More

    ಕಾಸರಗೋಡು ಗಡಿಗೆ ಪೊಲೀಸರಿಂದ ‘ಬೀಗ’

    ವಿಟ್ಲ/ಉಳ್ಳಾಲ: ದಕ್ಷಿಣ ಕನ್ನಡದ ಜತೆ ಗಡಿ ಹಂಚಿಕೊಂಡಿರುವ ಕಾಸರಗೋಡು ಜಿಲ್ಲೆಯಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎರಡು ಜಿಲ್ಲೆಗಳ ನಡುವಿನ ಸಂಪರ್ಕವನ್ನು ಬಹುತೇಕ ಬಂದ್ ಮಾಡಲಾಗಿದೆ.
    ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಚೆಕ್‌ಪೋಸ್ಟ್‌ನಲ್ಲಿ ಸರ್ಕಾರಿ, ಖಾಸಗಿ ಬಸ್ ಹೊರತುಪಡಿಸಿ ಕರ್ನಾಟಕ ನೋಂದಣಿಯ ವಾಹನಗಳು ತಪಾಸಣೆ ರಹಿತವಾಗಿ ಕೇರಳದಿಂದ ಕರ್ನಾಟಕಕ್ಕೆ ಬರುತ್ತಿವೆ. ಆದರೆ ಕೇರಳ ನೋಂದಣಿಯ ವಾಹನಗಳಿಗೆ ಕರ್ನಾಟಕಕ್ಕೆ ಬರಲು ಅವಕಾಶವಿಲ್ಲ. ಆಂಬುಲೆನ್ಸ್, ಗ್ಯಾಸ್ ಟ್ಯಾಂಕರ್‌ಗಳಿಗೆ ವಿನಾಯಿತಿ ನೀಡಲಾಗಿದೆ.

    ಕೊಣಾಜೆ ಠಾಣೆ ವ್ಯಾಪ್ತಿಯ ಮಂಜನಾಡಿಯ ನೆಕ್ಕಿಲಪದವು, ತೌಡುಗೋಳಿ ರಸ್ತೆ, ಮುಡಿಪು ಬಾಳೆಪುಣಿ ರಸ್ತೆ, ತಲಪಾಡಿ ರಾಷ್ಟ್ರೀಯ ಹೆದ್ದಾರಿ ಸೇರಿಂದ ಕೇರಳ ಸಂಪರ್ಕಿಸುವ ಒಳರಸ್ತೆಗಳಲ್ಲಿಯೂ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಕಾವಲು ಕಾಯುತ್ತಿದ್ದಾರೆ. ಕೇರಳ ಭಾಗದಲ್ಲೂ ಪೊಲೀಸರ ಪಹರೆ ಇದೆ.
    ವಿಟ್ಲ ಠಾಣಾ ವ್ಯಾಪ್ತಿಯ ಸಾರಡ್ಕ – ಕೊಲ್ಲಪದವು ಚೆಕ್ಕುತ್ತಿ – ಪಾಂಡಿಕಾಯಿ ರಸ್ತೆ ಮೂಲಕ ಅಡ್ಕಸ್ಥಳ ಸಂಪರ್ಕಿಸುವ ರಸ್ತೆಯ ಗಡಿ ಭಾಗದಲ್ಲಿ ಕಚ್ಚಾ ರಸ್ತೆಗೆ ಅಡ್ಡಲಾಗಿ ಚರಂಡಿ ಮಾಡಿ ರಸ್ತೆ ಬಂದ್ ಮಾಡಲಾಗಿದೆ. ಕರೋಪಾಡಿ ಭಾಗದಲ್ಲಿ ಮೂರು ರಸ್ತೆಗಳನ್ನು, ಮಾಣಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಟೆಪಡ್ಪು ರಸ್ತೆಯನ್ನು ಬಂದ್ ಮಾಡಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

    ಪುತ್ತೂರು ಗ್ರಾಮಾಂತರ ಠಾಣಾ ವಾಪ್ತಿಯ ಕೇರಳದಿಂದ ಅಡ್ಕಸ್ಥಳ – ಕುಂಞಿಮೂಲೆ ಇರ್ದೆ ಮೂಲಕವಾಗಿ ಪುತ್ತೂರು ಹಾಗೂ ಪುಣಚ ಭಾಗಕ್ಕೆ ಹಲವು ಕೇರಳ ಮೂಲದವರು ಆಗಮಿಸಿದ್ದು, ಮಧ್ಯಾಹ್ನದ ಹೊತ್ತಿಗೆ ಇದಕ್ಕೂ ತಡೆ ಹಾಕು ಕಾರ್ಯ ನಡೆಯಿತು. ಮಧ್ಯಾಹ್ನ ಇರ್ದೆ ಪಂಚಾಯಿತಿ ವತಿಯಿಂದ ಎರಡೂ ರಸ್ತೆಗಳಿಗೆ ಮಣ್ಣು ಹಾಕುವ ಮೂಲಕ ಸಂಪೂರ್ಣ ಬಂದ್ ಮಾಡಲಾಯಿತು.

    ಕೇರಳದಿಂದ ಕರ್ನಾಟಕಕ್ಕೆ ಬರುವ ಮುಖ್ಯ ರಸ್ತೆಗಳನ್ನು ಶನಿವಾರ ಬಂದ್ ಮಾಡಿದ ಬಳಿಕವೂ ಹಲವರು ಚೆಕ್‌ಪೋಸ್ಟ್‌ಗೆ ಬಂದು ನಿಲ್ಲುವ ಕಾರ್ಯ ಮಾಡುತ್ತಿದ್ದರು. ಸಾರಡ್ಕ, ಒಳರಸ್ತೆಗಳ ಮೂಲಕ ಓಡಾಡುವ ಕಾರ್ಯ ಮಾಡುತ್ತಿದ್ದರು. ಒಳ ನುಸುಳುಕೋರರ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಸೂಕ್ತ ಕ್ರಮಕ್ಕೆ ಆದೇಶ ಹೊರಡಿಸಿತ್ತು.

    ಲಘು ಲಾಠಿ ಪ್ರಹಾರ:
    ಕರೊನಾ ಹರಡುತ್ತಿರುವ ಕಾರಣ ಜಿಲ್ಲಾಡಳಿತ ಅತೀ ಅಗತ್ಯವೆಂದರೆ ಮಾತ್ರ ಮನೆಯಿಂದ ಹೊರಬನ್ನಿ ಎಂದರೂ ಸೋಮವಾರ ಅನಗತ್ಯವಾಗಿ ಚೆಕ್‌ಪೋಸ್ಟ್ ಸಮೀಪ, ರಸ್ತೆಬದಿ ಗುಂಪು ಕಟ್ಟಿಕೊಂಡು ನಿಂತಿದ್ದವರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡುವ ಕಾರ್ಯ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿಭಾಗದಲ್ಲಿ ನಡೆದಿದೆ. ಸಾರಡ್ಕ, ಪೆರುವಾಯಿ, ಆನೆಕಲ್ಲು, ಸಾಲೆತ್ತೂರು ಚೆಕ್‌ಪೋಸ್ಟ್‌ಗಳಲ್ಲಿ ಜನರು ಪೊಲೀಸರ ಜತೆಗೆ ಸ್ಪಂದಿಸದೆ ರಸ್ತೆಯಲ್ಲಿ ನಿಂತು ಗೇಟು ತೆರೆಯುವಂತೆ ತಗಾದೆ ಮಾಡಿದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ವಿಟ್ಲ ಪೊಲೀಸ್ ಉಪನಿರೀಕ್ಷಕ ವಿನೋದ್ ಎಸ್. ಕೆ. ಚದರುವಂತೆ ಹೇಳಿದರೂ ಕೇರ್ ಮಾಡದ ಹಿನ್ನೆಲೆಯಲ್ಲಿ ಲಘು ಲಾಠಿ ಪ್ರಹಾರ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts