More

    ಕೈಕೊಟ್ಟ ಕಾವೇರಿ ತಂತ್ರಾಂಶ: ಆಸ್ತಿ ನೋಂದಣಿಗೆ ಸರ್ವರ್ ಸಮಸ್ಯೆ

    | ಬೇಲೂರು ಹರೀಶ
    ಬೆಂಗಳೂರು: ಆಸ್ತಿ ನೋಂದಣಿ ಪ್ರಕ್ರಿಯೆ ಸರಳೀಕರಣ ಹಾಗೂ ತ್ವರಿತಗೊಳಿಸುವ ಉದ್ದೇಶದಿಂದ ಇತ್ತೀಚೆಗೆ ಮೇಲ್ದರ್ಜೆಗೇರಿಸಿರುವ ತಂತ್ರಾಂಶದ ಕಾರಣದಿಂದಲೇ ಜನರು ಭಾರಿ ತೊಂದರೆ ಎದುರಿಸುವಂತಾಗಿದೆ. ‘ಕಾವೇರಿ ತಂತ್ರಾಂಶ’ ಮೇಲ್ದರ್ಜೆಗೇರಿಸಿ ಹೊಸದಾಗಿ 6.8 ಅಪ್ಲಿಕೇಷನ್ (ಪ್ಯಾಚ್) ಅಳವಡಿಸಿರುವ ಕಾರಣ ಸರ್ವರ್ ಸಮಸ್ಯೆಯಾಗಿ, ಆಸ್ತಿ ನೋಂದಣಿ ಪ್ರಕ್ರಿಯೆ ವಿಳಂಬವಾಗುತ್ತಿದೆ.

    ರಾಜ್ಯದ 252 ಉಪ ನೋಂದಣಿ ಕಚೇರಿಗಳಲ್ಲೂ ಈ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಸ್ಥಿರಾಸ್ತಿ, ಕರಾರುಪತ್ರ, ಸಾಲ ತೀರುವಳಿ, ಋಣಬಾಧ್ಯತಾ ಪತ್ರ, ಸಾಗುವಳಿ ಜಮೀನು ಒಪ್ಪಂದ ನೋಂದಣಿ ಮಾಡಿಸಲು ಸಾರ್ವಜನಿಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ವಣವಾಗಿದೆ.

    ರಾಜ್ಯ ಸರ್ಕಾರಕ್ಕೆ ಹೆಚ್ಚು ಆದಾಯ ತಂದುಕೊಡುವ ಪ್ರಮುಖ ಇಲಾಖೆಗಳಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯೂ ಒಂದು. ಈಗ ತಾಂತ್ರಿಕ ದೋಷದಿಂದಾಗಿ ಕೋಟ್ಯಂತರ ರೂಪಾಯಿ ಆದಾಯ ಖೋತಾ ಆಗುತ್ತಿದೆ. ಜತೆಗೆ ಹಳೇ ಕಂಪ್ಯೂಟರ್​ಗಳು, ತಜ್ಞರ ಕೊರತೆ ಮುಂತಾದ ಸಮಸ್ಯೆಗಳು ಇಲಾಖೆಯನ್ನು ಕಾಡುತ್ತಿವೆ. ಕಚೇರಿಗಳಲ್ಲಿರುವ ಕಂಪ್ಯೂಟರ್​ಗಳು ಹಳೆಯದಾಗಿದ್ದರಿಂದ ಹೊಸ ತಂತ್ರಾಂಶ ಮೂಲಕ ಕಾರ್ಯನಿರ್ವಹಿಸಲು ಆಗುತ್ತಿಲ್ಲ. 2015ರಲ್ಲಿ ಅಳವಡಿಸಿದ್ದ ಕಂಪ್ಯೂಟರ್​ಗಳು ಇಂದಿಗೂ ಇದ್ದು, ಅವು ಬಹುತೇಕ ರಿಪೇರಿಗೆ ಬಂದಿವೆ. ಸಾಫ್ಟ್​ವೇರ್ ಅಪ್​ಡೇಟ್ ಆಗದ ಕಾರಣ ಅವುಗಳಲ್ಲಿ ಕೆಲಸ ನಿರ್ವಹಿಸುವುದು ಕಷ್ಟವಾಗಿದೆ.

    ಕೆಟ್ಟು ನಿಲ್ಲುವ ಯಂತ್ರ ಬಹುತೇಕ ಕಚೇರಿಗಳಲ್ಲಿ ಉಬ್ಬಚ್ಚು (ಸೀಲ್ ಹಾಕುವ) ಯಂತ್ರಗಳು ಪದೇಪದೆ ಕೈಕೊಡುತ್ತವೆ. ಕೆಲ ಕಡೆ ಅಳವಡಿಸಿರುವ ಯಂತ್ರಗಳು 13 ವರ್ಷಗಳಷ್ಟು ಹಳೆಯದಾಗಿವೆ. ಮಾರುಕಟ್ಟೆಯಲ್ಲಿ ಯಂತ್ರದ ಬಿಡಿಭಾಗಗಳು ಸಿಗದ ನ್ನೆಲೆಯಲ್ಲಿ ನಿರ್ವಹಣೆ ಇಲ್ಲದೆ ದುಸ್ಥಿತಿ ಹಂತಕ್ಕೆ ತಲುಪಿವೆ. ಕರಾರು, ಬಾಡಿಗೆ ಒಪ್ಪಂದ, ಎಲ್​ಐಸಿ ಬಾಂಡ್​ಗಳು, ಅಫಿಡವಿಟ್ ಮತ್ತಿತರ ವ್ಯವಹಾರಕ್ಕೆ ಜನರು ಕಡ್ಡಾಯವಾಗಿ ಸ್ಟಾಂಪ್ ಹಾಕಿಸುತ್ತಾರೆ. ಪ್ರತಿ ಪುಟಕ್ಕೆ 50 ರೂ.ನಿಂದ ಗರಿಷ್ಠ 500 ರೂ.ವರೆಗೆ ಸ್ಟಾಂಪ್​ಗಳನ್ನು ಹಾಕಲಾಗುತ್ತದೆ. ಒಪ್ಪಂದ ಪತ್ರಗಳಿಗೆ ಮತ್ತು ಬಾಂಡ್​ಗಳಿಗೆ ತಲಾ 200 ರೂ. ಹಾಗೂ ಅಫಿಡವಿಟ್​ಗಳಿಗೆ 20 ರೂ.ಗೆ ಸ್ಟಾಂಪ್ ಮಾಡಿಕೊಡಲಾಗುತ್ತದೆ. ಆದರೆ, ಉಬ್ಬಚ್ಚು ಯಂತ್ರಗಳ ಸಮಸ್ಯೆಯಿಂದ ತೊಂದರೆಯಾಗಿದೆ.

    ಕಾಗದ, ಟೋನರ್, ಸಿಡಿ ಇಲ್ಲ ಸರ್ವರ್​ಗೆ ಅಪ್​ಲೋಡ್ ಮಾಡಲು ಪ್ರತಿ ಪುಟಕ್ಕೆ 35 ರೂ. ಶುಲ್ಕ ವಿಧಿಸಲಾಗುತ್ತದೆ. ಒಂದು ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಪ್ರತಿದಿನ ಅಂದಾಜು 10 ಲಕ್ಷ ರೂ. ಆದಾಯ ಸರ್ಕಾರಕ್ಕೆ ಬರುತ್ತದೆ. ಆದರೆ ಇಲ್ಲಿ ಜನರಿಗೆ ಗುಣಮಟ್ಟದ ಸರ್ಟಿಫೈಡ್ ಕಾಪಿ ಕೊಡಲು ಕಾಗದ, ಪ್ರಿಂಟರ್, ಟೋನರ್​ಗಳೇ ಇಲ್ಲದಂತಾಗಿದೆ. ನೋಂದಣಿಗೆ ವ್ಯಕ್ತಿಗಳ ಹೆಬ್ಬೆಟ್ಟು ಮತ್ತು ಫೋಟೋ ತೆಗೆದು ಕರಾರು ಪತ್ರದ ಹಿಂಬದಿ ಮುದ್ರಿಸಿ ಸರ್ವರ್​ನಲ್ಲಿ ಸಂಗ್ರಹಿಸಲಾಗುತ್ತದೆ. ಇದಕ್ಕಾಗಿ 25 ಸಿಡಿಗಳು ಬೇಕು. ಆದರೆ, 4 ಸಿಡಿಗಳನ್ನು ಮಾತ್ರ ಇಲಾಖೆ ನೀಡುತ್ತಿದೆ. ಹೀಗಾಗಿ ಅಧಿಕಾರಿಗಳು ಕಡಿಮೆ ಬೆಲೆ ಸಿಡಿಯಲ್ಲಿ ದತ್ತಾಂಶ ಸಂಗ್ರಹಿಸಿ ಇಡುತ್ತಿದ್ದಾರೆ. ಸರ್ಟಿಫೈಡ್ ಕಾಪಿ ವಿತರಿಸಿದಾಗ ಹೆಬ್ಬೆಟ್ಟಿನ ಗೆರೆ ಮತ್ತು ಫೋಟೋಗಳು ಸರಿಯಾಗಿ ಕಾಣುವುದಿಲ್ಲ. ಸಿಡಿಗಳ ಸಂಗ್ರಹಕ್ಕೂ ಸರಿಯಾದ ವ್ಯವಸ್ಥೆ ಮಾಡಿಲ್ಲ.

    ಕಚೇರಿಗಳ ಕಡೆಗಣನೆ ಉಪ ನೋಂದಣಿ ಕಚೇರಿಗೆ ಬೇಕಾದ ಕಂಪ್ಯೂಟರ್, ವಿದ್ಯುತ್, ಇಂಟರ್​ನೆಟ್, ಜನರೇಟರ್, ಯುಪಿಎಸ್, ಕಾಗದ, ಟೋನರ್, ಪ್ರಿಂಟರ್ ಮತ್ತು ಸಿಬ್ಬಂದಿ ಪೂರೈಸುವ ಗುತ್ತಿಗೆ ಕಂಪನಿಗಳ ಕಾರ್ಯವೈಖರಿಯನ್ನು ಆಯಾ ಸಬ್ ರಿಜಿಸ್ಟ್ರಾರ್ ವರದಿ ಮೇಲೆ ನಿರ್ಧರಿಸಲಾಗುತ್ತಿತ್ತು. ಇದರಿಂದ ಗುಣಮಟ್ಟದ ಕೆಲಸ ಸಹ ಸಿಗುತ್ತಿತ್ತು. ಇದೀಗ ಪ್ರಧಾನ ಕಚೇರಿ ಅಧಿಕಾರಿಗಳೇ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾರಣ ಗುತ್ತಿಗೆ ಕಂಪನಿಗಳು ಸಹ ಸಬ್​ರಿಜಿಸ್ಟ್ರಾರ್ ಕಚೇರಿಗಳ ಕಡೆ ಮುಖಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿವೆ.

    ಒಟಿಪಿ ಪದ್ಧತಿ ಬದಲಾಗಬೇಕು ಕಾವೇರಿ ವೆಬ್​ಸೈಟ್ ತಿರುಚಿದ ಮತ್ತು ತೆರಿಗೆ ವಂಚನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕಾವೇರಿ ತಂತ್ರಾಂಶ 6.8 ಅನ್ನು ಮೇಲ್ದರ್ಜೆಗೇರಿಸಲಾಗಿದೆ. ಆಸ್ತಿ ನೋಂದಣಿ ವೇಳೆ ಆಧಾರ್ ಹಾಗೂ ಮೊಬೈಲ್ ನಂಬರ್ ಕಡ್ಡಾಯ ಮಾಡಲಾಗಿದೆ. ಪ್ರತ್ಯೇಕವಾಗಿ ಮೊಬೈಲ್ ನಂಬರ್ ನಮೂದಿಸಿ ಅದಕ್ಕೆ ಬರುವ ಒಟಿಪಿ ಪಡೆದು ನೋಂದಣಿ ಮಾಡುವುದು ಅನಗತ್ಯ. ಆಧಾರ್​ನಲ್ಲಿರುವ ಮೊಬೈಲ್​ಗೆ ಒಟಿಪಿ ಹೋದರಷ್ಟೇ ಅಕ್ರಮ ತಡೆಯಲು ಸಾಧ್ಯ ಎಂಬ ಎಂಬ ಅಭಿಪ್ರಾಯ ಕೇಳಿಬಂದಿದೆ. ಒಂದು ಒಟಿಪಿ ಪಡೆಯಲು 30 ನಿಮಿಷವಾದರೂ ಬೇಕು. ಕೆಲವೊಮ್ಮೆ ಒಟಿಪಿ ಜನರೇಟ್ ಆಗಲು ಇನ್ನೂ ವಿಳಂಬವಾಗುತ್ತಿದೆ.

    ತಜ್ಞರ ಕೊರತೆ ಸರ್ವರ್ ಸಮಸ್ಯೆ ಬಗೆಹರಿಸಲು ತಜ್ಞರ ಕೊರತೆ ಇದೆ. ಸಾಫ್ಟ್​ವೇರ್​ಗಳನ್ನು ಬೆಂಗಳೂರಿನಲ್ಲಿ ಮಾತ್ರ ದುರಸ್ತಿ ಮಾಡಲಾಗುತ್ತಿದೆ. ವಿಭಾಗಮಟ್ಟದಲ್ಲಿ ಈ ಸೌಲಭ್ಯವಿಲ್ಲ. ಪ್ರತಿ ಜಿಲ್ಲೆಗೆ ಒಬ್ಬರಂತೆ ತಜ್ಞ ಇಂಜಿನಿಯರ್​ಗಳನ್ನು ನೇಮಿಸಿದರೆ ಇಂತಹ ಸಮಸ್ಯೆಗಳನ್ನು ಬಗೆಹರಿಸಬಹುದು ಎನ್ನುತ್ತಾರೆ ಸಬ್ ರಿಜಿಸ್ಟ್ರಾರ್​ಗಳು.

    ಆದಾಯ ಖೋತಾ ಕಳೆದ ವರ್ಷ ನೀಡಲಾಗಿದ್ದ 11,828 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ತಲುಪಲು ಇಲಾಖೆಗೆ ಸಾಧ್ಯವಾಗಿರಲಿಲ್ಲ. 2020-21ನೇ ಸಾಲಿನಲ್ಲಿ 12,655 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ. ಆದರೆ ಕರೊನಾದಿಂದ ಈಗಾಗಲೇ ನೂರಾರು ಕೋಟಿ ರೂ. ಆದಾಯ ಖೋತಾ ಆಗಿದೆ. ಅಲ್ಲದೆ, ಕಾವೇರಿ ತಂತ್ರಾಂಶದಲ್ಲಿ ಕಾಣಿಸಿಕೊಂಡಿರುವ ತಾಂತ್ರಿಕ ಸಮಸ್ಯೆಯಿಂದ ಮತ್ತಷ್ಟು ಆದಾಯ ಖೋತಾ ಆಗುತ್ತಿದೆ.

    ಸಂಯೋಜನೆ ಕಾನೂನುಬಾಹಿರ ಮನು ಹಾಗೂ ಕರ್ನಾಟಕ ಸರ್ಕಾರ ನಡುವಿನ ಪ್ರಕರಣದಲ್ಲಿ, ಕಾವೇರಿ ತಂತ್ರಾಂಶ ಹಾಗೂ ಇ-ಸ್ವತ್ತು ತಂತ್ರಾಂಶದ ಸಂಯೋಜನೆ ಕಾನೂನುಬಾಹಿರ ಎಂದು ಹೈಕೋರ್ಟ್ ಹೇಳಿದೆ. ಅಲ್ಲದೆ, ನೋಂದಣಿ ಕಾಯ್ದೆಯಡಿ 6.8ವರೆಗೆ ಇರುವ ಪ್ಯಾಚ್​ಗಳಿಗೆ ಅವಕಾಶ ನೀಡುವಂತಿಲ್ಲ ಎನ್ನುತ್ತಾರೆ ಸಬ್​ರಿಜಿಸ್ಟ್ರಾರ್​ಗಳು.

    ಗ್ರೇಟ್​ ಎಸ್ಕೇಪ್​: ಭೀಕರ ಅಪಘಾತದ ದೃಶ್ಯ ವೈರಲ್ ಆಯಿತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts