More

    ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ: ಇಬ್ಬರು ಶೂಟರ್‌, ಒಬ್ಬ ಸಹಚರನ ಬಂಧನ

    ನವದೆಹಲಿ: ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಶೂಟರ್‌ಗಳು ಮತ್ತು ಒಬ್ಬ ಸಹಚರ ಸೇರಿದಂತೆ ಮೂವರನ್ನು ಚಂಡೀಗಢದಲ್ಲಿ ಬಂಧಿಸಲಾಗಿದೆ. ಮೊಬೈಲ್ ಫೋನ್ ಸ್ಥಳಗಳನ್ನು ಅನುಸರಿಸಿ ಪೊಲೀಸರು ಈ ಶೂಟರ್‌ಗಳನ್ನು ಪತ್ತೆ ಹಚ್ಚಿದ್ದಾರೆ.

    ದೆಹಲಿ ಕ್ರೈಂ ಬ್ರಾಂಚ್ ಮತ್ತು ರಾಜಸ್ಥಾನ ಪೊಲೀಸರು ತಡರಾತ್ರಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಚಂಡೀಗಢದಿಂದ ಇವರನ್ನು ಬಂಧಿಸಿದ್ದಾರೆ.

    ಇಬ್ಬರು ಶೂಟರ್‌ಗಳಾದ ರೋಹಿತ್ ರಾಥೋಡ್ ಮತ್ತು ನಿತಿನ್ ಫೌಜಿ ಹಾಗೂ ಉಧಮ್ ಎಂಬ ಮೂರನೇ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ದೆಹಲಿ ಪೊಲೀಸರು ರೋಹಿತ್ ಮತ್ತು ಉಧಮ್ ಅವರನ್ನು ದೆಹಲಿಗೆ ಕರೆತಂದಿದ್ದರೆ, ನಿತಿನ್ ಫೌಜಿ ರಾಜಸ್ಥಾನ ಪೊಲೀಸರ ವಶದಲ್ಲಿದ್ದಾನೆ. ಇವರ ಬಂಧನಕ್ಕಾಗಿ ಮಾಹಿತಿ ನೀಡುವರಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಈ ಹಿಂದೆ ಪೊಲೀಸರು ಘೋಷಿಸಿದ್ದರು.

    ಕೊಲೆಯ ನಂತರ ಆರೋಪಿಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟು ರಾಜಸ್ಥಾನದಿಂದ ಹರಿಯಾಣದ ಹಿಸಾರ್ ತಲುಪಿದ್ದಾರೆ. ನಂತರ ಹಿಮಾಚಲ ಪ್ರದೇಶದ ಮನಾಲಿಗೆ ಹೋಗಿದ್ದಾರೆ. ನಂತರ, ಅವರು ಚಂಡೀಗಢಕ್ಕೆ ಮರಳಿದ್ದಾರೆ. ಇಲ್ಲಿ ಇವರನ್ನು ಬಂಧಿಸಲಾಯಿತು ಎಂದು ಪೊಲೀಸರ ತಿಳಿಸಿದ್ದಾರೆ.

    ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥರಾಗಿರುವ ದಿನೇಶ್ ಎಂಎನ್ ಅವರು, “ಬಂಧಿತರ ವಿಚಾರಣೆ ಈಗಾಗಲೇ ಪ್ರಾರಂಭವಾಗಿದೆ. ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು” ಎಂದು ತಿಳಿಸಿದ್ದಾರೆ.

    ನವೆಂಬರ್ 5 ರಂದು ರಾಜಸ್ಥಾನದ ಜೈಪುರದಲ್ಲಿರುವ ಮನೆಯೊಳಗೆ ಅಪರಿಚಿತ ದುಷ್ಕರ್ಮಿಗಳು ಗೊಗಮೆಡಿ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಹತ್ಯೆಯ ನಂತರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿರುವ ದರೋಡೆಕೋರ ರೋಹಿತ್ ಗೋಡಾರಾ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಗೊಗಮೆಡಿ ಅವರ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದರು.

    ಶೂಟರ್‌ಗಳು ತಲೆಮರೆಸಿಕೊಂಡಿರುವಾಗ, ಗೋದಾರಾ ಅವರ ಆಪ್ತ ಸಹಾಯಕರಾದ ವೀರೇಂದ್ರ ಚಾಹನ್ ಮತ್ತು ದನರಾಮ್ ಅವರೊಂದಿಗೆ ಸಂಪರ್ಕದಲ್ಲಿದ್ದರು, ಅವರ ಸೂಚನೆಯ ಮೇರೆಗೆ ಕೊಲೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

    ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆಯು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇಬ್ಬರು ವ್ಯಕ್ತಿಗಳು ಗೊಗಮೇಡಿ ಅವರಿಗೆ ಗುಂಡು ಹಾರಿಸುತ್ತಿರುವ ದೃಶ್ಯಾವಳಿಗಳು ಇದರಲ್ಲಿದ್ದವು, ಇನ್ನೊಬ್ಬ ವ್ಯಕ್ತಿ ಬಾಗಿಲಲ್ಲಿ ನಿಂತಿದ್ದ. ಗುಂಡೇಟಿನ ಗಾಯಗಳಾಗಿದ್ದ ಗೊಗಮೆಡಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

    ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ದಾಳಿಕೋರರಲ್ಲಿ ಒಬ್ಬನಾದ ನವೀನ್ ಶೇಖಾವತ್ ಕೂಡ ಗೊಗಮೇಡಿ ಅವರ ನಿವಾಸದಲ್ಲಿ ಸಾವನ್ನಪ್ಪಿದ್ದಾನೆ.

    ಈ ಘಟನೆಯು ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು, ಗೊಗಮೆಡಿ ಬೆಂಬಲಿಗರು ಬೀದಿಗಿಳಿದು ಪ್ರತಿಭಟಿಸಿದರು. ನವೆಂಬರ್ 26 ರಂದು ಬಂದ್ ಆಚರಿಸಲಾಯಿತು. ವಿಧಾನಸಭೆ ಚುನಾವಣೆಯ ನಂತರ ರಾಜ್ಯದಲ್ಲಿ ನಡೆದ ಆಡಳಿತ ಬದಲಾವಣೆಯ ನಡುವೆ ನಡೆದ ಕೊಲೆಯ ತನಿಖೆಗಾಗಿ ಹೆಚ್ಚುವರಿ ಮಹಾನಿರ್ದೇಶಕ (ಅಪರಾಧ) ದಿನೇಶ್ ಎಂಎನ್ ನೇತೃತ್ವದಲ್ಲಿ ರಾಜಸ್ಥಾನ ಪೊಲೀಸರು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ.

    ಕುಟುಂಬ ರಾಜಕಾರಣ ವಿರೋಧಿಸಿದ್ದ ಮಾಯಾವತಿ; ಸೋದರಳಿಯನನ್ನೇ ಈಗ ಉತ್ತರಾಧಿಕಾರಿಯಾಗಿ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts