More

    ಉದ್ಘಾಟನೆಗೆ ಸಿದ್ಧವಾಯಿತು ಕಾಸರಗೋಡು ತುಳುಭವನ

    ಮಂಜೇಶ್ವರ: ತುಳು ಭಾಷೆ, ಕಲೆ- ಸಂಸ್ಕೃತಿಗೆ ಚಿನ್ನದ ಚೌಕಟ್ಟು ಒದಗುತ್ತಿದೆ. ತುಳುಭವನ ಶುಭಾರಂಭಕ್ಕೆ ಸಿದ್ಧವಾಗುವ ಮೂಲಕ ಕಾಸರಗೋಡು ಜಿಲ್ಲೆಯ ತುಳು ಪ್ರೇಮಿಗಳ ಕನಸು ನನಸಾಗುತ್ತಿದೆ.

    ಮಂಜೇಶ್ವರ ತಾಲೂಕಿನ ಹೊಸಂಗಡಿ ಬಳಿಯ ಕಡಂಬಾರು ಗ್ರಾಮದ ದುರ್ಗಿಪಳ್ಳದಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ತುಳುಭವನ ಸಿದ್ಧವಾಗಿದೆ. 2007ರ ಸೆ.3ರಂದು ಅಂದಿನ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಕೇರಳ ತುಳು ಅಕಾಡೆಮಿಯನ್ನು ಉದ್ಘಾಟಿಸಿದ್ದರು. ಮಾಜಿ ಶಾಸಕ ಸಿ.ಎಚ್.ಕುಂಞಂಬು ತುಳು ಅಕಾಡೆಮಿ ಸ್ಥಾಪನೆ, ತುಳು ಭವನ ನಿರ್ಮಾಣ ಇತ್ಯಾದಿ ಚಟುವಟಿಕೆಗಳಿಗೆ ಅಹೋರಾತ್ರಿ ಯತ್ನ ನಡೆಸಿ ಯಶಸ್ವಿಯಾಗಿದ್ದರು. ರಾಜ್ಯ ಸರ್ಕಾರದ ಒಂದು ಸಾವಿರ ದಿನಗಳ ಆಡಳಿತ ಸರಣಿ ಕಾರ್ಯಕ್ರಮಗಳ ಅಂಗವಾಗಿ 2019ರ ಫೆ.27ರಂದು ವಿಧಾನಸಭೆ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಈ ಕೇಂದ್ರದ ಶಿಲಾನ್ಯಾಸ ನಡೆಸಿದ್ದರು. ಕಳೆದ ಮಾರ್ಚ್ ತಿಂಗಳಲ್ಲೇ ಉದ್ಘಾಟನೆ ನಡೆಯಬೇಕಿತ್ತು. ಆದರೆ ಕೋವಿಡ್ ಕಟ್ಟುನಿಟ್ಟುಗಳ ಹಿನ್ನೆಲೆಯಲ್ಲಿ ಲೋಕಾರ್ಪಣೆಯ ದಿನಾಂಕ ಮುಂದೂಡಬೇಕಾಗಿ ಬಂದಿತ್ತು ಎಂದು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ತಿಳಿಸಿದ್ದಾರೆ.

    ಸಂಶೋಧಕ, ತುಳು ವಿದ್ವಾಂಸ ಡಾ.ವೆಂಕಟರಾಜ ಪುಣಿಂಚಿತ್ತಾಯ ಕೇರಳ ತುಳು ಅಕಾಡೆಮಿಯ ಸ್ಥಾಪಕಾಧ್ಯಕ್ಷರಾಗಿದ್ದವರು. ಅವರ ಹೆಸರಲ್ಲಿ ಈ ಕಟ್ಟಡದಲ್ಲಿ ಗ್ರಂಥಾಲಯವಿದೆ. ಸಭೆ ನಡೆಸಲು ಎಕ್ಸಿಕ್ಯೂಟಿವ್ ಕೊಠಡಿ, ಅಕಾಡೆಮಿ ಅಧ್ಯಕ್ಷ, ಕಾರ್ಯದರ್ಶಿಗಳಿಗೆ ಕೊಠಡಿ, ಸಿಬ್ಬಂದಿ ಕೊಠಡಿ ಇತ್ಯಾದಿ ಈ ಕಟ್ಟಡದಲ್ಲಿವೆ. ಜಿಲ್ಲಾ ನಿರ್ಮಿತಿ ಕೇಂದ್ರದ ನೇತೃತ್ವದಲ್ಲಿ ಈ ಕಟ್ಟಡದ ನಿರ್ಮಾಣ ಚಟುವಟಿಕೆಗಳು ನಡೆದಿವೆ.
    ಈ ಕೇಂದ್ರದ 2ನೇ ಹಂತವಾಗಿ ತುಳು ಸಂಶೋಧನಾ ಕೇಂದ್ರ, ವಸ್ತು ಸಂಗ್ರಹಾಲಯದ ನಿರ್ಮಾಣ ನಡೆಯಲಿದೆ. ಮಂಜೇಶ್ವರದ ಹಿಂದಿನ ಶಾಸಕ ದಿ.ಪಿ.ಬಿ.ಅಬ್ದುಲ್ ರಝಾಕ್ ಅವರ ನಿಧಿಯಿಂದ 45 ಲಕ್ಷ ರೂ. ಇದಕ್ಕಾಗಿ ಮಂಜೂರು ಮಾಡಿದ್ದರು. 3ನೇ ಹಂತವಾಗಿ ಕಲ್ಚರಲ್ ಥಿಯೇಟರ್ ನಿರ್ಮಿಸಲಾಗುವುದು. ತುಳು ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ನಿಟ್ಟಿನಲ್ಲಿ ಇದು ಸ್ಥಾಪನೆಗೊಳ್ಳಲಿದ್ದು, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ಗೆ ಒಂದು ಕೋಟಿ ರೂ. ಯೋಜನೆಯನ್ನು ಸಲ್ಲಿಸಲಾಗಿದೆ.

    ತುಳು ಲಿಪಿ ಕಲಿಕೆಗೆ ಆನ್‌ಲೈನ್ ಸೌಲಭ್ಯ: ಕೇರಳ ತುಳುಭವನದ ನೇತೃತ್ವದಲ್ಲಿ ಸಾರ್ವಜನಿಕರಿಗೆ ತುಳು ಲಿಪಿ ಕಲಿಕೆಗೆ ಆನ್‌ಲೈನ್ ಸೌಲಭ್ಯ ಸಿದ್ಧಗೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಜತೆಯಲ್ಲಿ ತುಳು ಪ್ರೇಮಿ ಸಾರ್ವಜನಿಕರಿಗೆ ಇದು ಪ್ರಯೋಜನಕಾರಿಯಾಗಲಿದೆ. ಸರಳ ವಿಧಾನದ ಪಠ್ಯ ಪದ್ಧತಿಯನ್ನು ಈ ನಿಟ್ಟಿನಲ್ಲಿ ಸಿದ್ಧಗೊಳಿಸಲಾಗುತ್ತಿದೆ. ತುಳುಭವನದ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್‌ಗಳ ಮೂಲಕ ಜಗತ್ತಿನ ಯಾವ ಮೂಲೆಯಲ್ಲೂ ತುಳು ಕಲಿಕೆ ಸುಲಭವಾಗುವ ರೀತಿ ತುಳುಲಿಪಿ ಕಲಿಕೆಗೆ ವ್ಯವಸ್ಥೆ ಏರ್ಪಡಿಸಲಾಗುವುದು ಎಂದು ಉಮೇಶ್ ಎಂ.ಸಾಲ್ಯಾನ್ ತಿಳಿಸಿದ್ದಾರೆ.

    ಸೆ.3ರಂದು ಲೋಕಾರ್ಪಣೆ: ಕೇರಳ ತುಳುಭವನ ಅಕಾಡೆಮಿ ಸೆ.3ರಂದು ಲೋಕಾರ್ಪಣೆಗೊಳ್ಳಲಿದೆ. ಬೆಳಗ್ಗೆ 11.30ಕ್ಕೆ ಸಂಸ್ಕೃತಿ ಸಚಿವ ಎ.ಕೆ.ಬಾಲನ್ ಆನ್‌ಲೈನ್ ಮೂಲಕ ಉದ್ಘಾಟನೆ ನಡೆಸುವರು. ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿರುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts