More

    ಕಾರಟಗಿ ಕೆರೆ ಅಭಿವೃದ್ಧಿಗೆ 10ಲಕ್ಷ ರೂ. ದೇಣಿಗೆ ಘೋಷಿಸಿದ ಮಾಜಿ ಸಚಿವ ಶಿವರಾಜ ತಂಗಡಗಿ

    ಕಾರಟಗಿ: ಪಟ್ಟಣದ ಪುರಾತನ ಕೆರೆ ಅಭಿವೃದ್ಧಿಗೆ ಕಾರಟಗಿ ಪರಿಸರ ಸಂರಕ್ಷಣಾ ಹೋರಾಟ ಸಮಿತಿಯವರು ದೇಣಿಗೆ ಸಂಗ್ರಹಿಸಿ ಅಭಿವೃದ್ಧಿಗೆ ಮುಂದಾದಲ್ಲಿ ಸ್ವಯಂ ಪ್ರೇರಣೆಯಿಂದ 10ಲಕ್ಷ ದೇಣಿಗೆ ನೀಡುವುದಾಗಿ ಮಾಜಿ ಸಚಿವ ಶಿವರಾಜ ತಂಗಡಗಿ ಘೋಷಿಸಿದರು.

    ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಅನೇಕ ತೊಡಕುಗಳ ಹಿನ್ನೆಲೆಯಲ್ಲಿ ಶಾಸಕ ಬಸವರಾಜ ದಢೇಸುಗೂರು ಕೆರೆ ಅಭಿವೃದ್ಧಿಪಡಿಸಲು ಸಾಧ್ಯವೋ ಅಥವಾ ಅಸಾಧ್ಯವೋ ಎನ್ನುವ ಸ್ಪಷ್ಟ ನಿರ್ಧಾರ ಜನತೆಯ ಮುಂದಿಡುವಂತೆ ಹೋರಾಟ ಸಮಿತಿ ಸ್ಪಷ್ಟತೆ ಕೇಳಿದೆ. ಸ್ಪಷ್ಟನೆ ನೀಡದಿದ್ದಲ್ಲಿ ಹೋರಾಟ ಸಮಿತಿ ಸ್ವಯಂ ಪ್ರೇರಣೆಯಿಂದ ಕೆರೆ ಅಭಿವೃದ್ಧಿಗೊಳಿಸುವ ಅಭಿಪ್ರಾಯ ವ್ಯಕ್ತಪಡಿಸಿದೆ.

    ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಕುಷ್ಟಗಿಯ ನಿಡಶೇಷಿ, ತಾವರಗೇರಾ, ಗಿಣಗೇರಾ ಹಾಗೂ ಹಿರೇಹಳ್ಳದ ಮಾದರಿಯಲ್ಲಿ ಪಟ್ಟಣದ ಜನತೆಯಿಂದ ದೇಣಿಗೆ ಸಂಗ್ರಹಿಸಿ ಕೆರೆ ಅಭಿವೃದ್ಧಿಗೊಳಿಸುವುದಾಗಿ ಹೋರಾಟ ಸಮಿತಿ ಚಿಂತನೆ ನಡೆಸಿರುವುದಾಗಿ ವರದಿಯಾಗಿದೆ. ಒಂದು ವೇಳೆ ದೇಣಿಗೆ ಸಂಗ್ರಹಿಸಿ ಕೆರೆ ಅಭಿವೃದ್ಧಿಗೊಳಿಸಲು ಮುಂದಾದಲ್ಲಿ ಹೋರಾಟ ಸಮಿತಿಗೆ ನಾನೂ 10 ಲಕ್ಷ ರೂ.ದೇಣಿಗೆ ನೀಡುತ್ತೇನೆ. 2017ರಲ್ಲಿ ಹೋರಾಟ ಸಮಿತಿಗೆ ನೀಡಿದ ಭರವಸೆಯಂತೆ ಈಗಲೂ ಕೆರೆ ಅಭಿವೃದ್ಧಿ ವಿಷಯಕ್ಕೆ ನಾನು ಬದ್ಧನಾಗಿರುವೆ. ಇದರಲ್ಲಿ ನಾನಾಗಲಿ ಅಥವಾ ಕಾಂಗ್ರೆಸ್ ಪಕ್ಷವಾಗಲಿ ರಾಜಕೀಯ ಮಾಡುತ್ತಿಲ್ಲ. ಹೋರಾಟ ಸಮಿತಿ ಬಯಸಿದ್ದೇ ಆದಲ್ಲಿ ಸಮಿತಿಯಲ್ಲಿ ನಾನೊಬ್ಬ ಸದಸ್ಯನಾಗಿ ದುಡಿಯಲು ಸಿದ್ಧನಿರುವೆ ಎಂದು ತಿಳಿಸಿದರು.

    ತೊಡಕುಗಳು: ಕೆರೆ ಅಭಿವೃದ್ಧಿ ಹೆಸರಿನಲ್ಲಿ ಕೆರೆಯ ಹೂಳನ್ನು ಮಾರಾಟ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಅಲ್ಲದೇ, ಮೂರನೇ ಒಂದರಷ್ಟು ಅನುದಾನ ಮೀಸಲಿರಿಸದೇ ಟೆಂಡರ್ ಕರೆಯಲಾಗಿದೆ. ಮಾರ್ಚ್‌ನಲ್ಲಿ ಹಣಕಾಸು ಅನುಮೋದನೆ ನೀಡಲಾಗಿದೆ. ಆದರೆ, ವಾಸ್ತವದಲ್ಲಿ ಕೆರೆ ಅಭಿವೃದ್ಧಿಪಡಿಸುವ ಪ್ರದೇಶ ಇದುವರೆಗೂ ಸಣ್ಣ ನೀರಾವರಿ ಇಲಾಖೆಗೆ ವರ್ಗಾವಣೆಗೊಂಡಿಲ್ಲ. ಸರ್ವೇ ನಂ.416 ಒಟ್ಟು 36ಎಕರೆ 11ಗುಂಟೆ ಪ್ರದೇಶವನ್ನು ಈಗಾಗಲೇ ವಿವಿಧ ಇಲಾಖೆಗಳಿಗೆ ವರ್ಗಾಯಿಸಲಾಗಿದೆ. ಉಳಿದ ಪ್ರದೇಶದಲ್ಲಿ ಯಾವ್ಯಾವ ಇಲಾಖೆಯ ಕಚೇರಿಗಳನ್ನು ನಿರ್ಮಿಸಲಾಗುತ್ತದೆ ಎನ್ನುವುದನ್ನು ಶಾಸಕರು ಸ್ಪಷ್ಪಡಿಸಬೇಕು. ಕೆರೆ ಭೂಮಿ ವರ್ಗಾವಣೆ ಆಗದೆ ಹೊರತು ಇಲಾಖೆ ಕಾಮಗಾರಿ ನಡೆಸಲು ಮುಂದಾಗುವುದಿಲ್ಲ. ಶಾಸಕರು ನಾಲ್ಕು ವರ್ಷಗಳಿಂದ ಹೋರಾಟ ಸಮಿತಿ ಮತ್ತು ಜನತೆಗೆ ಮಂಕುಬೂದಿ ಎರಚುತ್ತಾ ಬರುತ್ತಿದ್ದು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಂಗಡಗಿ ಆರೋಪಿಸಿದರು.

    ಪುರಸಭೆ ಸದಸ್ಯ ಹಿರೇಬಸಪ್ಪ ಸಜ್ಜನ್, ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಶಿವರೆಡ್ಡಿ ನಾಯಕ, ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್ ಪ್ರಮುಖರಾದ ಗದ್ದೆಪ್ಪ ನಾಯಕ, ಶರಣಪ್ಪ ಪರಕಿ, ಶರಣಪ್ಪ ಕಾಯಿಗಡ್ಡಿ, ಅಯ್ಯಪ್ಪ ಉಪ್ಪಾರ, ಬಸವರಾಜ ತೊಂತನಾಳ, ವೀರೇಶ ಮುದಗಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts