More

    ಸೌರಾಷ್ಟ್ರ ಎದುರು ರೋಚಕ ಜಯ ದಾಖಲಿಸಿ ಸೆಮೀಸ್‌ಗೇರಿದ ಕರ್ನಾಟಕ

    ನವದೆಹಲಿ: ಪದಾರ್ಪಣೆ ಪಂದ್ಯದಲ್ಲೇ ಗಮನಾರ್ಹ ನಿರ್ವಹಣೆ ತೋರಿದ ಅಭಿನವ್ ಮನೋಹರ್ (70*ರನ್, 49 ಎಸೆತ, 2 ಬೌಂಡರಿ, 6 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮಾಜಿ ಚಾಂಪಿಯನ್ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ 2 ವಿಕೆಟ್‌ಗಳಿಂದ ಸೌರಾಷ್ಟ್ರ ತಂಡವನ್ನು ಮಣಿಸಿ ಎಂಟರಘಟ್ಟಕ್ಕೇರಿತು. ಲೀಗ್ ಹಂತದ ಕಡೇ ಹಣಾಹಣಿಯಲ್ಲಿ ಬಂಗಾಳ ತಂಡಕ್ಕೆ ಶರಣಾಗುವ ಮೂಲಕ ಕೂದಲೆಳೆ ಅಂತರದಲ್ಲಿ ಕ್ವಾರ್ಟರ್ ಫೈನಲ್‌ಗೆ ನೇರ ಅರ್ಹತೆ ಗಿಟ್ಟಿಸಿಕೊಳ್ಳಲು ವಿಫಲವಾಗಿತ್ತು. ಇದೀಗ ಮನೀಷ್ ಪಾಂಡೆ ಬಳಗ ಮಂಗಳವಾರ ನಡೆದ ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಲು ಯಶಸ್ವಿಯಾಯಿತು.

    ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ ತಂಡ, ಶೇಲ್ಡನ್ ಜಾಕ್ಸನ್ (50 ರನ್, 43 ಎಸೆತ, 3 ಬೌಂಡರಿ, 3 ಸಿಕ್ಸರ್) ಅರ್ಧಶತಕದಾಟದ ನೆರವಿನಿಂದ 7 ವಿಕೆಟ್‌ಗೆ 145 ರನ್ ಕಲೆಹಾಕಿತು. ಪ್ರತಿಯಾಗಿ ಕರ್ನಾಟಕ ತಂಡ, ರೋಹನ್ ಕದಂ (33 ರನ್, 29 ಎಸೆತ, 4 ಬೌಂಡರಿ) ಹಾಗೂ ಅಭಿನವ್ ಮನೋಹರ್ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 19.5 ಓವರ್‌ಗಳಲ್ಲಿ 8 ವಿಕೆಟ್‌ಗೆ 150 ರನ್‌ಗಳಿಸಿ ಗೆಲುವಿನ ಬಗೆ ಬೀರಿತು.

    ಸೌರಾಷ್ಟ್ರ: 7 ವಿಕೆಟ್‌ಗೆ 145 (ಅರ್ಪಿತ್ ವಸವಡ 26, ಶೇಲ್ಡನ್ ಜಾಕ್ಸನ್ 50, ಪ್ರೇರಕ್ ಮಂಕಡ್ 23, ವಿ.ಕೌಶಿಕ್ 49ಕ್ಕೆ 2, ವೈಶಾಕ್ ವಿಜಯ್‌ಕುಮಾರ್ 19ಕ್ಕೆ 2, ಕೆಸಿ ಕಾರ್ಯಪ್ಪ 23ಕ್ಕೆ 2), ಕರ್ನಾಟಕ: 19.5 ಓವರ್‌ಗಳಲ್ಲಿ 8 ವಿಕೆಟ್‌ಗೆ 150 (ರೋಹನ್ ಕದಂ 33, ಅಭಿನವ್ ಮನೋಹರ್ 70*, ಜೈದೇವ್ ಉನಾದ್ಕತ್ 22ಕ್ಕೆ 4, ಚಿರಾಗ್ ಜಾನಿ 24ಕ್ಕೆ 1, ಕುಶಾಂಗ್ ಪಟೇಲ್ 29ಕ್ಕೆ 1).

    * ಎಂಟರಘಟ್ಟದ ಎದುರಾಳಿ : ಬಂಗಾಳ , ಯಾವಾಗ: ಗುರುವಾರ, ಪಂದ್ಯ ಆರಂಭ: ಮಧ್ಯಾಹ್ನ 1 ಗಂಟೆಗೆ. ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts