More

    ದುಸ್ಥಿತಿಯಲ್ಲಿ ಕಟ್ಟೆಮಳಲವಾಡಿ ಅಣೆಕಟ್ಟೆ ನಾಲೆ

    ಶಿವು ಹುಣಸೂರು
    ತಾಲೂಕಿನ ಕಟ್ಟೆಮಳಲವಾಡಿ ಅಣೆಕಟ್ಟೆಯ ನಾಲೆ ಸಂಪೂರ್ಣ ದುಸ್ಥಿತಿಯಲ್ಲಿದ್ದು, ಅಧಿಕಾರಿಗಳ ನಿರ್ಲಕ್ಷೃದಿಂದ ರೈತರು ಬವಣೆಪಡುವಂತಾಗಿದೆ.

    ತಾಲೂಕಿನಲ್ಲಿ ಈ ಬಾರಿ ಭೀಕರ ಬರಗಾಲ ಎದುರಾಗಿದ್ದು, ನಾಲೆಗಳಲ್ಲಿ ನೀರು ಕಾಣುವುದೇ ಅಪರೂಪ ಎನ್ನುವಂತಾಗಿದೆ. ಆರಂಭಿಕ ಹಂತದಲ್ಲಿ ಸುರಿದ ಮಳೆ ನೀರು ಕೆಆರ್‌ಎಸ್ ಒಡಲನ್ನು ಸೇರಿದೆ. ನಂತರ ಮಳೆ ಬಾರದೆ ಬರಗಾಲ ಎದುರಾಗಿದ್ದು, ರೈತರು ಕಂಗಲಾಗಿದ್ದಾರೆ.

    ಈ ನಡುವೆ, 700 ವರ್ಷಗಳ ಹಿಂದೆ ಮೈಸೂರು ಮಹಾರಾಜರು ನಿರ್ಮಿಸಿದ ಕಟ್ಟೆಮಳಲವಾಡಿ ಅಣೆಕಟ್ಟು ಮತ್ತು ಕಾಲುವೆ ದುಸ್ಥಿತಿ ತಲುಪಿವೆ. ನಾಲೆಗಳ ಅಭಿವೃದ್ಧಿ ಕೈಗೊಳ್ಳಬೇಕಾದ ಕಾವೇರಿ ನೀರಾವರಿ ನಿಗಮದ ಹಾರಂಗಿ ನಾಲಾ ವ್ಯಾಪ್ತಿಯ ಹುಣಸೂರು ವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯವೇ ರೈತರನ್ನು ಬಾಣಲೆಯಿಂದ ಬೆಂಕಿಗೆ ಹಾಕಿದೆ.

    ಹೂಳು ತುಂಬಿದೆ..ಗಿಡಗಂಟಿಗಳು ಬೆಳೆದಿವೆ: ಕಟ್ಟೆಮಳಲವಾಡಿ ನಾಲೆ ಸುಮಾರು 10 ಕಿ.ಮೀ. ವ್ಯಾಪ್ತಿಯ ಕಿರಿಸೊಡ್ಲು, ಅಗ್ರಹಾರ, ಗಾವಡಗೆರೆ, ವಡಕೆಕಟ್ಟೆ, ತೊಂಡಾಳು, ಕಟ್ಟೆಮಳಲವಾಡಿ ಕೊಪ್ಪಲು, ರಾಮಪಟ್ಟಣ, ಮರದೂರು ಮತ್ತು ಸುತ್ತಮುತ್ತಲ ಗ್ರಾಮಗಳ ಸುಮಾರು 1500 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ. ಆದರೆ ಕಾಲುವೆಯಲ್ಲಿ ಆಳೆತ್ತರದ ಗಿಡಗಂಟಿಗಳು ಬೆಳೆದಿರುವುದರಿಂದ ನೀರು ಸರಾಗವಾಗಿ ಹರಿಯದೆ ರೈತರು ಬವಣೆ ಪಡುವಂತಾಗಿದೆ. ಇದೀಗ ಈ ಭಾಗದಲ್ಲಿ ಭತ್ತ ನಾಟಿ ಮಾಡಲಾಗಿದ್ದು, ಗದ್ದೆಗಳಿಗೆ ನೀರು ಇಲ್ಲದೆ ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಕನಿಷ್ಠ ಹೂಳನ್ನೂ ತೆಗೆಯದ ಇಲಾಖೆ: ನಾಲೆ ಅಭಿವೃದ್ಧಿಗಾಗಿ 5 ವರ್ಷಗಳ ಹಿಂದೆ 35 ಕೋಟಿ ರೂ.ಗಳ ವಿಸ್ತೃತ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಹಾರಂಗಿ ವಿಭಾಗದ ಅಧಿಕಾರಿಗಳು ತಿಳಿಸುತ್ತಾರೆ. ಆದರೆ ಅದು ಇನ್ನೂ ಸರ್ಕಾರದ ಮಟ್ಟದಲ್ಲೇ ಇದೆ. ಇದೀಗ ಸರ್ಕಾರ ಗ್ಯಾರಂಟಿಗಳನ್ನು ನೀಡುವ ಭರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗೂ ಹಣ ನೀಡುವುದಿಲ್ಲವೆಂದು ಖಡಕ್ ಆಗಿ ತಿಳಿಸಿದೆ. ಟೆಂಡರ್ ಆದ ಕಾಮಗಾರಿಗಳಿಗೂ ಹಣ ಬಿಡುಗಡೆಯಾಗದ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ಹಾರಂಗಿ ವಿಭಾಗದ ಅಧಿಕಾರಿಗಳು ನಾಲೆಯ ತಾತ್ಕಾಲಿಕ ದುರಸ್ತಿ ಹಾಗೂ ಗಿಡಗಂಟಿಗಳ ತೆರವಿನಂತಹ ನಿರ್ವಹಣಾ ಕಾಮಗಾರಿಗಳನ್ನೂ ಕೈಗೊಳ್ಳದೆ ಕುಳಿತಿರುವುದು ಆಶ್ಚರ್ಯ ಮೂಡಿಸುತ್ತದೆ. ಮಾತೆತ್ತಿದರೆ 35 ಕೋಟಿ ರೂ.ಗಳ ಯೋಜನೆಗೆ ಸರ್ಕಾರದಿಂದ ಅನುಮೋದನೆ ದೊರೆತ ನಂತರ ಸಂಪೂರ್ಣ ಅಭಿವೃದ್ಧಿ ಎನ್ನುತ್ತಾರೆ. ಅಲ್ಲಿಯವರೆಗೂ ನಾಲೆಯಲ್ಲಿ ನೀರು ಹರಿಯಬಾರದೇ? ಏನೂ ಬೆಳೆಯಬಾರದೇ ಎನ್ನುವುದು ಈ ಭಾಗದ ರೈತರಾದ ಮಹೇಂದ್ರ, ಶಿವಣ್ಣ, ಮೊಗಣ್ಣೇಗೌಡ ಮುಂತಾದವರ ಪ್ರಶ್ನೆಯಾಗಿದೆ.

    ಅಣೆಕಟ್ಟೆಯದ್ದೇ ಮತ್ತೊಂದು ದುರಂತ: ಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಈ ಅಣೆಕಟ್ಟೆ ಅಭಿವೃದ್ಧಿಗಾಗಿ 2016-17ನೇ ಸಾಲಿನಲ್ಲಿ ಕಾವೇರಿ ನೀರಾವರಿ ನಿಗಮ, ಹಾರಂಗಿ ಇಲಾಖೆಗೆ 2 ಕೋಟಿ ರೂ. ಮಂಜೂರಾಗಿತ್ತು. ಅಣೆಕಟ್ಟೆಯ ಕಾಮಗಾರಿಗಾಗಿ ಟೆಂಡರ್ ಆಗಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಬಿಲ್ ತೆಗೆದುಕೊಂಡಿರುತ್ತಾರೆ. ಆದರೆ ಸದರಿ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ರೈತರು ಆರೋಪಿಸುತ್ತಾರೆ. ಕಳೆದ ಎರಡು ವರ್ಷಗಳಿಂದ ಬಿದ್ದ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಅಣೆಕಟ್ಟೆಯ ರಕ್ಷಣೆಗಾಗಿ ಅಳವಡಿಸಿದ್ದ ದೊಡ್ಡ ಬಂಡೆಗಳು ಕೊಚ್ಚಿಹೋಗಿವೆ. ಇವುಗಳ ಮೇಲೆ ಹಾಕಿದ್ದ ರಕ್ಷಣಾಗೋಡೆ ಕಾಂಕ್ರೀಟ್ ಸಹಿತ ಕಿತ್ತು ಹೋಗಿದೆ ಎಂದು ಗಾವಡಗೆರೆ ಗ್ರಾಮದ ರೈತರಾದ ಸಿದ್ದಪ್ಪನಾಯಕ, ಚೆಲುವಯ್ಯ, ಕೃಷ್ಣಯ್ಯ, ಕಿರುಸೊಡ್ಲು ಗ್ರಾಮದ ಸ್ವಾಮಿಗೌಡ, ದೇವೇಗೌಡ, ಶಂಕರೇಗೌಡ ಮುಂತಾದವರು ಆರೋಪಿಸುತ್ತಾರೆ.

    ಹೂಳು ತೆರವು ನಡೆದಿದೆ
    ನಾಲೆಯ ಅಭಿವೃದ್ಧಿಗಾಗಿ ಸಲ್ಲಿಸಿರುವ ಡಿಪಿಆರ್ ಸರ್ಕಾರದಿಂದ ಇನ್ನೂ ಅನುಮೋದನೆಗೊಂಡಿಲ್ಲ. ನಾಲೆಗಳಿಗೆ ನೀರು ಹರಿಸುವ ಉದ್ದೇಶದಿಂದ ಹೂಳು ತೆಗೆಸುವುದು ಮತ್ತು ಗಿಡಗಂಟಿಗಳ ತೆರವು ಕಾರ್ಯವನ್ನು ಸವಡಿಗಳ ಮೂಲಕ ಮಾಡಿಸಲಾಗುತ್ತಿದ್ದು, ಈಗಾಗಲೇ 8 ಕಿ.ಮೀ.ವ್ಯಾಪ್ತಿಯಲ್ಲಿ ಹೂಳು ತೆರೆಯಲಾಗಿದೆ.
    ಸುರೇಶ್, ಎಇಇ, ಹಾರಂಗಿ ನಾಲೆ, ಹುಣಸೂರು ವಿಭಾಗ

    ಹೋರಾಟ ಅನಿವಾರ್ಯ
    ಹಾರಂಗಿ ಕಚೇರಿಯ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಪ್ರತಿವರ್ಷ ರೈತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡುತ್ತಿದೆ. ನಾಲೆಯ ನಿರ್ವಹಣೆಗೆ ಸರ್ಕಾರದ ಅನುದಾನದ ನಿರೀಕ್ಷೆ ಮಾಡುತ್ತಿದ್ದಾರೆ. ಇನ್ನೊಂದು ವಾರದಲ್ಲಿ ನಾಲೆ ಸಂಪೂರ್ಣ ಸ್ವಚ್ಛವಾಗಬೇಕು. ಇಲ್ಲವಾದಲ್ಲಿ ಹಾರಂಗಿ ವಿಭಾಗದ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು.
    ಸತ್ಯಪ್ಪ, ಅಧ್ಯಕ್ಷ, ಸತ್ಯ ಎಂಎಎಸ್ ಫೌಂಡೇಷನ್, ಹುಣಸೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts