More

    ಕಸ್ತೂರು ಬಂಡಿ ಜಾತ್ರೆ ಸಂಭ್ರಮ

    ಯಳಂದೂರು: ಸಮೀಪದ ಕಸ್ತೂರು ಗ್ರಾಮದಲ್ಲಿ ಭಾನುವಾರ ಬಂಡಿ ಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

    ಜಾತ್ರೆ ನಿಮಿತ್ತ ಭಾನುವಾರ ಬೆಳಗಿನ ಜಾವ ದೊಡ್ಡಮ್ಮತಾಯಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಮಹಾಮಂಗಳಾರತಿ ಮಾಡಲಾಯಿತು. ಮಧ್ಯಾಹ್ನ 12 ಗಂಟೆಗೆ ಅಲಂಕೃತಗೊಂಡ ಎತ್ತಿನ ಬಂಡಿಗಳು, ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ನವ ವಿವಾಹಿತ ಜೋಡಿಗಳು, ಹರಕೆಹೊತ್ತ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು. ದೇಗುಲದ ಮುಂಭಾಗ ಪಂಜುಗಳನ್ನು ಹಚ್ಚಿ ದೇವಿಗೆ ಧೂಪ ಹಾಕುವ ಮೂಲಕ ಭಕ್ತಿ ಮೆರೆದರು. ಜತೆಗೆ ಸಮೀಪದಲ್ಲಿರುವ ಮಹದೇಶ್ವರ ಸ್ವಾಮಿಯ ದೇಗುಲದಲ್ಲೂ ಬೆಳಗ್ಗೆಯಿಂದಲೇ ಜನಜಂಗುಳಿ ನೆರೆದಿತ್ತು. ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವಿಯ ದರ್ಶನ ಪಡೆದುಕೊಂಡರು.

    ಮನಸೊರೆಗೊಂಡ ಬಂಡಿಗಳು: ಕಸ್ತೂರು, ಹೊನ್ನೆಗೌಡನಹುಂಡಿ, ಪುಟ್ಟೇಗೌಡನಹುಂಡಿ, ತೊರವಳ್ಳಿ, ಹೆಗ್ಗವಾಡಿ, ದೊಡ್ಡಹೊಮ್ಮ, ಚಿಕ್ಕಹೊಮ್ಮ, ಸಪ್ಪಯ್ಯನಪುರ, ಆನಹಳ್ಳಿ, ಮೂಕಹಳ್ಳಿ, ಮರಿಯಾಲ, ಬೋಗಾಪುರ, ಮರಿಯಾಲಹುಂಡಿ, ಕೆಲ್ಲಬಂಳ್ಳಿ, ಅಂಕುಶರಾಯನಪುರ ಹಾಗೂ ದಾಸನೂರು ಸೇರಿದಂತೆ 16 ಗ್ರಾಮಗಳ ಬಂಡಿಗಳು ವರ್ಣರಂಜಿತ ಜಾತ್ರೆಗೆ ಸಾಕ್ಷಿಯಾದವು. ಬಂಡಿಗಳಿಗೆ ತಮ್ಮ ಗ್ರಾಮಗಳಲ್ಲಿ ಪ್ರಥಮ ಪೂಜೆ ಸಲ್ಲಿಸಿ ಎತ್ತುಗಳನ್ನು ಅಲಂಕರಿಸಿ ಕಸ್ತೂರು ಗ್ರಾಮಕ್ಕೆ ಕರೆತರಲಾಯಿತು. ಬಳಿಕ ಬಂಡಿಯ ಗಾಲಿಗಳಿಗೆ ಹರಕೆ ಹೊತ್ತ ಭಕ್ತರು ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದರು. ಹಬ್ಬದ ನಿಮಿತ್ತ ಗ್ರಾಮಗಳನ್ನು ತಳಿರು ತೋರಣಗಳು, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

    ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಸೇರಿದಂತೆ ಪಕ್ಕದ ತಮಿಳುನಾಡಿನಿಂದಲೂ ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸಿದ್ದರು. ಜಾತ್ರೆಯಲ್ಲಿ ಕಜ್ಜಾಯ ವಿಶೇಷ ತಿನಿಸಾಗಿದ್ದು, ಭರ್ಜರಿ ವ್ಯಾಪಾರವಾಯಿತು. ಇದರೊಂದಿಗೆ ಮಕ್ಕಳ ಆಟಿಕೆ ಸಾಮಾನುಗಳು, ಕಡ್ಲೆಪುರಿ ಹಾಗೂ ಸಿಹಿ ತಿಂಡಿತಿನಿಸುಗಳ ವ್ಯಾಪಾರಸ್ಥರಿಗೆ ಭರ್ಜರಿ ವ್ಯಾಪಾರವಾಯಿತು.

    ಪೊಲೀಸ್ ಇಲಾಖೆಯಿಂದ ವಿಶೇಷ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಿಗೆ ಸಂತೆಮರಹಳ್ಳಿ, ಚಾಮರಾಜನಗರದಿಂದ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಸಂತೆಮರಹಳ್ಳಿ, ತೊರವಳ್ಳಿ, ಕಸ್ತೂರು ಗ್ರಾಮಗಳಲ್ಲಿ ಸಾರಿಗೆ ಇಲಾಖೆಯ ಸಿಬ್ಬಂದಿ ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ವಾಹನಗಳನ್ನು ನಿಯಂತ್ರಿಸುತ್ತಿದ್ದರು. ದೇಗುಲದ ಮುಂಭಾಗದಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಪ್ರತ್ಯೇಕ ನಿಲ್ದಾಣಗಳ ವ್ಯವಸ್ಥೆ ಮಾಡಲಾಗಿತ್ತು. ಹಬ್ಬ ಆಚರಿಸುವ ಗ್ರಾಮಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಅಲ್ಲಲ್ಲಿ ಶಾಮಿಯಾನಗಳನ್ನು ಹಾಕಿ ಅರವಟ್ಟಿಗೆಗಳನ್ನು ಮಾಡುವ ಮೂಲಕ ಬಂದಿದ್ದ ಸಂಬಂಧಿಕರು, ಸಾರ್ವಜನಿಕರಿಗೆ ಅನ್ನ ದಾಸೋಹ ನಡೆಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts