More

    ವೇಷದೊಳಗೊಬ್ಬ ಆಪದ್ಬಾಂಧವ; ನೊಂದ ಮಕ್ಕಳ ಆಶಾಕಿರಣ ಈ ರವಿ..

    ವರ್ಷಕ್ಕೆ ಎರಡೇ ದಿನ ವೇಷ.. ಹೀಗೆ 8 ವರ್ಷಗಳಿಂದ ವೇಷ ಹಾಕಿ ತಿರುಗಿ ಹಣ ಸಂಗ್ರಹಿಸಿ ಅನಾರೋಗ್ಯದಲ್ಲಿದ್ದ ಮಕ್ಕಳ ಚಿಕಿತ್ಸೆಗೆ ಪೂರ್ತಿಯಾಗಿ ಕೊಟ್ಟಿರುವ ಇವರು ಆ ಮಕ್ಕಳ ಪಾಲಿಗೆ ಆಪದ್ಬಾಂಧವ. ಇನ್ನೂ ಇರುವ ಅಂಥ ಇತರ ಮಕ್ಕಳ ಪಾಲಿಗೆ ಆಶಾಕಿರಣ.

    | ರವಿಕಾಂತ ಕುಂದಾಪುರ

    ‘ಉದರನಿಮಿತ್ತಂ ಬಹುಕೃತ ವೇಷಂ..’

    ಹೌದು.. ಹೊಟ್ಟೆಪಾಡಿಗಾಗಿ ಹಲವರು ನಾನಾ ವೇಷ ಹಾಕುತ್ತಾರೆ. ಆದರೆ ಇಲ್ಲೊಬ್ಬರು ನಾನಾ ವೇಷ ಹಾಕುತ್ತಾರಾದರೂ ಅದು ಹೊಟ್ಟೆಪಾಡಿಗಲ್ಲ. ಅವರ ವೇಷ ವಿಕಾರವಾಗಿ ಕಾಣಿಸುತ್ತಾದರೂ ಅವರೊಳಗೊಂದು ವಿಶಾಲಹೃದಯವಿದೆ. ಹೀಗೆ ವೇಷ ಹಾಕಿಯೇ ಇನ್ನೊಬ್ಬರ ಕಷ್ಟದ ಸನ್ನಿವೇಶದಲ್ಲಿ ಸಹಾಯ ಮಾಡಿರುವ ಅವರು ಒಂದು ರೀತಿಯಲ್ಲಿ ಕೋಟಿಗೊಬ್ಬ ಎಂದರೂ ತಪ್ಪೇನಲ್ಲ. ಏಕೆಂದರೆ ಇದುವರೆಗೂ ಅವರು ಒಂದು ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಬರೀ ಈ ವೇಷಗಳಿಂದಾಗಿಯೇ ಸಂಗ್ರಹಿಸಿ ತೀವ್ರ ಅನಾರೋಗ್ಯ ಎದುರಿಸುತ್ತಿದ್ದ ಮಕ್ಕಳ ಚಿಕಿತ್ಸೆಗಾಗಿ ನೀಡಿದ್ದಾರೆ. ಮಾತ್ರವಲ್ಲ ಇಂಥ ಒಂದು ಸಹಾಯದ ಕಾರಣಕ್ಕೇ ಅವರನ್ನು ಹಿಂದಿ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್​ಪತಿಗೂ ಕರೆಸಿ ಗೌರವಿಸಿದ್ದಾರೆ. ಒಂದು ಕಟ್ಟುಪಾಡಿನೊಳಗೇ ಸಹಾಯ ಮಾಡುತ್ತಿರುವ ಅವರ ಹೆಸರು ರವಿ ಕಟಪಾಡಿ. ರವಿ ಕಟಪಾಡಿ ಎಂದಾಕ್ಷಣ ಅವರ ಬಗ್ಗೆ ಗೊತ್ತಿರುವವರಿಗೆ ಮೊದಲಿಗೆ ನೆನಪಾಗುವುದು ಬಣ್ಣಬಣ್ಣದ ವಿಚಿತ್ರ ವೇಷಗಳು, ಆ ಮೂಲಕ ಅವರು ಮಕ್ಕಳ ಚಿಕಿತ್ಸೆಗಾಗಿ ನೀಡಿದ ಧನಸಹಾಯಗಳು. ಪ್ರತಿ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ವೇಷ ಧರಿಸಿ ಊರೂರು ಸುತ್ತಿ ಹಣ ಸಂಗ್ರಹಿಸಿ ಅಷ್ಟೂ ಮೊತ್ತವನ್ನು ಸಂಕಷ್ಟದಲ್ಲಿ ಇರುವವರಿಗೆ ಕೊಟ್ಟು ಬಿಡುವ ರವಿ ಕಟಪಾಡಿ, ಮೂಲತಃ ಶ್ರಮಜೀವಿ, ಓದಿದ್ದು ಬರೀ 9ನೇ ತರಗತಿ. ಕಟ್ಟಡ ನಿರ್ವಣದಲ್ಲಿ ಸೆಂಟ್ರಿಂಗ್ ಕೆಲಸ ಮಾಡುವ ಇವರದ್ದು ಅಂಥ ಆದಾಯದ ಕೆಲಸವೇನಲ್ಲ. ಅದಾಗ್ಯೂ ಅವರು ಕೋಟ್ಯಧಿಪತಿಗಳಿಗೂ ಕಡಿಮೆ ಇರದಂಥ ಧನಸಹಾಯ ಮಾಡಿದ್ದಾರೆ.

    ಅಂದು ಜೊತೆಗಿದ್ದಿದ್ದು ಏಳೇ ಜನ, ಇಂದು 110 ಮಂದಿ..

    ವೇಷದೊಳಗೊಬ್ಬ ಆಪದ್ಬಾಂಧವ; ನೊಂದ ಮಕ್ಕಳ ಆಶಾಕಿರಣ ಈ ರವಿ..2014ರಲ್ಲಿ ಮೊದಲ ಸಲ ಆರ್ಥಿಕ ನೆರವಿಗಾಗಿ ವೇಷ ಹಾಕಿ ಬೀದಿಗಿಳಿದಾಗ ನನ್ನೊಂದಿಗೆ 7 ಜನ ಗೆಳೆಯರು ಜೊತೆಯಾಗಿದ್ದರು. ಅಂದಿನಿಂದ ಪ್ರತಿವರ್ಷ ಹೀಗೆ ಅವರು ಜೊತೆಯಾಗುತ್ತಿದ್ದು, ಇಂದು ನಾನು ವೇಷ ಹಾಕಿ ರಸ್ತೆಗೆ ಇಳಿಯುವಾಗ 110 ಜನ ಜೊತೆಗಿರುತ್ತಾರೆ. ನಾನು ವೇಷ ಹಾಕಿ ಹೋಗುವಾಗ ಅಷ್ಟೂ ಮಂದಿ ನನ್ನ ಜೊತೆಗಿದ್ದು ಬೆಂಲಿಬಸುತ್ತಾರೆ. ಹತ್ತು ಜನರ ಕೈಯಲ್ಲಷ್ಟೇ ಹಣ ಸಂಗ್ರಹದ ಬಾಕ್ಸ್ ಇರುತ್ತದೆ. ಉಳಿದವರು ಬೆಂಬಲವಾಗಿ ಜೊತೆಗೆ ಬರುತ್ತಿರುತ್ತಾರೆ.

    ಆ ಒಂದು ಮಗು ಕಾರಣ..

    ವೇಷದೊಳಗೊಬ್ಬ ಆಪದ್ಬಾಂಧವ; ನೊಂದ ಮಕ್ಕಳ ಆಶಾಕಿರಣ ಈ ರವಿ..2010ರಿಂದಲೇ ರವಿ ಕಟಪಾಡಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ವೇಷ ಹಾಕುತ್ತ ಬಂದಿದ್ದಾರೆ. ಹೀಗೆ ಮೂರು ವರ್ಷ ಸ್ವಂತ ಖುಷಿಗೆ, ಇತರರ ಮನರಂಜನೆಗಾಗಿ ಅವರು ವೇಷ ಹಾಕಿದ್ದರು. ಆದರೆ 2014ರಲ್ಲಿ ಒಂದು ತಿಂಗಳ ಹೆಣ್ಣು ಮಗುವಿನ ಚಿಕಿತ್ಸೆಗಾಗಿ ಧನಸಹಾಯ ಅಗತ್ಯವಿದೆ ಎಂದು ಮಾಧ್ಯಮದಲ್ಲಿ ಪ್ರಕಟವಾಗಿದ್ದನ್ನು ಕಂಡು ರವಿ ಮರುಗುತ್ತಾರೆ. ಒಂದು ಕೈ ಸ್ವಾಧೀನದಲ್ಲಿ ಇರದ ಆ ಮಗುವಿಗೆ ಹೇಗಾದರೂ ಸಹಾಯ ಮಾಡಬೇಕು ಎಂದು ನಿರ್ಧರಿಸುತ್ತಾರೆ. ಈ ವಿಷಯ ತಂದೆ ಬಳಿ ಹೇಳಿದಾಗ, ನಿನಗೆ ಬರುವ ಕಡಿಮೆ ಸಂಬಳದಲ್ಲಿ ಹೇಗೆ ಮಾಡುತ್ತಿ? ಎಂದು ಕೇಳುತ್ತಾರೆ, ಈ ಸಲ ವೇಷ ಹಾಕಿ ಹಣ ಸಂಗ್ರಹಿಸಿ ಸಹಾಯ ಮಾಡುತ್ತೇನೆ ಎನ್ನುತ್ತಾರೆ ರವಿ. ಹಾಗೆ ಅಂದು ಮೊದಲಬಾರಿಗೆ ಧನ ಸಂಗ್ರಹಿಸಿದಾಗ ಒಟ್ಟಾಗಿದ್ದು 1,04,810 ರೂಪಾಯಿ. ಅಷ್ಟೂ ಮೊತ್ತವನ್ನು ಆ ಮಗುವಿನ ಮನೆಯವರಿಗೆ ಕೊಟ್ಟು ಬಿಡುತ್ತಾರೆ. ಈಗಲೂ ಆ ಮಗು ಸಿಕ್ಕಾಗಲೆಲ್ಲ ಅದೇ ಕೈಯಲ್ಲಿ ‘ಹಾಯ್ ರವಿಮಾಮ’ ಎಂದು ಹೇಳಿ ಹೋಗುವುದನ್ನು ಸ್ಮರಿಸಿಕೊಳ್ಳುವ ರವಿ, ಆ ಪ್ರಪ್ರಥಮ ಸಹಾಯ ನನ್ನ ಬದುಕಿನ ಅವಿಸ್ಮರಣೀಯ ಸಂಗತಿ ಎನ್ನುತ್ತಾರೆ.

    16 ದಿನಗಳಲ್ಲಿ 1 ಕೋಟಿಗೂ ಅಧಿಕ…

    ಈ ವರ್ಷದ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ 3 ಮಕ್ಕಳಿಗೆ ಸಹಾಯ ಮಾಡುವುದು ಅಂತ ಅಂದುಕೊಂಡಿದ್ದೆವು. ಈ ಸಲ ಡೆಮೊನ್ ವೇಷ ಧರಿಸಿದ್ದೆ, ಅದರ ತಯಾರಿಗೇ 2 ಲಕ್ಷ ರೂ. ತಗುಲಿತ್ತು. ಆ ವೇಷವೇ 40 ಕೆ.ಜಿ. ಭಾರವಿತ್ತು. ಅದರಿಂದ 14,36,685 ರೂ. ಸಂಗ್ರಹವಾಗಿತ್ತು. ಕೊನೆಗೆ 11 ಮಕ್ಕಳಿಗೆ ಸಹಾಯ ಮಾಡಲಾಯಿತು. ಹೀಗೆ ಕಳೆದ 8 ವರ್ಷಗಳಲ್ಲಿ ಇದುವರೆಗೆ ಒಟ್ಟು ಸಂಗ್ರಹಿಸಿ ಸಹಾಯ ಮಾಡಿದ ಮೊತ್ತ 1,04,36,680 ರೂಪಾಯಿ. ಇದನ್ನು ಒಟ್ಟು 77 ಮಕ್ಕಳಿಗೆ ನೀಡಲಾಗಿದೆ. ವರ್ಷಕ್ಕೆ ಎರಡೇ ದಿನ ವೇಷ ಹಾಕಿ ಓಡಾಡುವುದು. ಆ ಲೆಕ್ಕದಲ್ಲಿ ನೋಡಿದರೆ ಇಷ್ಟು ದೊಡ್ಡ ಮೊತ್ತ ಬರೀ 16 ದಿನಗಳಲ್ಲೇ ಸಂಗ್ರಹವಾಗಿದ್ದು ಎನ್ನಬಹುದು. ಇನ್ನು ಸನ್ಮಾನಗಳಿಂದ ಬಂದ 30 ಸಾವಿರ ರೂ. ಕೂಡ ಮಕ್ಕಳಿಗೇ ನೀಡಿದ್ದೇನೆ. ಅದನ್ನು ಈ ಒಟ್ಟು ಮೊತ್ತದಲ್ಲಿ ಸೇರಿಸಿಲ್ಲ ಎಂದೂ ರವಿ ಹೇಳುತ್ತಾರೆ. ರವಿ ಅವರ ಕಾರ್ಯವನ್ನು ಮೆಚ್ಚಿ 2020ರಲ್ಲಿ ‘ಕೌನ ಬನೇಗಾ ಕರೋಡ್​ಪತಿ’ ಕಾರ್ಯಕ್ರಮಕ್ಕೂ ಆಹ್ವಾನಿಸಿದ್ದರು. ಅಲ್ಲಿಗೆ ಹೋಗಿದ್ದ ರವಿಗೆ 12.5 ಲಕ್ಷ ರೂ. ಬಹುಮಾನ ಬಂದಿದ್ದು, ಅದನ್ನೂ ಮಕ್ಕಳ ಚಿಕಿತ್ಸೆಗೆ ನೀಡಿದ್ದಾರೆ. ಬರೀ ಮಲ್ಪೆ, ಉಡುಪಿ, ಉದ್ಯಾವರ, ಕೊಡವೂರು, ಪಡುಕರೆ ಇಷ್ಟೇ ಊರುಗಳಲ್ಲಿ ಸಂಚರಿಸಿ ಈ ಮೊತ್ತ ಸಂಗ್ರಹವಾಗಿದೆ. ಅಂದಹಾಗೆ ಸಂಗ್ರಹವಾದ ಮೊತ್ತವನ್ನು ಅವರು ಜಿಲ್ಲಾಧಿಕಾರಿ ಮತ್ತು ಎಸ್​ಪಿ ಸಮ್ಮುಖದಲ್ಲಿ ಹಸ್ತಾಂತರಿಸುತ್ತಾರೆ ಹೊರತು ರಾಜಕೀಯದ ಯಾವ ವ್ಯಕ್ತಿಯನ್ನು ಕರೆಯುವುದಿಲ್ಲ. ಆ ಮಕ್ಕಳಿಗೆ ಸರ್ಕಾರದಿಂದ ಯಾವುದಾದರೂ ಸಹಾಯ ಸಿಗುವುದಿದ್ದರೆ ಸಿಗಲಿ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿಯ ಸಮ್ಮುಖದಲ್ಲಿ ಹಸ್ತಾಂತರಿಸುವುದು ಎನ್ನುತ್ತಾರೆ ರವಿ.

    ಇನ್ನೂ ಮದ್ವೆ ಆಗಿಲ್ಲ, ಮುಂದೆಯೂ ಆಗಲ್ಲ..

    ವೇಷ ಹಾಕಿ ಸಂಗ್ರಹಿಸಿದ ಹಣವನ್ನು ರವಿ ತೀವ್ರ ಅನಾರೋಗ್ಯದಲ್ಲಿರುವ 12 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ನೀಡುತ್ತಾರೆ. ದೊಡ್ಡವರಿಂದಲೂ ಕೆಲವೊಮ್ಮೆ ಬೇಡಿಕೆ ಬರುತ್ತದೆ. ಆದರೆ ಅವರ ಎಷ್ಟೋ ಅನಾರೋಗ್ಯಗಳು ಅವರೇ ಮಾಡಿ ಕೊಂಡಿರುವಂಥವು. ಮಕ್ಕಳು ಹಾಗಲ್ಲ, ಅಮಾಯಕರು, ಅವರು ದೇವರಂಥವರು, ಅವರದ್ದೇನೂ ತಪ್ಪಿರಲ್ಲ. ಆದರೆ ಬಾಲ್ಯದಲ್ಲೇ ದೊಡ್ಡ ರೋಗಕ್ಕೆ ತುತ್ತಾಗಿರುತ್ತಾರೆ. ಅವರು ಇನ್ನೂ ಬಾಳಿ ಬದುಕಬೇಕಾಗಿರುತ್ತದೆ, ಅದಕ್ಕೆ ನವಜಾತ ಶಿಶುವಿನಿಂದ ಹಿಡಿದು 12 ವರ್ಷದ ವರೆಗಿನ ಮಕ್ಕಳಿಗೆ ಮಾತ್ರ ಸಹಾಯ ಮಾಡುತ್ತೇನೆ ಎನ್ನುವ ರವಿ, ತಮ್ಮ ಜೀವನವನ್ನು ಇದಕ್ಕೆಂದೇ ಮುಡಿಪಾಗಿರಿಸಿದ್ದಾರೆ. ಮದುವೆಯಾದರೆ ಸ್ವಂತ ಬದುಕಿನ ಬಗ್ಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ, ಆಗ ವೇಷ ಹಾಕಿ ಇದನ್ನೆಲ್ಲ ಮಾಡಲಿಕ್ಕೆ ಆಗುತ್ತದೋ ಇಲ್ಲವೋ ಎನ್ನುವ ಅವರು, ನನಗೀಗ 40 ವರ್ಷ, ನಾನಿನ್ನೂ ಅವಿವಾಹಿತ. ಇದಕ್ಕೆಂದೇ ಮದುವೆ ಆಗಿಲ್ಲ, ಆಗುವುದೂ ಇಲ್ಲ ಎಂದು ಹೇಳುತ್ತಾರೆ.

    ಒಂದು ರೂಪಾಯಿ ಕೂಡ ಸ್ವಂತಕ್ಕೆ ಬಳಸಿಲ್ಲ…

    ವೇಷದೊಳಗೊಬ್ಬ ಆಪದ್ಬಾಂಧವ; ನೊಂದ ಮಕ್ಕಳ ಆಶಾಕಿರಣ ಈ ರವಿ..ನನ್ನ ಜೊತೆಗೆ ಬರುವ ನೂರಾರು ಗೆಳೆಯರು ಅವರ ಬೈಕ್​ಗಳಿಗೆ ಅವರವರೇ ಪೆಟ್ರೋಲ್ ಹಾಕಿಸಿಕೊಳ್ಳುತ್ತಾರೆ. ಎರಡು ದಿನ ಬೆಳಗ್ಗೆಯಿಂದ ಇಳಿಸಂಜೆವರೆಗೂ ಓಡಾಡುವಾಗ ಬಾಯಾರಿಕೆ ಆದಾಗ ನೀರು ಬೇಕಾಗುತ್ತದೆ. ಅದಕ್ಕಾಗಿ ಹೀಗೆ ಹೋಗುವಾಗ ಒಂದು ಆಟೋರಿಕ್ಷಾದಲ್ಲಿ ನೀರಿನ ದೊಡ್ಡ ಕ್ಯಾನ್ ಇಟ್ಟುಕೊಂಡು ಹೋಗುತ್ತೇವೆ. ಖಾಲಿಯಾದಾಗ ದಾರಿಮಧ್ಯೆ ಸಿಗುವ ನೀರಿನ ಟ್ಯಾಪ್​ನಲ್ಲಿ ತುಂಬಿಸಿಕೊಳ್ಳುತ್ತೇವೆ. ನೀರಿನ ಬಾಟಲಿಗೆ ಹಣ ಖರ್ಚು ಮಾಡಬಾರದು ಎಂದು ಹೀಗೆ ಮಾಡುತ್ತೇವೆ. ಇನ್ನು ನಮ್ಮ ಊರಿನ ಕೆಲವು ಹೋಟೆಲ್​ನವರು ಕರೆದು ಊಟ ಹಾಕಿಸುತ್ತಾರೆ. ವೇಷಕ್ಕಾಗಿ ನಾನು ವರ್ಷವಿಡೀಯ ದುಡಿಮೆಯಲ್ಲಿ ಒಂದಷ್ಟು ಹಣ ಕೂಡಿಡುತ್ತೇನೆ. ಕೆಲವು ವೇಷಗಳಿಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಆಗ ಯಾರಾದರೂ ಸಹಾಯ ಮಾಡುತ್ತಾರೆ ಹೊರತು ಸಂಗ್ರಹದ ಹಣ ಬೇರೆ ಯಾವುದಕ್ಕೂ ಬಳಸುವುದಿಲ್ಲ. ಅದನ್ನು ಪೂರ್ತಿಯಾಗಿ ಅಗತ್ಯ ಇರುವವರಿಗೆ ಕೊಡುತ್ತೇವೆ. ನನ್ನ ಸ್ವಂತ ಅಕ್ಕನ ಮಗಳಿಗೇ ಚಿಕಿತ್ಸೆಗೆ ಹಣ ಬೇಕಾಗಿದ್ದಾಗ ಸಾಲಮಾಡಿ ಕೊಟ್ಟಿದ್ದೇನೆ ಹೊರತು, ಈ ಸಂಗ್ರಹದ ಹಣದಲ್ಲಿ ಒಂದು ರೂಪಾಯಿ ಕೂಡ ಸ್ವಂತಕ್ಕೆ ಬಳಸಿಲ್ಲ ಎನ್ನುತ್ತಾರೆ ರವಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts