More

    ರಣಜಿಯಲ್ಲಿ ಕರ್ನಾಟಕಕ್ಕೆ 200ನೇ ಜಯ; ಮುಂಬೈ ವಿರುದ್ಧ 5 ವಿಕೆಟ್ ಗೆಲುವು, ಮಿಂಚಿದ ಪ್ರತೀಕ್, ಸಮರ್ಥ್, ಪಡಿಕಲ್

    ರಣಜಿಯಲ್ಲಿ ಕರ್ನಾಟಕಕ್ಕೆ 200ನೇ ಜಯ; ಮುಂಬೈ ವಿರುದ್ಧ 5 ವಿಕೆಟ್ ಗೆಲುವು, ಮಿಂಚಿದ ಪ್ರತೀಕ್, ಸಮರ್ಥ್, ಪಡಿಕಲ್ಮುಂಬೈ: ಕರ್ನಾಟಕ ತಂಡ ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯಲ್ಲಿ 200ನೇ ಪಂದ್ಯ ಗೆಲುವಿನ ಮೈಲಿಗಲ್ಲು ನೆಟ್ಟಿದೆ. ಸರ್ವಾಂಗೀಣ ನಿರ್ವಹಣೆಯೊಂದಿಗೆ ಆತಿಥೇಯ ಮುಂಬೈ ತಂಡವನ್ನು ಬಗ್ಗುಬಡಿದ ಪ್ರವಾಸಿ ಕರ್ನಾಟಕ ತಂಡ 86ನೇ ಆವೃತ್ತಿಯ ರಣಜಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಎರಡೂವರೆ ದಿನಗಳಲ್ಲೇ 5 ವಿಕೆಟ್​ಗಳಿಂದ ಜಯ ದಾಖಲಿಸುವ ಮೂಲಕ ಈ ಸಾಧನೆ ಮಾಡಿತು.

    ದೇಶೀಯ ಕ್ರಿಕೆಟ್​ನ ಕಿಂಗ್ ಎನಿಸಿರುವ ಮುಂಬೈ ಎದುರು ಕಳೆದ 7 ವರ್ಷಗಳಲ್ಲಿ ಕರ್ನಾಟಕ ದಾಖಲಿಸಿದ 4ನೇ ಗೆಲುವು ಇದಾಗಿದೆ. ಪ್ರಸಕ್ತ ಟೂರ್ನಿಯಲ್ಲಿ 2ನೇ ಜಯ ಸಾಧಿಸಿದ 8 ಬಾರಿಯ ಚಾಂಪಿಯನ್ ತಂಡ 16 ಅಂಕಗಳೊಂದಿಗೆ ಎ ಮತ್ತು ಬಿ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿತ ಕಂಡಿತು. ಮತ್ತೊಂದೆಡೆ, ಮುಂಬೈ ತಂಡ ತವರಿನಂಗಳದಲ್ಲೇ ಸತತ 2ನೇ ಸೋಲಿಗೆ ಶರಣಾಯಿತು.

    ರಣಜಿಯಲ್ಲಿ ಕರ್ನಾಟಕಕ್ಕೆ 200ನೇ ಜಯ; ಮುಂಬೈ ವಿರುದ್ಧ 5 ವಿಕೆಟ್ ಗೆಲುವು, ಮಿಂಚಿದ ಪ್ರತೀಕ್, ಸಮರ್ಥ್, ಪಡಿಕಲ್ಬಾಂದ್ರಾ ಕುರ್ಲಾದಲ್ಲಿರುವ ಶರದ್ ಪವಾರ್ ಸ್ಟೇಡಿಯಂನಲ್ಲಿ ಶನಿವಾರ ಮುಕ್ತಾಯಗೊಂಡ ಪಂದ್ಯದಲ್ಲಿ 5 ವಿಕೆಟ್​ಗೆ 109 ರನ್​ನಿಂದ ದಿನದಾಟ ಆರಂಭಿಸಿದ ಮುಂಬೈ, ವೇಗಿ ಪ್ರತೀಕ್ ಜೈನ್ (11ಕ್ಕೆ 4) ಮಾರಕ ದಾಳಿಗೆ ನಲುಗಿ 149 ರನ್​ಗಳಿಗೆ ಸರ್ವಪತನ ಕಂಡಿತು. ಇದರಿಂದ 126 ರನ್ ಸವಾಲು ಪಡೆದ ಕರ್ನಾಟಕ ತಂಡ, ಆರಂಭಿಕರಾದ ದೇವದತ್ ಪಡಿಕಲ್ (50 ರನ್, 46 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಆರ್. ಸಮರ್ಥ್ (34ರನ್, 55 ಎಸೆತ, 2 ಬೌಂಡರಿ) ಜೋಡಿಯ ಬಿರುಸಿನ ಬ್ಯಾಟಿಂಗ್ ಫಲವಾಗಿ 24.3 ಓವರ್​ಗಳಲ್ಲಿ 5 ವಿಕೆಟ್​ಗೆ 129 ರನ್​ಗಳಿಸಿ ಇನ್ನೂ ಒಂದೂವರೆ ದಿನದಾಟ ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು. -ಏಜೆನ್ಸೀಸ್

    ಪಡಿಕಲ್-ಸಮರ್ಥ್ ಏಕದಿನ ಶೈಲಿ ಚೇಸಿಂಗ್

    ಸಾಧಾರಣ ಗುರಿ ಬೆನ್ನಟ್ಟಿದ ಆರಂಭಿಕರಾದ ಸಮರ್ಥ್ ಹಾಗೂ ದೇವದತ್ ಪಡಿಕಲ್ ಬಿರುಸಿನ ಆರಂಭ ನೀಡಿದರು. ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ ಈ ಜೋಡಿ ತಂಡದ ಗೆಲುವನ್ನು ಸುಲಭವಾಗಿಸಿತು. ಈ ಜೋಡಿ ಭೋಜನ ವಿರಾಮದ ವೇಳೆಗೆ 77 ರನ್ ಕಲೆಹಾಕಿತು.

    ಇದರಿಂದ 10 ವಿಕೆಟ್ ಗೆಲುವಿನೊಂದಿಗೆ ಬೋನಸ್ ಅಂಕ ಬಾಚಿಕೊಳ್ಳುವ ನಿರೀಕ್ಷೆ ಮೂಡಿತ್ತು. ಆದರೆ, ಭೋಜನ ವಿರಾಮದ ಬಳಿಕ ಮೊದಲ ಓವರ್​ನಲ್ಲೇ ಈ ಜೋಡಿ ಬೇರ್ಪಟ್ಟಿತು. ಬಿರುಸಿನ ಅರ್ಧಶತಕ ಸಿಡಿಸಿದ್ದ ಪಡಿಕಲ್, ಶಶಾಂಕ್ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದರು. ಪಡಿಕಲ್ ನಿರ್ಗಮನದೊಂದಿಗೆ ರಾಜ್ಯ ತಂಡ ದಿಢೀರ್ ಕುಸಿತ ಕಂಡಿತು. ಬಹುತೇಕ ಗೆಲುವಿನಂಚಿನಲ್ಲಿದ್ದರೂ ಅನಾವಶ್ಯಕವಾಗಿ 4 ವಿಕೆಟ್ ಕೈಚೆಲ್ಲಿತು. ಅಭಿಷೇಕ್ ರೆಡ್ಡಿ (4) ಮತ್ತೊಮ್ಮೆ ವಿಫಲರಾದರೆ, ಕೆಲ ಹೊತ್ತಿನಲ್ಲೇ ಸಮರ್ಥ್ ಕೂಡ 2ನೇ ಅರ್ಧಶತಕ ಪೂರೈಸುವ ಅವಕಾಶ ತಪ್ಪಿಸಿಕೊಂಡರು. ಪದಾರ್ಪಣೆ ಪಂದ್ಯವಾಡಿದ ರೋಹನ್ ಕದಂ (21), ಹಾಗೂ ನಾಯಕ ಕರುಣ್ ನಾಯರ್ (10) ಗೆಲುವಿನ ಸನಿಹದಲ್ಲಿ ಎಡವಿದರು. ಕೇವಲ 51 ರನ್ ಅಂತರದಲ್ಲಿ 5 ವಿಕೆಟ್ ಕೈಚೆಲ್ಲಿದರೂ, ಅಂತಿಮವಾಗಿ ಕನ್ನಡಿಗರ ಪಾಳಯ ಗೆಲುವಿನ ಅಲೆಯಲ್ಲಿ ತೇಲಾಡಿತು.

    ಆಯ್ಕೆ ಸಮರ್ಥಿಸಿಕೊಂಡ ಸಮರ್ಥ್!

    ಹಿಂದಿನ ಪಂದ್ಯಗಳಲ್ಲಿ ಸಿಕ್ಕ ಅವಕಾಶವನ್ನು ಕೈಚೆಲ್ಲಿದ್ದರಿಂದ ಮುಂಬೈ ಎದುರು ಅಂತಿಮ 15ರಲ್ಲೂ ಸ್ಥಾನ ಪಡೆಯಲು ವಿಫಲರಾಗಿದ್ದ ರವಿಕುಮಾರ್ ಸಮರ್ಥ್, ಅದೃಷ್ಟದ ಬಲದಿಂದ ಕಡೇ ಕ್ಷಣದಲ್ಲಿ ತಂಡಕ್ಕೆ ಮರಳಿದ್ದರು. ಟೆಸ್ಟ್ ಆರಂಭಿಕ ಮಯಾಂಕ್ ಅಗರ್ವಾಲ್ ಭಾರತ ಎ ತಂಡದೊಂದಿಗೆ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳುತ್ತಿರುವುದರಿಂದ ಅವರಿಗೆ ಬಿಸಿಸಿಐ ವಿಶ್ರಾಂತಿ ಸೂಚಿಸಿತ್ತು. ಇದರಿಂದಾಗಿ ಸಮರ್ಥ್ ತಂಡಕ್ಕೆ ಆಯ್ಕೆಯಾಗಿದ್ದಲ್ಲದೆ, ಹನ್ನೊಂದರ ಬಳಗದಲ್ಲೂ ಸ್ಥಾನಗಿಟ್ಟಿಸಿಕೊಂಡಿದ್ದರು. ಇದೀಗ ಎರಡೂ ಇನಿಂಗ್ಸ್​ಗಳಲ್ಲೂ ತಂಡಕ್ಕೆ ಆಸರೆಯಾಗುವ ಮೂಲಕ ಪಂದ್ಯಶ್ರೇಷ್ಠರಾಗಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಪ್ರತೀಕ್ ದಾಳಿಗೆ ಮುಂಬೈ ಧೂಳೀಪಟ

    ಸೋಲಿನ ಖಚಿತತೆಯಿಂದಲೇ ದಿನದಾಟ ಆರಂಭಿಸಿದ ಮುಂಬೈ ತಂಡಕ್ಕೆ ಎಡಗೈ ವೇಗದ ಬೌಲರ್ ಪ್ರತೀಕ್ ಜೈನ್ ಆಘಾತ ನೀಡಿದರು. 2ನೇ ದಿನದ ಮೊತ್ತಕ್ಕೆ ಮುಂಬೈ ಕೇವಲ 40 ರನ್ ಸೇರಿಸಿ ಉಳಿದ 4 ವಿಕೆಟ್ ಕೈಚೆಲ್ಲಿತು. 59 ರನ್​ಗಳಿಸಿ ಕ್ರೀಸ್​ನಲ್ಲಿದ್ದ ಸರ್ಫ್ರಾಜ್ ಖಾನ್ (71 ರನ್, 140 ಎಸೆತ, 8 ಬೌಂಡರಿ, 2 ಸಿಕ್ಸರ್) ಏಕಾಂಗಿ ನಿರ್ವಹಣೆಯೊಂದಿಗೆ ತಂಡದ ಮೊತ್ತ ಹಿಗ್ಗಿಸಲು ಯತ್ನಿಸಿದರು.

    ಪ್ರತೀಕ್ ಜೈನ್ ಮಾರಕ ದಾಳಿಗೆ ಆತಿಥೇಯ ತಂಡದ ಬಾಲಂಗೋಚಿಗಳು ಪೆವಿಲಿಯನ್ ಪರೇಡ್ ನಡೆಸಿದರು. 2ನೇ ದಿನದಾಟದ ಕೊನೇ ಎಸೆತದಲ್ಲಿ ಶಮ್್ಸ ಮುಲಾನಿ ಔಟಾಗಿದ್ದರಿಂದ ಸರ್ಫ್ರಾಜ್ ಜತೆ ಇನಿಂಗ್ಸ್ ಮುಂದುವರಿಸಿದ ಶಶಾಂಕ್ (10) 15 ರನ್ ಪೇರಿಸಿ ನಿರ್ಗಮಿಸಿದರು. ಕೆಳಕ್ರಮಾಂಕದ ಬ್ಯಾಟ್ಸ್​ಮನ್​ಗಳಿಂದ ಬೆಂಬಲ ಗಿಟ್ಟಿಸಿಕೊಳ್ಳಲು ವಿಫಲರಾದ ಸರ್ಫ್ರಾಜ್ ಜತೆಗಾರರಿಲ್ಲದೆ ಅಜೇಯರಾಗಿ ಉಳಿದರು. ದಿನದ 4 ವಿಕೆಟ್​ಗಳೂ ಪ್ರತೀಕ್ ಪಾಲಾದವು. ಭುಜದ ನೋವಿನಿಂದಾಗಿ ಎನ್​ಸಿಎಯಿಂದ ಬುಲಾವ್ ಪಡೆದಿರುವ ಪೃಥ್ವಿ ಷಾ ಬ್ಯಾಟಿಂಗ್​ಗೆ ಇಳಿಯಲಿಲ್ಲ.

    ರಣಜಿಯಲ್ಲಿ ಗುಜರಾತ್ ಬಳಿಕ ಮುಂಬೈ ವಿರುದ್ಧ 4 ಜಯ ಕಂಡ ಮೊದಲ ತಂಡ ಕರ್ನಾಟಕ.

    ಕರ್ನಾಟಕ ತಂಡದ 200 ಗೆಲುವುಗಳ ಪೈಕಿ ಕೇರಳ ಎದುರು ಅತಿಹೆಚ್ಚು ಅಂದರೆ 40 ಗೆಲುವು ಸಾಧಿಸಿದೆ. ಆಂಧ್ರ (33), ತ.ನಾಡು (18), ಗೋವಾ(13), ಹೈದರಾಬಾದ್ (13), ಮಹಾರಾಷ್ಟ್ರ (9), ದೆಹಲಿ (7), ರಾಜಸ್ಥಾನ (7), ಒಡಿಶಾ (6), ಅಸ್ಸಾಂ (5), ಬರೋಡ (5), ಬಿಹಾರ (5), ಹರಿಯಾಣ (5), ಪಂಜಾಬ್ (5), ರೈಲ್ವೇಸ್ (5), ಬಂಗಾಳ (4), ಉ. ಪ್ರದೇಶ (4), ಮುಂಬೈ (4), ಹಿ. ಪ್ರದೇಶ (2), ಜಮ್ಮು ಕಾಶ್ಮೀರ (2), ಮಧ್ಯ ಪ್ರದೇಶ (2), ಸೌರಾಷ್ಟ್ರ (2), ವಿದರ್ಭ (2), ಛತ್ತೀಸ್​ಗಢ (1), ಗುಜರಾತ್ (1) ವಿರುದ್ಧ ಜಯ ದಾಖಲಿಸಿದೆ.

    • ಮುಂಬೈ ಪ್ರಥಮ ಇನಿಂಗ್ಸ್: 194
    • ಕರ್ನಾಟಕ ಪ್ರಥಮ ಇನಿಂಗ್ಸ್: 218
    • ಮುಂಬೈ ದ್ವಿತೀಯ ಇನಿಂಗ್ಸ್: 50 ಓವರ್​ಗಳಲ್ಲಿ 149 (ಶನಿವಾರ 5 ವಿಕೆಟ್​ಗೆ 109)
    • ಸರ್ಫ್ರಾಜ್ ಖಾನ್ ಅಜೇಯ 71
    • ಶಶಾಂಕ್ ಸಿ ಸಮರ್ಥ್ ಬಿ ಪ್ರತೀಕ್ ಜೈನ್ 10
    • ತುಷಾರ್ ದೇಶಪಾಂಡೆ ಬಿ ಪ್ರತೀಕ್ ಜೈನ್ 6
    • ದೀಪಕ್ ಶೆಟ್ಟಿ ಸಿ ಶರತ್ ಬಿ ಪ್ರತೀಕ್ ಜೈನ್ 0
    • ರಾಯ್ಸ್ಟನ್ ಡಯಾಸ್ ಬಿ ಪ್ರತೀಕ್ ಜೈನ್ 0

    ಪೃಥ್ವಿ ಷಾ ಗಾಯದಿಂದಾಗಿ ಗೈರು

    ಇತರ: 10. ವಿಕೆಟ್ ಪತನ: 5-109, 6-134, 7-145, 8-145, 9-149. ಬೌಲಿಂಗ್: ಮಿಥುನ್ 16-2-62-3, ವಿ. ಕೌಶಿಕ್ 12-6-23-2, ಪ್ರತೀಕ್ ಜೈನ್ 9-3-11-4, ರೋನಿತ್ ಮೋರೆ 8-1-20-0, ಕರುಣ್ ನಾಯರ್ 2-0-7-0, ಶ್ರೇಯಸ್ ಗೋಪಾಲ್ 2-0-20-0, ಸಮರ್ಥ್ 1-0-5-0.

    • ಕರ್ನಾಟಕ ದ್ವಿತೀಯ ಇನಿಂಗ್ಸ್: 24.3 ಓವರ್​ಗಳಲ್ಲಿ 5 ವಿಕೆಟ್​ಗೆ 129 (ಗುರಿ: 126)
    • ಆರ್. ಸಮರ್ಥ್ ಬಿ ಮುಲಾನಿ 34
    • ಪಡಿಕಲ್ ಎಲ್​ಬಿಡಬ್ಲ್ಯು ಬಿ ಶಶಾಂಕ್ 50
    • ಅಭಿಷೇಕ್ ರೆಡ್ಡಿ ಸಿ ಡಯಾಸ್ ಬಿ ಶಶಾಂಕ್ 4
    • ರೋಹನ್ ಕದಂ ಸಿ ತಾರೆ ಬಿ ಶಶಾಂಕ್ 21
    • ಕರುಣ್ ನಾಯರ್ ಸಿ ತಾರೆ ಬಿ ಶಶಾಂಕ್ 10
    • ಶ್ರೇಯಸ್ ಗೋಪಾಲ್ ಔಟಾಗದೆ 5
    • ಬಿಆರ್ ಶರತ್ ಔಟಾಗದೆ 4

    ಇತರ: 1. ವಿಕೆಟ್ ಪತನ: 1-78, 2-84, 3-91, 4-118, 5-121. ಬೌಲಿಂಗ್: ರಾಯ್ಸ್ಟನ್ ಡಯಾಸ್ 1-0-7-0, ಶಮ್್ಸ ಮುಲಾನಿ 11.3-1-56-1, ಶಶಾಂಕ್ 10-0-52-4, ತುಷಾರ್ 2-0-14-0.

    ರಣಜಿಯಲ್ಲಿ ಕರ್ನಾಟಕಕ್ಕೆ 200ನೇ ಜಯ; ಮುಂಬೈ ವಿರುದ್ಧ 5 ವಿಕೆಟ್ ಗೆಲುವು, ಮಿಂಚಿದ ಪ್ರತೀಕ್, ಸಮರ್ಥ್, ಪಡಿಕಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts