More

    ‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್; ಆಯುಕ್ತರು-ಸಾರ್ವಜನಿಕರ ಸಂವಹನ 

    ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ ತಡೆಯಲು ಹಲೋ ನೇಬರ್ ಯೋಜನೆ, ಡ್ರಗ್ಸ್ ದಂಧೆ ತಡೆಯಲು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಸೇರಿ ಬೆಂಗಳೂರು ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕಾರ್ಯಪ್ರವೃತ್ತರಾಗಿದ್ದಾರೆ. ಶುಕ್ರವಾರ ವಿಜಯವಾಣಿ ಕಚೇರಿಯಲ್ಲಿ ಆಯೋಜಿಸಿದ್ದ ಫೋನ್​ಇನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಮಿಷನರ್, ಪೊಲೀಸ್ ಇಲಾಖೆ ಕಾರ್ಯವೈಖರಿ, ಭ್ರಷ್ಟಾಚಾರ ಹಾಗೂ ಅಪರಾಧ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಹೇಗಿರಬೇಕು ಎಂಬುದರ ಕುರಿತು ಹಂಚಿಕೊಂಡ ಸಮಗ್ರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

     

    • ಪೊಲೀಸ್ ಪರಿಶೀಲನಾ ಪ್ರಮಾಣಪತ್ರ (ಪಿವಿಸಿ) ಕೊಡಲು 450 ರೂ. ಶುಲ್ಕ ವಿಧಿಸಲಾಗುತ್ತಿದೆ. ಅಷ್ಟೊಂದು ಹಣ ಕೊಡಲು ನಿರುದ್ಯೋಗಿಗಳಿಗೆ ಕಷ್ಟವಾಗುತ್ತದೆ. ಈ ಪ್ರಮಾಣಪತ್ರವನ್ನು ಉಚಿತವಾಗಿ ಕೊಡುವ ವ್ಯವಸ್ಥೆ ಮಾಡಿದರೆ ಬಡವರಿಗೆ ಸಹಾಯವಾಗುತ್ತದೆ.

    | ಲತಾ ಬೆಂಗಳೂರು ವಿ.ವಿ. ವಿದ್ಯಾರ್ಥಿನಿ

    ಪಿವಿಸಿ ಪ್ರಮಾಣಪತ್ರಕ್ಕೆ ವಿಧಿಸುವ 450 ರೂ. ಶುಲ್ಕವನ್ನು ಕಡಿಮೆಗೊಳಿಸುವಂತೆ ಲಿಖಿತವಾಗಿ ಸರ್ಕಾರದ ಗಮನಕ್ಕೆ ತರಬಹುದು. ನಾವು ಇದನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುತ್ತೇವೆ.

    • ಕೆಂಗೇರಿ ವ್ಯಾಪ್ತಿಯಲ್ಲಿ ಮೊಬೈಲ್ ಕಳ್ಳತನ, ಗಾಂಜಾ ಮಾರಾಟ, ದರೋಡೆ ಸೇರಿ ಸಾಕಷ್ಟು ಅಪರಾಧ ಚಟುವಟಿಕೆಗಳು ನಡೆಯುತ್ತಿವೆ. ಇದನ್ನು ತಡೆಯಲು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ…

    | ವಿನೋದ್ ಕೆಂಗೇರಿ

    ಮೊಬೈಲ್ ಹಾಗೂ ವಾಹನದ ರಕ್ಷಣೆ ಮಾಡಿಕೊಳ್ಳಿ. ವಾಹನಕ್ಕೆ ಜಿಪಿಎಸ್ ಸಾಧನ ಅಳವಡಿಸಿ. ಕೀಯನ್ನು ವಾಹನದಲ್ಲೇ ಬಿಟ್ಟು ಹೋಗಬೇಡಿ. ಇದುವರೆಗೆ ನಗರದಲ್ಲಿ ಕಳುವಾದ 3 ಸಾವಿರ ವಾಹನಗಳನ್ನು ಪತ್ತೆ ಮಾಡಿದ್ದೇವೆ. ಗಾಂಜಾ ಮಾರಾಟದ ಬಗ್ಗೆ 100ಕ್ಕೆ ಕರೆ ಮಾಡಿ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುತ್ತೇವೆ.

    • ನಮ್ಮ ಸಹೋದರಿಯನ್ನು ಬೆಂಗಳೂರಿನ ಉದ್ಯೋಗಿಯೊಬ್ಬರನ್ನು ವಿವಾಹವಾಗಿದ್ದರು. ಇದೀಗ ಪತಿ ಹಾಗೂ ಅವರ ಕಡೆಯವರ ಕಿರುಕುಳದಿಂದ ನಮ್ಮ ಸಹೋದರಿಗೆ ಸಮಸ್ಯೆಯಾಗಿದೆ. ನೀವು ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬಹುದೇ ?

    | ಹೆಸರು ಹೇಳಲಿಚ್ಚಿಸದವರು ಬಳ್ಳಾರಿ ಜಿಲ್ಲೆ ಹೂವಿನಹಡಗಲಿ

    ಇಂಥ ಸಮಸ್ಯೆಗಳನ್ನು ಬಗೆಹರಿಸಲೆಂದೇ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವನಿತಾ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಅಲ್ಲಿಗೆ ಭೇಟಿ ನೀಡಿ ನಿಮ್ಮ ಕೌಟುಂಬಿಕ ಸಮಸ್ಯೆ ಹೇಳಿಕೊಂಡರೆ, ನ್ಯಾಯ ಒದಗಿಸುತ್ತೇವೆ.

    • ಕೆ.ಆರ್. ಪುರದಲ್ಲಿರುವ ನಮ್ಮ ಮನೆಯಲ್ಲಿ ಕಳೆದ ವರ್ಷ ಚಿನ್ನಾಭರಣ ಸೇರಿ ಹಲವು ವಸ್ತುಗಳು ಕಳವಾಗಿದ್ದವು. ಪೊಲೀಸರು ಇದುವರೆಗೆ ಆರೋಪಿಯನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿದ್ದಾರೆ.

    | ಅರುಣ್ ಕುಮಾರ್ ಬೆಂಗಳೂರು

    ಕೆಲವೊಮ್ಮೆ ಕಳ್ಳರು ಕದ್ದ ಚಿನ್ನವನ್ನು ಚಿನಿವಾರರಿಗೆ ಮಾರಿ ಅದನ್ನು ಕರಗಿಸುತ್ತಾರೆ. ಇದರಿಂದ ಕದ್ದ ಚಿನ್ನಾಭರಣ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ನಿಮ್ಮ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಆ ವಿಭಾಗದ ಡಿಸಿಪಿಗೆ ಸೂಚನೆ ನೀಡುತ್ತೇನೆ.

    ಪ್ರತಿನಿತ್ಯ ಕೆಲಸದ ನಿಮಿತ್ತ ನಾನು ಯಲಹಂಕದಿಂದ ಹುಣಸನಹಳ್ಳಿಗೆ ಹೋಗುತ್ತೇನೆ. 298 ನಂಬರ್​ನ ಬಸ್​ನಲ್ಲಿ ಜೇಬುಗಳ್ಳತನ ಹೆಚ್ಚಾಗುತ್ತಿದೆ. ಬಾಗಲೂರು ಕ್ರಾಸ್ ಬಳಿ ಇಂಥ ಪ್ರಕರಣಗಳು ಹೆಚ್ಚಾಗಿವೆ. ಇದರಿಂದ ಆತಂಕಗೊಂಡಿದ್ದೇವೆ. ಈ ಬಗ್ಗೆ ಪೊಲೀಸರು ಏಕೆ ಕ್ರಮ ಕೈಗೊಳ್ಳುತ್ತಿಲ್ಲ?

    | ದೀಪಿಕಾ ಯಲಹಂಕ

    ಈ ವಿಚಾರವನ್ನು ಸಂಬಂಧಿಸಿದ ಡಿಸಿಪಿ ಗಮನಕ್ಕೆ ತರುತ್ತೇನೆ. ಜನಸಂಚಾರ ಹೆಚ್ಚಾಗಿರುವ ಸಮಯಗಳಲ್ಲಿ ಮಫ್ತಿಯಲ್ಲಿ ಪೇದೆಗಳನ್ನು ಆ ಮಾರ್ಗದಲ್ಲಿ ಗಸ್ತು ತಿರುಗಲು ಸೂಚಿಸುತ್ತೇನೆ. ಇದನ್ನು ಬಿಎಂಟಿಸಿ ಅಧಿಕಾರಿಗಳ ಗಮನಕ್ಕೂ ತಂದು, ಆ ಬಸ್​ನಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಸೂಚಿಸುತ್ತೇನೆ.

    • 2018ರಲ್ಲಿ ಕೆ.ಜಿ. ಹಳ್ಳಿ ಬಳಿ ಹೋಗುತ್ತಿದ್ದಾಗ ರಸ್ತೆ ಮಧ್ಯೆ ದುಷ್ಕರ್ವಿುಗಳು ದರೋಡೆ ಮಾಡಿ, ಹಣ ಹಾಗೂ ಇತರ ವಸ್ತುಗಳನ್ನು ಕಸಿದುಕೊಂಡಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಏಕೆ?

    | ಹೆಸರು ಹೇಳಲು ಇಚ್ಚಿಸದವರು ಕೆ.ಜಿ. ಹಳ್ಳಿ ನಿವಾಸಿ

    ಆ ವ್ಯಾಪ್ತಿಯ ಡಿಸಿಪಿ ಹಾಗೂ ಎಸಿಪಿಗಳಿಗೆ ಈ ಪ್ರಕರಣ ಸದ್ಯ ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿ, ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ.

    • ರಾಮಮೂರ್ತಿನಗರ ವ್ಯಾಪ್ತಿಯಲ್ಲಿ ದರೋಡೆ, ಸುಲಿಗೆ, ಕಳ್ಳತನ ಪ್ರಕರಣಗಳು ಮಿತಿಮೀರಿವೆ. ಪೊಲೀಸರು ಏಕೆ ಈ ಬಗ್ಗೆ ಕ್ರಮ ವಹಿಸುತ್ತಿಲ್ಲ?

    | ಗಿರೀಶ್ ಕೆ.ಆರ್.ಪುರ ರಾಮಮೂರ್ತಿ ನಗರ

    ಇನ್​ಸ್ಪೆಕ್ಟರ್, ಬಾಣಸವಾಡಿ ಎಸಿಪಿ ಹಾಗೂ ಆ ವ್ಯಾಪ್ತಿಯ ಡಿಸಿಪಿಗೆ ರಾಮಮೂರ್ತಿ ನಗರದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣ ಬಗ್ಗೆ ನಿಗಾ ಇಡುವಂತೆ ಸೂಚಿಸುತ್ತೇನೆ.

    • ಪರಿಚಿತರ ಬಳಿ ಕೆಲ ವರ್ಷಗಳಿಂದ ಚೀಟಿ ಹಣ ಕಟ್ಟುತ್ತಿದ್ದೆ. ಆ ವ್ಯಕ್ತಿ ಹೆಚ್ಚಿನ ಬಡ್ಡಿ ನೀಡುವುದಾಗಿ ಆಮಿಷವೊಡ್ಡಿ ಸಾವಿರಾರು ರೂ. ಲಪಟಾಯಿಸಿದ್ದಾರೆ.

    | ಫಣಿರಾಜ್ ಗಾಯತ್ರಿನಗರ

    ಹೆಚ್ಚಿನ ಬಡ್ಡಿ ಹಣದ ಆಮಿಷಕ್ಕೊಳಗಾಗಿ ಹಣ ಹೂಡಿಕೆ ಮಾಡಬಾರದು. ಇಂತಹ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಸಂಖ್ಯೆ ಹೆಚ್ಚಾಗುತ್ತಿದೆ.

    • ಈ ಸಮಸ್ಯೆ ಪರಿಹರಿಸಲು ಬೆಂಗಳೂರು ಪೊಲೀಸರು ಯಾವ ರೀತಿ ಕ್ರಮ ಕೈಗೊಂಡಿದ್ದಾರೆ?

    | ಬಾಲಕೃಷ್ಣ ಬೆಂಗಳೂರು

    ಪೊಲೀಸರು ಈಗಾಗಲೇ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಪತ್ತೆ ಮಾಡುವ ಕಾರ್ಯ ಮುಂದುವರಿಸಿದ್ದಾರೆ. ಪತ್ತೆಯಾದವರನ್ನು ಅಕ್ರಮ ವಲಸಿಗರ ಕೇಂದ್ರದಲ್ಲಿಟ್ಟು (ಡಿಟೆನ್ಷನ್ ಸೆಂಟರ್) ಕೆಲ ಪ್ರಕ್ರಿಯೆ ಬಳಿಕ ಅವರನ್ನು ಅವರವರ ದೇಶಕ್ಕೆ ಗಡಿಪಾರು ಮಾಡಲಾಗುತ್ತದೆ.

    • ದೂರು ನೀಡಿದರೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಕೆಲ ಅಂಗಡಿಗಳಿಂದ ನಗರ ಪೊಲೀಸರು ಲಂಚ ಪಡೆಯುತ್ತಾರೆ. ಇದನ್ನು ತಡೆಗಟ್ಟಬೇಕಾದ ಅಗತ್ಯವಿದೆ.

    | ಮಂಜುನಾಥ್ ​ಬೆಂಗಳೂರು

    ಯಾವುದೇ ಕಾರಣಕ್ಕೂ ಪೊಲೀಸರಿಗೆ ಲಂಚ ಕೊಡಬೇಡಿ. ದೂರು ನೀಡಿದರೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಗೆ ಒಳಪಡಿಸುವುದು ಪೊಲೀಸರ ಕರ್ತವ್ಯವಾಗಿದೆ.

    • ಮಾಧ್ವರ ಮಠದಲ್ಲಿ ಕೆಲ ತಿಂಗಳ ಹಿಂದೆ ಕಳ್ಳತನವಾಗಿತ್ತು. ಆದಷ್ಟು ಬೇಗ ಕಳ್ಳರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.

    | ಹೆಸರು ಹೇಳಲು ಇಚ್ಚಿಸದವರು ಜಯನಗರ ನಿವಾಸಿ

    ಈ ಪ್ರಕರಣ ನನ್ನ ಗಮನದಲ್ಲಿದೆ. ಆದಷ್ಟು ಬೇಗ ಕಳ್ಳರನ್ನು ಪತ್ತೆ ಹಚ್ಚಲು ಕ್ರಮ ತೆಗೆದುಕೊಳ್ಳುವಂತೆ ಜಯನಗರ ಪೊಲೀಸರಿಗೆ ಸೂಚಿಸಿದ್ದು, ಕಳ್ಳರನ್ನು ಶೀಘ್ರದಲ್ಲಿ ಬಂಧಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts