More

    ಸಚಿವರ ಸೂಚನೆಗಿಲ್ಲ ಕಿಮ್ಮತ್ತು, ಅರೆಬರೆ ವರದಿ ಸಲ್ಲಿಸಿದ ಕಂದಾಯ, ಸರ್ವೇ ಇಲಾಖೆ ಅಧಿಕಾರಿಗಳು

    ಕಾರಟಗಿ: ಬಹುವರ್ಷಗಳಿಂದ ಸದಾ ಚರ್ಚೆಯಲ್ಲಿರುವ ಪಟ್ಟಣದ ಪುರಾತನ ಕೆರೆಯನ್ನು ಸಮಗ್ರವಾಗಿ ಸರ್ವೇ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದ ಸಚಿವ ಶಿವರಾಜ ತಂಗಡಗಿಗೆ ಕಂದಾಯ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡದೆ ಅರೆಬರೆ ಮಾಹಿತಿ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ!

    ಸೆ.25ರಂದು ಪಟ್ಟಣದ ಹೃದಯಭಾಗದಲ್ಲಿರುವ ಪುರಾತನ ಕೆರೆಗೆ ಭೇಟಿ ನೀಡಿದ್ದ ಸಚಿವ ಶಿವರಾಜ ತಂಗಡಗಿ, ಕೆರೆಯ ಪ್ರದೇಶವನ್ನು ಮತ್ತೊಮ್ಮೆ ಸಮಗ್ರವಾಗಿ ಸರ್ವೇ ನಡೆಸಿ ವರದಿ ಸಲ್ಲಿಸುವಂತೆ ತಹಸೀಲ್ದಾರ್‌ಗೆ ಸೂಚಿಸಿದ್ದರು. ಸರ್ವೇ ನಂ.416ರ 36ಎಕರೆ 11ಗುಂಟೆ ಪ್ರದೇಶದಲ್ಲಿ ಸರ್ವೇ ಇಲಾಖೆ ಅಧಿಕಾರಿಗಳು ಚೈನ್ ಹಿಡಿದು ಅಳತೆ ನಡೆಸದೇ ತರಾತುರಿಯಲ್ಲಿ ಕಂದಾಯ ನಿರೀಕ್ಷರು ಹಾಗೂ ಗ್ರಾಮಲೆಕ್ಕಾಧಿಕಾರಿಯ ಅನುಭವ ಮತ್ತು ಚಕ್ಕುಬಂದಿ ಆಧಾರದ ಮೇಲೆ ವರದಿ ಸಿದ್ಧಪಡಿಸಲಾಗಿದೆಯೆಂದು ಸ್ವತಃ ಕಂದಾಯ ಇಲಾಖೆಯ ನಕಾಶೆಯಲ್ಲಿ ಷರಾ ಬರೆಯಲಾಗಿದೆ.

    ವಿಶೇಷವೆಂದರೆ ಷರಾದಲ್ಲಿ ಈ ನಕಾಶೆ ತಹಸೀಲ್ದಾರ್ ಮಾಹಿತಿಗಾಗಿ ಮಾತ್ರವೆಂದು ಬರೆಯಲಾಗಿದೆ. ಈಗ ಇದೇ ವರದಿಯನ್ನು ಅಧಿಕಾರಿಗಳು ಸಚಿವರಿಗೆ ನೀಡಿ ಕೈ ತೊಳೆದುಕೊಂಡಿದ್ದಾರೆ. ಸಚಿವರ ಸೂಚನೆಗೆ ಕಿಮ್ಮತ್ತು ನೀಡದ ಕಂದಾಯ ಇಲಾಖೆ ಅಧಿಕಾರಿಗಳು ಮನಬಂದಂತೆ ವರದಿ ಸಲ್ಲಿಕೆಗೆ ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ. ತೆರೆಮರೆಯಲ್ಲಿ ಸಚಿವರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿರುವುದು ವಿಪರ್ಯಾಸವೇ ಸರಿ.

    ಕೆರೆ ಪ್ರದೇಶವನ್ನು ಚೈನ್ ಹಿಡಿದು ಅಳತೆ ಮಾಡಿ ಚಕ್ಕುಬಂದಿಗೆ ಕಲ್ಲು ಸಹ ಹಾಕಿಲ್ಲ. ಈಗಾಗಲೇ ಕೆರೆ ಪ್ರದೇಶದಲ್ಲಿ ವಿವಿಧ ಇಲಾಖೆಗಳಿಗೆ ನೀಡಿದ ಜಾಗ ಹೊರತುಪಡಿಸಿ ಖಾಲಿ ಪ್ರದೇಶಕ್ಕೂ ಕಲ್ಲು ಹಾಕಿಲ್ಲ. ಸರ್ವೇ ಅಧಿಕಾರಿಗಳು ಮನಸೋಇಚ್ಛೆ ಸರ್ವೇ ನಡೆಸಿ ನೀಡಿದ ಮಾಹಿತಿಯನ್ನು ಕಂದಾಯ ಇಲಾಖೆ ವರದಿ ನೀಡುವುದರಿಂದ ಜನಪ್ರತಿನಿಧಿಗಳು ಇದನ್ನೇ ಮಾನ್ಯಮಾಡುತ್ತಾರೆ. ಇದರ ದುಷ್ಪರಿಣಾಮವನ್ನು ಪಟ್ಟಣದ ಜನತೆ ಭವಿಷ್ಯದಲ್ಲಿ ಎದುರಿಸುವುದು ಮಾತ್ರ ತಪ್ಪಿದ್ದಲ್ಲ.

    ಏಳೂವರೆ ಬದಲು 9 ಎಕರೆ

    ಸಚಿವ ಶಿವರಾಜ ತಂಗಡಗಿ ಸೂಚನೆ ಬಳಿಕ ಸರ್ವೇ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ ಸಿದ್ಧಪಡಿಸಿರುವ ಹೊಸ ನಕಾಶೆಯಲ್ಲಿ ಕೆರೆ ನಿರ್ಮಾಣಕ್ಕೆ 9ಎಕರೆ ಜಾಗ ತೋರಿಸಲಾಗಿದೆ. ಸಣ್ಣ ನೀರಾವರಿ ಇಲಾಖೆ ಕೆರೆ ನಿರ್ಮಾಣದ ಕಾಮಗಾರಿಯನ್ನು ಕೈಗೊಂಡಿದ್ದು ಇಲಾಖೆಯ ಜೆಇ ಸೆಲ್ವಕುಮಾರ್ ಏಳೂವರೆ ಎಕರೆಯೆಂದು ಹೇಳುತ್ತಿದ್ದಾರೆ. ಇನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರ ಹೆಸರಿನ ಪಹಣಿ ಪತ್ರದಲ್ಲಿ 10ಗುಂಟೆ ಎಂದಿದೆ. 6ಗುಂಟೆಯನ್ನು ಇಲಾಖೆ ಹೆಚ್ಚುವರಿಯಾಗಿ ಒತ್ತುವರಿ ಮಾಡಿಕೊಂಡಿದೆ. ಅದನ್ನು ಸೇರಿ ನಕಾಶೆಯಲ್ಲಿ 16ಗುಂಟೆಯೆಂದು ತೋರಿಸಿದ್ದಾರೆ. ಇಷ್ಟೇ ಸಾಕು ಕಂದಾಯ ಅಧಿಕಾರಿಗಳ ಬೇಜವಾಬ್ದಾರಿತನದ ಕೆಲಸಕ್ಕೆ.

    ಹೀಗಿದೆ ಹೊಸ ನಕಾಶೆ ಮಾಹಿತಿ

    ಹೊಸ ನಕಾಶೆಯಲ್ಲಿ ಸ್ಮಶಾನ-1ಎಕರೆ 36ಗುಂಟೆ, ಕೆರೆ 9ಎಕರೆ, ಖಾಲಿಜಾಗ 14ಗುಂಟೆ, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ 1 ಎಕರೆ, ಪೊಲೀಸ್ ವಸತಿ ಗೃಹಕ್ಕೆ 14 ಗುಂಟೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ 16 ಗುಂಟೆ, ಖಾಲಿ ಜಾಗ 1 ಎಕರೆ, ಕಂದಾಯ ಇಲಾಖೆ ವಸತಿಗೃಹಕ್ಕೆ 8ಗುಂಟೆ, ನಿರಾಶ್ರಿತ ಮಹಿಳೆಗೆ 2ಗುಂಟೆ, ದೋಬಿಘಾಟ್‌ಗೆ 2ಎಕರೆ 4 ಗುಂಟೆ, ಖಾಲಿ ಜಾಗ 7ಗುಂಟೆ, ಕೆಎಸ್‌ಆರ್‌ಟಿಸಿಗೆ 2 ಎಕರೆ 21ಗುಂಟೆ, ಸಂತೆ ಮಾರುಕಟ್ಟೆಗೆ 1ಎಕರೆ 32ಗುಂಟೆ, ಮಾಂಸದ ಮಾರುಕಟ್ಟೆಗೆ 12ಗುಂಟೆ, ಖಾಲಿಜಾಗ (ಸ್ಮಶಾನದ ಬಳಿ) 15ಗುಂಟೆ, ಕೆರೆ ಬದುವು 1ಎಕರೆ 27ಗುಂಟೆ, ರಸ್ತೆ ಮತ್ತು ಚರಂಡಿ 3ಎಕರೆ 6ಗುಂಟೆ ಸೇರಿ ಒಟ್ಟು 36 ಎಕರೆ 11 ಗುಂಟೆಗೆ ಸರಿಪಡಿಸಲಾಗಿದೆ. ಆದರೆ, ಖಾಸಗಿ ಒತ್ತುವರಿ ಎಲ್ಲೆಲ್ಲಿ ಎಷ್ಟು ಎನ್ನುವ ಬಗ್ಗೆ ಸ್ಪಷ್ಟತೆಯಿಲ್ಲ.

    ಸರ್ವೇ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ ನೀಡಿದ ಮಾಹಿತಿ ಆಧಾರದ ಮೇಲೆ ಸಚಿವರಿಗೆ ಸಮಗ್ರ ವರದಿ ನೀಡಲಾಗಿದೆ.
    ಎಂ.ಕುಮಾರಸ್ವಾಮಿ, ತಹಸೀಲ್ದಾರ್ ಕಾರಟಗಿ

    ಇದುವರೆಗೂ ವರದಿ ನನ್ನ ಕೈಗೆ ತಲುಪಿಲ್ಲ. ವರದಿಯಲ್ಲಿ ಏನಿದೆ ಎನ್ನುವುದನ್ನು ಪರಿಶೀಲಿಸುತ್ತೇನೆ. ಒಂದು ವೇಳೆ ಮನಸೋಇಚ್ಛೆ ಸರ್ವೇ ನಡೆಸಿದ್ದರೆ ಯಾವುದೇ ಕಾರಣಕ್ಕೂ ವರದಿ ಒಪ್ಪುವುದಿಲ್ಲ. ಮತ್ತೊಮ್ಮೆ ಸರ್ವೇ ನಡೆಸುವಂತೆ ಸೂಚಿಸುತ್ತೇನೆ.
    ಶಿವರಾಜ ತಂಗಡಗಿ, ಸಚಿವ ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts