More

    ಮಹದಾಯಿ ನೀರಿನೊಂದಿಗೆ 27ರಂದು ಕಾಶಿಗೆ

    ನರಗುಂದ: ಮಾರ್ಚ್ 27ರಂದು 1 ಸಾವಿರ ರೈತರು ಮಹದಾಯಿ ನದಿ ನೀರು ತೆಗೆದುಕೊಂಡು ಕಾಶಿ ವಿಶ್ವನಾಥನ ದರ್ಶನಕ್ಕೆ ತೆರಳುತ್ತೇವೆ. ಯಾತ್ರೆ ಸಂದರ್ಭ ಯಾರಾದರೂ ನಿಧನ ಹೊಂದಿದರೆ ಅವರ ಅಂತ್ಯಸಂಸ್ಕಾರ ಅಲ್ಲಿಯೇ ಮಾಡಲಾಗುವುದು ಎಂದು ರೈತಸೇನೆ ಅಧ್ಯಕ್ಷ ವೀರೇಶ ಸೊಬರದಮಠ

    ತಿಳಿಸಿದರು.

    ರೈತಸೇನಾ ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೈತರ ಬೃಹತ್ ಜಾಗೃತಿ ಸಮಾವೇಶ, ದಿ. ಡಾ.ಪುನೀತರಾಜಕುಮಾರ ಹಾಗೂ ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    2015ರಲ್ಲಿ ಪ್ರಾರಂಭಗೊಂಡಿರುವ ಮಹದಾಯಿ ಕಳಸಾ-ಬಂಡೂರಿ ಹೋರಾಟಕ್ಕೆ 1300ಕ್ಕೂ ಅಧಿಕ ಸಂಘಟನೆಗಳು ಹಾಗೂ ಅನೇಕ ಮಠಾಧೀಶರ ಬೆಂಬಲದೊಂದಿಗೆ ಸಾಕಷ್ಟು ಹೋರಾಟ ಮಾಡಿದ್ದೇವೆ. ರಾಷ್ಟ್ರಪತಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿ, ಕಾನೂನಾತ್ಮಕ ಹೋರಾಟ ಮಾಡಿದ್ದರ ಫಲವಾಗಿ ಮಹತ್ವಾಕಾಂಕ್ಷಿ ಯೋಜನೆಗೆ ಈಗ ಕಾಲ ಕೂಡಿ ಬಂದಿದೆ. ಕಾನೂನಾತ್ಮಕ ಹೋರಾಟ ಮಾಡಿರುವ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ. ಆಕಸ್ಮಾತ್ ನೀವೇನಾದರೂ ಕಾನೂನಾತ್ಮಕ ಹೋರಾಟ ಮಾಡಿದ ಬಗ್ಗೆ ದಾಖಲೆ ನೀಡಿದರೆ ನಿಮ್ಮ ಮನೆ ಕಸಗುಡಿಸುತ್ತೇನೆ. ಆದರೆ, ಇಲ್ಲಸಲ್ಲದ ಅಪವಾದಗಳನ್ನು ಎಂದಿಗೂ ಸಹಿಸುವುದಿಲ್ಲ ಎಂದು ರಾಜಕಾರಣಿಗಳ ವಿರುದ್ಧ ಹರಿಹಾಯ್ದ ಅವರು, ಮಹದಾಯಿ ಹೋರಾಟದಿಂದ ಆಸ್ತಿ, ಅಂತಸ್ತು ಏನೂ ಮಾಡಿಕೊಂಡಿಲ್ಲ ಎಂದರು.

    ಶಿರಹಟ್ಟಿ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಮಾತನಾಡಿ, ಕೃಷಿ ಬದಲು ನೌಕರಿಗೆ ಆದ್ಯತೆ ನೀಡುತ್ತಿರುವುದರಿಂದ ರೈತರ ಮಕ್ಕಳಿಗೆ ಕನ್ಯಾ ಸಿಗುತ್ತಿಲ್ಲ. ಪ್ರಕೃತಿ ಮತ್ತು ದಲ್ಲಾಳಿಗಳ ಬಜಾರ್ ಚೆಲ್ಲಾಟದಲ್ಲಿ ಪ್ರತಿ ಹಂತದಲ್ಲಿಯೂ ರೈತ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾನೆ. ಹಣ ಮತ್ತು ಜಾತಿ ರಾಜಕಾರಣದಿಂದ ಸಾಕಷ್ಟು ಜನ ಉದ್ಧಾರ ಆಗಿದ್ದಾರೆ. ಬುದ್ಧಿವಂತರಿಗೆ ಟಿಕೆಟ್ ಸಿಗುತ್ತಿಲ್ಲ. ದೇಶವನ್ನು ಜಾತಿ, ಹಣದಿಂದ ಆಳಿದರೆ ಎಲ್ಲವೂ ಹಾಳಾಗಿ ಹೋಗುತ್ತದೆ. ರೈತ ಬೆಳೆದ ಬೆಳೆಗೆ ಆತನೇ ಬೆಲೆ ನಿರ್ಧಾರ ಮಾಡಿಕೊಳ್ಳಬೇಕಾದರೆ ಪ್ರತಿ ಐದು ವರ್ಷಕ್ಕೊಮ್ಮೆ ಪ್ರಜ್ಞಾವಂತಿಕೆಯಿಂದ ಅರ್ಹರಿಗೆ ಮತ ಚಲಾಯಿಸಬೇಕು ಎಂದು ರೈತರಿಗೆ ಮತದಾನ ಜಾಗೃತಿ ಮೂಡಿಸಿದರು

    ಪಂಚನಗೌಡ ದ್ಯಾವನಗೌಡ್ರ, ಈರಬಸಪ್ಪ ಹೂಗಾರ, ಕಿಲ್ಲಾ ತೋರಗಲ್ ಗಚ್ಚಿನ ಹಿರೇಮಠದ ಚೆನ್ನಮಲ್ಲ ಶಿವಾಚಾರ್ಯರು ಮಾತನಾಡಿದರು.

    4 ಜಿಲ್ಲೆ 11 ತಾಲೂಕಿನ ಮಹದಾಯಿ ಅಚ್ಚುಕಟ್ಟು ಪ್ರದೇಶದ ರೈತರು, ರೈತ ಮುಖಂಡರು, ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಸರ್ಕಾರಕ್ಕೆ ಮನವಿ: ರಾಜ್ಯಾದ್ಯಂತ ಶಾಶ್ವತ ಖರೀದಿ ಕೇಂದ್ರಗಳನ್ನು ತೆರೆಯುವುದು. ಮಲಪ್ರಭಾ ನದಿ ಹೂಳೆತ್ತುವುದು. ಮಹದಾಯಿ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ 12 ರೈತರ ಕುಟುಂಬಕ್ಕೆ ಪರಿಹಾರ ಕಲ್ಪಿಸುವುದು. ಉತ್ತರ ಕರ್ನಾಟಕದಲ್ಲಿ ಯುವಕರಿಗಾಗಿ ಉದ್ಯೋಗ ಸೃಷ್ಟಿಸುವುದು. ವಿದ್ಯುತ್ ಪ್ರಸರಣ ನಿಗಮಗಳಿಂದ ಗ್ರಾಹಕರಿಂದ ಪಾವತಿಸಿಕೊಳ್ಳುತ್ತಿರುವ 100 ರೂಪಾಯಿ ಸೇವಾ ಶುಲ್ಕ ರದ್ದುಪಡಿಸುವುದು ಮತ್ತಿತರ ಬೇಡಿಕೆಗಳನ್ನು ಈಡೇರಿಸುವ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts