More

    ಧರ್ಮ ದಾರಿ ತಪ್ಪಿದರೆ ಅಪಾಯ: ಸಾಹಿತಿ ಬಿ.ಆರ್.ಪೊಲೀಸ್ ಪಾಟೀಲ್ ಎಚ್ಚರಿಕೆ

    ಕಾರಟಗಿ: ‘ಧರ್ಮ’ ದಾರಿ ತಪ್ಪಿದರೆ ನಮ್ಮನ್ನು ಯಾರಿಂದಲೂ ಕಾಪಾಡಲು ಸಾಧ್ಯವಿಲ್ಲ. ಧರ್ಮವೆಂದರೆ ಕೊಟ್ಟದ್ದನ್ನು ಕೆಡದಂತಿಟ್ಟು ಕೊಟ್ಟವರಿಗೆ ಮರಳಿ ಒಪ್ಪಿಸುವುದು ಎಂದು ಬನಹಟ್ಟಿಯ ಹಿರಿಯ ಸಾಹಿತಿ ಬಿ.ಆರ್.ಪೊಲೀಸ್ ಪಾಟೀಲ್ ಅಭಿಪ್ರಾಯಪಟ್ಟರು.

    ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎರಡನೇ ದಿನವಾದ ಭಾನುವಾರ ಸಮಾರೋಪ ನುಡಿಗಳನ್ನಾಡಿದರು. ಈ ನೆಲದಿಂದ ಪಡೆದ ಪ್ರೀತಿ, ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಕಳಚಿಕೊಳ್ಳದೆ ಧರ್ಮವನ್ನು ಉಳಿಸಿಕೊಳ್ಳಬೇಕು. ಪ್ರಾಣಿಗಳಲ್ಲಿ ಹಸಿವಿದೆ ಹೊರತು ದ್ವೇಷವಿಲ್ಲವಾದ್ದರಿಂದ ಮನುಷ್ಯನ ಮೂಲಕವೇ ಧರ್ಮ ಆಚರಿಸಲ್ಪಡಲಾಗುವುದು. ಈ ಸಮಾಜ ರಾಜಕಾರಣಿಗಳು, ಅಧಿಕಾರಿಗಳು, ಬೋಧಕರು, ಸಾಹಿತಿಗಳು ಸೇರಿ ಯಾರಿಂದಲೂ ಹಾಳಾಗಿಲ್ಲ. ಕೆಟ್ಟದ್ದನ್ನು ಕಂಡೂ ಕಾಣದಂತೆ ಎದ್ದು ಹೋಗುವ ಗುಮ್ಮನಗುಸುಕರಿಂದ ಹಾಳಾಗಿದೆ. ಧರ್ಮ ಬಿಟ್ಟಿದ್ದಕ್ಕೆ ಸಮಾಜದಲ್ಲಿ ಇಷ್ಟೆಲ್ಲ ಹಾಹಾಕಾರಕ್ಕೆ ಕಾರಣವಾಗಿದೆ. ವಿದ್ಯಾಕೇಂದ್ರಗಳು ಮಕ್ಕಳನ್ನು ಅಂತರಂಗಕ್ಕೆ ಕರೆದುಕೊಂಡು ನೀತಿ, ಪ್ರಕೃತಿಯ ಮೌಲ್ಯಗಳಿಂದ ಕೂಡಿದ ಶಿಕ್ಷಣವನ್ನು ನೀಡುವ ಜರೂರಿದೆ. ರೈತನ ಧರ್ಮ ಪರಿಪಾಲನೆಯಲ್ಲಿ ಶರಣರ ಕಾಯಕ ಮತ್ತು ದಾಸೋಹ ತತ್ವವಿದ್ದು ಇದನ್ನು ಎಲ್ಲರೂ ಪಾಲಿಸಿಕೊಂಡು ಹೋದರೆ ಸಮಾಜ ಸ್ವಸ್ಥ, ಸಹಬಾಳ್ವೆ, ಸಾಮರಸ್ಯ ಮತ್ತು ಸೌಹಾರ್ದದಿಂದ ಉಳಿಯಲು ಸಾಧ್ಯವಿದೆ ಎಂದು ತಿಳಿಸಿದರು. ‘ದೇವರು ಹುಟ್ಟಿದ ಭೂಮಿಯ ಮ್ಯಾಲೆ, ರಾಕ್ಷಸರವತಾರೋ ಮೈಲಾರದೇವ. ತ್ಯಾಗಿ ಮಾಡಿದ ಮಂಚದ ಮ್ಯಾಲೆ ಗೂಗಿ ಕುಂತಾವೋ ಮೈಲಾರದೇವ’ ಎನ್ನುವ ತಾವೇ ರಚಿಸಿದ ಲಾವಣಿಯನ್ನು ಸುಶ್ರಾವ್ಯವಾಗಿ ಹಾಡಿ ಜನಮನ ಸೆಳೆದರು.

    ಮಾಜಿಸಚಿವ ಶಿವರಾಜ ತಂಗಡಗಿ ಮಾತನಾಡಿ, ಸಾಹಿತ್ಯ ಸಮ್ಮೇಳನದ ಮೂಲಕ ಭವಿಷ್ಯದ ಪೀಳಿಗೆಗೆ ಪ್ರಜ್ಞೆ ವಿಸ್ತರಿಸುವ ಜತೆಗೆ ಆಳುವ ವರ್ಗದ ಕಿವಿ ಹಿಂಡುವ ಕೆಲಸವಾಗಬೇಕು ಎಂದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ.ಡಿ.ಬಿ.ಕರಡೋಣಿ, ನಿಕಟಪೂರ್ವ ಅಧ್ಯಕ್ಷ ಪ್ರೊ.ಸಿದ್ದು ಯಾಪಲಪರ್ವಿ, ಪುರಸಭೆ ಮಾಜಿ ಅಧ್ಯಕ್ಷ ಭುವನೇಶ್ವರಿ ನಾಯಕ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್, ತಾಲೂಕು ಅಧ್ಯಕ್ಷ ಶರಣಪ್ಪ ಕೋಟ್ಯಾಳ, ಕಲಬುರಗಿಯ ಮಾನವ ಸಂಪನ್ಮೂಲ ಮತ್ತು ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಉಪಸಮಿತಿ ಅಧ್ಯಕ್ಷೆ ಲೀಲಾ ಮಲ್ಲಿಕಾರ್ಜುನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts