ಪಡುಬಿದ್ರಿ: ಕಾಪು ಪುರಸಭೆ ವ್ಯಾಪ್ತಿಯ ಎಕ್ಸ್‌ಪ್ರೆಸ್ ಬಸ್ ನಿಲ್ದಾಣ ನಿರ್ಮಾಣ ಸೇರಿದಂತೆ ಪಾರ್ಕಿಂಗ್ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಾರಿಗೆ, ಪೊಲೀಸ್ ಅಧಿಕಾರಿಗಳೊಂದಿಗೆ ವಿಶೇಷ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪುರಸಭೆ ಅಧ್ಯಕ್ಷ ಅನಿಲ್‌ಕುಮಾರ್ ಹೇಳಿದರು.
ಕಾಪು ಪುರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಾಪು ಹೊಸ ಮಾರಿಗುಡಿ ಹಾಗೂ ಅದರ ವಿರುದ್ಧ ದಿಕ್ಕಿನಲ್ಲಿ ನಿರ್ಮಿಸಿರುವ ಎಕ್ಸ್‌ಪ್ರೆಸ್ ಬಸ್ ನಿಲ್ದಾಣ ಸ್ಥಳಾಂತರ ಹಾಗೂ ಕಾಪು ಅಂಚೆ ಕಚೇರಿ ಬಳಿ ಬಸ್ ನಿಲ್ದಾಣ ಕುರಿತಂತೆ ನಡೆದ ಚರ್ಚೆಯಲ್ಲಿ ಮಾತನಾಡಿದರು. ಎರಡೂ ಎಕ್ಸ್‌ಪ್ರೆಸ್ ಬಸ್ ನಿಲ್ದಾಣಕ್ಕೆ ಹಿಂದೆ ಆಕ್ಷೇಪ ವ್ಯಕ್ತವಾಗಿದ್ದರೂ ಅಂದಿನ ಅಧಿಕಾರಿಗಳ ನಿರ್ಧಾರದಿಂದ ಅವೈಜ್ಞ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದು ಕೆ.ಎಚ್.ಉಸ್ಮಾನ್ ದೂರಿದರು. ಪುರಸಭೆ ಸಮೀಪ ಎಕ್ಸ್‌ಪ್ರೆಸ್ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸುವಂತೆ ಅರುಣ್ ಶೆಟ್ಟಿ ಪಾದೂರು ಸಲಹೆ ನೀಡಿದರು. ಈಗಾಗಲೇ ಪೊಲೀಸರೊಂದಿಗೆ ಸೇರಿ ಪಾರ್ಕಿಂಗ್ ಸ್ಥಳ ಗುರುತಿಸುವ ಕೆಲಸ ಆಗಿದೆ. ಬಸ್ ನಿಲುಗಡೆ ಕುರಿತಂತೆ ಸಾರಿಗೆ ಇಲಾಖೆಗೆ ಪತ್ರ ಬರೆಯುವುದಾಗಿ ಮುಖ್ಯಾಧಿಕಾರಿ ವೆಂಕಟೇಶ ನಾವಡ ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಸೋಲಾರ್ ದಾರಿದೀಪ ನಿರ್ವಹಣೆಗೆ ಗುತ್ತಿಗೆ ವಹಿಸಿಕೊಂಡಿದ್ದ ಗುತ್ತಿಗೆದಾರರ ಟೆಂಡರ್ ಅವಧಿ ಮುಕ್ತಾಯವಾಗಿದ್ದು, ಮತ್ತೆ ಮುಂದುವರಿಸುವಂತೆ ಕೇಳಿಕೊಂಡಿದ್ದಾರೆ ಎಂದು ಅಧ್ಯಕ್ಷರು ಸಭೆಯ ಗಮನಕ್ಕೆ ತಂದಾಗ ಟೆಂಡರ್ ವಹಿಸಿಕೊಂಡಂದಿನಿಂದ ಈವರೆಗೂ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದ ಅವರನ್ನು ಯಾವುದೇ ಕಾರಣಕ್ಕೂ ಮುಂದುವರಿಸಬಾರದು ಎಂದು ಉಸ್ಮಾನ್ ಪಟ್ಟುಹಿಡಿದರು. ಮರು ಟೆಂಡರ್ ಬಗ್ಗೆ ಸರ್ವಾನುಮತದಿಂದ ನಿರ್ಧರಿಸಲಾಯಿತು.
ತಾಲೂಕು ಕಚೇರಿ ಮುಂಭಾಗ ರಾಷ್ಟ್ರೀಯ ಹೆದ್ದಾರಿ 66ರ ವಿಭಜಕ, ಪಾಂಗಾಳ ಸೇತುವೆ ಸೇರಿ ಹಲವೆಡೆ ದಾರಿದೀಪಗಳು ಉರಿಯುತ್ತಿಲ್ಲ. ಕಾಪು ಪುರಸಭೆ ವ್ಯಾಪ್ತಿಯ ಜನ ಸಂಚಾರ ಕಡಿಮೆ ಇರುವ ಪ್ರದೇಶದಲ್ಲಿ ಬಾಡಿಗೆ ಪಡೆದ ಅಂಗಡಿಗಳನ್ನು ಮತ್ತೆ ಏಲಂ ಮಾಡದೆ ಮಾನವೀಯತೆ ನೆಲೆಯಲ್ಲಿ ಮತ್ತೆ ಅವರಿಗೆ ನೀಡುವಂತೆ ಅರುಣ್ ಶೆಟ್ಟಿ ಒತ್ತಾಯಿಸಿದರು. ಸದಸ್ಯರು ಸಹಮತ ವ್ಯಕ್ತಪಡಿಸಿದರು.
ಕಾಪು ನಗರ ಯೋಜನಾ ಪ್ರಾಧಿಕಾರಕ್ಕೆ ಪುರಸಭೆಯ ಪದನಿಮಿತ್ತ ಸದಸ್ಯರಾಗಿ ರಮೇಶ್ ಹೆಗ್ಡೆ ಕಲ್ಯ ಹೆಸರು ಅಂತಿಮಗೊಳಿಸಲಾಯಿತು. ಉಪಾಧ್ಯಕ್ಷೆ ಮಾಲಿನಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂಭವಿ ಕುಲಾಲ್ ಉಪಸ್ಥಿತರಿದ್ದರು.
ಮೂಲಸೌಕರ್ಯ ಕಲ್ಪಿಸಲು ಆಗ್ರಹ: ನಲ್ಲಿ ನೀರು ಸಂಪರ್ಕಕ್ಕೆ ಹೆಚ್ಚಿನ ಮೊತ್ತ ಪಡೆಯಲಾಗುತ್ತಿದೆ. ಸರ್ಕಾರಿ ಜಮೀನು ಗುರುತಿಸಿ ಪುರಸಭೆಗೆ ಅಗತ್ಯವಿರುವಷ್ಟನ್ನು ಪಡೆಯಲು ಮುಂದಾಗಬೇಕು. ಕಾಪು ಪಡು ಗ್ರಾಮದಲ್ಲಿನ ಹಲವು ಮನೆಗಳಿಗೆ ಮೂಲಸೌಕರ್ಯವಿಲ್ಲ. ಈವರೆಗೂ ರಸ್ತೆ, ನೀರು ಹಾಗೂ ಬೀದಿದೀಪ ವ್ಯವಸ್ಥೆ ಇಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ನವೀನ್ ಅಮೀನ್ ಒತ್ತಾಯಿಸಿದರು. ಕೊಂಬಗುಡ್ಡೆ, ಭಾರತ್‌ನಗರ ಹಾಗೂ ಪಡು ಗ್ರಾಮದಲ್ಲಿ ಹಲವು ವರ್ಷಗಳಿಂದ ವಾಸ್ತವ್ಯವಿರುವವರಿಗೆ ಹಕ್ಕುಪತ್ರ ದೊರೆತಿಲ್ಲ ಎಂದು ಆಡಳಿತದ ಗಮನಕ್ಕೆ ತರಲಾಯಿತು. ಹೆದ್ದಾರಿ ಪಾರ್ಶ್ವದಲ್ಲಿನ ಸರ್ಕಾರಿ ಶಾಲಾ ಆವರಣದಲ್ಲಿ ನಡೆಯುತ್ತಿದೆ ಎನ್ನಲಾಗುವ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕುವಂತೆ ಸದಸ್ಯರು ಆಗ್ರಹಿಸಿದರು.
ಅಂತ್ಯಸಂಸ್ಕಾರ ದಾಖಲೆ ಸಂಗ್ರಹಕ್ಕೆ ಸಲಹೆ: ಸಂಶಯಾಸ್ಪದ ಸಾವು, ವಾರಸುದಾರರಿಲ್ಲದ ಮೃತದೇಹಗಳ ಅಂತ್ಯಸಂಸ್ಕಾರ ಪುರಸಭೆ ವ್ಯಾಪ್ತಿಯ ರುದ್ರಭೂಮಿಗಳಲ್ಲಿ ನಡೆಸಲಾಗುತ್ತಿದೆ. ವಿಮೆ ಉದ್ದೇಶಕ್ಕಾಗಿ ಅಂತ್ಯಸಂಸ್ಕಾರ ನಡೆಸಿರುವ ದಾಖಲಾತಿಗಾಗಿ ವಾರಸುದಾರರು ಬಂದು ಕೇಳಿದರೆ ರುದ್ರಭೂಮಿಗಳಲ್ಲಿ ದಾಖಲೆ ಸಂಗ್ರಹವಿಲ್ಲದೆ ತೊಂದರೆಯಾಗುತ್ತಿದೆ. ರುದ್ರಭೂಮಿಗಳಿಗೆ ಸಮಿತಿ ರಚಿಸಿ ದಾಖಲೆ ಸಂಗ್ರಹಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕಿರಣ್ ಆಳ್ವ ಗಮನ ಸೆಳೆದರು. ಉಳಿಯಾರಗೋಳಿ ಮೂರು ವಾರ್ಡ್‌ಗಳಿಗೆ ಸಂಬಂಧಿಸಿ ಇರುವ ರುದ್ರಭೂಮಿ ಹಾಗೂ ರಸ್ತೆ ಸಮಸ್ಯೆಗೆ ಆ ಭಾಗದ ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು. ಪುರಸಭೆ ವ್ಯಾಪ್ತಿಯಲ್ಲಿನ ರುದ್ರಭೂಮಿಗಳ ಪಟ್ಟಿ ಸಿದ್ಧಪಡಿಸಿ, ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧ್ಯಕ್ಷ ಅನಿಲ್ ತಿಳಿಸಿದರು.