More

    ಸಾಲದ ಸುಳಿಯಲ್ಲಿ ಸಿಲುಕಿದ ಕೆಪಿಸಿ; ನೆರವು ಕೋರಿ ಸಿಎಂಗೆ ಪತ್ರ ಬರೆದ ನೌಕರರ ಸಂಘ

    ಬೆಂಗಳೂರು:
    ಸಾಲದ ಸುಳಿಯಲ್ಲಿ ಸಿಲುಕಿರುವ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ)ವನ್ನು ಉಳಿಸಿಕೊಳ್ಳಲು ಸರ್ಕಾರ ಕೂಡಲೆ ಕ್ರಮ ತೆಗೆದುಕೊಳ್ಳುವಂತೆ ಕರ್ನಾಟಕ ಪವರ್ ಕಾರ್ಪೊರೇಷನ್ ಎಂಪ್ಲಾಯಿಸ್ ಯೂನಿಯನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದೆ.
    21 ಸಾವಿರ ಕೋಟಿ ರೂ ಸಾಲದ ಸುಳಿಯಲ್ಲಿ ಸಿಲುಕಿರುವ ಕೆಪಿಸಿ ಆರ್ಥಿಕ ಸ್ಥಿತಿ ಬಗ್ಗೆ ವಿಜಯವಾಣಿ ಪ್ರಕಟಿಸಿದ ವರದಿ ಉಲ್ಲೇಖಿಸಿ ಕೆಪಿಸಿ ಪರಿಸ್ಥಿತಿಯ ಬಗ್ಗೆ ಯೂನಿಯನ್ ಅಧ್ಯಕ್ಷ ಕೆ.ವೀರೇಂದ್ರ ಮತ್ತು ಪ್ರಧಾನ ಕಾರ್ಯದರ್ಶಿ ಕೇಶವೇಗೌಡ ಅವರು ಪತ್ರ ಬರೆದು ಆರ್ಥಿಕ ನೆರವು ಒದಗಿಸುವಂತೆ ಕೋರಿದ್ದಾರೆ.
    ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್ ಅವರು 1970ರಲ್ಲಿ ವಿದ್ಯುತ್ ಉತ್ಪಾದನೆಗಾಗಿಯೇ ಪ್ರತ್ಯೇಕ ನಿಗಮ ಮಾಡಿದ್ದರಿಂದ ಪ್ರಾರಂಭದಲ್ಲಿಯೇ 746 ಮೆವಾ ವಿದ್ಯುತ್ ಉತ್ಪಾದನೆ ಮಾಡಿದ ಹೆಮ್ಮೆಯ ನಿಗಮವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಜಲ, ಉಷ್ಣ, ಪವನ, ಸೌರ, ಅನಿಲ ಮತ್ತು ಕಸದ ಮೂಲಕವೂ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ನಾಡು ಬೆಳೆಗಿಸಲು ಮಹತ್ವದ ಕೊಡುಗೆ ನೀಡಿದೆ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
    ಸರ್ಕಾರ ನಿಗದಿಗೊಳಿಸಿದ ಅವಧಿಗಿಂತ ಮುಂಚಿತವಾಗಿ ಸರ್ಕಾರ ಅಂದಾಜಿಸಿದ ಮೊತ್ತಕ್ಕಿಂತ ನೂರಾರು ಕೋಟಿ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದ ಕೀರ್ತಿ ನಿಗಮಕ್ಕಿದೆ. ವಿದ್ಯುತ್ ಉತ್ಪಾದನೆ, ನಿರ್ವಹಣೆ, ಸುರಕ್ಷತೆಗಾಗಿ ರಾಜ್ಯ ಮತ್ತು ರಾಷ್ಟ್ರೀಯ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಕರ್ನಾಟಕ ರತ್ನ ಎನ್ನುವ ಬಿರುದನ್ನು ಪಡೆದಿದೆ. ಕೈಗಾರಿಕೆ, ಕೃಷಿಯ ಬೆಳವಣೆಗೆಗೆ ಸಹಕಾರಿಯಾಗಿ ರಾಜ್ಯದ ಅಭಿವೃದ್ಧಿಗೆ ತನ್ನದೇ ಕೊಡುಗೆಯನ್ನು ನೀಡುತ್ತಾ ಬಂದಿರುವಂತಹ ಕೆಪಿಸಿ ಇಂದು ಸಾಲದ ಸುಳಿಗೆ ಸಿಲುಕಿರುವುದು ನೋವಿನ ಸಂಗತಿ ಎಂದಿದ್ದಾರೆ.
    ರಾಜ್ಯ ಸರ್ಕಾರದ ವಿದ್ಯುತ್ ಉತ್ಪಾದನಾ ಯೋಜನೆಗಳನ್ನು ಕಾರ್ಯಗತಗೊಳಿಸಲು (ಬಿಟಿಪಿಎಸ್, ವೈಟಿಪಿಎಸ್, ವೈಸಿಸಿಪಿ) ಸುಮಾರು 25000 ಕೋಟಿ ರೂ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲದ ರೂಪದಲ್ಲಿ ಪಡೆದು ವಾರ್ಷಿಕ ಸಾವಿರಾರು ಕೋಟಿ ರೂಗಳನ್ನು ಬಡ್ಡಿ ರೂಪದಲ್ಲಿ ಪಾವತಿಸುತ್ತಿರುವುದು ದೊಡ್ಡ ಹೊರೆಯಾಗಿದೆ ಎಂದು ತಿಳಿಸಿದ್ದಾರೆ.

    21 ಸಾವಿರ ಕೋಟಿ ಹೊರ ಬಾಕಿ
    ಕೆಪಿಸಿಎಲ್‌ನಿಂದ ವಿದ್ಯುತ್‌ನ್ನು ಪಡೆದ ಸರಬರಾಜು ಕಂಪೆನಿಗಳಾದ ಎಸ್ಕಾಂಗಳು ಸರಿಯಾಗಿ ಬಿಲ್ಲನ್ನು ಪಾವತಿಸದೆ 21000 ಕೋಟಿ ಹಣವನ್ನು ಹೊರಬಾಕಿಯಾಗಿ ಉಳಿಸಿಕೊಂಡಿವೆ. ವಿದ್ಯುತ್ ಉತ್ಪಾದನೆಗೆ ಅವಶ್ಯಕವಾದ ಕಲ್ಲಿದ್ದಲು ಖರೀದಿ, ನಿರ್ವಹಣೆ ವೆಚ್ಚ, ಸಿಬ್ಬಂದಿ ವೇತನಕ್ಕೂ ಪರದಾಡುವ ಸ್ಥಿತಿಗೆ ಕೆಪಿಸಿಎಲ್ ಬಂದು ನಿಂತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.


    ಗೃಹಜ್ಯೋತಿ ಉಲ್ಲೇಖ
    ಗೃಹಜ್ಯೋತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳ್ಳಲು ಕೆಪಿಸಿಎಲ್ ಇನ್ನೂ ಹೆಚ್ಚಿನ ವಿದ್ಯುತ್ ಉತ್ಪಾದನೆಯ ಕಡೆಗೆ ಹೆಜ್ಜೆ ಇಡಬೇಕಾಗಿದೆ ಎಂದು ತಿಳಿಸಲಾಗಿದೆ.

    ಹೊಸ ಯೋಜನೆಗೆ ನೆರವು ಕೊಡಿ
    ಹೊಸ ಯೋಜನೆಗಳಾದ ಶರಾವತಿ ಪಂಪ್ ಸ್ಟೋರೇಜ್ (2000 ಮೆ ವ್ಯಾ), ವರಾಹಿ ಪಂಪ್ ಸ್ಟೋರೇಜ್ (2000 ಮೆ.ವ್ಯಾ.) ಕದ್ರಾ ಸೇರಿದಂತೆ ಇತರೆ ಜಲಾಶಯಗಳಲ್ಲಿ ಫ್ರೋಟಿಂಗ್ ಸೋಲಾರ್ ಪ್ಯಾನಲ್ ಅಳವಡಿಕೆ ಯೋಜನೆಗಳಿಗೆ ಕೆಪಿಸಿಗೆ ದೊಡ್ಡ ಪ್ರಮಾಣದಲ್ಲಿ ಅನುದಾನ ಬೇಕಾಗಿದೆ. ಆದ್ದರಿಂದ ಕೂಡಲೆ ಈ ಬಗ್ಗೆ ಕಟ್ಟು ಇಟ್ಟಿನ ಕ್ರಮ ಕೈಗೊಂಡು ಎಸ್ಕಾಂಗಳಿಂದ ಬರಬೇಕಾಗಿರುವ ಬಾಕಿಯನ್ನು ಕೂಡಲೆ ಕೊಡಿಸಿಕೊಡಬೇಕು ಎಂದು ಅಧ್ಯಕ್ಷ ಕೆ.ವೀರೇಂದ್ರ ಅವರು ವಿನಂತಿಸಿಕೊಂಡಿದ್ದಾರೆ.

    ಸಾಲದ ಸುಳಿಯಲ್ಲಿ ಸಿಲುಕಿದ ಕೆಪಿಸಿ; ನೆರವು ಕೋರಿ ಸಿಎಂಗೆ ಪತ್ರ ಬರೆದ ನೌಕರರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts