More

    ಪ್ರೊ ಕಬಡ್ಡಿ ಲೀಗ್‌ನಲ್ಲಿ ಕನ್ನಡಿಗರ ಕಲರವ ; ರಾಜ್ಯದ ಡಜನ್‌ಗೂ ಹೆಚ್ಚು ಆಟಗಾರರು ಕಣಕ್ಕೆ

    ಕೋವಿಡ್ ಮಹಾಮಾರಿಯಿಂದಾಗಿ ಕಳೆದೆರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಪ್ರೊ ಕಬಡ್ಡಿ ಲೀಗ್ ಮತ್ತೆ ಬಂದಿದೆ. ವಿಶೇಷವಾಗಿ ಈ ಬಾರಿ ಸಂಪೂರ್ಣ ಲೀಗ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ನಡೆಯುತ್ತಿದೆ. ಡಿಸೆಂಬರ್ 22ರಿಂದ ಬಯೋಬಬಲ್ ವ್ಯಾಪ್ತಿಯಲ್ಲಿ ಒಂದೇ ಹೋಟೆಲ್‌ನಲ್ಲಿ ಲೀಗ್ ಆಯೋಜಿಸಲಾಗುತ್ತಿದ್ದು, ಕೆಲ ದಿನಗಳಲ್ಲಿ 3 ಪಂದ್ಯಗಳೂ ನಡೆಯಲಿದ್ದು, ಕಬಡ್ಡಿ ಪ್ರಿಯರನ್ನು ರಂಜಿಸಲು ವೇದಿಕೆ ಸಜ್ಜಾಗಿದೆ. ಪ್ರೊ ಕಬಡ್ಡಿ ಲೀಗ್‌ನ ಆರಂಭಿಕ ದಿನಗಳಿಂದಲೂ ಕನ್ನಡಿಗರು ಪ್ರಾಬಲ್ಯ ಸಾಧಿಸುತ್ತಾ ಬಂದಿದ್ದಾರೆ. ಹರಿಯಾಣ, ಮಹಾರಾಷ್ಟ್ರ ಬಳಿಕ ಕರ್ನಾಟಕದಿಂದ ಅತಿ ಹೆಚ್ಚು ಆಟಗಾರರು ಲೀಗ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಬಾರಿಯೂ ಲೀಗ್‌ನಲ್ಲಿ ಆಡುತ್ತಿರುವ ಕನ್ನಡಿಗರ ಸಂಖ್ಯೆ ಒಂದು ಡಜನ್ ದಾಟಿದೆ. 12 ತಂಡಗಳ ಪೈಕಿ 8 ತಂಡಗಳಲ್ಲಿ ಕರ್ನಾಟಕ ಮೂಲದ ಆಟಗಾರರು ಕಣಕ್ಕಿಳಿಯಲಿದ್ದು, ಈ ಪೈಕಿ ತವರು ನೆಲ ಬೆಂಗಳೂರು ಬುಲ್ಸ್‌ನಲ್ಲೇ ಕನ್ನಡಿಗರು ಇಲ್ಲದೆ ಇರುವುದು ವಿಪರ್ಯಾಸವೆನಿಸಿದೆ.

    ಈ ಬಾರಿಯ ಲೀಗ್‌ನಲ್ಲಿ 13 ಆಟಗಾರರು ಕಣಕ್ಕಿಳಿಯುತ್ತಿದ್ದು 8 ತಂಡಗಳ ಪರ ಆಡಲಿದ್ದಾರೆ. ಈ ಪೈಕಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್‌ ತಂಡದ ಪರ ಅತಿ ಹೆಚ್ಚು ಅಂದರೆ ಆರು ಆಟಗಾರರು ಕಣಕ್ಕಿಳಿಯುತ್ತಿರುವುದು ವಿಶೇಷ. ಬೆಂಗಾಲ್ ವಾರಿಯರ್ಸ್‌ ತಂಡದ ಕೋಚ್ ಕೂಡ (ಬಿಸಿ ರಮೇಶ್) ಕನ್ನಡಿಗರೇ ಆಗಿದ್ದಾರೆ. ಇನ್ನು ಯು ಮುಂಬಾ (ರಾಜಗುರು) ಮತ್ತು ಪುಣೇರಿ ಪಲ್ಟಾನ್ (ರವಿಶೆಟ್ಟಿ) ಕೋಚ್‌ಗಳೂ ಕನ್ನಡಿಗರಾಗಿದ್ದಾರೆ.

    *ಬುಲ್ಸ್‌ನಲ್ಲಿಲ್ಲ ಕನ್ನಡಿಗರು!
    ಬೆಂಗಳೂರು ಫ್ರಾಂಚೈಸಿ ಬೆಂಗಳೂರು ಬುಲ್ಸ್ ತಂಡದಲ್ಲಿ ಕನ್ನಡಿಗರೇ ಇಲ್ಲದಿರುವುದು ವಿಪರ್ಯಾಸ. ವಿನೋದ್ ಎಂಬ ಆಟಗಾರ ಬುಲ್ಸ್ ತಂಡದಲ್ಲಿದ್ದರೂ ತರಬೇತಿ ವೇಳೆ ಗಾಯಗೊಂಡ ಹಿನ್ನೆಲೆಯಲ್ಲಿ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.

    *ಬೆಂಗಾಲ್‌ನಲ್ಲಿ ಆರು ಮಂದಿ ಆಟ
    ಕನ್ನಡಿಗ ಬಿಸಿ ರಮೇಶ್ ತರಬೇತುದಾರರಾಗಿರುವ ಬೆಂಗಾಲ್ ವಾರಿಯರ್ಸ್‌ ತಂಡದಲ್ಲಿ ಕರ್ನಾಟಕದ ಆರು ಆಟಗಾರರಿದ್ದಾರೆ. ಅನುಭವಿ ರೈಡರ್ ಸುಖೇಶ್ ಹೆಗ್ಡೆ, ಜೆ.ದರ್ಶನ್, ಸಚಿನ್ ಸುವರ್ಣ (ಸಚಿನ್ ವಿಟ್ಲ), ಮನೋಜ್ ಗೌಡ, ಆನಂದ್ ವಿ. ಇದ್ದಾರೆ. ಅಲ್ಲದೆ, ಮುಂಬೈನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಆಟಗಾರ ರಿಷಾಂಕ್ ದೇವಾಡಿಗ ಈ ಬಾರಿ ಬೆಂಗಾಲ್ ತಂಡದಲ್ಲಿದ್ದಾರೆ. ಈ ಪೈಕಿ ಸುಖೇಶ್, ರಿಷಾಂಕ್, ಆನಂದ್ ರೈಡರ್‌ಗಳಾದರೆ, ದರ್ಶನ್, ಸಚಿನ್ ರಕ್ಷಣಾ ವಿಭಾಗದಲ್ಲಿ ಆಡಲಿದ್ದಾರೆ. ಮನೋಜ್ ಗೌಡ ಆಲ್ರೌಂಡರ್ ಆಗಿದ್ದಾರೆ.

    *ದಬಾಂಗ್ ಡೆಲ್ಲಿಗೆ ಜೀವಾ
    ಕರ್ನಾಟಕದ ಅನುಭವಿ ಡಿಫೆಂಡರ್ ಜೀವಾ ಕುಮಾರ್ ದಬಾಂಗ್ ಡೆಲ್ಲಿ ಪರ ಆಡುತ್ತಿರುವ ಏಕೈಕ ಆಟಗಾರ. ಲೀಗ್ ಆರಂಭಿಕ ಹಂತದಿಂದಲೂ ಆಡುತ್ತಿರುವ ಜೀವಾ, ಇದಕ್ಕೂ ಮೊದಲು ಮುಂಬೈ ಹಾಗೂ ಬೆಂಗಾಲ್ ವಾರಿಯರ್ಸ್‌ ತಂಡದ ಆಡಿದ್ದರು

    *ಪಟನಾಗೆ ಪ್ರಶಾಂತ್ ಸಾರಥ್ಯ
    ಅನುಭವಿ ರೈಡರ್ ಪ್ರಶಾಂತ್ ಕುಮಾರ್ ರೈ ಮೂರು ಬಾರಿಯ ಚಾಂಪಿಯನ್ ಪಟನಾ ಪೈರೇಟ್ಸ್ ತಂಡಕ್ಕೆ ಸಾರಥ್ಯ ವಹಿಸಲಿದ್ದಾರೆ. ತೆಲುಗು ಟೈಟಾನ್ಸ್ ಹಾಗೂ ಹರಿಯಾಣ ಸ್ಟೀಲರ್ಸ್‌ ಪರ ಆಡಿದ ಅನುಭವ ಹೊಂದಿದ್ದಾರೆ.

    *ಟೈಟಾನ್ ಪರ ರಾಕೇಶ್ ರೈಡಿಂಗ್
    ರೈಡರ್ ರಾಕೇಶ್ ಗೌಡ ಅವರನ್ನು ತೆಲುಗು ಟೈಟಾನ್ಸ್ ತಂಡ ರಿಟೇನ್ ಮಾಡಿಕೊಂಡಿತ್ತು. ಕಳೆದ ಬಾರಿ ಆಡಿದ ಮೊದಲ ಆವೃತ್ತಿಯಲ್ಲೇ ಗಮನಾರ್ಹ ನಿರ್ವಹಣೆ ತೋರಿದ್ದರು.

    *ಜೈಪುರ ಪರ ಪವನ್ ಕಣಕ್ಕೆ
    ಡಿಫೆಂಡರ್ ಪವನ್ ಟಿಆರ್ ಮೊದಲ ಬಾರಿಗೆ ಲೀಗ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ರೈಟ್ ಕಾರ್ನರ್‌ನಲ್ಲಿ ಪರಿಣತಿ ಹೊಂದಿದ್ದಾರೆ.

    *ತವರೂರಿನ ಪರ ಪ್ರಪಂಚನ್
    ಬೆಂಗಳೂರಿನ ಕಸ್ಟಮ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ತಮಿಳುನಾಡು ಮೂಲದ ಕೆ.ಪ್ರಪಂಚನ್ ಅಂತರ ರಾಜ್ಯ ಚಾಂಪಿಯನ್‌ಷಿಪ್‌ಗಳಲ್ಲಿ ಕರ್ನಾಟಕ ತಂಡ ಪ್ರತಿನಿಧಿಸುತ್ತಾರೆ. ಅತ್ಯುತ್ತಮ ರೈಡರ್‌ಗಳ ಸಾಲಿಗೆ ಸೇರುವ ಪ್ರಪಂಚನ್, ತಮಿಳ್ ತಲೈವಾಸ್ ತಂಡ ಸ್ಟಾರ್ ರೈಡರ್ ಆಗಿದ್ದಾರೆ. ಡು ಆರ್ ಡೈ ಹಂತದಲ್ಲಿ ತಜ್ಞ ರೈಡರ್ ಎನಿಸಿದ್ದಾರೆ.

    *ಗುಜರಾತ್ ಪರ ರತನ್ ರೈಡಿಂಗ್
    ಸೋಮವಾರಪೇಟೆಯ ರತನ್ ಕೆ. ಮೊದಲ ಬಾರಿಗೆ ಪ್ರೊ ಕಬಡ್ಡಿ ಲೀಗ್‌ನಲ್ಲಿ ಆಡಲು ಸನ್ನದ್ಧವಾಗಿದ್ದಾರೆ. ರೈಡಿಂಗ್‌ನಲ್ಲಿ ಚುರುಕಾಗಿರುವ ರತನ್ ಮ್ಯಾಟ್‌ಗಿಳಿಯುವ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

    *ಪುಣೆಯಲ್ಲಿ ವಿಶ್ವಾಸ್-ಚೇತನ್
    ಪುಣೇರಿ ಪಲ್ಟಾನ್ ಪರ ವಿಶ್ವಾಸ್ ಹಾಗೂ ಚೇತನ್ ಕಣಕ್ಕಿಳಿಯಲಿದ್ದಾರೆ. ವಿಶ್ವಾಸ್ ರೈಡರ್ ಆಗಿದ್ದರೆ, ಚೇತನ್ ಡಿೆಂಡರ್ ಆಗಿದ್ದು, ಮೊದಲ ಬಾರಿಗೆ ತಮ್ಮ ಕೈ ಚಳಕ ತೋರಿಸಲು ಮುಂದಾಗಿದ್ದಾರೆ.

    *ಕೋಚ್‌ಗಳಾಗಿ ರಾಜ್ಯದ ತ್ರಿವಳಿಗಳು
    ಮಾಜಿ ಆಟಗಾರ ಬಿಸಿ ರಮೇಶ್ ಈ ಬಾರಿಯೂ ಬೆಂಗಾಲ್ ವಾರಿಯರ್ಸ್‌ ಪರ ತರಬೇತಿ ನೀಡಲು ಸಜ್ಜಾಗಿದ್ದಾರೆ. ಕಳೆದ ಬಾರಿ ಇವರ ಮಾರ್ಗದರ್ಶನದಲ್ಲಿ ಬೆಂಗಾಲ್ ತಂಡ ಚಾಂಪಿಯನ್ ಆಗಿತ್ತು. ಇದಕ್ಕೂ ಮೊದಲ ಬೆಂಗಳೂರು ಬುಲ್ಸ್ ಚಾಂಪಿಯನ್ಸ್ ಆಗಿದ್ದ ವೇಳೆ ರಮೇಶ್ ಸಹಾಯಕ ಕೋಚ್ ಆಗಿದ್ದರು. ತೆಲುಗು ಟೈಟಾನ್ಸ್, ಮುಂಬೈ ಪರ ಆಡಿದ ಅನುಭವ ಹೊಂದಿರುವ ಕರ್ನಾಟಕದ ಮಾಜಿ ಆಟಗಾರ ರಾಜಗುರು ಮಾಜಿ ಚಾಂಪಿಯನ್ ಯು ಮುಂಬಾ ತಂಡಕ್ಕೆ ಮೊದಲ ಬಾರಿಗೆ ತರಬೇತಿ ನೀಡಲಿದ್ದಾರೆ. ಲೀಗ್‌ನ ಆರಂಭಿಕ ಹಂತದಿಂದಲೂ ತಂಡವೊಂದಕ್ಕೆ ಸಹಾಯಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ರವಿ ಶೆಟ್ಟಿ ಈ ಬಾರಿಯೂ ಪುಣೇರಿ ಪಲ್ಟಾನ್ ತಂಡದ ತರಬೇತುದಾರರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts