೆಯಲ್ಲಿ ಡಿಎಂಕೆ ಪರ ತಮಿಳುನಾಡಿನಲ್ಲಿ ತನು-ಮನ-ಧನ ಅರ್ಪಿಸಿ ಅಲ್ಲಿಯೇ ಮೊಕ್ಕಾಂ ಹೂಡಿದ್ದರು. ಸ್ಟಾಲಿನ್‌ರ ಹೆಗಲ ಮೇಲೆ ಕೈ ಹಾಕಿ, ಅವರ ಕಿವಿಯಲ್ಲಿ ಪಿಸುಪಿಸು ಮಾತನಾಡುವಷ್ಟು ಸಲುಗೆ ಇರುವ ಇವರಿಬ್ಬರ ಗಾಢವಾದ ಸ್ನೇಹ-ಸಂಬಂಧ ಒಂದು ರೀತಿ ನರಕದಲ್ಲಿಯೇ ನಿಶ್ಚಯವಾದ ಮದುವೆಯಂತೆ ಎಂದು ಬಿಜೆಪಿ ಕುಟುಕಿದೆ.

  ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ದೇವರ ದಯೆಯಿಂದ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗಿತ್ತು. ಆದಾಗ್ಯೂ 2012ರಲ್ಲಿ ಕಾವೇರಿ ವಿವಾದ ತಲೆದೋರಿದ್ದಾಗ ಅಂದಿನ ರಾಜ್ಯ ಬಿಜೆಪಿ ಸರ್ಕಾರ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥವಾಗಿ ಪರಿಸ್ಥಿತಿ ನಿಭಾಯಿಸಿತ್ತು.

  ನ್ಯಾಯಾಲಯದಲ್ಲಿ ಸತತವಾಗಿ ಮೇಲ್ಮನವಿಗಳನ್ನು ಸಲ್ಲಿಸುತ್ತ ರಾಜ್ಯದ ಹಿತಾಸಕ್ತಿಯನ್ನು ಬಿಜೆಪಿ ಕಾಪಾಡಿತ್ತು. ದರ್ಪ, ಉದ್ಧಟತನ ತೋರದೆ, ಬಹಳಷ್ಟು ನೈಪುಣ್ಯತೆಯಿಂದ ‌ಸಮಸ್ಯೆ ಬಗೆಹರಿಸಿತ್ತೇ ಹೊರತು ಯಾರ ಮೇಲೆಯೂ ಗೂಬೆ ಕೂರಿಸುವಂತಹ ಚಿಲ್ಲರೆ ರಾಜಕಾರಣ ಮಾಡಲಿಲ್ಲ ಎಂದಿದೆ.

  ಆ ಸಮಯದಲ್ಲಿ ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ ಎಷ್ಟು ಬಾರಿ ಮಧ್ಯಪ್ರವೇಶಿಸಿತ್ತು ಎಂಬುದನ್ನು ಸನ್ಮಾನ್ಯ ಸಿದ್ದರಾಮಯ್ಯ ಅವರೇ ತಿಳಿಸಬೇಕು. ಕಾಂಗ್ರೆಸ್​ಗೆ ನಿಜಕ್ಕೂ ರಾಜ್ಯದ ಹಿತ ಕಾಪಾಡುವ ಮಹತ್ವಾಕಾಂಕ್ಷೆ ಇದ್ದರೆ ತಮಿಳುನಾಡು ಸರ್ಕಾರದ ಜೊತೆ ಮಾತನಾಡಿ ಕಾವೇರಿ ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳಬಹುದು. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಕರ್ನಾಟಕದ ಹಿತಾಸಕ್ತಿಗಿಂತಲೂ ಹೆಚ್ಚಾಗಿ ತಮ್ಮ ಸ್ವಾರ್ಥದ I.N.D.I.A. ಮೈತ್ರಿಕೂಟದ ಹಿತಾಸಕ್ತಿ ಮುಖ್ಯವಾಗಿದೆ. ಹೀಗಾಗಿ ರಾಜ್ಯದ ಜನತೆ ಕಣ್ಣೀರು ಹಾಕಿದರೂ ಸರಿಯೇ, ಸ್ಟಾಲಿನ್ ಅವರು ಮಾತ್ರ ಸದಾ ಸಂತಸದಲ್ಲಿರಬೇಕು ಎಂಬ ಕಾರಣಕ್ಕೆ ಕಾವೇರಿ ನೀರನ್ನು ಮನಸ್ಸಿಗೆ ಬಂದಂತೆ ಸ್ಟಾಲಿನ್‌ ನಾಡಿಗೆ ಹರಿಬಿಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

  ಕಾವೇರಿ ವಿವಾದ ಇಂದು ನಿನ್ನೆಯದಲ್ಲ, ದಶಕಗಳಿಂದ ಜೀವಂತವಿದೆ. ವಿವಾದ ಬಗೆಹರಿಸಿ ನ್ಯಾಯ ತೀರ್ಮಾನಕ್ಕೆ ಈಗಾಗಲೇ ಹಲವಾರು ನ್ಯಾಯಾಧೀಕರಣ ಮಂಡಳಿಗಳು ಹಾಗೂ ಪ್ರಾಧಿಕಾರಗಳು ರಚನೆಯಾಗಿವೆ. ಈ ಪ್ರಾಧಿಕಾರಗಳೆಲ್ಲವೂ ರಚನೆಯಾಗಿದ್ದು ಕೇಂದ್ರ ಅಥವಾ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೆಯೇ. ಮನಸ್ಸು ಮಾಡಿದರೆ ಎರಡೂ ರಾಜ್ಯಗಳು ಎದುರು ಬದುರು ಕೂತು, ತಮ್ಮ ರಾಜ್ಯಗಳ ವಾಸ್ತವ ಪರಿಸ್ಥಿತಿಯ ಅಂಕಿ-ಅಂಶಗಳನ್ನು ಮುಂದಿಟ್ಟು ಕಾವೇರಿ ಸಮಸ್ಯೆ ಬಗೆಹರಿಸಬಹುದು ಎಂದು ಬಿಜೆಪಿ ಹೇಳಿದೆ.

  ಮಕ್ಕಳನ್ನು ಹೊಂದುವುದೆಂದರೆ ಜಗತ್ತನ್ನು ಉಳಿಸಿದಂತೆ: ಎಲಾನ್ ಮಸ್ಕ್

  ಕಾವೇರಿ ನದಿ ನೀರು ವಿವಾದ: ಪ್ರಧಾನಿ ಮಧ್ಯಸ್ಥಿಕೆ ವಹಿಸಲಿ ಎಂದ ಸಿಎಂ ಸಿದ್ದರಾಮಯ್ಯ

  ರಾಜ್ಯೋತ್ಸವ ರಸಪ್ರಶ್ನೆ - 23

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts