More

    ಕಥೆಕೂಟ ಸಮಾವೇಶ: 2 ದಿನ ನಡೆಯಲಿದೆ ಸಣ್ಣಕಥೆಗಳ ಗುಂಪಿನ ಐದನೇ ಸಮ್ಮಿಲನ

    ಬೆಂಗಳೂರು: ಕನ್ನಡ ಸಣ್ಣಕತೆಗಳಿಗಾಗಿ ಮೀಸಲಾದ ಕನ್ನಡ ಕಥೆಗಾರರ ವಾಟ್ಸ್ಯಾಪ್ ಬಳಗ ‘ಕಥೆಕೂಟ’ ಐದನೇ ವಾರ್ಷಿಕ ಸಮಾವೇಶ ಆಚರಿಸಿಕೊಳ್ಳುತ್ತಿದೆ. ಶಿಗ್ಗಾಂವಿಯ ಉತ್ಸವ ರಾಕ್ ಗಾರ್ಡನ್​ನಲ್ಲಿ ಸಮಾವೇಶ ಅ.28 ಹಾಗೂ ಅ.29ರಂದು ನಡೆಯಲಿದೆ.

    ಕಥೆಕೂಟಕ್ಕೆ ಏಳು ವರ್ಷ ತುಂಬಿದ್ದು, ಆ ಹಿನ್ನೆಲೆಯಲ್ಲಿ ಈ ಸಮಾವೇಶ ನಡೆಯುತ್ತಿದೆ. ಈ ಎರಡು ದಿನಗಳಂದು ಕಥೆಕೂಟದ ಸದಸ್ಯರು ಹಾಗೂ ಆಹ್ವಾನಿತ ಅತಿಥಿ ಬರಹಗಾರರು ಸೇರಿ ಕನ್ನಡ ಸಾಹಿತ್ಯ ಲೋಕದ ವೈವಿಧ್ಯ, ನೆಲೆ- ಬೆಲೆ, ಬರಹಗಾರಿಕೆಯ ಸೂಕ್ಷ್ಮಗಳ ಬಗ್ಗೆ ಚರ್ಚಿಸಲಿದ್ದಾರೆ. ವೈವಿಧ್ಯಮಯವಾದ ಗೋಷ್ಠಿಗಳ ವಿಷಯಗಳು ಹೀಗಿವೆ:

    1) ನಾನು ಬರೆಯುವುದು ನನ್ನ ಕಥೆ
    2) ನಾನು ಬರೆಯುವುದು ಜನಪ್ರಿಯ ಕಥೆ
    3) ನಾನು ಬರೆಯುವುದು ನನ್ನ ಕಾಲದ ಕಥೆ
    4) ನಾನು ಬರೆಯುವುದು ಪರಂಪರೆಯ ಕಥೆ
    5) ನಾನು ಓದುವುದು ನನ್ನ ಕಥೆ
    6) ಕಥಾ ಸಮಯ
    8) ತೆರೆದ ಮನ

    ಅತಿಥಿಗಳಾಗಿ ಕಥೆಗಾರ ರಾಘವೇಂದ್ರ ಪಾಟೀಲ, ಕವಿ ಬಿ.ಆರ್.ಲಕ್ಷ್ಮಣ ರಾವ್, ಪ್ರಕಾಶ್ ದಾಸನೂರು, ನಿರ್ದೇಶಕ ಬಿ.ಎಸ್.ಲಿಂಗದೇವರು, ವೇದರಾಣಿ ದಾಸನೂರು, ಪ್ರಕಾಶಕ ವೀರಕಪುತ್ರ ಶ್ರೀನಿವಾಸ್, ಜಮೀಲ್ ಸಾವಣ್ಣ, ಮೋಹನ ಭಾಸ್ಕರ ಹೆಗಡೆ ಭಾಗವಹಿಸಲಿದ್ದಾರೆ. ಕತೆಕೂಟದ ಹಿರಿಯ ಕತೆಗಾರರಾದ ಜೋಗಿ, ಗೋಪಾಲಕೃಷ್ಣ ಕುಂಟಿನಿ ಮತ್ತು ಇತರ ಸದಸ್ಯರು ಇರುತ್ತಾರೆ. ಗೋಷ್ಠಿಗಳ ಜತೆಗೆ ಕಥಾ ಸಂಕಲನ ಬಿಡುಗಡೆ, ಕತೆಗಳ ಓದು, ಕಥೆಕೂಟ ವಾರ್ಷಿಕ ಪ್ರಶಸ್ತಿ ಪ್ರದಾನವೂ ಇರಲಿದೆ.

    ಏನಿದು ಕಥೆಕೂಟ?

    ಕಥೆಗಳಿಗೆ ಸೀಮಿತವಾದ ‘ಕಥೆಕೂಟ’ ಎಂಬುದೊಂದು ವಿಶಿಷ್ಟವಾದ ವಾಟ್ಸ್ಯಾಪ್ ಗ್ರೂಪ್. ವಾಟ್ಸ್ಯಾಪ್ ಗ್ರೂಪುಗಳು ಅಂದ ತಕ್ಷಣ ಬಂದಿದ್ದನ್ನು ಫಾರ್ವರ್ಡ್ ಮಾಡುವ ಅಥವಾ ಹಾಳುಹರಟೆಗಳಲ್ಲಿ ಕಾಲ ತಳ್ಳುವ ತಂತ್ರಜ್ಞಾನ ಎಂದಾಗಿರುವ ಸಂದರ್ಭದಲ್ಲಿ ಇದನ್ನು ಕತೆಗೋಸ್ಕರ ಮೀಸಲಿಟ್ಟು ಸೃಜನಶೀಲವಾಗಿ ರೂಪಿಸಿದವರು ಕತೆಗಾರ ಹಾಗೂ ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ ಹಾಗೂ ಜೋಗಿ. ಪ್ರತಿಯೊಂದು ಘಟನೆಯಲ್ಲೂ ಕತೆಯಿದೆ, ಪ್ರತಿಯೊಬ್ಬರಲ್ಲೂ ಕತೆಯಿದೆ ಎಂದು ನಂಬಿರುವ ಗೋಪಾಲಕೃಷ್ಣ ಕುಂಟಿನಿ ಜೂನ್ 25, 2016ರಂದು ಗೆಳೆಯ ಜೋಗಿಗೆ ಕರೆ ಮಾಡಿ ಇದರ ಕಲ್ಪನೆ ಬಿತ್ತಿದರು. ಹೀಗೆ ಎಲ್ಲರೊಳಗಿರುವ ಕಥೆಯನ್ನು ಹೇಳುವುದಕ್ಕೆ, ಕೇಳುವುದಕ್ಕೆ ಒಂದು ವೇದಿಕೆಯನ್ನು ಕಟ್ಟಬೇಕು ಎಂಬ ಆಶಯದಿಂದ ಕಥೆಕೂಟ ಆರಂಭವಾಯಿತು.

    ಇದನ್ನೂ ಓದಿ: ತಪ್ಪಾಯ್ತು ಅಂದ್ರೂ ಬಿಡ್ಲಿಲ್ಲ: ಬಹರೈನ್​ನಲ್ಲಿ ಸ್ಟೇಟಸ್​ ಹಾಕಿ ಕೆಲಸ ಕಳ್ಕೊಂಡ ಕರ್ನಾಟಕದ ಡಾಕ್ಟರ್!

    ಈ ಕೂಟದಲ್ಲಿ ಮೊದಲ ಬಾರಿಗೆ ಕತೆ ಬರೆದ ಅನೇಕ ಯುವ ಕತೆಗಾರರು ಇದೀಗ ಕನ್ನಡದ ಭರವಸೆಯ ಕಥೆಗಾರರಾಗಿ ಹೊರಹೊಮ್ಮಿದ್ದಾರೆ. ಅನೇಕರು ಎರಡು ಮೂರು ಸಂಕಲನ, ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಕತೆಕೂಟದ ಸದಸ್ಯರ ಕತೆಗಳ ಆಯ್ದ ಸಂಕಲನಗಳಾದ ‘ಮಳೆಯಲ್ಲಿ ನೆನೆದ ಕಥೆಗಳುʼ ಹಾಗೂ ‘ಒಲವು ತುಂಬುವುದಿಲ್ಲʼ ಪ್ರಕಟವಾಗಿವೆ. ಇದರ ಹಿಂದಿನ ಸಮಾವೇಶಗಳು ಸಕಲೇಶಪುರ, ಶರಾವತಿ ಹಿನ್ನೀರಿನ ಹಕ್ಲು, ಉಪ್ಪಿನಂಗಡಿ ಹಾಗೂ ನೆಲಮಂಗಲದ ಗುಬ್ಬಿಗೂಡು ರೆಸಾರ್ಟಿನಲ್ಲಿ ನಡೆದಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts