More

    ಮುಷ್ಕರಕ್ಕೆ ಮುಂದಾಗಿರುವ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಖಡಕ್​ ಎಚ್ಚರಿಕೆ

    ಬೆಂಗಳೂರು: 7ನೇ ವೇತನ ಆಯೋಗ ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮುಷ್ಕರಕ್ಕೆ ಮುಂದಾಗಿರುವ ಸರ್ಕಾರಿ ನೌಕರರ ಸಂಘಗಳಿಗೆ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ. ಅನುಮತಿ ಪಡೆಯದೇ ಕರ್ತವ್ಯಕ್ಕೆ ಗೈರಾದರೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಸರ್ಕಾರ ಆದೇಶ ಹೊರಡಿಸಿದೆ.

    ಕೆಲಸಕ್ಕೆ ಗೈರಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿರುವ ನೌಕರರ ನಡೆಗೆ ಸುತ್ತೋಲೆಯ ಮೂಲಕ ಸರ್ಕಾರ ಎಚ್ಚರಿಕೆ ನೀಡಿದೆ. ಅನುಮತಿ ಪಡೆಯದೇ ಗೈರಾದರೆ ಯಾವುದೇ ಸರ್ಕಾರದ ಅಧಿಕೃತ ಕೆಲಸ ನಡೆದಿಲ್ಲ ಎಂದು ತೀರ್ಮಾನಿಸಲಾಗುತ್ತದೆ ಮತ್ತು ಶಿಸ್ತುಕ್ರಮದ ತೆಗೆದುಕೊಳ್ಳಲಾಗುತ್ತದೆ ವಿಶೇಷಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿಯವರ ಕಚೇರಿ ಆದೇಶ ಹೊರಡಿಸಿದೆ.

    ಸರ್ಕಾರಿ ನೌಕರರು ತಮ್ಮ ಪಟ್ಟುಬಿಡದ ಹಿನ್ನೆಲೆಯಲ್ಲಿ ನಿನ್ನೆ (ಫೆ.28) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜತೆಗೆ ಸಿಎಂ ಸಭೆ ನಡೆಸಿದ್ದು, ಫಲಿತಾಂಶ ಸದ್ಯಕ್ಕೆ ಬಗೆಹರಿಯದ ಗೊಂದಲವಾಗಿದೆ.

    ಇದನ್ನೂ ಓದಿ: ಹೆಚ್ಚು ಪ್ರೋಟೀನ್ ಆಹಾರ, ಟೀ ಬೇಡ! ಬಿಸಿಗಾಳಿಯಿಂದ ಆರೋಗ್ಯ ರಕ್ಷಣೆಗೆ ಕೇಂದ್ರ ಆರೋಗ್ಯ ಸಚಿವಾಲಯದ ಸಲಹೆ

    ಸಭೆಯ ನಂತರ ಸಿಎಂ ಬೊಮ್ಮಾಯಿ‌ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದು, ನೌಕರರು ಸರ್ಕಾರದ ಭಾಗವಾಗಿದ್ದಾರೆ. ಮುಕ್ತ, ಸೌಹಾರ್ದಯುತವಾಗಿ ಮಾತುಕತೆ ನಡೆದಿದೆ. ಎರಡು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ನಾವು ಕೂಡ ಕಾನೂನಿನ ಇತಿಮಿತಿ, ಹಣಕಾಸಿನ ಪರಿಸ್ಥಿತಿ ಅವಲೋಕಿಸಬೇಕಾಗುತ್ತದೆ ಎಂದಿದ್ದೇವೆ ಎಂಬುದಾಗಿ ತಿಳಿಸಿದ್ದಾರೆ.

    ಕೋವಿಡ್ ಸಂದರ್ಭದಲ್ಲಿ ವೇತನ ಕಡಿತ ಮಾಡಿಲ್ಲ. ಭತ್ಯೆಯನ್ನು 24 ತಾಸಿನಲ್ಲಿ ಭರಿಸಿದ್ದೇವೆ ಎಂದು ತಿಳಿಸಿದಾಗ ಅವರು ಪ್ರಶಂಸಿಸಿದ್ದಾರೆ. ನೌಕರರ ಸಂಘದ ಜತೆಗೆ ಚರ್ಚಿಸಿ ತಿಳಿಸಲು ಮಾತುಕತೆಗೆ ಬಂದಿದ್ದ ಪದಾಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವುದಕ್ಕೆ ಸರ್ಕಾರ ಮುಕ್ತವಾಗಿದೆ ಎಂದು ಹೇಳಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸುವ‌ ವಿಶ್ವಾಸವಿದೆ ಎಂದು ಸಿಎಂ ತಿಳಿಸಿದ್ದಾರೆ.

    ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹೇಳುವುದೇನು?
    ಸಿಎಂ ಎರಡು ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದಿಸಿದ್ದಾರೆ. ಅದಕ್ಕಾಗಿ ಸಿಎಂ 10 ದಿನಗಳ ಕಾಲಾವಕಾಶ ಕೇಳಿದ್ದು, ಸಂಘದ ಸಭೆಯಲ್ಲಿ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದ್ದಾರೆ. ಸಂಧಾನ ಸಫಲ-ವಿಫಲ ಎಂಬ ವ್ಯಾಖ್ಯಾನ ಬೇಡವೆಂದು ಮನವಿ ಮಾಡಿಕೊಂಡಿರುವ ಅವರು, ಸಿಎಂ ಹೇಳಿದ ಅಭಿಪ್ರಾಯಗಳನ್ನು ಸಂಘದ ಸಭೆಯಲ್ಲಿ ಚರ್ಚಿಸಿ ನಿರ್ಣಯ ತಿಳಿಸುತ್ತೇವೆ ಎಂದಿದ್ದಾರೆ. ಅಲ್ಲದೆ ಪೂರ್ವ ನಿರ್ಧಾರದಂತೆ ಮುಷ್ಕರ ಮುಂದುವರಿಯಲಿದೆ. ತಡರಾತ್ರಿಯಾದರೂ ಸರಿ ಸಂಘದ ಒಟ್ಟು ಅಭಿಪ್ರಾಯವನ್ನು ಸರ್ಕಾರದ ಗಮನಕ್ಕೆ ತರುತ್ತೇವೆ ಎಂದಿದ್ದಾರೆ.

    ಮುಷ್ಕರ ಒಂದು ದಿನವೋ ಎರಡು ದಿನವೋ ಹಾಗೂ ನಿರ್ಣಯ ಸಕಾರಾತ್ಮಕವೋ ನಕಾರಾತ್ಮಕವೋ ಎಂದು ಹೇಳಲಾಗದು. ಆದರೆ ಬೇಡಿಕೆ ಈಡೇರಿಸುವ ವಿಚಾರದಲ್ಲಿ ಸಿಎಂ ಬೊಮ್ಮಾಯಿ‌ಗೆ ಸಹಮತವಿದೆ. ಕಾಲಾವಕಾಶ ನೀಡುವುದು ಸೇರಿ ಎಲ್ಲ ವಿಚಾರಗಳು ಚರ್ಚೆಯಾಗಲಿವೆ. ಸಂಘದ ಸಭೆಯಲ್ಲಿ ತೀರ್ಮಾನ, ಸಿಎಂ ಸ್ಪಂದನೆ ಮೇಲೆ ಎಲ್ಲವೂ ಅವಲಂಬಿತ ಎಂದಿರುವ ಷಡಾಕ್ಷರಿ, ಸಿಎಂ ಹೇಳಿದ ಎಲ್ಲವನ್ನೂ ಬಹಿರಂಗಪಡಿಸುವುದು ಅಸಾಧ್ಯ. ಅವರು ನಮ್ಮ ಮುಖ್ಯಸ್ಥರು. ಏಳನೇ ವೇತನ ಆಯೋಗದ ವಿಷಯದಲ್ಲಿ ಅವರ ನಿಲುವು ಬದಲಾಗಿಲ್ಲ. ಜಿಲ್ಲಾ ಅಧ್ಯಕ್ಷರ ಜತೆಗೆ ವರ್ಚುವಲ್, ರಾಜ್ಯ ಪದಾಧಿಕಾರಿಗಳ ಜತೆಗೆ ನೇರ ಸಭೆ ಇದೀಗ ನಡೆಯಲಿದೆ ಎಂದಿದ್ದಾರೆ.

    ಇದನ್ನೂ ಓದಿ: ಆನ್​ಲೈನ್​ನಲ್ಲಿ ಮಕ್ಕಳ ಶೋಷಣೆ: ಮಧ್ಯಪ್ರದೇಶದಲ್ಲಿ 4000 ಆರೋಪಿಗಳ ಬಂಧನಕ್ಕೆ ತಯಾರಿ

    ಒಟ್ಟಿನಲ್ಲಿ ಎರಡೂ ಕಡೆಯಿಂದ ಸ್ಪಷ್ಟ ನಿಲುವು ಹೊರಹೊಮ್ಮದ್ದರಿಂದ ಮತ್ತು ಇನ್ನೂ ಬಿರುಸಿನ ಬೆಳವಣಿಗೆಗಳು ನಡೆಯುತ್ತಿರುವುದರಿಂದ ನಾಳೆ ಏನಾಗಲಿದೆ? ಸರ್ಕಾರಿ ನೌಕರರ ಸಂಘದ ಮುಂದಿನ ನಡೆ ಏನು? ಸರ್ಕಾರ ಇನ್ಯಾವ ಆಯ್ಕೆಗಳನ್ನು ಮುಂದಿರಿಸಿಕೊಂಡಿದೆ ಎಂಬೆಲ್ಲ ಸಂಗತಿಗಳ ಕುರಿತು ಕುತೂಹಲ ಕೆರಳಿದೆ. ಇನ್ನೊಂದೆಡೆ ಸರ್ಕಾರಿ ನೌಕರರ ಸಂಘದ ಮುಷ್ಕರ-ಪ್ರತಿಭಟನೆ ಹಿನ್ನೆಲೆಯಲ್ಲಿ ನಾಳೆ ಸಾರ್ವಜನಿಕರು ಸರ್ಕಾರಿ ಸೇವೆಗಳನ್ನು ಪಡೆಯುವಲ್ಲಿ ತೊಂದರೆ ಎದುರಿಸಬೇಕಾಗುವ ಸಾಧ್ಯತೆಗಳು ಕೂಡ ಗೋಚರಿಸಿವೆ.

    ಹೆಚ್ಚು ಪ್ರೋಟೀನ್ ಆಹಾರ, ಟೀ ಬೇಡ! ಬಿಸಿಗಾಳಿಯಿಂದ ಆರೋಗ್ಯ ರಕ್ಷಣೆಗೆ ಕೇಂದ್ರ ಆರೋಗ್ಯ ಸಚಿವಾಲಯದ ಸಲಹೆ

    ಆನ್​ಲೈನ್​ನಲ್ಲಿ ಮಕ್ಕಳ ಶೋಷಣೆ: ಮಧ್ಯಪ್ರದೇಶದಲ್ಲಿ 4000 ಆರೋಪಿಗಳ ಬಂಧನಕ್ಕೆ ತಯಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts