More

    ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಸೆಮೀಸ್ ಹಣಾಹಣಿ; ಕರ್ನಾಟಕಕ್ಕೆ ಇಂದು ವಿದರ್ಭ ಸವಾಲು

    ನವದೆಹಲಿ: ಎಂಟರ ಘಟ್ಟದಲ್ಲಿ ರೋಚಕ ಗೆಲುವಿನೊಂದಿಗೆ ಉಪಾಂತ್ಯಕ್ಕೇರಿರುವ ಎರಡು ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಸೆಮಿಫೈನಲ್ ಹಣಾಹಣಿಯಲ್ಲಿ ಇದುವರೆಗೆ ಅಜೇಯ ಸಾಧನೆ ಮಾಡಿರುವ ವಿದರ್ಭ ತಂಡವನ್ನು ಎದುರಿಸಲಿದೆ. ಟೂರ್ನಿಯುದ್ದಕ್ಕೂ ಭರ್ಜರಿ ನಿರ್ವಹಣೆ ಮೂಲಕ ಗಮನಸೆಳೆದಿರುವ ವಿದರ್ಭ ತಂಡಕ್ಕೆ ಬಲಿಷ್ಠ ತಂಡದ ಸವಾಲು ಎದುರಾಗಲಿದೆ. ಗುರುವಾರ ನಡೆದ ಕ್ವಾರ್ಟರ್ ಫೈನಲ್  ಹಣಾಹಣಿಯಲ್ಲಿ ಕರ್ನಾಟಕ ತಂಡ ಸೂಪರ್ ಓವರ್ ಮೂಲಕ ಬಂಗಾಳ ತಂಡವನ್ನು ಸೋಲಿಸಿತ್ತು. ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಮನೀಷ್ ಪಾಂಡೆ ಬಳಗ ಪ್ರಶಸ್ತಿ ಸುತ್ತಿನ ನಿರೀಕ್ಷೆಯಲ್ಲಿದೆ. ಈಗಾಗಲೆ ರಾಷ್ಟ್ರ ರಾಜಧಾನಿಯನ್ನು ಕಾಡುತ್ತಿರುವ ವಾಯು ಮಾಲಿನ್ಯವೇ ಪಂದ್ಯಕ್ಕೆ ದೊಡ್ಡ ಸವಾಲಾಗಿದೆ.

    *ಗೆಲುವಿನ ನಿರೀಕ್ಷೆಯಲ್ಲಿ ಕನ್ನಡಿಗರು
    ಕರ್ನಾಟಕ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಇದುವರೆಗೆ ಬಲಿಷ್ಠ ನಿರ್ವಹಣೆ ತೋರುತ್ತಿದೆ. ಸ್ಟಾರ್ ಆಟಗಾರರ ಅನುಪಸ್ಥಿತಿ ನಡುವೆಯೂ ಬಹುತೇಕ ಯುವ ಆಟಗಾರರನ್ನೇ ಹೊಂದಿರುವ ಮನೀಷ್ ಪಾಂಡೆ ಬಳಗ ಪ್ರಶಸ್ತಿ ಸುತ್ತಿಗೇರುವ ಕನಸಿನಲ್ಲಿದೆ. ನಾಯಕ ಮನೀಷ್ ಪಾಂಡೆ, ರೋಹನ್ ಕದಂ, ಕರುಣ್ ನಾಯರ್, ಅಭಿನವ್ ಮನೋಹರ್, ರೋಹನ್ ಕದಂ ಒಳಗೊಂಡ ಬ್ಯಾಟಿಂಗ್ ಪಡೆ ಉತ್ತಮ ಫಾರ್ಮ್‌ನಲ್ಲಿದ್ದರೆ, ಸ್ಪಿನ್ನರ್ ಜೆ.ಸುಚಿತ್, ಲೆಗ್ ಸ್ಪಿನ್ನರ್ ಕೆ.ಸಿ. ಕಾರ್ಯಪ್ಪ, ವೇಗಿಗಳಾದ ವೈಶಾಕ್ ವಿಜಯ್‌ಕುಮಾರ್, ಎಂ.ಬಿ. ದರ್ಶನ್ ಒಳಗೊಂಡ ಬೌಲಿಂಗ್ ಪಡೆ ಎದುರಾಳಿ ತಂಡಕ್ಕೆ ಕಡಿವಾಣ ಹಾಕುವ ಸಾಮರ್ಥ್ಯ ಹೊಂದಿದೆ. ಟೂರ್ನಿಯಲ್ಲಿ ಇದುವರೆಗೂ ಅಜೇಯ ಸಾಧನೆ ಮಾಡಿರುವ ವಿದರ್ಭ ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಕನ್ನಡಿಗರು ಸಜ್ಜಾಗಿದ್ದಾರೆ.

    *ಆತ್ಮವಿಶ್ವಾಸದಲ್ಲಿ ವಿದರ್ಭ
    ಲೀಗ್ ಹಂತದಲ್ಲಿ ಉತ್ತಮ ನಿರ್ವಹಣೆಯ ಬಳಿಕ ಕ್ವಾರ್ಟರ್ ಫೈನಲ್‌ನಲ್ಲಿ ರಾಜಸ್ಥಾನ ಎದುರು 9 ವಿಕೆಟ್‌ಗಳಿಂದ ಜಯ ದಾಖಲಿಸಿರುವ ವಿದರ್ಭ ತಂಡ ಮೊದಲ ಬಾರಿಗೆ ಪ್ರಶಸ್ತಿ ಸುತ್ತಿಗೇರುವ ತವಕದಲ್ಲಿದೆ. ವಿದರ್ಭ ತಂಡ ಪ್ರತಿನಿಧಿಸುತ್ತಿರುವ ಕನ್ನಡಿಗ ಗಣೇಶ್ ಸತೀಶ್, ಯುವ ಬ್ಯಾಟರ್ ಅಥರ್ವ ತೈದೆ, ಶುಭಂ ದುಬೆ, ಅಪೂರ್ವ ವಾಂಖೆಡೆ, ಅಕ್ಷಯ್ ವಾಖರೆ ಒಳಗೊಂಡ ವಿದರ್ಭ ತಂಡ ಬಲಿಷ್ಠ ನಿರ್ವಹಣೆ ತೋರಲು ಸಜ್ಜಾಗಿದೆ.

    *ಪಂದ್ಯ ಆರಂಭ: ಮಧ್ಯಾಹ್ನ 1.00
    *ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್1

    *ತಮಿಳುನಾಡು-ಹೈದರಾಬಾದ್ ಫೈಟ್
    ದಿನದ ಮೊದಲ ಸೆಮಿಫೈನಲ್ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್ ತಮಿಳುನಾಡು ಹಾಗೂ ಹೈದರಾಬಾದ್ ತಂಡಗಳು ಎದುರಾಗಲಿವೆ. ಪಂದ್ಯ ಆರಂಭ: ಬೆಳಗ್ಗೆ 8.30

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts