More

  ಕಸಾಪ ಚುನಾವಣೆಗೂ ಜಾತಿ ಲೆಕ್ಕ!

  ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಯಲ್ಲೂ ‘ಜಾತಿ ಲೆಕ್ಕಾಚಾರ’ ಜೋರಾಗುತ್ತಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಮತದಾರರನ್ನು ಒಲಿಸಿಕೊಳ್ಳಲು ಇದೀಗ ನಾನಾ ಕಸರತ್ತು ಆರಂಭಿಸಿದ್ದು, ಕೆಲವರು ಜಾತಿ ಆಧಾರಿತ ಮತಗಳ ವಿಭಜನೆ, ಕ್ರೋಡೀಕರಣದ ಸಮೀಕರಣದಲ್ಲಿ ತೊಡಗಿದ್ದಾರೆ.

  ಚುನಾವಣೆಯ ಕಣದಲ್ಲಿರುವ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ನಾಡಿನ ಜಲ, ನೆಲ, ಭಾಷೆಯ ಸಂರಕ್ಷಣೆಯ ಭರ್ಜರಿ ಭರವಸೆ ನೀಡತೊಡಗಿದ್ದಾರೆ.ಇತ್ತ ಗಡಿ ಭಾಗವಾದ ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ವಿಷಯ ಬಿಟ್ಟು ಜಾತಿ ಮೊರೆ ಹೋಗುತ್ತಿರುವುದು ಕನ್ನಡ ಸಾರಸ್ವತ ಲೋಕದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

  ಮತದಾರರತ್ತ ಚಿತ್ತ: ರಾಜ್ಯದ ಗಡಿ ವಿವಾದ ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದರೂ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಶಿವಸೇನೆ ಕಾರ್ಯಕರ್ತರು ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಆಗಾಗ ಕನ್ನಡ ಭಾಷೆ ಕುರಿತು ವಿರೋಧ ಹೇಳಿಕೆ ನೀಡುತ್ತ ಕನ್ನಡಿಗರನ್ನು ಕೆದಕುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಗಡಿ ಭಾಗದಲ್ಲಿ ಕನ್ನಡ ಮಾತನಾಡುವವರ ಮೇಲೆ ಹಲ್ಲೆ, ಕನ್ನಡ ನಾಮಫಲಕ ತೆರವುಗೊಳಿಸುವುದು ಹಾಗೂ ಕೆಲ ಕನ್ನಡಿಗರ ಮೇಲೆ ನಿರಂತರ ಹಲ್ಲೆಗಳೂ ನಡೆಯುತ್ತಿವೆ. ಆದರೂ, ಕಸಾಪ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಿರುವ ಆಕಾಂಕ್ಷಿಗಳು ಈ ವಿಷಯಗಳ ಕುರಿತು ಚಕಾರ ಎತ್ತುತ್ತಿಲ್ಲ. ಬದಲಾಗಿ ಆಯಾ ಸಮುದಾಯದ ಮುಖಂಡರ ಮೂಲಕ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

  ತೀವ್ರ ವಿರೋಧ: ಶತಮಾನೋತ್ಸವ ಪೂರೈಸಿರುವ ಕಸಾಪ 3,36,395 ಸದಸ್ಯರನ್ನು ಹೊಂದಿದೆ. ಈ ಪೈಕಿ 3.10 ಲಕ್ಷ ಮತದಾರರು ಮತ ಚಲಾವಣೆಗೆ ಅರ್ಹತೆ ಪಡೆದಿದ್ದಾರೆ. ಇದರಲ್ಲಿ ಪ್ರಥಮ ಬಾರಿಗೆ ರಾಜ್ಯಾದ್ಯಂತ 1.21 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ಆಕಾಂಕ್ಷಿಗಳು ಜಾತಿ ಆಧಾರಿತ ಮತಗಳ ವಿಭಜನೆ ಮಾಡಿ ಮತಯಾಚನೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕಸಾಪದಲ್ಲಿ ದಕ್ಷಿಣ ಮತ್ತು ಉತ್ತರ ಕರ್ನಾಟಕ ಭಾಗ ಪ್ರತ್ಯೇಕವಾಗಿರಬೇಕು ಎನ್ನುತ್ತಿದ್ದಾರೆ. ಇದಕ್ಕೆ ಸಾಹಿತಿ, ಕವಿಗಳು, ಕನ್ನಡಪರ ಹಿರಿಯ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

  ಆಯ್ಕೆಯಾಗೋರು ಯಾರು?: ಬೆಳಗಾವಿಯ ಸುವರ್ಣ ಸೌಧದಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಕಚೇರಿ ಸ್ಥಾಪನೆ, ಪ್ರತಿ ಜಿಲ್ಲಾ ಕೇಂದ್ರದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಕಸಾಪ ಶತಮಾನೋತ್ಸವ ಭವನ, ಗಡಿ ಭಾಗದ ಗ್ರಾಮಗಳಲ್ಲಿ ಸಾಹಿತ್ಯ ಪರಿಷತ್ ಘಟಕ, ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡ ಮಾಧ್ಯಮ ಕಡ್ಡಾಯಗೊಳಿಸುವುದಾಗಿ ಆಕಾಂಕ್ಷಿಗಳು ಭರವಸೆ ನೀಡುತ್ತಿದ್ದಾರೆ. ಆದರೆ, ಕಣದಲ್ಲಿರುವ ಆಕಾಂಕ್ಷಿಗಳ ಪೈಕಿ ಆಯ್ಕೆಯಾಗಬಲ್ಲ ಕಟ್ಟಾಳು ಯಾರು ಎಂದು ಇದೀಗ ಸಾಹಿತ್ಯ ಲೋಕದಲ್ಲಿ ಚರ್ಚೆ ಜೋರಾಗಿದೆ. ಸದ್ಯ ಕಣದಲ್ಲಿರುವ ಅಭ್ಯರ್ಥಿಗಳು ಕನ್ನಡ ಸಾಹಿತ್ಯ ಪರಿಷತ್ ಅಂಗಳಕ್ಕೆ ಹೊಸಬರಲ್ಲದಿದ್ದರೂ ಎಲ್ಲರಿಗೂ ಸಾಹಿತ್ಯ ಕ್ಷೇತ್ರದ ನಂಟು ಮಾತ್ರ ಹೊಸದು ಎಂದು ವಿಶ್ಲೇಷಿಸಲಾಗಿದೆ.

  ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

  ಸಾಹಿತಿಗಳು, ಕವಿಗಳು, ಬರಹಗಾರರು ಮತ್ತು ಕನ್ನಡಪರ ಹೋರಾಟಗಾರನ್ನು ಒಗ್ಗಟ್ಟಿನಿಂದ ಕರೆದುಕೊಂಡು ಹೋಗುವ ಮತ್ತು ಸಾರಸ್ವತ ಲೋಕಕ್ಕಾಗಿ ಶ್ರಮಿಸಿದವರು ಕಸಾಪ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುತ್ತಿರುವುದು ಸಾಂಪ್ರದಾಯ. ಆದರೆ, ಕಳೆದ 10 ವರ್ಷದ ಅವಧಿಯಲ್ಲಿ ಕಸಾಪ ಅಧ್ಯಕ್ಷ ಸ್ಥಾನ ಎಂಬುದುದು ಸ್ವ ಪ್ರತಿಷ್ಠೆಗಷ್ಟೇ ಸೀಮಿಗೊಂಡಿದೆ. ಹಾಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕೀಯ ವ್ಯಕ್ತಿಗಳೇ ಸಮ್ಮೇಳನಾಧ್ಯಕ್ಷರಾಗುತ್ತಿದ್ದಾರೆ. ಯುವ ಬರಹಗರಾರಿಗೆ ವೇದಿಕೆಯಾಗುತ್ತಿಲ್ಲ. ರಾಜಕೀಯ ಪಕ್ಷಗಳ ಅಂಗ ಸಂಸ್ಥೆಯ ರೀತಿಯಲ್ಲಿ ಕಸಾಪ ಬೆಳೆಯುತ್ತಿದೆ. ಅಧಿಕಾರ ಗದ್ದುಗೆ ಏರಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರ ಸ್ವ ಪ್ರತಿಷ್ಠೆಯಿಂದಾಗಿ ಸಾಹಿತ್ಯದ ಮನಸ್ಸುಗಳು ಒಡೆದ ಕನ್ನಡಿಯ ರೂಪದಲ್ಲಿ ‘ಛಿದ್ರ’ಗೊಳ್ಳುತ್ತಿವೆ ಎಂದು ಕನ್ನಡಪರ ಹೋರಾಟಗಾರ, ಮತದಾರರಾದ ಮನೋಜ ಎಸ್.ಎಂ, ರವೀಂದ್ರ ಕೆ. ಹಿರೇಮನಿ, ಎಂ.ಎಸ್. ನದ್ಾ ದೂರಿದ್ದಾರೆ.

  | ಮಂಜುನಾಥ ಕೋಳಿಗುಡ್ಡ ಬೆಳಗಾವಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts