More

    ಮಾರುಕಟ್ಟೆ ಸಂಕೀರ್ಣ ನನೆಗುದಿಗೆ: ವ್ಯಾಪಾರಿ ಮಳಿಗೆಗೆ ಶಾಸಕರ ಅನುದಾನ ಬಳಕೆಗೆ ತಡೆ ಅರ್ಧಕ್ಕೆ ನಿಂತ ಕಾಮಗಾರಿ

    ಆರ್.ಬಿ.ಜಗದೀಶ್ ಕಾರ್ಕಳ
    ಬಜಗೋಳಿ ಮಾರುಕಟ್ಟೆ ಸಂಕೀರ್ಣ ಪರಿಪೂರ್ಣಗೊಳ್ಳಲು ಹಲವು ವಿಘ್ನಗಳು ಎದುರಾಗಿದ್ದು, ಕಾಮಗಾರಿ ಅರ್ಧಕ್ಕೆ ಮೊಟಕುಗೊಂಡಿದೆ. ಕರಾವಳಿ ಪ್ರಾಧಿಕಾರ ಹಾಗೂ ಶಾಸಕರ ಅನುದಾನ ಬಳಸಿ ನೂತನ ಸಂಕೀರ್ಣ ನಿರ್ಮಾಣಕ್ಕೆ ಮುಡಾರು ಗ್ರಾಮ ಪಂಚಾಯಿತಿ ಮುಂದಾಗಿತ್ತು. ಬಜಗೋಳಿ ಮಾರುಕಟ್ಟೆಯ ಎದುರಿನ ಜಾಗದಲ್ಲಿ ತಳಭಾಗದಲ್ಲಿ 12, ಮೇಲ್ಭಾಗದಲ್ಲಿ 12 ವ್ಯಾಪಾರ ಮಳಿಗೆಗಳುಳ್ಳ ಸಂಕೀರ್ಣದ ನೀಲಿ ನಕಾಶೆ ಸಿದ್ಧಪಡಿಸಲಾಗಿತ್ತು. 1.25 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಲಾಗಿತ್ತು. ಕಳೆದ ಜುಲೈಯಲ್ಲಿ ಶಾಸಕ ವಿ.ಸುನೀಲ್ ಕುಮಾರ್ ಭೂಮಿಪೂಜೆ ನೆರವೇರಿಸಿದ್ದರು.

    ಕರಾವಳಿ ಪ್ರಾಧಿಕಾರವು ಮೊದಲ ಹಂತದಲ್ಲಿ 50 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದೆ. ಈ ನಡುವೆ ಸಂರ್ಕಿಣ ವ್ಯಾಪಾರ ಮಳಿಗೆಯಾದುದರಿಂದ ಶಾಸಕರ ಅನುದಾನವನ್ನು ಅದಕ್ಕೆ ಬಳಸುವಂತಿಲ್ಲ ಎಂಬ ಮಾಹಿತಿಯನ್ನು ಸ್ಥಳೀಯಾಡಳಿತ ನಂತರತಿಳಿದುಕೊಂಡಿದೆ. 50 ಲಕ್ಷ ರೂ. ವೆಚ್ಚದಲ್ಲಿ 12 ಅಂಗಡಿಗಳ ಕೋಣೆಗಳನ್ನು ನಿರ್ಮಿಸಲಾಗಿದೆ. ಷಟರ್, ಹಾಸುಗಲ್ಲು, ಪೈಂಟಿಂಗ್, ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸಂಪರ್ಕ ಸೇರಿದಂತೆ ಇತರ ಕಾಮಗಾರಿಗಳೆಲ್ಲವೂ ಬಾಕಿ ಉಳಿದಿದೆ.

    ಹಳೇ ಮಾರುಕಟ್ಟೆ ದುಸ್ಥಿತಿ: ಕಾರ್ಕಳ ತಾಲೂಕಿನಲ್ಲಿಯೇ ಅತೀ ಹೆಚ್ಚು ವ್ಯಾಪಾರ ಮಳಿಗೆಗಳನ್ನು ಹೊಂದಿರುವ ಮುಡಾರು ಗ್ರಾಮ ಪಂಚಾಯಿತಿ ಅಧೀನದಲ್ಲಿರುವ ಬಜಗೋಳಿ ಪೇಟೆಯ ಹಳೇ ಮಾರುಕಟ್ಟೆ ನಿರ್ವಹಣೆ ತೃಪ್ತಿಕರವಾಗಿಲ್ಲ. ಎಪಿಎಂಸಿ ನಿರ್ಮಿಸಿಕೊಟ್ಟ ಶೆಡ್‌ಗಳೆರಡು ಅವ್ಯವಸ್ಥಿತವಾಗಿವೆ. ಹೆಂಚಿನಿಂದ ನಿರ್ಮಾಣಗೊಂಡಿರುವ ಶೆಡ್‌ಗಳ ಕಂಬಗಳು ನೆಲಪಾಯದಿಂದ ಬೇರ್ಪಟ್ಟು ನಿಂತಿವೆ. ಕಂಬಗಳ ಕಲ್ಲುಗಳು ಒಂದಕ್ಕೊಂದು ದೂರ ಸರಿದಿವೆ. ರೀಪು, ಪಕ್ಕಾಸು ತುಂಡಾಗಿ ಹೆಂಚುಗಳು ಮಾಯವಾಗಿವೆ. ಮಳೆ ನೀರು ಒಳಪ್ರವೇಶಿಸಿ ವ್ಯಾಪಾರ ನಡೆಸುವುದಕ್ಕೆ ಕಷ್ಟವಾಗುತ್ತಿದೆ. ಯಾವುದೇ ಸಂದರ್ಭದಲ್ಲೂ ಶೆಡ್ ಧರಾಶಾಹಿಯಾದರೆ ಅಶ್ಚರ್ಯವಿಲ್ಲ.

    ತ್ಯಾಜ್ಯ ರಾಶಿ: ಮಾರುಕಟ್ಟೆ ಒಳಗಡೆಯೇ ಕೊಳೆತು ನಾರುವ ತ್ಯಾಜ್ಯದ ರಾಶಿ ಇದೆ. ಅಲೆಮಾರಿ ನಾಯಿಗಳು ಇಲ್ಲಿ ಬೀಡು ಬಿಟ್ಟಿವೆ.ಇದರಿಂದ ಮಾರುಕಟ್ಟೆ ರೋಗರುಜಿನಗಳ ವಾಸಸ್ಥಾನ ಉತ್ಪತ್ತಿ ಕೇಂದ್ರವೂ ಆಗಿದೆ. ಐದು ಅಡಿ ಎತ್ತರದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ತಗಡು ಶೀಟ್ ಶೆಡ್‌ಗಳು ದ್ವಿಚಕ್ರ ವಾಹನ ನಿಲುಗಡೆಯ ತಾಣವಾಗಿ ಮಾರ್ಪಟ್ಟಿದೆ. ಗ್ರಾಪಂ ನಿಯಾಮಾವಳಿಗೆ ನಾಗರಿಕರಿಕರು ಚಿಕ್ಕಾಸಿನ ಬೆಲೆ ಕೊಡುತ್ತಿಲ್ಲ.
    ದುರವಸ್ಥೆಯ ಇಂತಹ ಕಟ್ಟಡವನ್ನು ತೆರವುಗೊಳಿಸಿ ನೂತನ ಮಾರುಕಟ್ಟೆ ನಿರ್ಮಾಣದ ಜತೆ ವಾಣಿಜ್ಯ ಸಂಕೀರ್ಣ ನಿರ್ಮಿಸಿದರೆ ಮುಡಾರು ಗ್ರಾಮ ಪಂಚಾಯಿತಿಗೆ ಇನ್ನಷ್ಟು ಅರ್ಥಿಕ ಸಂಪನ್ಮೂಲ ಕ್ರೋಢೀಕರಣ ಸಾಧ್ಯ.

    ಸಂಕೀರ್ಣದ ತಳಭಾಗದ ಕಾಮಗಾರಿ ಪರಿಪೂರ್ಣಗೊಳ್ಳಲು ಇನ್ನೂ 30 ಲಕ್ಷ ರೂ. ಅನುದಾನ ಅಗತ್ಯ ಇದೆ. ಈಗಾಗಲೇ ಗ್ರಾಮ ಪಂಯಿತಿ ಕ್ರಿಯಾ ಯೋಜನೆಯಲ್ಲಿ 15 ಲಕ್ಷ ರೂ. ಕಾದಿರಿಸಿದೆ. ಅಂಗಡಿಗಳನ್ನು ಏಲಂ ಕರೆದು ಸಂಗ್ರಹಿಸುವ ಮೊತ್ತದಲ್ಲಿ ತಳಭಾಗದ ಕಾಮಗಾರಿ ಪೂರ್ಣಗೊಳಿಸಲಾಗುವುದು.
    ಸುರೇಶ್ ಶೆಟ್ಟಿ, ಮುಡಾರು ಗ್ರಾಮ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts