More

    ಕರ್ತಡ್ಕಕ್ಕೆ ಬೇಕು ಸರ್ವಋತು ಸೇತುವೆ

    ಪ್ರವೀಣ್‌ರಾಜ್ ಕಡಬ

    ಮಳೆಗಾಲ ಬಂತೆಂದರೆ ಕರ್ತಡ್ಕ ಪ್ರದೇಶದ ಜನರಿಗೆ ಜೀವ ಭಯ ಕಾಡುತ್ತದೆ. ಯಾಕೆಂದರೆ ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಉಕ್ಕಿ ಹರಿಯುವ ವಾಲ್ತಾಜೆ ಬೃಹತ್ ತೋಡನ್ನು ದಾಟುವುದೇ ಸಾಹಸ. ಇಲ್ಲಿ ಸ್ಥಳೀಯರೇ ನಿರ್ಮಿಸಿದ ಕಾಲುಸಂಕವೇ ಸಂಪರ್ಕ ಸೇತುವೆಯಾಗಿದ್ದು, ಸರ್ವಋತು ಸೇತುವೆ ಬೇಡಿಕೆ ಇನ್ನೂ ಈಡೇರಿಲ್ಲ.

    ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಚ್ಲಂಪಾಡಿ ಗ್ರಾಮದ 2ನೇ ವಾರ್ಡ್, ರಾಷ್ಟ್ರೀಯ ಹೆದ್ದಾರಿ ಮಂಗಳೂರು- ಬೆಂಗಳೂರು ಹೆದ್ದಾರಿಯ ಲವತ್ತಡ್ಕ ಬಳಿಯ ಕರ್ತಡ್ಕ ಪ್ರದೇಶದ ಜನರ ಮಳೆಗಾಲದ ನರಕ ಸದೃಶ್ಯ ಚಿತ್ರಣಕ್ಕೆ ಇತಿಶ್ರೀ ಹಾಡಲು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂಬ ಆರೋಪ ವ್ಯಕ್ತವಾಗಿದೆ.

    35ಕ್ಕೂ ಹೆಚ್ಚು ಕುಟುಂಬ ಜನರು, ವಿದ್ಯಾರ್ಥಿಗಳು, ವೃದ್ಧರು, ಅನಾರೋಗ್ಯ ಪೀಡಿತರು ಸೇರಿದಂತೆ ಮಳೆಗಾಲದಲ್ಲಿ ಈ ಅಪಾಯಕಾರಿಯಾಗಿ ತೋಡನ್ನು ಪಾಲದ ಮೇಲೆ ಸಂಚರಿಸಿ ದಾಟಬೇಕಿದೆ. ಬೇಸಿಗೆಯಲ್ಲಿ ಇದೇ ತೋಡಿಗೆ ಸ್ಥಳೀಯರೇ ಹಣ ಹಾಕಿ ಸಿಮೆಂಟ್ ಪೈಪ್ ಹಾಕಿ ರಸ್ತೆ ನಿರ್ಮಿಸುತ್ತಾರೆ. ಮಳೆಗಾಲದಲ್ಲಿ ಅದು ಕೊಚ್ಚಿಕೊಂಡು ಹೋಗಿ ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ. ಬಳಿಕ ಮರದ ಪಾಲದ ಕಾಲುಸಂಕದಲ್ಲಿ ಸಂಚರಿಸುತ್ತಾರೆ. ಆರೇಳು ತಿಂಗಳು ಮರದ ಪಾಲದಲ್ಲಿ ಭಯದ ನಡಿಗೆ ಹಲವಾರು ದಶಕಗಳಿಂದ ನಡೆಯುತ್ತಿದೆ.

    ಚುನಾವಣೆ ವೇಳೆ ಭರವಸೆ: ಚುನಾವಣೆ ಸಂದರ್ಭ ಮತಯಾಚನೆಗೆ ಬರುವ ಎಲ್ಲ ಪಕ್ಷದ ಅಭ್ಯರ್ಥಿಗಳಲ್ಲಿ ಇಲ್ಲಿ ಸರ್ವಋತು ಸೇತುವೆ ನಿರ್ಮಿಸಲು ಮನವಿ ಮಾಡಿಕೊಂಡಲ್ಲಿ, ಸೇತುವೆ ನಿರ್ಮಿಸುತ್ತೇವೆ ಎಂಬ ಭರವಸೆ ನೀಡುತ್ತಾ ಬಂದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕರ್ತಡ್ಕದಿಂದ ಹೊರ ಪ್ರದೇಶಕ್ಕೆ ತೆರಳಲು ತೋಡೊಂದನ್ನು ದಾಟಬೇಕಿದೆ. ಇಲ್ಲಿ ಸೇತುವೆ ನಿರ್ಮಿಸುವಂತೆ ಇಲ್ಲಿನ ನಿವಾಸಿಗಳು ಸ್ಥಳೀಯಾಡಳಿತ, ಸ್ಥಳೀಯ ಜನಪ್ರತಿನಿಧಿಗಳಿಗೆ, ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒ, ಲೋಕೋಪಯೋಗಿ ಸಚಿವರು, ರಾಜ್ಯ ಸರ್ಕಾರದ ಮುಖ್ಯ ಕಾರ‌್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದಾರೆ. ತಕ್ಷಣ ಇಲ್ಲಿಗೆ ಸರ್ವಋತು ಸೇತುವೆ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

    10-15 ವರ್ಷಗಳಿಂದ ಇಲ್ಲಿ ಸೇತುವೆ ನಿರ್ಮಿಸುವಂತೆ ಸಂಬಂಧಿಸಿದ ಎಲ್ಲರಿಗೂ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಚುನಾವಣೆ ವೇಳೆ ಭರವಸೆ ನೀಡುತ್ತಾರೆಯೇ ವಿನಾ ಕ್ರಮ ಕೈಗೊಂಡಿಲ್ಲ. ನಮ್ಮ ಸಂಕಷ್ಟ ಅರಿತು ಇನ್ನಾದರೂ ಇಲ್ಲಿ ಸೇತುವೆ ನಿರ್ಮಿಸಲು ಸಂಬಂಧಿಸಿದವರು ಮುಂದಾಗಬೇಕು.
    -ಲಿಂಗಪ್ಪ ಗೌಡ ಕರ್ತಡ್ಕ, ಸ್ಥಳೀಯ ನಿವಾಸಿ

    ಕರ್ತಡ್ಕದಲ್ಲಿ ಸೇತುವೆಗೆ ಸುಮಾರು 50 ಲಕ್ಷ ರೂ. ಅನುದಾನ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಗ್ರಾಪಂಗೆ ಅಷ್ಟು ಅನುದಾನ ಬರುವುದಿಲ್ಲ. ಬೇರೆ ಇಲಾಖೆಯಿಂದ ಅನುದಾನ ಭರಿಸಬೇಕಾಗುತ್ತದೆ.
    -ಮಹೇಶ್, ಪಿಡಿಒ, ಕೌಕ್ರಾಡಿ ಗ್ರಾಪಂ

    ಕರ್ತಡ್ಕದಲ್ಲಿ ಸೇತುವೆ ನಿರ್ಮಾಣದ ಕುರಿತು ಬೇಡಿಕೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ನನ್ನದು ಪ್ರಥಮ ಅವಧಿಯಾದ್ದರಿಂದ, ಮುಂದೆ ಈ ಬಗ್ಗೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ.
    -ವನಿತಾ, ಅಧ್ಯಕ್ಷೆ, ಕೌಕ್ರಾಡಿ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts